ಬೆಂಗಳೂರು : ಬೆಂಗಳೂರು ನಗರದ ನಾಗರೀಕರಿಗೆ ಸಮರ್ಪಕವಾಗಿ ಶುದ್ದ ಕುಡಿಯುವ ನೀರು ಒದಗಿಸಲು ನಾವು ಬದ್ದರಾಗಿದ್ದೇವೆ. ಈ ಹಿನ್ನಲೆಯಲ್ಲಿ ಸಂಚಾರಿ ಕಾವೇರಿ ಹಾಗೂ ಸರಳ ಕಾವೇರಿ ಯಂತಹ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಇಂದು ಪುಲಿಕೇಶಿನಗರದಲ್ಲಿ ಅರ್ಥಿಕವಾಗಿ ಹಿಂದುಳಿದಿರುವ 2.50 ಲಕ್ಷ ಜನರಿಗೆ ಹೆಚ್ಚಿನ ನೀರು ಸರಬರಾಜು ಮಾಡಲು ಜಲಾಗಾರಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ತಿಳಿಸಿದರು.
2.50 ಲಕ್ಷ ಜನರಿಗೆ ಅನುಕೂಲ ಮಾಡಿಕೊಡುವ ಜಲಾಗಾರಕ್ಕೆ ಶಂಕುಸ್ಥಾಪನೆ
ಪುಲಕೇಶಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಗಾಯಪುರಂ ವಾರ್ಡ್ ಪಿಳ್ಳಣ್ಣ ಗಾರ್ಡನ್ನಲ್ಲಿ ಬೆಂಗಳೂರು ಜಲಮಂಡಳಿ ನಿರ್ಮಿಸಲಿರುವ 27.45 ಕೋಟಿ ರೂ.ಅಂದಾಜು ವೆಚ್ಚದ 4 ಎಂಎಲ್ಡಿ ಸಾಮರ್ಥ್ಯದ ಜಲಾಗಾರ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿ, ಅವರು ಮಾತನಾಡಿದರು. ‘‘ಈ ಕ್ಷೇತ್ರಕ್ಕೆ ರಸ್ತೆಗೆ 130 ಕೋಟಿ ರೂ., ಮೇಲ್ಸೇತುವೆಗೆ 42 ಕೋಟಿ ರೂ., 320 ಕೋಟಿ ರೂ. ವಾರ್ಡ್ಗಳ ಅಭಿವೃದ್ಧಿಗೆ, 650 ಕೋಟಿ ರೂ. ವೆಚ್ಚದಲ್ಲಿ ಹೊಸ ಪ್ಲೈಓವರ್ ನಿರ್ಮಿಸಲು ನಿರ್ಧರಿಸಲಾಗಿದೆ. ಈ ಕ್ಷೇತ್ರದಲ್ಲಿ ಶಾಸಕರು ಜಾಗ ಹುಡುಕಿ ಕೊಟ್ಟರೆ ಅಥವಾ ಹಳೆಯ ಶಾಲೆಗಳ ಜಾಗವಿದ್ದರೆ, ಅಲ್ಲಿ ಸುಸಜ್ಜಿತ ನೂತನ ಶಾಲೆ ನಿರ್ಮಿಸಲು ಬದ್ಧನಾಗಿದ್ದೇನೆ. ಅಲ್ಲದೆ, ಆಸ್ಪತ್ರೆಗೆ ನಿರ್ಮಾಣಕ್ಕೂ ಪಾಲಿಕೆ ವತಿಯಿಂದ ಜಾಗ ಹುಡುಕಲಾಗುತ್ತಿದೆ,’’ ಎಂದು ಭರವಸೆ ನೀಡಿದರು.
‘‘ಇನ್ನು ನೆಲಮಂಗಲ, ಕೋಲಾರ ಭಾಗದ ಕೆರೆಗಳಿಗೆ ಸಂಸ್ಕರಿಸಿದ ನೀರನ್ನು ಪೂರೈಸಲಾಗುತ್ತಿದೆ. ಸಣ್ಣ ಮನೆಗಳಿಗೆ ಕಾವೇರಿ ನೀರಿನ ಸಂಪರ್ಕ ಪಡೆಯಲು ಕೇವಲ 1 ಸಾವಿರ ಮಾತ್ರ ಶುಲ್ಕ ಪಾವತಿ ಮಾಡಬಹುದಾಗಿದೆ. ಟ್ಯಾಂಕರ್ಗಳ ಮೂಲಕ ಶುದ್ಧ ಕುಡಿಯುವ ನೀರು ನೀಡುವ ಸಂಚಾರಿ ಕಾವೇರಿ ರೂಪಿಸಲಾಗಿದೆ. ನಾನು ಅಕಾರಕ್ಕೆ ಬಂದ ನಂತರ ಕಾವೇರಿ 5ನೇ ಹಂತದ ಯೋಜನೆ ಆಗಿದೆ. ಹೆಚ್ಚುವರಿಯಾಗಿ 6 ಟಿಎಂಸಿ ನೀರನ್ನು ನೀಡಲಾಗಿದೆ. ಈ ಮೂಲಕ ಮುಂದಿನ 30-40 ವರ್ಷಗಳ ಕಾಲ ಬೆಂಗಳೂರಿಗೆ ಕುಡಿಯಲು ನೀರನ್ನು ಪೂರೈಸಬಹುದು,’’ ಎಂದು ತಿಳಿಸಿದರು.
