ಬೆಂಗಳೂರು: ಆರ್.ಆರ್ ನಗರ ವಲಯದ ವಾಜರಹಳ್ಳಿಯಲ್ಲಿ ವ್ಯಾಪ್ತಿಯಲ್ಲಿ ನಕ್ಷೆ ಮಂಜೂರಾತಿಗಿಂತ ಹೆಚ್ಚುವರಿಯಾಗಿ ಅನಧಿಕೃತವಾಗಿ ನಿರ್ಮಿಸಿದ 2 ಅಂತಸ್ತುಗಳ ತೆರವು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ.
ವಲಯ ಆಯುಕ್ತರಾದ ಶ್ರೀ ಬಿ.ಸಿ ಸತೀಶ್ ನೇತೃತ್ವದಲ್ಲಿ ಇಂದು ಹೆಮ್ಮಿಗೆ ಪುರ ವಾರ್ಡ್ ವ್ಯಾಪ್ತಿಯ ಬಾಲಾಜಿ ಹೆಚ್.ಬಿ.ಸಿ.ಎಸ್ ವಾಜರಹಳ್ಳಿಯಲ್ಲಿ ಸ್ವತ್ತಿನ ಸಂಖ್ಯೆ. 271ರಲ್ಲಿ ಕಟ್ಟಡ ಮಾಲೀಕರಾದ ಮದನ್ ದೇವಾಸಿ ಬಿ ಮತ್ತು ಮಹೇಂದ್ರ ದೇವಾಸಿ ರವರು 30 X 40 ಸೈಟ್ ನಲ್ಲಿ ಪಾಲಿಕೆಯಿಂದ ಪಡೆದಿರುವ ನಕ್ಷೆ ಮಂಜೂರಾತಿ ವಿರುದ್ಧವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ.
ಪಾಲಿಕೆಯಿಂದ ಎಸ್ + ನೆಲ ಮಹಡಿ + ಮೊದಲನೇ ಹಾಗೂ ಎರಡನೇ ಮಹಡಿ ನಿರ್ಮಾಣ ಮಾಡಲು ಅನುಮತಿ ಪಡೆಯಲಾಗಿತ್ತು. ಆದರೆ ಸ್ವತ್ತಿನಲ್ಲಿ ನಕ್ಷೆ ಮಂಜೂರಾತಿ ಉಲ್ಲಂಘಿಸಿ ಅನಧಿಕೃತವಾಗಿರುವ 3ನೇ ಮತ್ತು 4 ಅಂತಸ್ತುಗಳನ್ನು ನಿರ್ಮಾಣ ಮಾಡಿರುವುದಲ್ಲದೇ ಅನುಮತಿ ನೀಡಿರುವ ಭಾಗದಲ್ಲಿ ವ್ಯತಿರಿಕ್ತವಾಗಿ ನಿರ್ಮಿಸಿರುವ ಭಾಗಗಳನ್ನು ತೆರವುಗೊಳಿಸುವ ಕಾರ್ಯಚರಣೆ ಕೈಗೊಳ್ಳಲಾಗಿದೆ.
ಕಡ್ಡದಲ್ಲಿ ನಿರ್ಮಿಸಿರುವ ವ್ಯತಿರಿಕ್ತ ಭಾಗಗಳನ್ನು ತೆರವುಗೊಳಿಸುವ ಬಗ್ಗೆ ಬಿಬಿಎಂಪಿ 2020 ಕಾಯ್ದೆ ರಡಿಯಲ್ಲಿ 7ನೇ ಜೂನ್ 2024 ರಂದು 248(1) & 248(2) ನೋಟೀಸ್, 19ನೇ ಜೂನ್ 2024 ರಂದು 248(3) ನೋಟೀಸ್, 29ನೇ ಜೂನ್ 2024 ರಂದು 356(1) ಹಾಗೂ 30ನೇ ಆಗಸ್ಟ್ 2024 ರಂದು 356(2) ನೋಟಿಸ್ ಗಳನ್ನು ಜಾರಿ ಮಾಡಲಾಗಿತ್ತು.
ಹೀಗೆ ನಾಲ್ಕು ಬಾರಿ ನೋಟಿಸ್ ಗಳನ್ನು ಕಟ್ಟಡದ ಮಾಲೀಕರಿಗೆ ಜಾರಿ ಮಾಡಿದರೂ ಸಹ ಕಟ್ಟಡದ ವ್ಯತಿರಿಕ್ತ ಭಾಗಗಳನ್ನು ತೆರವುಗೊಳಿಸುವ ಬಗ್ಗೆ ಪಾಲಿಕೆಗೆ ಯಾವುದೇ ಮಾಹಿತಿ ಸಲ್ಲಿಸಿಲ್ಲವಾದ್ದರಿಂದ ಇಂದು ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ನಡೆಸಿ ಅನಧಿಕೃತವಾಗಿ ನಿರ್ಮಾಣ ಮಾಡಿರುವ 2 ಮಹಡಿ ಹಾಗೂ ವ್ಯತಿರಿಕ್ತ ಭಾಗಗಳ ತೆರವು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ.
ಕಟ್ಟಡದ ಅನಧಿಕೃತ ಭಾಗಗಳನ್ನು ಪೊಲೀಸ್ ಸಿಬ್ಬಂದಿ ಹಾಗೂ ಮಾರ್ಷಲ್ ಗಳ ಭದ್ರತೆಯೊಂದಿಗೆ ರಾಜರಾಜೇಶ್ವರಿನಗರ ವಲಯ ಕಛೇರಿಯಿಂದ ತೆರವುಗೊಳಿಸುವ ಕಾರ್ಯವನ್ನು ಕೈಗೊಳ್ಳಲಾಗಿದೆ. 8 ಸಿಬ್ಬಂದಿಗಳ ಮೂಲಕ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ತೆರವುಗೊಳಿಸಲು ತಗುಲಿದ ವೆಚ್ಚಕ್ಕೆ ಕಟ್ಟಡ ಮಾಲೀಕರಿಂದ ವಸೂಲಿ ಮಾಡಲಾಗುವುದು.
ಈ ವೇಳೆ ವಲಯ ಜಂಟಿ ಆಯುಕ್ತರಾದ ಅಜಯ್, ನಗರ ಯೋಜನಾ ವಿಭಾಗದ ಜಂಟಿ ನಿರ್ದೇಶಕರಾದ ಆರತಿ, ಸಹಾಯಕ ನಿರ್ದೇಶಕರು, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.