ಬೆಂಗಳೂರು: ಮಹತ್ವಾಕಾಂಕ್ಷಿ ಬೆಂಗಳೂರು ಉಪನಗರ ರೈಲು ಯೋಜನೆಗೆ ಜಮರ್ನಿಯ ಲಕ್ಸಂಬರ್ಗ್ ನಗರದ ಕೆಎಫ್ ಡಬ್ಲ್ಯು ಡೆವಲಪ್ಮೆಂಟ್ ಬ್ಯಾಂಕ್ ರಾಜ್ಯ ಸರಕಾರದ ಕೆ-ರೈಡ್ ಸಂಸ್ಥೆಗೆ ₹4,561 ಕೋಟಿ (500 ಮಿಲಿಯನ್ ಯೂರೋ) ಸಾಲ ನೀಡುತ್ತಿದ್ದು, ಈ ಸಂಬಂಧ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಅವರ ಸಮ್ಮುಖದಲ್ಲಿ ಶುಕ್ರವಾರ ಅಧಿಕೃತವಾಗಿ ಇಲ್ಲಿ ಒಡಂಬಡಿಕೆಗೆ ಸಹಿ ಅಂಕಿತ ಹಾಕಲಾಯಿತು.
ಕೆ-ರೈಡ್ ಪರವಾಗಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿಯೂ ಆದ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಎನ್. ಮಂಜುಳಾ ಮತ್ತು ಕೆಎಫ್ ಡಬ್ಲ್ಯೂ ಪರವಾಗಿ ಅದರ ಭಾರತದ ನಿರ್ದೇಶಕ ವೂಲ್ಫ್ ಮೌತ್ ಅಂಕಿತ ಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, `ಕೇಂದ್ರ ಸರಕಾರದ ಆರ್ಥಿಕ ಇಲಾಖೆ ಮತ್ತು ಕೆಎಫ್ ಡಬ್ಲ್ಯು ನಡುವೆ ಈ ಸಂಬಂಧ 2023ರ ಡಿ.15ರಂದು ಪ್ರಾಥಮಿಕ ಒಪ್ಪಂದವಾಗಿತ್ತು. ಈಗ ಕೆಎಫ್ ಡಬ್ಲ್ಯು ಮತ್ತು ಯೋಜನೆಯ ಅನುಷ್ಠಾನದ ಹೊಣೆ ಹೊತ್ತಿರುವ ಕೆ-ರೈಡ್ ನಡುವೆ ಪೂರಕ ಒಪ್ಪಂದ ಮಾಡಿಕೊಳ್ಳಲಾಗಿದೆ. ಯೋಜನೆಯ ಎಲ್ಲಾ ನಾಲ್ಕೂ ಕಾರಿಡಾರ್ ಗಳ ಕಾಮಗಾರಿಗಳು 2027ರ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಲು ಇದು ಮಹತ್ವದ ಒಪ್ಪಂದ ಎಂದು ಹೇಳಿದರು.
ಶೇ.4ರ ಬಡ್ಡಿ ದರದಲ್ಲಿ 20 ವರ್ಷಗಳ ಅವಧಿಗೆ ಈ ಸಾಲವನ್ನು ಜರ್ಮನಿ ಬ್ಯಾಂಕ್ ನೀಡುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಕೆಎಫ್ ಡಬ್ಲ್ಯು ನೀಡುತ್ತಿರುವ ಹಣವನ್ನು ಕೆಂಗೇರಿ-ವೈಟಫೀಲ್ಡ್ ನಡುವಿನ ಕಾರಿಡಾರ್-3ರ ಅಡಿ ಬರುವ ಸ್ಟೇಷನ್ ವರ್ಕ್, ವಯಾಡಕ್ಟ್, ಹೀಳಲಿಗೆ-ರಾಜಾನುಕುಂಟೆ ನಡುವಿನ ಕಾರಿಡಾರ್-4ರ ವ್ಯಾಪ್ತಿಯಲ್ಲಿ ಬರುವ ದೇವನಹಳ್ಳಿಯಲ್ಲಿನ ಡಿಪೋ-1, ಸಿಗ್ನಲ್ ಮತ್ತು ಟೆಲಿಕಾಂ, ಪ್ಲಾಟ್ ಫಾರಂ ಸ್ಕ್ರೀನ್ ಡೋರ್, ಸ್ವಯಂಚಾಲಿತ ಪ್ರಯಾಣ ದರ ವಸೂಲಿ ವ್ಯವಸ್ಥೆ, ಸೌರ ಫಲಗ, ಭದ್ರತಾ ಸಾಧನಗಳು ಮತ್ತು ಎಂಎಐ (ಮ್ಯಾನ್ ಮಶೀನ್ ಇಂಟರ್ಫೇಸ್) ಕಾಮಗಾರಿಗಳಿಗೆ ಬಳಸಿಕೊಳ್ಳಲಾಗುವುದು ಎಂದು ಅವರು ವಿವರಿಸಿದರು.
ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವ ಬೆಂಗಳೂರಿಗೆ ಬ್ರ್ಯಾಂಡ್ ಮೌಲ್ಯವಿದೆ. ಜೊತೆಗೆ, ನಗರಗಳಲ್ಲಿ ಸುಗಮ ಸಂಚಾರ ಜಾಲವನ್ನು ಅಭಿವೃದ್ಧಿ ಪಡಿಸುವುದು ಸರಕಾರದ ಗುರಿಯಾಗಿದೆ. ಇದಕ್ಕೆ ತಕ್ಕಂತೆ ಸಬರ್ಬನ್ ರೈಲು ಯೋಜನೆಯನ್ನು ಕಾಲಮಿತಿಯಲ್ಲಿ ಪೂರೈಸಲು ಹಲವು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಯೋಜನೆಯು ರಾಜ್ಯದ ರಾಜಧಾನಿಯ ಚಹರೆಯನ್ನೇ ಆಮೂಲಾಗ್ರವಾಗಿ ಬದಲಿಸಲಿದೆ ಎಂದು ಪಾಟೀಲ ಹೇಳಿದರು.
ಬೆಂಗಳೂರಿನ ಜನರ ಜೀವನವನ್ನು ಸುಗಮಗೊಳಿಸುವುದು ಸಬರ್ಬನ್ ರೈಲು ಯೋಜನೆಯ ಉದ್ದೇಶವಾಗಿದೆ. ಒಟ್ಟು 15,767 ಕೋಟಿ ರೂ. ವೆಚ್ಚದ ಈ ಯೋಜನೆಯು 58 ನಿಲ್ದಾಣಗಳನ್ನು ಹೊಂದಿರಲಿದ್ದು, ಒಟ್ಟು 4 ಕಾರಿಡಾರ್ ಗಳಲ್ಲಿ 148 ಕಿ.ಮೀ. ಉದ್ದ ಇರಲಿದೆ. ಈ ಯೋಜನೆಗೆ ಕೇಂದ್ರ ಸರಕಾರದ ರೈಲ್ವೆ ಸಚಿವಾಲಯ ಮತ್ತು ರಾಜ್ಯ ಸರಕಾರಗಳು ತಲಾ ಶೇಕಡ 20ರಷ್ಟು ಹೂಡಿಕೆ ಮಾಡಲಿದ್ದು, ಬಾಹ್ಯ ಸಾಲದ ರೂಪದಲ್ಲಿ ಶೇ.60ರಷ್ಟು ಸಂಪನ್ಮೂಲ ಕ್ರೋಡೀಕರಣ ಮಾಡಲಾಗುವುದು ಎಂದು ಅವರು ನುಡಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನಲ್ಲಿರುವ ಜರ್ಮನಿ ಕಾನ್ಸುಲ್ ಜನರಲ್ ಅಕಿಂ ಬರ್ಕಾರ್ಟ್, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಕೆಎಫ್ ಡಬ್ಲ್ಯು ಹಿರಿಯ ಪರಿಣತೆ ಸ್ವಾತಿ ಖನ್ನಾ ಮತ್ತು ಕಾಂಚಿ ಅರೋರ ಮತ್ತಿತರರು ಉಪಸ್ಥಿತರಿದ್ದರು.