ಪುಲಿಕೇಶಿನಗರದ 30,000 ಮನೆಗಳ 2.50 ಲಕ್ಷ ಜನರಿಗೆ ಈ ಯೋಜನೆಯಿಂದ ಕುಡಿಯುವ ನೀರು ಲಭ್ಯವಾಗಲಿದೆ. ಈಗಾಗಲೇ ಈ ಪುಲಕೇಶಿನಗರ ಕ್ಷೇತ್ರಕ್ಕೆ 1,055 ಕೋಟಿ ರೂ. ಅನುದಾನಗಳ ಕಾಮಗಾರಿಗೆ ಮಂಜೂರಾತಿ ನೀಡಿದ್ದೇವೆ. ಇಲ್ಲಿನ ಶಾಸಕರಾದ ಎಸಿ ಶ್ರೀನಿವಾಸ್ ಅವರ ಕೋರಿಕೆಯಂತೆ, ಪುಲಕೇಶಿನಗರದಲ್ಲಿ ನೂತನ ಶಾಲೆ ನಿರ್ಮಾಣಕ್ಕೆ ಜಾಗ ಗುರುತಿಸಿಕೊಟ್ಟಲ್ಲಿ ಕಟ್ಟಿಸಿಕೊಡಲು ನಾನು ಸಿದ್ಧ. ಬಿಬಿಎಂಪಿ ವತಿಯಿಂದ ಒಂದು ಆಸ್ಪತ್ರೆ ನಿರ್ಮಿಸಲು ಕೂಡ ಈಗಾಗಲೇ ಯೋಜನೆ ತಯಾರಾಗಿದೆ. ದಾಖಲೆಗಳನ್ನು ಡಿಜಟಲೀಕರಣ ಮಾಡಿ, ಅವುಗಳನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಆರಂಭಿಸುತ್ತಿದ್ದೇವೆ. ಮನೆ ಕಟ್ಟುವವರು ಯಾರಿಗೂ ಲಂಚ ಕೊಡುವಂತಿಲ್ಲ. ‘ನಂಬಿಕೆ ನಕ್ಷೆ’ ಮೂಲಕ ನಿಮ್ಮ ಮನೆಯಲ್ಲೇ ಕುಳಿತು ನಕ್ಷೆಗಳಿಗೆ ಅನುಮೋದನೆ ಪಡೆಯುವಂತಹ ಯೋಜನೆ ಈಗಾಗಲೇ ಜಾರಿಯಲ್ಲಿದೆ. ಇಡೀ ಬೆಂಗಳೂರಿನ ತ್ಯಾಜ್ಯ ನಿರ್ವಹಣೆಗೆ ಒಂದು ವ್ಯವಸ್ಥಿತ ‘ಸ್ವಚ್ಛ ಬೆಂಗಳೂರು’ ಸಹಾಯವಾಣಿ ಸಂಖ್ಯೆಯನ್ನು ಆರಂಭಿಸುತ್ತಿದ್ದೇವೆ ಎಂದು ಹೇಳಿದರು.
