ಬೆಂಗಳೂರು:ಕಾಂಗ್ರೆಸ್ ಬದುಕಿನ ಆಧಾರದ ಮೇಲೆ ರಾಜಕೀಯ ಮಾಡಿದರೆ, ಬಿಜೆಪಿ ಭಾವನೆಗಳ ಮೇಲೆ ಮಾಡುತ್ತದೆ. ಇಂದಿರಾ ಗಾಂಧಿ ಅವರು ಜನರ ಬದುಕಿಗೆ ನೆರವಾಗುವ ಯೋಜನೆಗಳನ್ನು ನೀಡಿದ ಮಹಾನ್ ಶಕ್ತಿ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಸಭಾಂಗಣದಲ್ಲಿ ನಡೆದ ಇಂದಿರಾ ಗಾಂಧಿ ಅವರ 39 ನೇ ವರ್ಷದ ಪುಣ್ಯಸ್ಮರಣೆ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ಬಿಜೆಪಿಯವರು ಸಮಾಜ ಒಡೆಯುವ ಯೋಜನೆಗಳನ್ನು ಕೊಟ್ಟಿದ್ದಾರೆ. ತಮ್ಮ ಸ್ವಂತ ಹಣದಿಂದ ದೇಶಕ್ಕೆ 60/40 ಅಳತೆಯ ಒಂದೇ ಒಂದು ನಿವೇಶನವನ್ನೂ ನೀಡಿಲ್ಲ. ನೆಹರು ಅವರು ತಮ್ಮ ಮುಕ್ಕಾಲು ಪಾಲು ಆಸ್ತಿಯನ್ನೇ ಈ ದೇಶಕ್ಕೆ ಬರೆದರು. ಈಗ ರಾಹುಲ್ ಗಾಂಧಿ ಅವರ ಬಳಿ ಏನೂ ಇಲ್ಲ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರು ಆಸ್ತಿಯ ಜೊತೆಗೆ ಪ್ರಾಣತ್ಯಾಗವನ್ನು ಮಾಡಿದ್ದಾರೆ. ಬಿಜೆಪಿಯವರು ಒಬ್ಬರಾದರೂ ಇಂತಹ ಕೆಲಸ ಮಾಡಿದ್ದಾರೆಯೇ?
ಕಬ್ಬಿಣದಿಂದ ಸೂಜಿ ಮತ್ತು ಕತ್ತರಿ ಎರಡನ್ನೂ ತಯಾರಿಸಬಹುದು. ಸೂಜಿಯಿಂದ ಕೂಡಿಸಿ ಹೊಲಿಯಬಹುದು, ಕತ್ತರಿಯಿಂದ ಕತ್ತರಿಸಬಹುದು. ನಾವು ಸಮಾಜದ ಎಲ್ಲಾ ವರ್ಗದವರನ್ನು ಕೂಡಿಸಿ ಹೊಲಿಯುತ್ತೇವೆ, ಬಿಜೆಪಿಯವರು ಕತ್ತರಿಸುತ್ತಾರೆ. ಬಿಜೆಪಿಯವರದ್ದು ತಲೆಬುಡವಿಲ್ಲದ ಕಾನೂನುಗಳು, ನಾವು ಬೆಂಗಳೂರಿನಲ್ಲಿ ʼಇಂಡಿಯಾʼಎಂದು ಹೆಸರಿಟ್ಟ ತಕ್ಷಣ ಇಂಡಿಯಾ ಎನ್ನುವ ಹೆಸರನ್ನೇ ಬದಲಾಯಿಸಲು ಹೊರಟಿದ್ದಾರೆ. ಇಂಡಿಯನ್ ಅಡ್ಮಿನಿಸ್ಟ್ರೇಷನ್ ಸರ್ವೀಸ್ ಸೇರಿದಂತೆ ನೋಟಿನಲ್ಲಿಯೂ ಹೆಸರು ಬದಲಾಯಿಸಲು ಬಿಜೆಪಿ ಹೊರಟಿರುವುದು ಹಾಸ್ಯಾಸ್ಪದ.
