ಬೆಂಗಳೂರು: ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಪಾಳ್ಯ 2ನೇ ಹಂತದ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಸಂಬಂಧಿಸಿದಂತೆ ಭೂಸ್ವಾಧೀನದ ಪರ ಮತ್ತು ವಿರೋಧವಿರುವ ಎರಡೂ ಗುಂಪುಗಳ ರೈತರೊಂದಿಗೆ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ನೇತೃತ್ವದಲ್ಲಿ ಖನಿಜ ಭವನದಲ್ಲಿ ಪ್ರತ್ಯೇಕ ಸಭೆಗಳು ನಡೆದವು.
ಎರಡೂ ಗುಂಪುಗಳ ಅಹವಾಲುಗಳನ್ನು ಆಲಿಸಿದ ಸಚಿವದ್ವಯರು, ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಹೆಚ್ಚಿನ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.
ಸರಕಾರವು ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆಂದು ದೇವನಹಳ್ಳಿ ತಾಲ್ಲೂಕಿನ ಪಾಳ್ಯ, ಹರಳೂರು, ಪೋಲನಹಳ್ಳಿ, ಗೋಕರೆಬಜೇನಹಳ್ಳಿ, ನೆಲ್ಲೂರು, ಮಲ್ಲೇಪುರ, ನಲ್ಲಪ್ಪನಹಳ್ಳಿ, ಚೀಮಾಚನಹಳ್ಳಿ, ಮಟ್ಟಿಬಾರ್ಲು, ಮುದ್ದೇನಹಳ್ಳಿ, ಚನ್ನರಾಯಪಟ್ಟಣ, ಶೋತ್ರಿಯ ತೆಲ್ಲೂಹಳ್ಳಿ ಮತ್ತು ಹ್ಯಾಡಾಳ ಗ್ರಾಮಗಳಿಗೆ ಸೇರಿದ 1777 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲು 2021ರ ಆಗಸ್ಟ್ 30ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿರುವುದನ್ನು ಇಲ್ಲಿ ಸ್ಮರಿಸಬಹುದು.
ಆದರೆ ಸರಕಾರದ ಈ ನಿರ್ಧಾರಕ್ಕೆ ರೈತರ ಒಂದು ಗುಂಪು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಮೇಲ್ಕಂಡ ಅಧಿಸೂಚನೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸುತ್ತಿದೆ. ರೈತರ ಮತ್ತೊಂದು ಗುಂಪು, ಜಮೀನನ್ನು ಬಿಟ್ಟುಕೊಡಲು ತಯಾರಿದ್ದು, ಸ್ವಾಧೀನ ಪ್ರಕ್ರಿಯೆ ಮತ್ತು ಹೆಚ್ಚಿನ ಪರಿಹಾರ ಹಂಚಿಕೆ ಎರಡನ್ನೂ ತ್ವರಿತ ಗತಿಯಲ್ಲಿ ಮುಗಿಸುವಂತೆ ಕೇಳಿಕೊಳ್ಳುತ್ತಿದೆ. ಹೀಗೆ ಮಾಡದೆ ಹಾಗೆಯೇ ಬಿಟ್ಟರೆ ತಮ್ಮದು ತ್ರಿಶಂಕು ಸ್ಥಿತಿಯಾಗಲಿದೆ ಎಂದು ಈ ಗುಂಪಿನವರು ಸಭೆಯಲ್ಲಿ ಅಲವತ್ತುಕೊಂಡರು.
ಸಭೆಗಳಲ್ಲಿ ಭೂಸ್ವಾಧೀನಕ್ಕೆ ವಿರುದ್ಧವಾಗಿರುವ ಗುಂಪಿನ ರೈತ ಮುಖಂಡರಾದ ಬಯ್ಯಾರೆಡ್ಡಿ, ಮಾವಳ್ಳಿ ಶಂಕರ್ ಹಾಗೂ ಪರವಾಗಿರುವ ಗುಂಪಿನ ಮುಖಂಡ ಲಕ್ಷ್ಮೀನಾರಾಯಣ ನೇತೃತ್ವದ ರೈತರು ಭಾಗವಹಿಸಿದ್ದರು.
ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್, ಕೆಐಎಡಿಬಿ ಸಿಇಒ ಡಾ.ಮಹೇಶ್ ಉಪಸ್ಥಿತರಿದ್ದರು.