ಬೆಂಗಳೂರು: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಗೆ ಸೆಸ್ ಅನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಇಂದು ವಿಕಾಸಸೌಧದ ಸಭಾ ಕೊಠಡಿಯಲ್ಲಿ ಪ್ರಾತ್ಯಕ್ಷಿಕೆ ಸಭೆ ನಡೆಸಿದರು.
ವಿಕಾಸಸೌಧದ ಸಭಾಂಗಣ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಗೆ ಪ್ರಸಕ್ತ ಬರುತ್ತಿರುವ ಸೆಸ್ ಕಡಿಮೆಯಾಗಿದ್ದು, ಸೆಸ್ ಅಳವಡಿಕೆಗೆ ಇದೂವರೆಗೂ ಯಾವುದೇ ರೀತಿಯ ಹೊಸ ಮಾರ್ಗಗಳನ್ನು ಅನುಸರಿಸಿಲ್ಲ. ಹೀಗಾಗಿ ಸೆಸ್ ಅಳವಡಿಕೆಗೆ GIS (Geographical Information System) ತಂತ್ರಜ್ಞಾನವನ್ನು ಬಳಸಿ ಸೆಸ್ ಅನ್ನು ಹೆಚ್ಚಿಸಬಹುದೆಂಬ ನಿಟ್ಟಿನಲ್ಲಿ ಕೆಲವು ತಜ್ಞರು ಸಚಿವರಿಗೆ ಈ ಹಿಂದೆ ಸಲಹೆ ನೀಡಿದ್ದರು.
ಅದರನ್ವಯ ಇಂದು ಆರು ವೆಂಡರುಗಳು ವೆಂಡರ್ಸ್ ಸೆಸ್ ಅನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಿಐಎಸ್ ಅಳವಡಿಸುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಿ ತಮ್ಮ ಅಭಿಪ್ರಾಯ ವಿವರಿಸಿದರು. ಜಿಐಎಸ್ ಬಳಕೆಯಿಂದ ಯಾವ ರೀತಿ ಈ ಮಂಡಳಿಗೆ ಲಾಭದಾಯಕವಾಗಲಿದೆ?
ಜಿಐಎಸ್ ಅಳವಡಿಸುವುದು ಹೇಗೆ? ಜಿಐಎಸ್ನಿಂದ ಸೆಸ್ ಹೆಚ್ಚಳ ಹೇಗೆ ಸಾಧ್ಯ?
ಇದು ಕಾರ್ಮಿಕ ಮಂಡಳಿ ಜೊತೆ ಹೇಗೆ ಕೆಲಸ ಮಾಡುತ್ತದೆ? ಸೇರಿದಂತೆ ಇತ್ಯಾದಿಗಳ ಕುರಿತು ಸಚಿವ ಸಂತೋಷ್ ಲಾಡ್ ಸಭೆಯಲ್ಲಿ ಮಾಹಿತಿ ಪಡೆದರು.
ಸಂಬಂಧಪಟ್ಟ ವೆಂಡರುಗಳಿಂದ ಅವರವರ ಅಭಿಪ್ರಾಯ ಮಾಹಿತಿ ವಿವರ ಸಂಗ್ರಹಿಸಿದ ಸಚಿವರು, ಈ ಬಗ್ಗೆ ಕೂಲಂಕುಷವಾಗಿ ಮತ್ತೊಮ್ಮೆ ಪರಿಶೀಲಿಸಿ ಮತ್ತೊಂದು ಮಹತ್ವದ ಸಭೆ ನಡೆಸಿ, ಜಿಐಎಸ್ ಅಳವಡಿಕೆಯ ಸಾಧಕ-ಬಾಧಕಗಳನ್ನು ಪರಾಮರ್ಶಿಸಿ ಸೆಸ್ ಹೆಚ್ಚಳ ಬಗ್ಗೆ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಮಾನ್ಯ ಸಚಿವರು ಸ್ಪಷ್ಟಪಡಿಸಿದರು.
ಪ್ರಾತ್ಯಕ್ಷಿಕ ಸಭೆಯಲ್ಲಿ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾದ ಮೊಹಮ್ಮದ್ ಮೊಹಿಸಿನ್, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿಯ ಸಿಇಒ ಮತ್ತು ಕಾರ್ಯದರ್ಶಿ ಶ್ರೀಮತಿ ಭಾರತಿ, ಜಂಟಿ ಕಾರ್ಯದರ್ಶಿ ವೆಂಕಟರಾಜು ಮತ್ತು ಕಾರ್ಮಿಕ ಇಲಾಖೆಯ ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.