ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರ ಇಷ್ಟು ದಿನಗಳ ಕಾಲ ಅದಾನಿ ಅವರನ್ನು ರಕ್ಷಣೆ ಮಾಡಿಕೊಂಡು ಬಂದಿದೆ. ಈಗಲಾದರೂ ದೇಶದ ಗೌರವ ಉಳಿಸಲು ಅವರನ್ನು ಬಂಧಿಸಿ, ಕಾನೂನು ಚೌಕಟ್ಟಿಗೆ ಒಳಪಡಿಸಬೇಕು” ಎಂದು ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಪಕ್ಷದ ಪರವಾಗಿ ಆಗ್ರಹಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಶಿವಕುಮಾರ್ ಅವರು ಶುಕ್ರವಾರ ಮಾತನಾಡಿದರು.“ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಕಳೆದ ಏಳೆಂಟು ವರ್ಷಗಳಿಂದ ನಿರಂತರವಾಗಿ ಅದಾನಿ ಅವರ ಕಂಪನಿಗಳ ಬಗ್ಗೆ ಆರೋಪ ಮಾಡಿ ಜನರ ಗಮನ ಸೆಳೆಯುತ್ತಿದ್ದರು. ಕೇಂದ್ರ ತನಿಖಾ ಸಂಸ್ಥೆಗಳು ಈ ವಿಚಾರವಾಗಿ ಕ್ರಮ ಕೈಗೊಂಡಿಲ್ಲ. ಈ ವಿಚಾರ ಸಂಸತ್ತಿನಿಂದ ಬೀದಿಗಳ ವರೆಗೂ ಚರ್ಚೆಯಾಯಿತು.
ಗ್ರೀನ್ ಎನರ್ಜಿ ಯೋಜನೆಯಲ್ಲಿ ಆಗಿರುವ ಅಕ್ರಮದ ಬಗ್ಗೆ ಅಮೆರಿಕದ ನ್ಯಾಯಾಲಯ ಆದೇಶ ನೀಡಿದ್ದು, ಈ ವಿಚಾರವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇದರಲ್ಲಿ ಭಾಗಿಯಾದವರನ್ನು ಕಾನೂನು ಚೌಕಟ್ಟಿನಲ್ಲಿ ತರಬೇಕು. ನಿಮ್ಮ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಗಳು ಸೇರಿದಂತೆ ವಿರೋಧ ಪಕ್ಷಗಳ ನಾಯಕರುಗಳನ್ನು ಬಂಧಿಸಿದ್ದೀರಿ. ಹೀಗಾಗಿ ಅದಾನಿ ಅವರನ್ನು ಕಾನೂನು ಚೌಕಟ್ಟಿನಲ್ಲಿ ತಂದು ಬಂಧಿಸಬೇಕು” ಎಂದು ಆಗ್ರಹಿಸಿದರು.
ಹೂಡಿಕೆದಾರರನ್ನು ರಕ್ಷಣೆ ಮಾಡಿ:
“ಕೇಂದ್ರ ಸರ್ಕಾರ ಅದಾನಿ ಅವರ ರಕ್ಷಣೆ ಮಾಡಿ ಪ್ರಯೋಜನವಿಲ್ಲ. ದೇಶದ ಜನಸಾಮಾನ್ಯರು ಅವರ ಕಂಪನಿಗಳ ಮೇಲೆ ಸಾವಿರಾರು ಕೋಟಿ ಹೂಡಿಕೆ ಮಾಡಿದ್ದು, ಅವರ ಕಂಪನಿ ಷೇರು ಬಿದ್ದು ಹೋಗುತ್ತಿದೆ. ಕೇಂದ್ರ ಸರ್ಕಾರ ಇವರ ರಕ್ಷಣೆ ಮಾಡಬೇಕು” ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ಮೊದಲು ಕ್ರಮ ಕೈಗೊಳ್ಳಲಿ:
ಅದಾನಿ ಅವರ ಆಸ್ತಿಗಳು ರಾಜ್ಯದಲ್ಲಿದ್ದು ಅದನ್ನು ಮುಟ್ಟುಗೋಲು ಹಾಕಿಕೊಳ್ಳುವ ತಾಕತ್ತಿದೆಯೇ ಎಂಬ ಬಿಜೆಪಿ ನಾಯಕರ ಸವಾಲಿನ ಬಗ್ಗೆ ಕೇಳಿದಾಗ, “ಕೇಂದ್ರ ಸರ್ಕಾರ ಮೊದಲು ತನಿಖೆ ಆರಂಭಿಸಿ, ತಮ್ಮ ಕರ್ತವ್ಯ ಮಾಡಲಿ. ತನಿಖೆ ಆರಂಭಿಸಿ ನಮ್ಮ ರಾಜ್ಯ ಸರ್ಕಾರಕ್ಕೆ ಈ ವಿಚಾರವಾಗಿ ಪತ್ರ ಬರೆದರೆ ನಮ್ಮ ಸರ್ಕಾರ ಈ ವಿಚಾರದಲ್ಲಿ ಕ್ರಮ ಕೈಗೊಳ್ಳಲಿದೆ. ಇಷ್ಟು ದಿನ ಅವರು ರಕ್ಷಣೆ ಮಾಡಿಕೊಂಡು ಬಂದಿದ್ದಾರೆ. ಈಗ ಕ್ರಮ ಕೈಗೊಳ್ಳಲು ಮುಂದಾಗಲಿ” ಎಂದರು.