ಮೇಕ್ ಇನ್ ಇಂಡಿಯಾ ಎಂದು ಹೆಸರಿಟ್ಟಿದ್ದೇ ಅವರು, ಅದರ ಗುರುತು ಸಿಂಹವನ್ನ ಸಿಎಂ ಮನೆಯ ಎದುರೇ ನಿಲ್ಲಿಸಲಾಗಿದೆ. ಅವರು ಮಾಡಿದ ಯೋಜನೆಯ ಹೆಸರನ್ನೇ ಬದಲಾಯಿಸಲು ಹೊರಟಿದ್ದಾರೆ. ಇಂಡಿಯಾ ಎನ್ನುವ ಹೆಸರು ಭಾವನಾತ್ಮಕವಾಗಿ ನಮ್ಮೊಳಗೆ ಹಾಸುಹೊಕ್ಕಾಗಿದೆ. ಈ ರೀತಿ ಭಾವನೆ ಕೆರಳಿಸುವ ಕೆಲಸಕ್ಕೆ ಬಿಜೆಪಿಯವರು ಕೈ ಹಾಕಿದ್ದಾರೆ, ನಾವು ಜನರ ಹೊಟ್ಟೆ ತುಂಬಿಸುವ ಕೆಲಸಕ್ಕೆ ಕೈ ಹಾಕೋಣ.
ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್, ಉಚಿತ ಬಸ್ ಹೀಗೆ ಗ್ಯಾರಂಟಿ ಯೋಜನೆಗಳನ್ನು ಜಾತಿ, ಧರ್ಮದ ಆಧಾರದ ಮೇಲೆ ತಂದಿದ್ದೇವೆಯೇ? ಇಲ್ಲ. ನಮಗಿಂತ ಹೆಚ್ಚು ಬಿಜೆಪಿ, ದಳದವರೇ ಈ ಯೋಜನೆಗಳ ಫಲಾನುಭವಿಗಳು. ಮಂಗಳೂರು ಸೇರಿದಂತೆ ಅನೇಕ ಕಡೆ ಬಿಜೆಪಿಯವರೇ ಗ್ಯಾರಂಟಿ ಯೋಜನೆಗಳಿಗೆ ಮುಗಿಬಿದ್ದು, ಮೊದಲು ನೋಂದಣಿ ಮಾಡಿಕೊಳ್ಳುತ್ತಿದ್ದರು ಎಂದು ವಿನಯ್ ಕುಮಾರ್ ಸೊರಕೆ, ಮಿಥುನ್ ರೈ, ಇನಾಯತ್ ಅವರು ಹೇಳುತ್ತಿದ್ದರು. ನಮಗೆ ಮತಗಳು ಮಾತ್ರ ಇಲ್ಲ, ಆದರೆ ಯೋಜನೆಗಳು ಮಾತ್ರ ಬೇಕು. ಕರಾವಳಿಯ ಜನ ಮುಂದೊಂದು ದಿನ ಬದಲಾಗಬಹುದು ಎಂದು ಕಾದು ನೋಡೋಣ, ವಿಶ್ವಾಸವಿಟ್ಟು ನಡೆಯೋಣ.
ಇಂದಿರಾ ಗಾಂಧಿ ಈ ದೇಶದ ಶಕ್ತಿ:
“ಒಂದು ವೇಳೆ ದೇಶ ಸೇವೆಯ ಸಂದರ್ಭದಲ್ಲಿ ನಾನು ಸಾವನ್ನಪ್ಪಿದರೆ, ಅದಕ್ಕೆ ನಾನು ಹೆಮ್ಮೆ ಪಡುತ್ತೇನೆ. ನನ್ನ ಪ್ರತಿ ರಕ್ತದ ಹನಿಯು ಈ ದೇಶವನ್ನು ಶಕ್ತಿಶಾಲಿ ರಾಷ್ಟ್ರವನ್ನಾಗಿ ನಿರ್ಮಿಸಲು ನೆರವಾಗುತ್ತದೆ” ಎಂದು ಹತ್ಯೆಯಾಗುವ ಎರಡು ದಿನ ಮುಂಚಿತವಾಗಿ ಇಂದಿರಾ ಗಾಂಧಿ ಅವರು ಈ ಮಾತುಗಳನ್ನು ಹೇಳಿದ್ದರು.
