ಮೈಸೂರು: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟ ಇದೆ ಎನ್ನುವ ಭಯ ಈಗಾಗಲೇ ಬಿಜೆಪಿ ನಾಯಕರಿಗೆ ಶುರುವಾಗಿದೆ. ಅದಕ್ಕಾಗಿಯೇ ಕೋಮು ದ್ವೇಷ, ಮಹಿಳಾ ನಿಂದನೆ, ಭಯ ಹುಟ್ಟಿಸುವ ಮೂಲಕ ಬಿಜೆಪಿ ನಾಯಕರು ಕೀಳು ರಾಜಕೀಯಕ್ಕೆ ಮುಂದಾಗಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಅಕ್ರಮವಾಗಿ ಬಂಧಿಸಿರುವುದಲ್ಲದೆ, ಅವರಿಗೆ ಅಗತ್ಯ ಇನ್ಸುಲಿನ್, ಔಷಧಗಳನ್ನು ಕೊಡಲು ನೂರೊಂದು ತಕರಾರುಗಳನ್ನು ಮಾಡುವ ಮೂಲಕ ಅವರ ಜೀವಕ್ಕೆ ಅಪಾಯ ತಂದೊಡ್ಡಲು ಕುತಂತ್ರ ನಡೆಸಿದೆ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಹೇಳಿದರು.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ‘ಇಂಡಿಯಾ’ ಒಕ್ಕೂಟದ ಅಭ್ಯರ್ಥಿ ಎಂ.ಲಕ್ಷ್ಮಣ್ ಪರ ಮತಯಾಚನೆ ಮಾಡಿ ಮಾತನಾಡಿದ ಅವರು, ಸೆಪ್ಟೆಂಬರ್ ತಿಂಗಳಿನಲ್ಲೇ ಸಿಎಂ ಸಿದ್ದರಾಮಯ್ಯ, ಕಂದಾಯ ಸಚಿವ ಕೃಷ್ಣಬೈರೇ ಗೌಡ ಕೇಂದ್ರಕ್ಕೆ ಪತ್ರ ಬರೆದು ಬರಪರಿಹಾರದ ಉದ್ದೇಶಕ್ಕೆ ₹18,000 ಕೋಟಿ ಬಿಡುಗಡೆ ಮಾಡಲು ಕೋರಿದ್ದರೂ, ರಾಜ್ಯವನ್ನು ಕಡೆಗಣಿಸಿದ್ದ ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ ನಂತರ ಹಣ ಬಿಡುಗಡೆ ಮಾಡಲು ಒಪ್ಪಿದೆ ಎಂದರು.
ಸಚಿವೆ ನಿರ್ಮಲಾ ಸೀತಾರಾಮನ್ ಇಷ್ಟು ದಿನ ರಾಜ್ಯಕ್ಕೆ ಎಲ್ಲಾ ಹಣ ಬಿಡುಗಡೆ ಮಾಡಿದ್ದೇವೆ ಎಂದು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದರು, ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ ಮೇಲೆ ಹಣ ಬಿಡುಗಡೆ ಮಾಡ್ತೀವಿ ಎಂದಿದ್ದಾರೆ. ಅವರ ಪತಿಯೇ ಚುನಾವಣಾ ಬಾಂಡ್ ಅತಿ ದೊಡ್ಡ ಹಗರಣ ಎಂದು ಹೇಳುತ್ತಾರೆ. ಸ್ವಿಸ್ ಬ್ಯಾಂಕ್ನಿಂದ ಹಣ ತಂದು ಎಲ್ಲರಿಗೂ ಹಣ ಕೊಡ್ತೀವಿ ಎಂದರು ಕೊಟ್ರಾ? ಬರಗಾಲ ಬಂದರೂ ಹಣ ಬಿಡುಗಡೆ ಮಾಡಿಲ್ಲ, ಇಡಿ ಅಧಿಕಾರಿಗಳನ್ನು ಬಿಟ್ಟು ಬೆದರಿಕೆ ಹಾಕಿ ಚುನಾವಣಾ ಬಾಂಡ್ ಹೆಸರಿನಲ್ಲಿ ವಸೂಲಿ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.