20 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿದ್ದು, ಅದರಿಂದ ಸರ್ಕಾರ ಹಿಂದೆ ಸರಿಯಲಿದೆಯೇ ಎಂದು ಕೇಳಿದಾಗ, “ಸ್ವಚ್ಛವಾಗಿ ನಡೆಯಲಿರುವ ಯೋಜನೆಗಳಿಗೆ ನಾವು ಆಕ್ಷೇಪ ಮಾಡುವುದಿಲ್ಲ. ಈ ವಿಚಾರವಾಗಿ ಇನ್ವೆಸ್ಟ್ ಕರ್ನಾಟಕ ಕಾರ್ಯಕ್ರಮದಲ್ಲಿ ಚರ್ಚೆ ಮಾಡುತ್ತೇವೆ. ಮೊದಲು ಕೂಸು ಹುಟ್ಟಬೇಕು. ಆನಂತರ ಮುಂದಿನ ಕಾರ್ಯ ಮಾಡಬಹುದು” ಎಂದರು.
ಚನ್ನಪಟ್ಟಣ ಗೆದ್ದರೂ, ಸೋತರೂ ನಾನೇ ಅಭ್ಯರ್ಥಿ:
ನಿಮ್ಮ ನೇತೃತ್ವದಲ್ಲಿ ಚನ್ನಪಟ್ಟಣ ಉಪಚುನಾವಣೆ ನಡೆದಿದ್ದು ಏಗಲಿದೆ ಎಂದು ಕೇಳಿದಾಗ, “ಚುನಾವಣೋತ್ತರವಾಗಿ ನಡೆದಿರುವ ಮೂರು ಸಮೀಕ್ಷೆಗಳ ಫಲಿತಾಂಶ ಉಲ್ಟಾ ಆಗಲಿದೆ. ಆ ಸಮೀಕ್ಷೆ ಸುಳ್ಳಾಗಲಿದೆ. ರಾಜ್ಯ ವಿಧಾನಸಭೆ ಚುನಾವಣೆ, ಹರ್ಯಾಣ ವಿಧಾನಸಭೆ ಚುನಾವಣೆಗಳಲ್ಲಿ ಸಮೀಕ್ಷೆ ಸುಳ್ಳಾಗಿವೆ. ಕಾಂಗ್ರೆಸ್ ಮೂರು ಕ್ಷೇತ್ರಗಳಲ್ಲಿ ಗೆಲ್ಲಲಿದೆ” ಎಂದು ಆಗ್ರಹಿಸಿದರು.
ಚನ್ನಪಟ್ಟಣದಲ್ಲಿ ನೀವೇ ಅಭ್ಯರ್ಥಿ ಎಂದು ಹೇಳಿದ್ದಿರಿ, ಒಂದು ವೇಳೆ ಸೋತರೆ ಏನು ಎಂದು ಕೇಳಿದಾಗ, “ಹೌದು ನಾನೇ ಅಭ್ಯರ್ಥಿ. ಗೆದ್ದರೂ ನಾನು ಗೆದ್ದಂತೆ, ಸೋತರೂ ನಾನು ಸೋತಂತೆ. ಯೋಗೇಶ್ವರ್ ಗೆ ಟಿಕೆಟ್ ಕೊಟ್ಟಿದ್ದೇ ನಾನು. ನನ್ನ ಮುಖ ಇಟ್ಟುಕೊಂಡೆ ಚುನಾವಣೆ ಮಾಡಿದ್ದೇನೆ. ನಾನು ಘೋಷಣೆ ಮಾಡಿದ ನಂತರ ಕುಮಾರಸ್ವಾಮಿ ಅವರು ಕೂಡ ನಾನು ಅಭ್ಯರ್ಥಿ ಎಂದು ಹೇಳಿಕೊಂಡಿದ್ದರು. ಚನ್ನಪಟ್ಟಣದಲ್ಲಿ ಗೆಲ್ಲುವ ವಿಶ್ವಾಸದಲ್ಲಿ ನಾವಿದ್ದೇವೆ” ಎಂದರು.
