ಬೆಂಗಳೂರು: ನ. 27ರಿಂದ ಡಿ.7ರವರೆಗೆ 10 ದಿನಗಳ ಕಾಲ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಬಿಜಿಎಸ್ ಆಸ್ಪತ್ರೆಯಲ್ಲಿ ಸೀಳು ತುಟಿ, ಸೀಳು ಅಂಗಳ ಹಾಗೂ ಸುಟ್ಟ ಗಾಯಗಳಿಂದಾಗಿ ವಿರೂಪಗೊಂಡಿರುವ ಉಚಿತ ಶಸ್ತ್ರಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ರೋಟರಿ ಕ್ಲಬ್ ಸಂಸ್ಥೆಯ ಗವರ್ನರ್ ಶ್ರೀನಿವಾಸ ಮೂರ್ತಿ ತಿಳಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು, ರೋಟರಿ ಸಂಸ್ಥೆಯು ಆದಿಚುಂಚನಗಿರಿ ಆಸ್ಪತ್ರೆ ಮೂಲಕ ಬಡವರಿಗೆ ಶಿಕ್ಷಣ, ಆರೋಗ್ಯ, ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಹೀಗೆ ಜನಪರವಾದ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಈ ಬಾರಿ ಹೆಣ್ಣು ಮಕ್ಕಳಿಗೆ ಸೀಳಿತುಟಿ,ಸೀಳು ಅಂಗಳ ಹಾಗೂ ಸುಟ್ಟ ಗಾಯಗಳಿಂದಾಗಿ ವಿರೂಪಗೊಂಡ ಮುಖವನ್ನು ಶಸ್ತ್ರಚಿಕಿತ್ಸೆಯಿಂದ ಸರಿ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಸಮಾಜದಲ್ಲಿ ಮಾನಸಿಕವಾಗಿ ತೊಂದರೆಯನ್ನು ಅನುಭವಿಸುತ್ತಿರುವ ಮಕ್ಕಳಿಗೆ ಅನುಕೂಲವಾಗಲಿದೆ.
ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಹಾಗೂ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಜಿಯವರ ಆಶೀರ್ವಾದದೊಂದಿಗೆ ಅಮೆರಿಕದ ನುರಿತ ತಜ್ಞ ವೈದ್ಯರುಗಳ ತಂಡದಿಂದ ಶಸ್ತ್ರ ಚಿಕಿತ್ಸೆ ಮಾಡಲಿದ್ದು, ಈ ಶಿಬಿರವು ಆದಿಚುಂಚನಗಿರಿ ಆಸ್ಪತ್ರೆ ಮತ್ತು ರೋಟರಿ ಬೆಂಗಳೂರು ಉತ್ತರ 3192 ಸಹಯೋಗದೊಂದಿಗೆ ನಡೆಯುತ್ತಿದೆ. ಈಗಾಗಲೇ 200 ಕ್ಕೂ ಹೆಚ್ಚು ರೋಗಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಇಲ್ಲಿಯವರೆಗೂ ಸುಮಾರು 1100 ವಿಶೇಷ ಮಕ್ಕಳಿಗೆ ಗುಣಮಟ್ಟದ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ ಎಂದರು.
ಕರುಣಾಶ್ರಮ ಮೂಲಕ ಅಂತಿಮ ಹಂತ ತಲುಪಿರುವ ಬಡ ಕ್ಯಾನ್ಸರ್ ರೋಗಿಗಳನ್ನು ಕರೆತಂದು ಅಂತಿಮ ದಿನಗಳಲ್ಲಿ ಅವರನ್ನು ಗೌರವಹಿತವಾಗಿ ನೋಡಿಕೊಂಡು ಅವರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಿ, ಬಡತನದಲ್ಲಿರುವ ಕುಟುಂಬದವರಿಗೆ ನೆರವಾಗುತ್ತಿದ್ದು ಈ ರೀತಿಯ ಸಮಾಜಮುಖಿ ಕಾರ್ಯಗಳನ್ನು ಸಂಸ್ಥೆ ಮಾಡುತ್ತಾ ಬಂದಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀನಿವಾಸ್, ಬಿಕೆ ಕೃಷ್ಣಮೂರ್ತಿ, ಮಹಾದೇವ್ ಗೌಡ, ವಿನೋದ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.