ಬೆಂಗಳೂರು: ಐಟಿ ದಿಗ್ಗಜರಾದ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕøತ ಶ್ರೀ ಅಜೀಂ ಪ್ರೇಂಜಿ ಅವರು ಸಂಸ್ಥೆಯ ಮೂಲಕ ನಡೆಯುತ್ತಿರುವ ಹಲವಾರು ಸಮಾಜಮುಖಿ ಕಾರ್ಯಗಳು ನೈಜ ಸ್ಫೂರ್ತಿಯ ಮೂಲಕ ನಾಡುಕಟ್ಟುವ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನವರು, ಉನ್ನತ ಶಿಕ್ಷಣ ಇಲಾಖೆ ಮತ್ತು ಅಜಿಂ ಪ್ರೇಮ್ ಜಿ ಫೌಂಡೇಶನ್ ಸಹಯೋಗದೊಂದಿಗೆ ಬೆಂಗಳೂರಿನ ಹೆಬ್ಬಾಳದಡಾ.ಬಾಬು ರಾಜೇಂದ್ರ ಪ್ರಸಾದ್ ಅಂತರಾಷ್ಟ್ರೀಯ ಸಮಾವೇಶ ಭವನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಗಿದ್ದ *ಕರ್ನಾಟಕ ರಾಜ್ಯದ ವಿದ್ಯಾರ್ಥಿನಿಯರಿಗಾಗಿ (ದೀಪಿಕಾ) ಉನ್ನತ ಶಿಕ್ಷಣ ವಿದ್ಯಾರ್ಥಿ ವೇತನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣ ವಿದ್ಯಾರ್ಥಿ ವೇತನವನ್ನು ಲೋಕಾರ್ಪಣೆಗೊಳಿಸಿ ಮಾಡಿದ ಭಾಷಣದ ಸಾರಾಂಶ…
ಅಜೀಂ ಪ್ರೇಂಜಿ ಫೌಂಡೇಶನ್ ಸಹಭಾಗಿತ್ವದಲ್ಲಿ ನಮ್ಮ ಸರ್ಕಾರ ಉನ್ನತ ಶಿಕ್ಷಣ ವಲಯದಲ್ಲಿರುವ ವಿದ್ಯಾರ್ಥಿನಿಯರಿಗಾಗಿ ‘ದೀಪಿಕಾ’ ವಿದ್ಯಾರ್ಥಿವೇತನವನ್ನು ನಾವು ಇವತ್ತು ಲೋಕಾರ್ಪಣೆ ಮಾಡುತ್ತಿದ್ದೇವೆ.
ನಮ್ಮ ರಾಜ್ಯದ ಪ್ರತಿಷ್ಠಿತ ಐಟಿ ದಿಗ್ಗಜರಾದ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕøತ ಶ್ರೀ ಅಜೀಂ ಪ್ರೇಂಜಿ ಅವರು ಇಲ್ಲಿ ನಮ್ಮೊಂದಿಗೆ ಉಪಸ್ಥಿತರಾಗಿದ್ದಾರೆ. ಅವರ ಸಂಸ್ಥೆಯ ಮೂಲಕ ನಡೆಯುತ್ತಿರುವ ಹಲವಾರು ಸಮಾಜಮುಖಿ ಕಾರ್ಯಗಳು ನೈಜ ಸ್ಫೂರ್ತಿಯ ಮೂಲಕ ನಾಡುಕಟ್ಟುವ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ‘ದೀಪಿಕಾ ವಿದ್ಯಾರ್ಥಿವೇತನ’ ಕಾರ್ಯಕ್ರಮವು ಕೂಡ ಅಂತಹ ಒಂದು ಉಪಕ್ರಮವಾಗಿದೆ.
7 ವರ್ಷದಲ್ಲಿ 2000 ಕೋಟಿ ವಿದ್ಯಾರ್ಥಿವೇತನ
ಈ ಕಾರ್ಯಕ್ರಮದಡಿ 7 ವರ್ಷಗಳ ಕಾಲ ವಿದ್ಯಾರ್ಥಿ ವೇತನ ನೀಡಲು ಸುಮಾರು 2000 ಕೋಟಿ ರೂಪಾಯಿಗಳನ್ನು ಅಜೀಂ ಪ್ರೇಮ್ ಜಿ ಫೌಂಡೇಶನ್ ನೀಡುತ್ತಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಶ್ರೀ ಅಜೀಂ ಪ್ರೇಮ್ ಜಿ ಅವರಿಗೆ ಇರುವ ಅಪಾರವಾದ ಕಾಳಜಿ ಮತ್ತು ಬದ್ಧತೆಯನ್ನು ತೋರಿಸುತ್ತದೆ. ಅದಕ್ಕಾಗಿ ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸುತ್ತೇನೆ ಮತ್ತು ಇದೇ ಯೋಜನೆಗೆ ಸರ್ಕಾರ 200 ಕೋಟಿ ರೂಪಾಯಿಗಳ ಅನುದಾನವನ್ನು ಒದಗಿಸಲಿದೆ.
