ಬೆಂಗಳೂರು : ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ವ್ಯವಸ್ಥೆಯ ನಿರ್ವಹಣೆಯಲ್ಲಿ ಸುಸ್ಥಿರ ಹಾಗೂ ಹೊಸ ತಂತ್ರಜ್ಞಾನಗಳ ಅಳವಡಿಕೆಯ ನೇತೃತ್ವ ಹಾಗೂ ಮಾರ್ಗದರ್ಶನ ನೀಡಿದ್ದಕ್ಕೆ ಸನ್ಮಾನ್ಯ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರಿಗೆ ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ ರಾಮ್ ಪ್ರಸಾತ್ ಮನೋಹರ್ ಸೇರಿದಂತೆ ಹಿರಿಯ ಅಧಿಕಾರಿಗಳು ಅಭಿನಂದಿಸಿದರು.
ಈ ಬಾರಿ ಬೇಸಿಗೆಯಲ್ಲಿ ಬೆಂಗಳೂರು ನಗರ ಬಹಳಷ್ಟು ತೊಂದರೆಗೀಡಾಬೇಕಾಯಿತು. ಇದನ್ನ ತಪ್ಪಿಸುವ ನಿಟ್ಟಿನಲ್ಲಿ ಉಪಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ಅಭಿವೃದ್ದಿ ಸಚಿವರಾದ ಡಿಕೆ ಶಿವಕುಮಾರ್ ಅವರು 2023 ರ ಬೇಸಿಗೆಯಿಂದಲೇ ಹಲವಾರು ಸುಸ್ಥಿರ ಕ್ರಮಗಳನ್ನ ಅಳವಡಿಸಿಕೊಳ್ಳಲು ನಿರ್ದೇಶನ ನೀಡಿದ್ದರು. ಇವರ ಮಾರ್ಗದರ್ಶನದಲ್ಲಿ ಅಳವಡಿಸಿಕೊಂಡ ಹಲವಾರು ಸುಸ್ಥಿರ ಯೋಜನೆಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮಾದರಿಯಾಗಿವೆ. ಇವುಗಳನ್ನು ಗುರುತಿಸಿ ಸಿಐಐ -ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್, ಪ್ರತಿಷ್ಠಿತ ಸಿಐಐ ಐಜಿಬಿಸಿ ಗ್ರೀನ್ ಪ್ರಾಜೆಕ್ಟ್ 2024 ಪ್ರಶಸ್ತಿ ನೀಡಿ ಗೌರವಿಸಿದೆ.
ಯುನೈಟೆಡ್ ನೇಷನ್ಸ್ನ ಕ್ಲೈಮೇಟ್ ಚೆಂಜ್ ಸಮಾವೇಶದಲ್ಲಿ ಸುಸ್ಥಿರ ಯೋಜನೆಗಳನ್ನ “ಬೆಂಗಳೂರು ಮಾದರಿ” ಯೋಜನೆಗಳಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚುರಪಡಿಸುತ್ತಿದ್ದು ಬೆಂಗಳೂರು ಜಲಮಂಡಳಿಯ ಜೊತೆ ಇನ್ನಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸಲು ಕೈ ಜೋಡಿಸಿದ್ದಾರೆ. ಇತ್ತೀಚೆಗೆ ಬೆಂಗಳೂರು ಜಲಮಂಡಳಿಗೆ ದೊರೆತ ಪ್ರತಿಷ್ಠಿತ ಸಿಐಐ ಐಜಿಬಿಸಿ ಗ್ರೀನ್ ಪ್ರಾಜೆಕ್ಟ್ 2024 ಪ್ರಶಸ್ತಿಯನ್ನು ಇಲಾಖೆಯ ಮುಖ್ಯಸ್ಥರಾದ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸಮರ್ಪಿಸಿ, ಉತ್ತಮ ನಿರ್ದೇಶನ ಹಾಗೂ ಮಾರ್ಗದರ್ಶನ ತೋರಿಸಿದ್ದಕ್ಕಾಗಿ ಜಲಮಂಡಳಿಯಿಂದ ಅಭಿನಂದನೆಗಳನ್ನು ತಿಳಿಸಲಾಯಿತು.
ಜಲಮಂಡಳಿ ಅಧ್ಯಕ್ಷರಾದ ಡಾ ರಾಮ್ ಪ್ರಸಾತ್ ಮನೋಹರ್, ಪ್ರಧಾನ ಇಂಜಿನೀಯರ್ ಸುರೇಶ್ ಸೇರಿದಂತೆ ಎಲ್ಲಾ ವಿಭಾಗಗಳ ಮುಖ್ಯ ಅಭಿಯಂತರರು ಉಪಸ್ಥಿತರಿದ್ದರು.