ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಶುದ್ಧ ಕುಡಿಯುವ ನೀರಿನ ಘಟಕಗಳು ಹಾಗೂ ಬೋರ್ವೆಲ್ಗಳಲ್ಲಿನ ನೀರಿನ ಗುಣಮಟ್ಟವನ್ನು ಪ್ರಯೋಗಾಲಯದಲ್ಲಿ ತ್ವರಿತವಾಗಿ ಪರಿಶೀಲಿಸಬೇಕೆಂದು *ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು* ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ವಿವಿಧ ವಿಷಯಗಳ ಕುರಿತು ಇಂದು ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಹಾಗೂ ಬೋರ್ವೆಲ್ಗಳಿಗೆ ಅಧಿಕಾರಿಗಳು ಭೇಟಿ ನೀಡಿ ನೀರನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿ ವರದಿ ನೀಡಲು ಸೂಚಿಸಲಾಯಿತು.
ರಸ್ತೆ ಗುಂಡಿಗಳನ್ನು ನಿರಂತರವಾಗಿ ಮುಚ್ಚಿ:
ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚವ ಕಾರ್ಯ ನಿರಂತರವಾಗಿ ನಡೆಸಬೇಕು. ಹೊಸದಾಗಿ ಸೃಷ್ಟಿಯಾಗುವ ರಸ್ತೆ ಗುಂಡಿಗಳನ್ನು ಗುರುತಿಸಿ ಕೂಡಲೆ ಮುಚ್ಚುವ ಕೆಲಸವಾಗಬೇಕು. ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕಾಗಿ ಹೊಸ ತಂತ್ರಾಂಶವನ್ನು ಸಿದ್ದಪಡಿಸಲಾಗುತ್ತಿದ್ದು, ಅದನ್ನು ತ್ವರಿತವಾಗಿ ಅನಾವರಣಗೊಳಿಸಲು ಪ್ರಧಾನ ಅಭಿಯಂತತರಿಗೆ ಸೂಚನೆ ನೀಡಿದರು.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನಿಗಾವಹಿಸಿ:
ನಗರದಲ್ಲಿ 198 ಪ್ರವಾಹ ಪೀಡಿತ ಪ್ರದೇಶಗಳ ಜೊತೆಗೆ ಹೊಸದಾಗಿ 11 ಪ್ರವಾಹ ಪೀಡಿದ ಪ್ರದೇಶಗಳನ್ನು ಗುರುತಿಸಲಾಗಿದ್ದು, ಒಟ್ಟಾರೆ 209 ಪ್ರವಾಹ ಪೀಡಿತ ಪ್ರದೇಶಗಳ ಪೈಕಿ 163 ಸ್ಥಳಗಳಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಉಳಿದ 46 ಸ್ಥಳಗಳಲ್ಲಿ ತಾತ್ಕಾಲಿಕ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪ್ರವಾಹ ಪೀಡಿತ ಪ್ರದೇಶಗಳ ಮೇಲೆ ನಿಗಾವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಸಮನ್ವಯದಿಂದ ಮರಗಳನ್ನು ತೆರವುಗೊಳಿಸಿ:
ಮಳೆಗಾಲದ ವೇಳೆ ಧರೆಗುರುಳಿದ ಮರಗಳನ್ನು ತ್ವರಿತವಾಗಿ ತೆರವುಗೊಳಿಸಬೇಕು. ಅಗ್ನಿ ಶಾಮಕ, ಬೆಸ್ಕಾಂ ಇಲಾಖೆಯೋಂದಿಗೆ ಸಮನ್ವಯಯ ಸಾಧಿಸಿಕೊಂಡು ಮರಗಳನ್ನು ತೆರವುಗೊಳಿಸಬೇಕು. ನಾಗರೀಕರಿಗೆ ಸಮಸ್ಯೆಯಾಗದಂತೆ ಕಾರ್ಯನಿರ್ವಹಿಸಬೇಕಿದ್ದು, ಪಾಲಿಕೆ ಸಹಾಯವಾಣಿ ಸಂಖ್ಯೆ 1533ಗೆ ದೂರು ಬಂದ ಕೂಡಲೆ ಮರ ಕಟಾವು ತಂಡಗಳನ್ನು ಸ್ಥಳಕ್ಕೆ ಕಳುಹಿಸಿ ಸಮಸ್ಯೆ ಬಗೆಹರಿಸಬೇಕೆಂದು ಸೂಚಿಸಿದರು.
ಪಾದಚಾರಿ ಮಾರ್ಗದಲ್ಲಿ ಶ್ವಾಶ್ವತ ಪೆಟ್ಟಿಗೆಗಳನ್ನು ತೆರವುಗೊಳಿಸಿ:
ನಗರದಾದ್ಯಂತ ಪಾದಚಾರಿ ಮಾರ್ಗಗಳಲ್ಲಿ ಶ್ವಾಶ್ವತ ಪೆಟ್ಟಿಗೆಗಳನ್ನು ಅಳವಡಿಸಿದ್ದು, ಇದಿರಂದ ಪಾದಚಾರಿಗಳ ಓಡಾಟಕ್ಕೆ ಸಾಕಷ್ಟು ಸಮಸ್ಯೆಯಾಗಲಿದೆ. ಈ ಸಂಬಂಧ ಪಾದಚಾರಿ ಮಾರ್ಗಗಳಲ್ಲಿರುವ ಶ್ವಾಶ್ವತ ಪೆಟ್ಟಿಗೆಗಳನ್ನು ಎಲ್ಲಾ ವಲಯದಲ್ಲೂ ತೆರವುಗೊಳಿಸಬೇಕೆಂದು ಸೂಚಿಸಿದರು.
ಈ ವೇಳೆ ವಿಶೇಷ ಆಯುಕ್ತರಾದ ಡಾ. ಕೆ. ಹರೀಶ್ ಕುಮಾರ್, ಸುರಳ್ಕರ್ ವಿಕಾಸ್ ಕಿಶೋರ್, ಶಿವಾನಂದ ಕಲ್ಕೆರೆ, ವಲಯ ಆಯುಕ್ತರಾದ ಸ್ನೇಹಲ್, ವಿನೋತ್ ಪ್ರಿಯಾ, ರಮೇಶ್, ರಮ್ಯಾ, ಪ್ರೀತಿ ಗೆಹ್ಲೋಟ್, ಕರೀಗೌಡ, ಪ್ರಧಾನ ಅಭಿಯಂತರರು, ವಲಯ ಮುಖ್ಯ ಅಭಿಯಂತರರು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.