ಸರ್ಕಾರದ ಆಸ್ತಿಯನ್ನು ಖಾಸಗಿಯವರ ಅನುಕೂಲಕ್ಕಾಗಿ 50-60 ವರ್ಷಗಳಾ ಕಾಲ ಪರಭಾರೆ ಮಾಡಲಾಗಿದೆ. ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ನನಗೆ 50 ದಿನ ಸಮಯ ಕೊಡಿ, ಭ್ರಷ್ಟಾಚಾರ ಕಡಿಮೆ ಮಾಡ್ತೇನೆ, ಕಪ್ಪು ಹಣ ನಿಲ್ಲಿಸ್ತೇನೆ ಅಂದರು ಆದರೆ ಅದ್ಯಾವುದು ಆಗಿಲ್ಲ. ಉತ್ತರ ಪ್ರದೇಶದಲ್ಲಿ 40 ಸಾವಿರ ಕಾನ್ಸ್ಟೇಬಲ್ ಹುದ್ದೆಗೆ 47 ಲಕ್ಷ ಅರ್ಜಿಗಳು ಬಂದಿವೆ ಎಂದರೆ ಇವರು ಯಾರಿಗೆ ಉದ್ಯೋಗ ಕೊಟ್ಟಿದ್ದಾರೆ?, ರೈತರ ಆದಾಯ ಡಬಲ್ ಮಾಡ್ತೀನಿ ಅಂದವರು, ದೇಶದ ಸಾಲ ತ್ರಿಬಲ್ ಮಾಡಿದ್ದಾರೆ, ಅದಾನಿ, ಅಂಬಾನಿ ಸಂಪತ್ತು ಹೆಚ್ಚಿಸಿದ್ದಾರೆ. ಹೇಳಿದ ಒಂದೂ ಕೆಲಸವನ್ನು ಈ ಸರ್ಕಾರ ಮಾಡಿಲ್ಲ ಎಂದರು.
ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ಈಗಾಗಲೇ ಸೋಲುವ ಭೀತಿ ಎದುರಾಗಿದೆ. ಜನರಿಗೆ ಬಿಜೆಪಿ ಸುಳ್ಳುಗಳ ಅರಿವಾಗಿದೆ, ಅದಕ್ಕಾಗಿಯೇ ಕೋಮುವಾದ, ಮಹಿಳೆಯರ ಅವಹೇಳನದ ಹೇಳಿಕೆ ನೀಡುತ್ತಿದ್ದಾರೆ. ಮಾಂಗಲ್ಯದ ಬಗ್ಗೆ ಮಾತನಾಡುತ್ತಾರೆ, ಹೆಣ್ಣು ಮಕ್ಕಳು ದಾರಿ ತಪ್ಪುತ್ತಾರೆ ಎಂದು ಮತ್ತೊಬ್ಬರು ಹೇಳುತ್ತಾರೆ
ಮೈಸೂರು ಮಹಾರಾಜ ಯದುವೀರ್ ಒಡೆಯವರ್ ಅವರ ಬಗ್ಗೆ ನಮಗೆ ಯಾವ ದ್ವೇಷ ಇಲ್ಲ, ಅವರು ರಾಜಮನೆತನದವರು ರಾಜಕೀಯಕ್ಕೆ ಬರಬಾರದಿತ್ತು. ಅವರನ್ನು ಬಿಜೆಪಿ ರಾಜಕೀಯಕ್ಕೆ ನೂಕಿದೆ, ಹಿಂದಿನ ಕಾಲದಿಂದಲೂ ಅವರ ಬಗ್ಗೆ ಅಪಾರ ಗೌರವ ಇದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್, ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಸೇರಿದಂತೆ ಕಾಂಗ್ರೆಸ್ ಮತ್ತು ಎಎಪಿ ಜಿಲ್ಲಾಧ್ಯಕ್ಷ ರಂಗಯ್ಯ ಸೇರಿದಂತೆ ಮುಖಂಡರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದರು.