ತುಮಕೂರು:ಐತಿಹಾಸಿಕ ಕುಣಿಗಲ್ ಕುದುರೆ ಫಾರಂ ಅನ್ನು ‘ಇಂಟಿಗ್ರೇಟೆಡ್ ಟೌನ್ ಶಿಪ್’ ಎನ್ನುವ ಹೆಸರಿನಲ್ಲಿ ನಾಶ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಕುಣಿಗಲ್ ಜನರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಆಕ್ರೋಶ ವ್ಯಕ್ತಪಡಿಸಿದರು.
ಕುಣಿಗಲ್ ಕುದುರೆ ಫಾರಂನ 421 ಎಕರೆ ಜಾಗದಲ್ಲಿ ಕಾಂಗ್ರೆಸ್ ಸರ್ಕಾರ ‘ಇಂಟಿಗ್ರೇಟೆಡ್ ಟೌನ್ ಶಿಪ್’ ನಿರ್ಮಾಣ ಮಾಡುವ ಯೋಜನೆಯನ್ನು ವಿರೋಧಿಸಿ, ಕುಣಿಗಲ್ ಪಟ್ಟಣದ ತಾಲೂಕು ಕಚೇರಿ ಮುಂದೆ ನಡೆಸಿದ ಹೋರಾಟದಲ್ಲಿ ಭಾಗವಹಿಸಿ ಡಾ. ಮುಖ್ಯಮಂತ್ರಿ ಚಂದ್ರು ಮಾತನಾಡಿದರು.
ಕುಣಿಗಲ್ ಕುದುರೆ ಫಾರಂಗೆ ನೂರಾರು ವರ್ಷಗಳ ಇತಿಹಾಸ ಇದೆ. ಗಂಗರ ಕಾಲದಲ್ಲಿ ಈ ಜಾಗವನ್ನು ಕುದುರೆ ವಿಶ್ರಾಂತಿ ಪಡೆಯಲು ಬಳಕೆ ಮಾಡುತ್ತಿದ್ದರು ಎನ್ನುವ ದಾಖಲೆ ಇದೆ. ಆ ಬಳಿಕ ಟಿಪ್ಪು ಸುಲ್ತಾನ್ ಯುದ್ಧದ ಕುದುರೆಗಳನ್ನು ಸಾಕಲು ಈ ಫಾರಂ ಅನ್ನು ಬಳಕೆ ಮಾಡುತ್ತಿದ್ದರು. ಏಷ್ಯಾಖಂಡದಲ್ಲೇ ಇದು ಎರಡನೇ, ಕರ್ನಾಟಕದ ಏಕೈಕೆ ಕುದುರೆ ತಳಿ ಸಂವರ್ಧನೆ ಕೇಂದ್ರವಾಗಿದೆ ಇದನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಹೇಳಿದರು.
421 ಎಕರೆ ಜಮೀನು ಕಬಳಿಸಲು ಹುನ್ನಾರ ನಡೆಯುತ್ತಿದೆ. ಸಾರ್ವಜನಿಕರ ಆಸ್ತಿಯನ್ನು ಪೋಲು ಮಾಡಿದರೆ ಅದಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ರಾಜ್ಯ ಸರ್ಕಾರವೇ ಹೊಣೆ. ಇದನ್ನು ಈ ಕೂಡಲೇ ತಡೆಯಿರಿ, ಬೈರತಿ ಸುರೇಶ್ ಕುಣಿಗಲ್ ಫಾರಂ ಜಾಗದಲ್ಲಿ ಇಂಟಿಗ್ರೇಟೆಡ್ ಟೌನ್ಶಿಪ್ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಈ ಫಾರಂ ಜೊತೆ ಕುಣಿಗಲ್ ಜನತೆಗೆ ಭಾವನಾತ್ಮಕ ಸಂಬಂಧ ಇದ್ದು ಯಾವುದೇ ಕಾರಣಕ್ಕೂ ಟೌನ್ಶಿಪ್ ನಿರ್ಮಾಣ ಮಾಡಲು ಬಿಡುವುದಿಲ್ಲ ಎಂದರು.
ವಿಜಯ್ ಮಲ್ಯ ಮಾಲೀಕತ್ವದ ಯುಬಿ ಗ್ರೂಪ್ ನಿರ್ವಹಣೆ ಮಾಡುತ್ತಿದ್ದ ಈ ಫಾರಂನ ಗುತ್ತಿಗೆ ಅವಧಿ 2022ಕ್ಕೆ ಮುಕ್ತಾಯವಾಗಿದ್ದು, ಪೂನಾವಾಲ ಕಂಪನಿಗೆ ಗುತ್ತಿಗೆ ನೀಡಲು ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ನಿರ್ಧರಿಸಿತ್ತು. ಈಗ ಪ್ರಸ್ತಾವನೆಯನ್ನು ತಿರಸ್ಕರಿಸಿ ಕಾಂಗ್ರೆಸ್ ಸರ್ಕಾರ ಇಲ್ಲಿ ಇಂಟಿಗ್ರೇಟೆಡ್ ಟೌನ್ ಶಿಪ್ ನಿರ್ಮಾಣ ಮಾಡುವ ಮೂಲಕ ಕುಣಿಗಲ್ ಫಾರಂ ಅನ್ನು ಮುಚ್ಚಲು ಹೊರಟಿದೆ ಇದು ಕುಣಿಗಲ್ ಜನರಿಗೆ ಮಾಡುತ್ತಿರುವ ಅನ್ಯಾಯ ಎಂದರು.
ಸರ್ಕಾರ ಇಲ್ಲಿ ಟೌನ್ಶಿಪ್ ನಿರ್ಮಾಣ ಮಾಡಲು ಮುಂದಾದರೆ ಕ್ರಾಂತಿಯಾಗುತ್ತದೆ. ಇಡಿ ತುಮಕೂರು ಜಿಲ್ಲೆಯ ಜನ ಬೀದಿಗಿಳಿದು ಹೋರಾಟ ಮಾಡಲಿದ್ದಾರೆ. ಅದನ್ನು ಸರ್ಕಾರ ನೆನಪಿಟ್ಟುಕೊಳ್ಳಲಿ. ಇದು ಸಾರ್ವಜನಿಕರ ಆಸ್ತಿ, ಯಾರೂ ಕಬಳಿಸಲು ಬಿಡಬಾರದು, ಬೇಕಾದರೆ ಫಾರಂ ಅನ್ನು ಪ್ರವಾಸಿ ಸ್ಥಳವಾಗಿ ಅಭಿವೃದ್ಧಿಪಡಿಸಿ ಎಂದು ಒತ್ತಾಯಿಸಿದರು. ಅದನ್ನೂ ಮೀರಿ ಕುದುರೆ ಫಾರಂ ಜಾಗಕ್ಕೆ ಕೈಹಾಕಿದರೆ ಸರ್ಕಾರ ಬೀಳುವವರೆಗೂ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.