ಬೆಂಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯ ಸ್ಮರಣೆ ಅಂಗವಾಗಿ ಭಾರತೀಯ ಯುವ ಕಾಂಗ್ರೆಸ್ ನಿಂದ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಯುವ ಕಾಂಗ್ರೆಸ್ ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯ ಅವರ ಕರೆ ಮೇರೆಗೆ ದೇವನಹಳ್ಳಿ, ಬಾಗೇಪಲ್ಲಿ, ದೊಡ್ಡಬಳ್ಳಾಪುರ, ಯಲಹಂಕ, ಚಿಕ್ಕಬಳ್ಳಾಪುರ, ಗೌರಿ ಬಿದನೂರು, ನೆಲಮಂಗಲ ಮತ್ತು ಹೊಸಕೋಟೆ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ರಕ್ತದಾನ ಶಿಬಿರ ನಡೆಯಿತು. ಚಿಕ್ಕಬಳ್ಳಾಪುರದಲ್ಲಿ ಅತಿ ಹೆಚ್ಚು 110 ಮಂದಿ, ಉಳಿದ ಕಡೆಗಳಲ್ಲಿ ಸರಾಸರಿ 70 ರಿಂದ 90 ಮಂದಿ ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ರಕ್ಷಾ ರಾಮಯ್ಯ ಮಾತನಾಡಿ, ಜೀವ ರಕ್ಷಣೆಗೆ ರಕ್ತ ಅತ್ಯಂತ ಮಹತ್ವದ್ದಾಗಿದೆ. ತಂತ್ರಜ್ಞಾನ ಎಷ್ಟೇ ಬೆಳವಣಿಗೆಯಾಗಿದ್ದರೂ ಸಹ ರಕ್ತವನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ. ದೇಹದಿಂದ ಮಾತ್ರ ರಕ್ತ ಉತ್ಪಾದನೆಯಾಗುತ್ತದೆ. ಶಸ್ತ್ರ ಚಿಕಿತ್ಸೆ, ಅಪಘಾತ ಮತ್ತಿತರೆ ಸಂದರ್ಭಗಳಲ್ಲಿ ಜೀವ ಉಳಿಸಲು ರಕ್ತದಾನದಿಂದ ಮಾತ್ರ ಸಾಧ್ಯ. ರಕ್ತದಾನ ಮಾಡುವುದರಿಂದ ದೇಹದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ. ಆರೋಗ್ಯವಂತರಾಗಿರುವ ಜೊತೆಗೆ 55 ಕೆ.ಜಿ. ತೂಕವಿರುವ, 18 ರಿಂದ 60 ವರ್ಷ ವಯೋಮಿತಿಯ ಯಾರು ಬೇಕಾದರೂ ರಕ್ತದಾನ ಮಾಡಬಹುದಾಗಿದೆ ಎಂದು ಹೇಳಿದರು.