ನವದೆಹಲಿ: ಅತ್ಯಾಚಾರ, ಮಹಿಳಾ ಶೋಷಣೆ ಮಾಡುವುದೇ ಬಿಜೆಪಿಯಲ್ಲಿ ಚುನಾವಣಾ ಟಿಕೆಟ್ ಪಡೆಯಲು ಮಾನದಂಡವಾಗಿದೆಯೇ? ಎಂದು ದೆಹಲಿ ಶಾಸಕ , ವಿಧಾನಸಭೆಯ ಮುಖ್ಯ ಸಚೇತಕ ಹಾಗೂ ಆಮ್ ಆದ್ಮಿ ಪಾರ್ಟಿ ಕರ್ನಾಟಕ ರಾಜ್ಯದ ಉಸ್ತುವಾರಿ ದಿಲೀಪ್ ಪಾಂಡೆ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನದ ಎನ್ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ 3000 ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಬಿಡುಗಡೆಯಾಗಿವೆ. ಇದೇ ವ್ಯಕ್ತಿಯ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಜನರ ಮುಂದೆ ಕೈಮುಗಿದು ಮತಯಾಚನೆ ಮಾಡಿದ್ದಾರೆ. ಇದೇನಾ ಬಿಜೆಪಿ ಸಂಸ್ಕೃತಿ? ಬಿಜೆಪಿ ಮೈತ್ರಕೂಟದ ಪಾಲುದಾರ, ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ವಿಚಾರವಾಗಿ, ಬಿಜೆಪಿಯವರು ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಬ್ರಿಜ್ ಭೂಷಣ್ ರಿಂದ ಹಿಡಿದು ಪ್ರಜ್ವಲ್ ರೇವಣ್ಣವರೆಗೆ ಇಂತಹ ಹಲವು ಮಹಿಳಾ ಶೋಷಕರನ್ನು ಬಿಜೆಪಿಯಲ್ಲಿ ನೋಡಬಹುದು. ಪ್ರಧಾನಿ ಮೋದಿ ಅವರೆ ಅತ್ಯಾಚಾರಿಗಳಿಗೆ ನೀವು ಬೆಂಬಲ ಕೊಡುತ್ತಿರುವುದನ್ನು ನೋಡಿ ದೇಶದ ಮಹಿಳಾ ಮತದಾರರು ನಿರಾಸೆಗೊಂಡಿದ್ದಾರೆ. ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣ ದೇಶದಲ್ಲೇ ಅತಿ ದೊಡ್ಡ ಸೆಕ್ಸ್ ಸ್ಕ್ಯಾಂಡಲ್ ಎನ್ನುವ ಆರೋಪ ಇದೆ. ಹಾಸನದ ಬಿಜೆಪಿ ಶಾಸಕ ಪ್ರೀತಂ ಗೌಡ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಪತ್ರ ಬರೆದು, ಪ್ರಜ್ವಲ್ ರೇವಣ್ಣ ವಿಚಾರದ ಬಗ್ಗೆ ಎಚ್ಚರಿಕೆ ನೀಡಿದ್ದರೂ, ಇಂತಹ ವ್ಯಕ್ತಿಯ ಪಕ್ಷದ ಜೊತೆಗೆ ನೀವು ಹೇಗೆ ಮೈತ್ರಿ ಮಾಡಿಕೊಂಡು, ಟಿಕೆಟ್ ನೀಡಿದಿರಿ ಎಂದು ದಿಲೀಪ್ ಪಾಂಡೆ ಪ್ರಶ್ನಿಸಿದರು.
3000 ವಿಡಿಯೋಗಳಲ್ಲಿ ಮಹಿಳೆಯರ ಜೊತೆ ಅಪ್ರಾಪ್ತರ ಮೇಲೂ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎನ್ನುವ ಆರೋಪಗಳಿವೆ. ಈತನ ಮೇಲೆ ಪೋಸ್ಕೋ ಕಾಯ್ದೆ ಅಡಿ ಪ್ರಕರಣ ದಾಖಲಿಸದೆ ಕೇವಲ ಐಪಿಸಿ ಕಾಯ್ದೆಯಡಿ ಕೇಸು ದಾಖಲಿಸಿರುವುದರ ಹಿಂದೆ ಯಾರ ಷಡ್ಯಂತರವಿದೆ, ಯಾರ ಹಸ್ತಕ್ಷತವಿದೆ ಹಾಗೂ ಈ ಕಳಂಕಿತ ಸಂಸದನ ಹಿಂದೆ ನಿಂತಿರುವ ಶಕ್ತಿ ಯಾವುದು ಎಂಬುದು ಭಾರತೀಯ ಜನತೆಗೆ ಈಗ ತಿಳಿಯಬೇಕಿದೆ. ಇಂತಹ ಅತ್ಯಾಚಾರಿಯನ್ನು ದೇಶದಿಂದ ಹೊರಗಡೆ ಹೋಗಲು ಹೇಗೆ ಬಿಟ್ಟಿರಿ? ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಹಿಳೆಯರ ಮೇಲಿನ ದೌರ್ಜನ್ಯ ನಗಣ್ಯವಾಗಿ ಕಂಡಿತೆ ಅಥವಾ ಮಹಿಳಾ ಪೀಡನೆಯನ್ನು ಪ್ರೋತ್ಸಾಹಿಸಿ ಬೆಂಬಲ ನೀಡಿದರೆ? ಸಾವಿರಾರು ಮಹಿಳೆಯರ ಮಾಂಗಲ್ಯಕ್ಕೆ ಕುತ್ತು ತರುವಲ್ಲಿ ಮೋದಿಯವೂ ಪರೋಕ್ಷ ಬೆಂಬಲ ನೀಡಿದಂತಾಗಿದೆ ಅಲ್ಲವೇ? ಪ್ರಜ್ವಲ್ ರೇವಣ್ಣನಿಗೆ ನೀಡಿದ ಒಂದೊಂದು ಮತ ಪ್ರಧಾನಿ ಮೋದಿಗೆ ಬರುತ್ತದೆ ಎನ್ನುವುದಾರರೆ ಆತ ಮಾಡಿರುವ ಒಂದೊಂದು ಪಾಪದಲ್ಲೂ ಕೂಡ ಮೋದಿಗೆ ಪಾಲಿದೆ ಎಂದರು.