ಎಐಸಿಸಿ ನಾಯಕರಿಂದ ಸೂಚನೆ ಬಂದಿಲ್ಲ:
ನಾಳೆ ಮಹಾರಾಷ್ಟ್ರ ಹಾಗೂ ಜಾರ್ಖಂಡ್ ಚುನಾವಣೆ ನಡೆಯುತ್ತಿದ್ದು ಫಲಿತಾಂಶದ ಜತೆ ನಿಮ್ಮ ಮೇಲೂ ಗಮನ ಕೇಂದ್ರೀಕರಿಸಿದೆ. ಅತಂತ್ರ ವಿಧಾನಸಭೆಯಾದರೆ ಶಾಸಕರನ್ನು ಕರೆತರುತ್ತೀರಾ ಎಂದು ಕೇಳಿದಾಗ, “ಈ ವಿಚಾರವಾಗಿ ಎಐಸಿಸಿಯ ಯಾವುದೇ ನಾಯಕರು ನನ್ನನ್ನು ಸಂಪರ್ಕ ಮಾಡಿಲ್ಲ. ಅವರು ಈ ವಿಚಾರವಾಗಿ ನನ್ನನ್ನು ಸಂಪರ್ಕಿಸಿದರೆ ಬೇರೆ ವಿಚಾರ. ಈಗಿನವರೆಗೂ ನಮ್ಮಲ್ಲಿ ಅಂತಹ ಯಾವುದೇ ಆಲೋಚನೆಗಳಿಲ್ಲ. ನಾಳೆ ಮಾಧ್ಯಮಗಳಲ್ಲಿ ಬರುವ ಫಲಿತಾಂಶ ವರದಿಯನ್ನು ನೋಡುವುದಷ್ಟೇ ನಮ್ಮ ಮುಂದಿರುವ ಆಯ್ಕೆ” ಎಂದು ತಿಳಿಸಿದರು.
ಖರ್ಗೆ ಅವರ ಜೊತೆ ರಾಜಕೀಯ ಹೊರತಾಗಿ ಬೇರೆ ಚರ್ಚೆ
ಎಐಸಿಸಿ ಅಧ್ಯಕ್ಷರ ಜತೆ ದೂರವಾಣಿ ಕರೆ ಮೂಲಕ ನೀವು ಏನು ಚರ್ಚೆ ಮಾಡಿದ್ದೀರಿ ಎಂದು ಕೇಳಿದಾಗ, “ನಾನು ಎಐಸಿಸಿ ಅಧ್ಯಕ್ಷರ ಜತೆ ದೂರವಾಣಿ ಕರೆಯಲ್ಲಿ ಮಾತನಾಡಿದ್ದು ನಿಮಗೆ ಹೇಗೆ ತಿಳಿಯಿತು. ಅವರು ಚಿಕಿತ್ಸೆ ಉದ್ದೇಶದಿಂದ ನಿನ್ನೆ ಬೆಂಗಳೂರಿಗೆ ಬಂದಿದ್ದು, ಇಂದು ವಾಪಸ್ ಮರಳಿದ್ದಾರೆ. ನಾನು ಅವರೊಂದಿಗೆ ಮಾತನಾಡಿದ್ದು ನಿಜ, ಆದರೆ ರಾಜಕೀಯ ಹೊರತಾಗಿ ಬೇರೆ ವಿಚಾರವಾಗಿ ಚರ್ಚೆ ಮಾಡಿದ್ದೇವೆ” ಎಂದು ತಿಳಿಸಿದರು.
ಮಹಾರಾಷ್ಟ್ರದಲ್ಲಿ ನೀವು ಪ್ರಚಾರ ಮಾಡಿದ್ದು, ಅಲ್ಲಿನ ವಾತಾವರಣ ಹೇಗಿತ್ತು ಎಂದು ಕೇಳಿದಾಗ, “ನಾನು ಸುಮಾರು 8-10 ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದೇನೆ. ನಾನು ಹೋದಲ್ಲೆಲ್ಲಾ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ವಿಶ್ವಾಸವಿದೆ. ಜನ ನಮ್ಮ ಮೇಲೆ ಹೆಚ್ಚಿನ ಒಲವು ತೋರಿದ್ದಾರೆ” ಎಂದರು.