ಪುಲಕೇಶಿ ನಗರದಲ್ಲಿ ನೂತನ ಶಾಲೆ ನಿರ್ಮಾಣಕ್ಕೂ ಬದ್ದ
ಪುಲಿಕೇಶಿನಗರದ ಶಾಸಕರಾದ ಎ.ಸಿ ಶ್ರೀನಿವಾಸ್ ಮಾತನಾಡಿ, ಪುಲಕೇಶಿನಗರದ ಸಗಾಯಪುರಂ ವಾರ್ಡ್ 60 ಪಿಳ್ಳಣ್ಣ ಗಾರ್ಡ್ನ್ ನಲ್ಲಿ 4 ಎಂಎಲ್ ಸಾಮರ್ಥ್ಯದ ನೆಲಮಟ್ಟದ ಜಲಗಾರ ನಿರ್ಮಾಣ ಹಾಗೂ 450 ಮಿ.ಮೀ ವ್ಯಾಸದ ಕೊಳವೆ ಮಾರ್ಗವನ್ನು ಅಳವಡಿಸುವ ಕಾಮಗಾರಿಗೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ. 27.45 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. 4 ದಶಲಕ್ಷ ಲೀಟರ್ ಸಾಮರ್ಥ್ಯವನ್ನು ಹೊಂದಲಿರುವ ಜಲಾಗಾರ 2 ಅಂತಸ್ತುಗಳನ್ನು ಹೊಂದಿರಲಿದೆ. 1 ನೇ ಅಂತಸ್ತು 2.48 ದಶಲಕ್ಷ ಲೀಟರ್ ಸಾಮರ್ಥ್ಯ, 2 ನೇ ಅಂತಸ್ತು 1.52 ದಶಲಕ್ಷ ಲೀಟರ್ ಸಾಮರ್ಥ್ಯ ಹೊಂದಿರಲಿದೆ. ಹೈಗ್ರೌಂಡ್ಸ್ ಜಲಾಗಾರದಿಂದ 450 ಮಿ.ಮೀ ವ್ಯಾಸದ 5 ಕಿ.ಮಿ ಉದ್ದದ ಕೊಳವೆ ಮಾರ್ಗ ಹಾಗೂ ಹೊರ ಹರಿವಿಗೆ 300 ಮೀ.ಮಿ ವ್ಯಾಸದ ಎರಡು ಕೊಳವೆ ಮಾರ್ಗವನ್ನು ಹೊಂದಿರಲಿದೆ. ಜಲಾಗಾರದಿಂದ ಸುಮಾರು 26,479 ಮನೆಗಳಿಗೆ ನೀರು ಸರಬರಾಜು ಮಾಡಲು ಸಾಧ್ಯವಾಗಲಿದೆ. ಸನ್ಮಾನ್ಯ ಉಪಮುಖ್ಯಮಂತ್ರಿಗಳು ಪುಲಿಕೇಶಿನಗರದ ಸಮಗ್ರ ಅಭಿವೃದ್ದಿಗೆ ಬಹಳಷ್ಟು ಸಹಕಾರ ನೀಡುತ್ತಿದ್ದಾರೆ ಎಂದರು.
ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷರಾದ ರಾಮ್ಪ್ರಸಾತ್ ಮನೋಹರ್ ಮಾತನಾಡಿ, ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ 6 ವಾರ್ಡ್ಗಳಲ್ಲಿ ಸುಮಾರು 3.50 ಲಕ್ಷ ಜನರು ವಾಸಿಸುತ್ತಿದ್ದಾರೆ. 57 ಕೊಳಚೆ ಪ್ರದೇಶಗಳಿದ್ದು ಸುಮಾರು 27 ಸಾವಿರ ಮನೆಗಳಿವೆ. ದಿನಂಪ್ರತಿ 20 ದಶಲಕ್ಷ ಲೀಟರ್ ನೀರು ಸರಬರಾಜು ಆಗುತ್ತಿದ್ದು ಪ್ರತಿಯೊಬ್ಬರಿಗೂ ಸರಾಸರಿ 70 ಲೀಟರ್ ನೀರು ಲಭ್ಯವಾಗುತ್ತಿದೆ. ಹೊಸ ಜಲಾಗಾರ ಮತ್ತು ಹೊಸ ಕೊಳವೆ ಮಾರ್ಗದಿಂದ ಹೆಚ್ಚುವರಿಯಾಗಿ ದಿನಂಪ್ರತಿ 10 ದಶಲಕ್ಷ ಲೀಟರ್ ಶುದ್ದ ಕಾವೇರಿ ನೀರು ಲಭ್ಯವಾಗಲಿದೆ. ಇದರಿಂದ ದಿನಂಪ್ರತಿ 110 ಲೀಟರ್ ಶುದ್ದ ನೀರು ಸರಬರಾಜು ಮಾಡಬಹುದಾಗಿದೆ. ಇದರಿಂದ ಇಲ್ಲಿನ ನಿವಾಸಿಗಳ ಆರೋಗ್ಯ ಮತ್ತು ಜೀವನ ಮಟ್ಟವನ್ನು ಸುಧಾರಿಸಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಿಬಿಎಂಪಿ ಆಯುಕ್ತರಾದ ಮಹೇಶ್ವರರಾವ್, ಶಾಸಕರಾದ ರಿಜ್ವಾನ್ ಆರ್ಷದ್, ವಿಧಾನಪರಿಷತ್ ಸದಸ್ಯರಾದ ನಾಗರಾಜ ಯಾದವ್, ಅಂಬೇಡ್ಕರ್ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಸಂಪತ್ರಾಜ್ ಸೇರಿದಂತೆ ಸ್ಥಳೀಯ ನಾಯಕರು ಉಪಸ್ಥಿತಿತರಿದ್ದರು.