ಶ್ರೀಯುತ ಅಜೀಂ ಪ್ರೇಮ್ ಜೀಯವರು ಶಿಕ್ಷಣ ಮುಂತಾದ ರಚನಾತ್ಮಕ ಕ್ಷೇತ್ರಗಳಿಗೆ ಗಣನೀಯ ಕೊಡುಗೆಯನ್ನು ಕೊಡುತ್ತಿದ್ದಾರೆ. ಅವರ ಫೌಂಡೇಶನ್ ಇದುವರೆಗೆ ಲಕ್ಷಾಂತರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಿದೆ. ಗುಜರಾತಿನಿಂದ ಬಂದಿರುವ ಅವರು ಗಾಂಧೀಜಿಯವರ ನೈಜ ಶಕ್ತಿಯನ್ನು, ನೈತಿಕ ಶಕ್ತಿಯನ್ನು ಸಮಾಜದ ಮುಂದೆ ಪ್ರತಿಪಾದಿಸುತ್ತಿದ್ದಾರೆ. ಗಾಂಧೀಜಿಯವರು ಟ್ರಸ್ಟಿಶಿಪ್ ಕಾನ್ಸೆಪ್ಟಿನ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು. ಶ್ರೀಮಂತರು ತಮ್ಮ ಬಳಿಯಿರುವ ಸಂಪತ್ತನ್ನು ತಮ್ಮ ಬಳಿಯೇ ಉಳಿಸಿಕೊಳ್ಳದೆ ಸಮಾಜದ ಕಲ್ಯಾಣಕ್ಕಾಗಿಯೂ ಬಳಸಬೇಕು ಎಂಬುದು ಈ ಕಾನ್ಸೆಪ್ಟಿನ ಮೂಲ ತತ್ವ. ಈ ತತ್ವವನ್ನು ಪಾಲಿಸುತ್ತಿರುವ ಅಜೀಂ ಪ್ರೇಮ್ ಜಿಯವರು ಗಾಂಧೀ ಗುಜರಾತಿನ ವಾರಸುದಾರರಾಗದೆ ಇನ್ಯಾರಾಗಲು ಸಾಧ್ಯ? ಲೋಕ ಕಲ್ಯಾಣದ ಕಾರ್ಯಕ್ರಮಗಳಿಗೆ ಎಷ್ಟು ಹಣ ವಿನಿಯೋಗಿಸಿದ್ದಾರೆ ಎಂದು ಅವರೇ ಹೇಳಬೇಕು.
ಕರ್ನಾಟಕದಲ್ಲಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಮೊಟ್ಟೆ ಕೊಡುವ 1,500 ಕೋಟಿ ರೂಪಾಯಿಗಳ ಯೋಜನೆಗೆ ಕಳೆದ ವರ್ಷ ಒಡಂಬಡಿಕೆ ಮಾಡಿಕೊಂಡಿದ್ದೆವು. ಈ ವರ್ಷ ಉನ್ನತ ಶಿಕ್ಷಣಕ್ಕೆ ಬರುವ ಹೆಣ್ಣುಮಕ್ಕಳಿಗೆ ವಿದ್ಯಾರ್ಥಿ ವೇತನದ ರೂಪದಲ್ಲಿ ನೆರವು ನೀಡಲು ಮುಂದೆ ಬಂದಿದ್ದಾರೆ. ಇದು ಸಂತೋಷದ ವಿಷಯ.
ನಮ್ಮ ಸರ್ಕಾರ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಯಾವಾಗಲೂ ಆದ್ಯತೆ ನೀಡಿದೆ. ಏಕೆಂದರೆ, ಹೆಣ್ಣುಮಕ್ಕಳು ಸುಶಿಕ್ಷಿತರಾದರೆ ಅವರ ಕುಟುಂಬ ಮಾತ್ರವಲ್ಲದೆ ಇಡೀ ಸಮಾಜ, ನಮ್ಮ ಇಡೀ ರಾಜ್ಯವೇ ಸುಶಿಕ್ಷಿತವಾಗುತ್ತದೆ. ಈ ಉದ್ದೇಶದಿಂದಲೇ ನಾವು ಉನ್ನತ ಶಿಕ್ಷಣಕ್ಕೆ ಪ್ರವೇಶಾತಿ ಪಡೆಯುವ ಮತ್ತು ಬೇರೆ ಯಾವುದೇ ಸರ್ಕಾರಿ ವಿದ್ಯಾರ್ಥಿವೇತನವನ್ನು ಪಡೆಯದ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿನಿಯರಿಗೆ ಟ್ಯೂಶನ್ ಫೀ ಮತ್ತು ಲ್ಯಾಬ್ ಫೀಗಳನ್ನು ಮರುಪಾವತಿ ಮಾಡುತ್ತಿದ್ದೇವೆ. ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿನಿಯರು ಇದರಿಂದ ಪ್ರಯೋಜನ ಪಡೆಯುತ್ತಿದ್ದಾರೆ.