ಬ್ಯಾಂಕ್ಗಳನ್ನು ರಾಷ್ಟ್ರೀಕರಣ ಮಾಡಿ ಬಡವರಿಗೆ ಸಾಲ ಮತ್ತು ಹಣದ ವ್ಯವಹಾರವನ್ನು ಸುಲಭ ಮಾಡಿವರು ಇಂದಿರಾ ಗಾಂಧಿ. ಇದನ್ನು ತುಂಬಾ ಅಚ್ಚುಕಟ್ಟಾಗಿ ಬಳಸಿಕೊಂಡ ಜನಾರ್ದನ ಪೂಜಾರಿ ಅವರು ಸಾಲ ಮೇಳಗಳನ್ನು ಆಯೋಜಿಸಿದರು. ಆರ್ಥಿಕವಾಗಿ ಹಿಂದುಳಿದವರು ಹಾಗೂ ಬಡವರಿಂದ ಯಾವುದೇ ಗ್ಯಾರಂಟಿ ಪಡೆಯದೆ ಐದರಿಂದ ಹತ್ತು ಸಾವಿರ ಸಾಲ ನೀಡುವ ಈ ಯೋಜನೆಯಿಂದ ಅನೇಕರು ಆರ್ಥಿಕವಾಗಿ ಸಬಲರಾದರು.
1985 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದೆ. ಇದೇ ವೇಳೆ ಕೇಂದ್ರ ಸಚಿವರಾಗಿದ್ದ ಜನಾರ್ದನ ಪೂಜಾರಿ ಅವರನ್ನು ಕರೆಸಿ, ಕ್ಷೇತ್ರದಲ್ಲಿ ಸಾಲ ಮೇಳ ಆಯೋಜನೆ ಮಾಡಿ, ಸಾವಿರಾರು ಜನರಿಗೆ ಸಾಲ ಕೊಡಿಸಿದೆ. ಇದರ ಪರಿಣಾಮವಾಗಿ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದೆ. ಅಂದಿನಿಂದ ಗೆಲ್ಲುತ್ತಲೇ ಬಂದಿದ್ದೇನೆ. ಈ ಮೊದಲು ವಾಹನ ಅಥವಾ ಗೃಹೋಪಯೋಗಿ ವಸ್ತುಗಳನ್ನು ತೆಗೆದುಕೊಳ್ಳಬೇಕು ಎಂದರೆ ಲೇವಾದೇವಿ ವ್ಯವಹಾರ ಮಾಡುವವರ ಬಳಿ ಸಾಲ ಮಾಡಬೇಕಾಗಿತ್ತು. ಸಾಲ ಮೇಳ ಇಂತಹ ಪರಿಸ್ಥಿತಿಗಳನ್ನು ತಪ್ಪಿಸಿತು.
ಲಾಲ್ಬಾಗ್ ಬಳಿಯ ಲೇವಾದೇವಿಗಾರರ ಬಳಿ ತಿಂಗಳಿಗೆ ನೂರು ರೂಪಾಯಿ ಕಂತು ಕಟ್ಟುವ ರೀತಿಯಲ್ಲಿ ಸಾಲ ತೆಗೆದುಕೊಂಡು, ಮೂರು ಸಾವಿರಕ್ಕೆ ನಾನು ಕಾಲೇಜು ಓದುವ ಸಮಯದಲ್ಲಿ ಸ್ಕೂಟರ್ ತೆಗೆದುಕೊಂಡಿದ್ದೆ. ಮಾರುತಿ ಕಾರನ್ನು 78,000 ಕ್ಕೆ ಇದೇ ರೀತಿ ಸಾಲ ಪಡೆದು ತೆಗೆದುಕೊಂಡಿದ್ದೆ. ಹಣಕ್ಕೆ ಕಷ್ಟದ ಪರಿಸ್ಥಿತಿ ಇತ್ತು, ಇದನ್ನು ನೀಗಿಸಿದ್ದು ಸಾಲ ಮೇಳ ಹಾಗೂ ಬಹುಮುಖ್ಯವಾಗಿ ಬ್ಯಾಂಕುಗಳ ರಾಷ್ಟ್ರೀಕರಣ ಯೋಜನೆ.
