ಬೆಂಗಳೂರು: ಕನ್ನಡದ ತಾಯಿ ಭುವನೇಶ್ವರಿಯ ಮೂರ್ತಿ ಅನಾವರಣದ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ಕನ್ನಡಪರ ಹೋರಾಟಗಾರರ ಮೇಲಿನ ಎಲ್ಲ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯುವುದಾಗಿ ಘೋಷಿಸಿದ್ದಾರೆ. ಈ ಅಭೂತಪೂರ್ವ ನಿರ್ಣಯ ಕೈಗೊಂಡಿದ್ದಕ್ಕಾಗಿ ಎಲ್ಲ ಕನ್ನಡಪರ ಹೋರಾಟಗಾರರ ಪರವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ರವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಟಿ.ಎ.ನಾರಾಯಣಗೌ ಟಿ.ಎ.ನಾರಾಯಣಗೌಡ, ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಮ್ಮ ಅಪಾರವಾದ ಕನ್ನಡಾಭಿಮಾನದಿಂದ ‘ಕನ್ನಡ ರಾಮಯ್ಯ’ ಎನ್ನಿಸಿಕೊಂಡವರು. ಕನ್ನಡ ನಾಮಫಲಕ ಹೋರಾಟದ ಸಂದರ್ಭದಲ್ಲಿ ನಾನು ಹದಿನಾರು ದಿನಗಳ ಕಾಲ ಜೈಲುವಾಸ ಅನುಭವಿಸಿದೆ, ನನ್ನ ಮೇಲೆ ಒಂದೇ ದಿನ ಹದಿನಾರು ಪ್ರಕರಣಗಳನ್ನು ದಾಖಲಿಸಲಾಯಿತು. ಆದರೆ ಕನ್ನಡ ನಾಮಫಲಕ ಕಡ್ಡಾಯಕ್ಕಾಗಿ ಸಿದ್ಧರಾಮಯ್ಯನವರು ಕಾಯ್ದೆಯನ್ನು ರೂಪಿಸಿ ಜಾರಿಮಾಡಿದ್ದು ನಮ್ಮ ನೋವನ್ನು ಮರೆಯಿಸಿತು. ನಮ್ಮ ಮೆಟ್ರೋದಲ್ಲಿ ಹಿಂದಿಹೇರಿಕೆ ತಡೆಯುವ ನಮ್ಮ ಹೋರಾಟ ಯಶಸ್ವಿಯಾಗಿದ್ದೂ ಸಹ ಸಿದ್ಧರಾಮಯ್ಯನವರು ತೆಗೆದುಕೊಂಡ ದಿಟ್ಟ ನಿರ್ಧಾರದಿಂದ.
ಕನ್ನಡನಾಡು ಸಿದ್ಧರಾಮಯ್ಯನವರಿಂದ ಇನ್ನಷ್ಟು ನಿರೀಕ್ಷಿಸುತ್ತಿದೆ. ಇನ್ನಷ್ಟು ಕನ್ನಡದ ಕೆಲಸಗಳು ಅವರಿಂದ ಆಗಬೇಕಿದೆ. ಕನ್ನಡಿಗರ ಬದುಕನ್ನು ಹೊರರಾಜ್ಯದಿಂದ ಬಂದವರು ಕಿತ್ತುಕೊಳ್ಳುತ್ತಿದ್ದಾರೆ. ಕರ್ನಾಟಕದ ಉದ್ಯಮಗಳು, ಉದ್ಯೋಗಗಳು ಕನ್ನಡಿಗರ ಕೈ ತಪ್ಪುತ್ತಿವೆ. ಇದನ್ನೆಲ್ಲ ನಿಗ್ರಹಿಸಲು ಸಮರ್ಪಕವಾದ ಕಾಯ್ದೆ ರೂಪಿಸಿಬೇಕಿದೆ. ಬಹುಶಃ ಸಿದ್ಧರಾಮಯ್ಯ ಅವರು ಈ ಕಾರ್ಯವನ್ನು ಈಗ ಮಾಡದಿದ್ದರೆ ಮುಂದೆ ಇನ್ನ್ಯಾರೋ ಬಂದು ಇದನ್ನೆಲ್ಲ ಮಾಡುವರೆಂಬ ನಂಬಿಕೆ ನನಗಿಲ್ಲ.
ಇವತ್ತು ಕನ್ನಡದ ಕುಲದೇವತೆ ಭುವನೇಶ್ವರಿಯ ಸನ್ನಿದಾನದಲ್ಲೇ ಕನ್ನಡಪರರ ಮೇಲಿನ ಮೊಕದ್ದಮೆಗಳನ್ನು ಹಿಂದಕ್ಕ ಪಡೆಯುವುದಾಗಿ ಅವರು ಘೋಷಿಸಿದ್ದಾರೆ. ಆ ತಾಯಿಯ ಎದುರು ಆಡಿದ ಮಾತು ಸುಳ್ಳಾಗಬಾರದು. ಹಿಂದೆ ಹಲವು ಮುಖ್ಯಮಂತ್ರಿಗಳು, ಗಹಸಚಿವರು ಇಂಥ ಮಾತನ್ನಾಡಿ ಅದನ್ನು ಉಳಿಸಿಕೊಳ್ಳಲಿಲ್ಲ. ಈಗ ಹಾಗೆ ಆಗದಿರಲಿ. ಕೊಟ್ಟ ಮಾತು ತಪ್ಪದಿರಲಿ. ಹಾಗೆಯೇ ಕನ್ನಡದ ಅಸ್ಮಿತೆ ಎತ್ತಿಹಿಡಿಯುವ ಕಾಳಜಿಯ ಕನ್ನಡಪ್ರೇಮಿಯಾಗಿ ತಮ್ಮ ಅಧಿಕಾರಾವಧಿಯಲ್ಲಿ ಏನೇನು ಸಾಧ್ಯವೋ ಅದನ್ನೆಲ್ಲ ಅವರು ಮಾಡಲಿ ಎಂದು ಮನವಿ ಮಾಡುತ್ತೇನೆ.