ರೆಸಾರ್ಟ್ ರಾಜಕಾರಣ ನಡೆಯುವುದಿಲ್ಲ
ರೆಸಾರ್ಟ್ ರಾಜಕಾರಣ ನಡೆಯುವ ಸಾಧ್ಯತೆ ಇದೆಯೇ ಎಂದು ಕೇಳಿದಾಗ, “ನನ್ನ ಪ್ರಕಾರ ರೆಸಾರ್ಟ್ ರಾಜಕಾರಣ ಹೊರತಾಗಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. ಈ ಬಗ್ಗೆ ನಮ್ಮಲ್ಲಿ ಚರ್ಚೆಯಾಗಿಲ್ಲ. ಅಲ್ಲಿನ ಶಾಸಕರು, ಪ್ರಜ್ಞಾವಂತರಿದ್ದಾರೆ. ಸಮಸ್ಯೆಯಾಗುವುದಿಲ್ಲ. ಜನ ನಮಗೆ ಮತ ನೀಡಿ, ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ನಾಳೆ ನೀವು ನಮಗೆ ಸಿಹಿ ಸುದ್ದಿ ಕೊಡಿ ಎಂದು ಪ್ರಾರ್ಥಿಸುತ್ತೇನೆ” ಎಂದು ತಿಳಿಸಿದರು.
ಬಿಜೆಪಿ ವಿರುದ್ಧ ಮಾನಹಾನಿ ಪ್ರಕರಣ:
ಗ್ಯಾರಂಟಿ ಯೋಜನೆಗಳ ಬಗ್ಗೆ ಮಹಾರಾಷ್ಟ್ರದಲ್ಲಿ ಬಿಜೆಪಿ ಸುಳ್ಳು ಪ್ರಚಾರ ಮಾಡಿರುವ ಬಗ್ಗೆ ದೂರು ದಾಖಲಿಸುತ್ತೀರಾ ಎಂದು ಕೇಳಿದಾಗ, “ಖಂಡಿತವಾಗಿಯೂ ದೂರು ದಾಖಲಿಸುತ್ತೇವೆ. ಈಗಾಗಲೇ ನಮ್ಮ ಮುಖ್ಯಮಂತ್ರಿಗಳು ಈ ವಿಚಾರವಾಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಬಿಜೆಪಿ ನಾಯಕರಿಗೆ ಕನಿಷ್ಠ ಪರಿಜ್ಞಾನವೂ ಇಲ್ಲ. ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ಪರಿಶೀಲನೆ ನಡೆಸಲು ಆಹ್ವಾನಿಸಿ ಜಾಹೀರಾತನ್ನು ನೀಡಿದ್ದೆ. ಈಗ ನಾವು ಅವರ ಮೇಲೆ ಮಾನಹಾನಿ ಪ್ರಕರಣ ದಾಖಲಿಸುತ್ತೇವೆ” ಎಂದು ತಿಳಿಸಿದರು.
ವಯನಾಡಿನ ಉಪಚುನಾವಣೆ ಬಗ್ಗೆ ಕೇಳಿದಾಗ, “ವಯನಾಡಿನಲ್ಲೂ ಕಾಂಗ್ರೆಸ್ ಭಾರಿ ಮತಗಳ ಅಂತರದಲ್ಲಿ ಗೆಲ್ಲಲಿದೆ. ಅಲ್ಲಿನ ಶೇ.20ರಷ್ಟು ಮತದಾರರು ಬೇರೆ ದೇಶಗಳಲ್ಲಿದ್ದು, ಮತ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ” ಎಂದರು.
ಜಮೀರ್ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೀರಾ ಎಂದು ಕೇಳಿದಾಗ, “ನಾನು ವೈಯಕ್ತಿಕವಾಗಿ ಜಮೀರ್ ಜತೆ ಮಾತನಾಡಿದ್ದೇನೆ. ಅವರು ಪಕ್ಷದ ಪ್ರಮುಖ ನಾಯಕರು. ಭಾವನಾತ್ಮಕವಾಗಿ ಅವರು ಮಾತನಾಡಿದ್ದಾರೆ. ಅವರ ಹೇಳಿಕೆ ತಪ್ಪು ಎಂದು ನಾನು ಹಾಗೂ ಮುಖ್ಯಮಂತ್ರಿಗಳು ಹೇಳಿದ್ದೇವೆ. ಈ ವಿಚಾರವನ್ನು ನಾವು ಪಕ್ಷದ ಆಂತರಿಕವಾಗಿ ಚರ್ಚೆ ಮಾಡುತ್ತೇವೆ, ಮಾಧ್ಯಮಗಳ ಮುಂದೆ ಚರ್ಚೆ ಮಾಡುವುದಿಲ್ಲ” ಎಂದು ತಿಳಿಸಿದರು.