ಈಗ ಪ್ರತಿಯೊಬ್ಬರಿಗೂ ಬ್ಯಾಂಕ್ನಿಂದ ಕರೆ ಅಥವಾ ಸಂದೇಶ ಬರುತ್ತದೆ, ಸಾಲ ಕೊಟುತ್ತೇವೆ ಎಂದು. ನಮ್ಮ ಸರ್ಕಾರದಿಂದ ರೈತರಿಗೆ, ಪರಿಶಿಷ್ಟ ಜಾತಿ, ಪಂಗಡಗಳಿಗೆ 3-5 ಲಕ್ಷದ ತನಕ ನೀಡುವ ಸಾಲಕ್ಕೆ ಯಾವುದೇ ಬಡ್ಡಿ ಇಲ್ಲ ಎಂದು ಯೋಜನೆ ಕೊಟ್ಟಿದ್ದೇವೆ. ಸಮಾಜದ ಎಲ್ಲಾ ವರ್ಗದ ಜನರಿಗೆ ಆರ್ಥಿಕವಾಗಿ ಶಕ್ತಿ ನೀಡಬೇಕು ಎಂದು ಈ ಎಲ್ಲಾ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಇದಕ್ಕೆ ಅಡಿಪಾಯ ಹಾಕಿದ್ದೇ ಇಂದಿರಾ ಗಾಂಧಿ ಅವರು.
ಭಾರತ್ ಜೋಡೋ ಯಾತ್ರೆ ಮೊಣಕಾಲ್ಮೂರಿನ ಬಳಿ ಹಾದು ಹೋಗುವ ಸಂದರ್ಭದಲ್ಲಿ, ರಾಹುಲ್ ಗಾಂಧಿ ಅವರು ಟೀ ವಿರಾಮ ತೆಗೆದುಕೊಂಡರು. ಅಲ್ಲಿಗೆ 75 ವರ್ಷದ ಹಿರಿಯ ಮಹಿಳೆ ಬಂದು ರಾಹುಲ್ ಗಾಂಧಿ ಅವರಿಗೆ “ನಿಮ್ಮ ಅಜ್ಜಿ ಕೊಟ್ಟಂತಹ ಭೂಮಿಯಲ್ಲಿ ಬೆಳೆದ ಸೌತೆಕಾಯಿ ತೆಗೆದುಕೋ” ಎಂದು ಕೊಟ್ಟರು. ಹೀಗೆ ಈ ದೇಶದ ಉಳುವವನಿಗೆ ಭೂಮಿ, ಮಾಸಾಶನ, ಬಡವರಿಗೆ ಸೂರು, ನಿವೇಶನ ಇಂತಹ ನೂರಾರು ಕಾರ್ಯಕ್ರಮಗಳನ್ನು ರೂಪಿಸಿದ್ದೇ ಶ್ರೀಮತಿ ಇಂದಿರಾ ಗಾಂಧಿ ಅವರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಈ ದೇಶದ ಕಲ್ಯಾಣಕ್ಕೆ ಅನೇಕ ಯೋಜನೆಗಳನ್ನು ತಂದಿದೆ. ರಾಜೀವ್ ಗಾಂಧಿ ಅವರ ಕಾಲದಲ್ಲಿ ಸಾಕಷ್ಟು ಯೋಜನೆಗಳು ಬಂದವು. ನಂತರ ಸೋನಿಯಾ ಗಾಂಧಿ ಅವರು ಯುಪಿಎ ಅಧ್ಯಕ್ಷರಾದ ನಂತರ ಶಿಕ್ಷಣದ ಹಕ್ಕು, ಉದ್ಯೋಗ ಖಾತ್ರಿ, ಮಾಹಿತಿ ಹಕ್ಕು ಯೋಜನೆಗಳನ್ನು ಜಾರಿಗೆ ತರಲಾಯಿತು. ಇದೇ ಕಾರಣಕ್ಕೆ ಕಾಂಗ್ರೆಸ್ ಶಕ್ತಿ ಈ ದೇಶದ, ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ ಎನ್ನುವ ಮಾತನ್ನು ಪದೇ, ಪದೇ ಹೇಳುತ್ತೇನೆ.
ಯುವ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಲು ನಮ್ಮ ಕ್ಷೇತ್ರದ ಕಾರ್ಯಕರ್ತರು ಹಾಗೂ ಬೆಂಗಳೂರಿನ ಯುವ ನಾಯಕರು ಬೆಂಗಳೂರಿನಿಂದ ದೆಹಲಿಗೆ ರೈಲಿನಲ್ಲಿ ಹೋಗುತ್ತಾ ಇದ್ದೆವು, ಬೆಂಗಳೂರು ಬಿಟ್ಟು ಸ್ವಲ್ಪ ದೂರ ಹೋಗುತ್ತಿದ್ದಂತೆ ರೈಲು ನಿಂತು ಬಿಟ್ಟಿತು. ಏಕೆ ಎಂದು ವಿಚಾರಿಸಿದಾಗ ಇಂದಿರಾ ಗಾಂಧಿ ಅವರ ಕಗ್ಗೊಲೆಯಾಗಿದೆ ಎನ್ನುವ ಸುದ್ದಿ ಬಂತು. ಗಲಾಟೆ ಹಬ್ಬಿತು, ಆಗ ನನ್ನನ್ನು ಮಲ್ಲೇಶ್ವರಂ ಠಾಣೆಯಲ್ಲಿ ಬಂಧಿಸಿ ಇಟ್ಟಿದ್ದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ಸಮುದಾಯಗಳು ಅಧಿಕಾರಕ್ಕೆ ಬಂದಂತೆ, ಎಲ್ಲರಿಗೂ ನಾವು ಅಧಿಕಾರ ನೀಡದೆ ಇರಬಹುದು, ಆದರೆ ಆರ್ಥಿಕವಾದ ಸ್ವಾತಂತ್ರ್ಯ ಮತ್ತು ಶಕ್ತಿಯನ್ನು ನೀಡುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಮಹಿಳಾ ಸಬಲೀಕರಣಕ್ಕೆ ಹಾಗೂ ಬೆಲೆ ಏರಿಕೆಯಿಂದ ತತ್ತರಿಸಿದ್ದ ಮಹಿಳೆಯರು ತಮ್ಮ ಕುಟುಂಬ ನಿರ್ವಹಣೆ ಮಾಡಲು ಗೃಹಲಕ್ಷ್ಮೀ ಯೋಜನೆ ಜಾರಿಗೆ ತಂದೆವು. ಇದರಿಂದ 1.10 ಕೋಟಿ ಮಹಿಳೆಯರ ಖಾತೆಗೆ ಹಣ ವರ್ಗಾವಣೆಯಾಗಿದೆ. ದಸರಾದಲ್ಲಿ ಲಕ್ಷಾಂತರ ಹೆಣ್ಣುಮಕ್ಕಳು ಉಚಿತ ಬಸ್ ಯೋಜನೆ ಕಾರಣಕ್ಕೆ ಕುಟುಂಬ ಸಮೇತರಾಗಿ ಬಂದಿದ್ದರು. ಇದರಿಂದ ಹಣದ ಚಲಾವಣೆ ಹೆಚ್ಚು ನಡೆಯುತ್ತಿದೆ.
