ಬೆಂಗಳೂರು :ಪಕ್ಷದ ಮೂಲ ಸಿದ್ಧಾಂತವನ್ನು ಯಾವ ಕಾರಣಕ್ಕೂ ಕೈ ಬಿಡಬಾರದು ಎಂದು ಹಿರಿಯ ನಾಯಕರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಕೆಪಿಸಿಸಿ ಕಚೇರಿಯ ಇಂದಿರಾ ಗಾಂಧಿ ಭವನದಲ್ಲಿ ಪಕ್ಷದ ಹಿರಿಯ ನಾಯಕರ ಸಭೆ ಬಳಿಕ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಶಿವಕುಮಾರ್ ಅವರು ಹೇಳಿದ್ಧಿಷ್ಟು“ಕಾಂಗ್ರೆಸ್ ಅನ್ನು ಕಾರ್ಯಕರ್ತರ ಪಕ್ಷವಾಗಿ ಮಾಡಲು ಹಾಗೂ ತಳಮಟ್ಟದಿಂದ ಪಕ್ಷ ಬಲಪಡಿಸುವ ಬಗ್ಗೆ ನಮ್ಮ ನಾಯಕರು ಸಲಹೆ ನೀಡಿದ್ದಾರೆ. ಪಕ್ಷ ಸಂಘಟನೆ ಬಗ್ಗೆಯೂ ಮಾರ್ಗದರ್ಶನಗಳನ್ನು ನೀಡಿದ್ದಾರೆ.
ಕೆಲವೊಬ್ಬರು ಟ್ರ್ಯಾಪ್ ಮಾಡಲು ಪ್ರಯತ್ನ ಪಡುತ್ತಾರೆ
ನಿಗಮ ಮಂಡಳಿಗಳ ಅಧ್ಯಕ್ಷರುಗಳ ಸಭೆ ಕರೆದಿದ್ದು. ಜನರ ಭಾವನೆ ಅರ್ಥ ಮಾಡಿಕೊಂಡು ಕೆಲಸ ಮಾಡಬೇಕು. ಜನರ ಬಳಿ ವರ್ತನೆ ಹೇಗಿರಬೇಕು, ಕೆಲಸಗಳನ್ನು ಹೇಗೆ ಮುನ್ನಡೆಸಿಕೊಂಡು ಹೋಗಬೇಕು ಎಂದು ಸಲಹೆ ನೀಡಲಾಗುವುದು. ಕೆಲವೊಂದಷ್ಟು ಜನ ಟ್ರ್ಯಾಪ್ ಮಾಡಲು ಪ್ರಯತ್ನ ಮಾಡುತ್ತಿರುತ್ತಾರೆ. ಬಹಳ ಬುದ್ದಿವಂತಿಕೆಯಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಲಾಗುವುದು” ಎಂದರು.
ಯಡಿಯೂರಪ್ಪ ಅವರ ವಿರುದ್ಧ ದ್ವೇಷ ರಾಜಕಾರಣ ಮಾಡಲಾಗುತ್ತಿದೆ ಎನ್ನುವ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ “ನಾವ್ಯಾಕೆ ದ್ವೇಷದ ರಾಜಕಾರಣ ಮಾಡಬೇಕು. ನಮಗೆ ಅವಶ್ಯಕತೆ ಏನಿದೆ. ಕಾನೂನಿನ ಪ್ರಕಾರ ಎಲ್ಲವೂ ಆಗಿದೆ. ನನಗೂ ಸಂಪೂರ್ಣ ವಿಚಾರ ತಿಳಿದಿಲ್ಲ. ಮಾಧ್ಯಮದಲ್ಲಿ ತಿಳಿಸಿದ ವಿಚಾರಗಳು ಮಾತ್ರ ಗೊತ್ತು. ನಾನೂ ಇದಕ್ಕೆಲ್ಲಾ ಮೂಗು ತೂರಿಸಲು ಹೋಗುವುದಿಲ್ಲ” ಎಂದು ಹೇಳಿದರು.
ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸಮಾಲೋಚನೆ ನಡೆಸಿದರು. ವಿಧಾನಸಭೆ ಮಾಜಿ ಸ್ಪೀಕರ್ ರಮೇಶ್ ಕುಮಾರ್, ವಿಧಾನ ಪರಿಷತ್ ಮಾಜಿ ಸಭಾಪತಿ ವಿ ಆರ್ ಸುದರ್ಶನ್,ಕೆಪಿಸಿಸಿ ಕಾರ್ಯಾಧ್ಯಕ್ಷ, ರಾಜ್ಯಸಭೆ ಸದಸ್ಯ ಜಿ ಸಿ ಚಂದ್ರಶೇಖರ್, ಮಾಜಿ ಸಂಸದ ಬಿ ಎಲ್ ಶಂಕರ್, ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿ, ಮಾಜಿ ಸಚಿವೆ ರಾಣಿ ಸತೀಶ್, ರಾಜ್ಯಸಭೆ ಮಾಜಿ ಸದಸ್ಯ ಡಾ ಎಲ್ ಹನುಮಂತಯ್ಯ ಮತ್ತಿತರರು ಭಾಗವಹಿಸಿದ್ದರು.