ಈ ವಿಚಾರವನ್ನು ಸಾರ್ವಜನಿಕವಾಗಿ ಎಲ್ಲಿಯೂ ಹೇಳಲು ನಾನು ಹೋಗುವುದಿಲ್ಲ. ಶ್ರೀಪೆರಂಬದೂರಿನಲ್ಲಿ ರಾಜೀವ್ ಗಾಂಧಿ ಅವರು ಮೃತಪಟ್ಟ ಜಾಗದಲ್ಲಿ ಅವರ ಸ್ಮರಣಾರ್ಥ ಹಾಗೂ ಅವರ ದೆಹಲಿಯ ಶಕ್ತಿ ಸ್ಥದಲ್ಲಿರುವ ಸಮಾಧಿಯ ಬಳಿ ಕನಕಪುರದ ಗ್ರಾನೈಟ್ ಕಲ್ಲನ್ನು ನೆಡುವ ಪುಣ್ಯದ ಕೆಲಸವನ್ನು ಸೋನಿಯಾ ಗಾಂಧಿ ಅವರ ಸೂಚನೆ ಮೇರೆಗೆ ಮಾಡಿದ್ದೇನೆ.
ಕಾಂಗ್ರೆಸ್ ಪಕ್ಷ ನಿಮಗೆ ಅಧಿಕಾರ ನೀಡಿದೆಯೋ ಇಲ್ಲವೋ, ಆದರೆ ಈ ದೇಶದ ಜನರಿಗೆ ಶಕ್ತಿ ನೀಡಿರುವುದೇ ನಮ್ಮ ಹೆಗ್ಗಳಿಕೆ. ಮಹಾನ್ ನಾಯಕರು ಇರುವಂತಹ ಪಕ್ಷದಲ್ಲಿ ನಾವಿರುವುದೇ ಭಾಗ್ಯ, ಪುರಸಭೆ ಸದಸ್ಯ, ಕೆಪಿಸಿಸಿ ಅಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ರಾಷ್ಟ್ರೀಯ ಅಧ್ಯಕ್ಷರಾಗಿ ಬೆಳೆದಿದ್ದಾರೆ. ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ ಅವರು ಕುಳಿತಂತಹ ಜಾಗದಲ್ಲಿ ಕುಳಿತು, ಕರ್ನಾಟಕದ ವ್ಯಕ್ತಿಯೊಬ್ಬ ಆಡಳಿತ ನಡೆಸುತ್ತಿರುವುದು ನಮ್ಮೆಲ್ಲರಿಗೆ ಸ್ಪೂರ್ತಿ.
ಇಂದಿರಾ ಗಾಂಧಿ ಅವರ ಸ್ಪೂರ್ತಿಯೇ ನಮ್ಮ ಕಲ್ಯಾಣ ಯೋಜನೆಗಳಿಗೆ ಕಾರಣ. ನಾವುಗಳು ಅವರ ಹಾದಿಯಲ್ಲಿ ನಡೆಯೋಣ. ಮಹಾತ್ಮ ಗಾಂಧಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಈ ಮೂರು ಜನ ಭಯೋತ್ಪಾದನೆಗೆ ಬಲಿಯಾಗಿದ್ದು ಮಾತ್ರ ವಿಪರ್ಯಾಸ. ಇಂದಿರಾ ಎಂದರೆ ಇಂಡಿಯಾ, ಇಂಡಿಯಾ ಎಂದರೆ ಇಂದಿರಾ. ತೆಲಂಗಾಣಕ್ಕೆ ಚುನಾವಣಾ ಪ್ರಚಾರಕ್ಕೆ ಹೋದಾಗ ಗಮನಿಸಿದೆ, ಈಗಲೂ ಅಲ್ಲಿನ ಜನ ಇಂದಿರಾ ಗಾಂಧಿ ಅವರನ್ನು ನೆನಪಿಸಿಕೊಳ್ಳುತ್ತಾರೆ. ಇಂದಿರಮ್ಮನ ಮನೆ ಎಂದೇ ತಮ್ಮ ಮನೆಗಳಿಗೆ ಹೆಸರು ಕಟ್ಟಿದ್ದಾರೆ.
ಒಂದು ವರ್ಷದ ಹಿಂದೆ ದಸರಾ ವೇಳೆ ರಾಹುಲ್ ಗಾಂಧಿ ಅವರು ಮಳೆಯಲ್ಲಿ ನಿಂತು ಭಾಷಣ ಮಾಡುತ್ತಿದ್ದರು, ನಾವು ಅವರ ಜೊತೆ ಹೆಜ್ಜೆ ಹಾಕುತ್ತಿದ್ದೆವು. ಇಂದು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿದ್ದೇವೆ. ಇದು ಜನರ ಕೊಟ್ಟ ಶಕ್ತಿ, ಸಾಮರ್ಥ್ಯ ಕೊಡುಗೆ.
ಉಕ್ಕಿನ ಮನುಷ್ಯ ಸರ್ಧಾರ್ ವಲ್ಲಭಬಾಯಿ ಪಟೇಲ್ ಕಾಂಗ್ರೆಸ್ ಪಕ್ಷದ ನಾಯಕರಾಗಿ, ಈ ದೇಶದಲ್ಲಿ ಇಂದ್ದಂತಹ ರಾಜರ ಆಡಳಿತಗಳನ್ನು ಕೊನೆಗಾಣಿಸಿ ಒಗ್ಗೂಡಿಸಿದವರು ಅವರನ್ನು ಸಹ ನಾವು ಸದಾ ನೆನಪಿನಲ್ಲಿ ಇಟ್ಟುಕೊಳ್ಳಲೇಬೇಕು.
ಮುಂದಿನ ದಿನಗಳಲ್ಲಿ ಕೆಪಿಸಿಸಿಯಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಒಬ್ಬ ಕಾರ್ಯಕರ್ತನಿಗೆ ಮಾತನಾಡಲು ಅವಕಾಶ ನೀಡಬೇಕು ಎಂದು ಸೂಚನೆ ನೀಡಿದ್ದೇನೆ. ಮೊದಲು ನೋಂದಣಿ ಮಾಡಿಕೊಳ್ಳಬೇಕು, ಎರಡು ದಿನ ಮುಂಚಿತವಾಗಿ ತಿಳಿಸಲಾಗುವುದು. ಕೇವಲ ನಾಯಕರೇ ಮಾತನಾಡುವುದಲ್ಲ, ಕಾರ್ಯಕರ್ತರೂ ಸಹ ಮುಂಚೂಣಿಗೆ ಬರಬೇಕು. ಯಾರ ಹಣೆಯಲ್ಲಿ ಏನು ಬರೆದಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ.
ರೇವಣ್ಣ, ರಾಮಲಿಂಗಾರೆಡ್ಡಿ ಅವರು ಮುನಿಸಿಪಲ್ ಸದಸ್ಯರಾಗಿದ್ದರು, ನಾನು ಮತ್ತು ಮಾಜಿ ಸಂಸದರಾದ ಚಂದ್ರಪ್ಪ ಅವರು ಜಿಲ್ಲಾ ಪಂಚಾಯತಿ ಸದಸ್ಯರಾಗಿದ್ದೆವು ಈಗ ಉನ್ನತ ಮಟ್ಟಕ್ಕೆ ಏರಿದ್ದೇವೆ. ಕಾರ್ಯಕರ್ತರು ನಂಬಿಕೆ, ಆತ್ಮವಿಶ್ವಾಸ ಕಳೆದುಕೊಳ್ಳಬಾರದು, ಒಂದಲ್ಲ ಒಂದು ದಿನ ನಿಮಗೂ ಅಧಿಕಾರ ಸಿಕ್ಕೆ ಸಿಗುತ್ತದೆ.