ಹೀಗಿರುವಾಗ, ದೀಪಿಕಾ ವಿದ್ಯಾರ್ಥಿವೇತನವನ್ನು ನಾವೇಕೆ ಪ್ರಾರಂಭಿಸುತ್ತಿದ್ದೇವೆ? ಈ ವಿದ್ಯಾರ್ಥಿವೇತನದ ಮುಖ್ಯ ಉದ್ದೇಶ ಎಂದರೆ, ನಮ್ಮ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣದಲ್ಲಿ ಭಾಗವಹಿಸಲು ಇರುವ ಆರ್ಥಿಕ ಸಂಕಷ್ಟಗಳನ್ನು ಆಮೂಲಾಗ್ರವಾಗಿ ನಿವಾರಿಸಬೇಕು ಮತ್ತು ಅವರಿಗೆ ಸಾಮಾಜಿಕ ನ್ಯಾಯ ಒದಗಿಸುವ ಮೂಲಕ ಸಮಾನತೆಯನ್ನು ಸಾಧಿಸಬೇಕು ಎನ್ನುವುದು.
ಹೆಣ್ಣು ಮಕ್ಕಳ ಉನ್ನತ ಶಿಕ್ಷಣಕ್ಕೆ ಅಜೀಮ್ ಪ್ರೇಮ್ ಜಿ ಫೌಂಡೇಶನ್ ಸಹಾಯ
ಈಗಾಗಲೇ ನಮ್ಮ ಸಮಾಜದಲ್ಲಿ, ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ, ಸಾಮಾಜಿಕವಾಗಿ-ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳಲ್ಲಿ, ಹೆಣ್ಣುಮಕ್ಕಳ ಕುರಿತು ಸಾಕಷ್ಟು ತಾರತಮ್ಯ ಭಾವನೆ ಇದೆ. ಅವರ ಉನ್ನತ ಶಿಕ್ಷಣಕ್ಕಾಗಿ ಖರ್ಚು ಮಾಡಲು ಹಿಂಜರಿಯುವ ತಂದೆತಾಯಿಯರಿದ್ದಾರೆ. ಸಮಾಜದ ಈ ಆಗ್ರಹವನ್ನು ಮೀರಿ ಮುಂದೆ ಬರುವ ಛಲ ನಮ್ಮ ಹೆಣ್ಣುಮಕ್ಕಳಿಗಿದೆ. ಆದರೆ ಅವರಲ್ಲಿ ಅನೇಕರಿಗೆ ಆರ್ಥಿಕ ಸೌಲಭ್ಯ ಇಲ್ಲ. ಆದ್ದರಿಂದ ಈ ನಮ್ಮ “ದೀಪಿಕಾ ವಿದ್ಯಾರ್ಥಿವೇತನ” ಇಂತಹ ಹೆಣ್ಣುಮಕ್ಕಳಿಗೆ ಆರ್ಥಿಕ ಬೆಂಬಲವನ್ನು ನೀಡಿ ಅವರು ಉನ್ನತ ವ್ಯಾಸಂಗದಲ್ಲಿ ಯಶಸ್ವಿಯಾಗಿ ತೊಡಗಲು ಅನುವು ಮಾಡಿಕೊಡುತ್ತದೆ. ಈ ವಿದ್ಯಾರ್ಥಿವೇತನ ರಾಜ್ಯದ ಸಾವಿರಾರು ವಿದ್ಯಾರ್ಥಿನಿಯರಿಗೆ ವರದಾನ ಆಗಲಿದೆ.
ಈ ವಿದ್ಯಾರ್ಥಿವೇತನ ನಮ್ಮ ರಾಜ್ಯದ ಉನ್ನತ ಶಿಕ್ಷಣದ Gross Enrolment Ratio (GER) ಅನ್ನು ಹೆಚ್ಚಿಸಲೂ ಸಹಾಯ ಮಾಡಲಿದೆ. ಈ ವಿದ್ಯಾರ್ಥಿವೇತನವನ್ನು ಉಪಯೋಗಿಸಿಕೊಂಡು ನಿಮ್ಮ ಭವಿಷ್ಯವನ್ನು ನಿರ್ಮಿಸಬಲ್ಲ ಕೌಶಲ್ಯಗಳನ್ನು ಕಲಿತುಕೊಳ್ಳಲೂ ಕೂಡ ಸಾಧ್ಯವಾಗುತ್ತದೆ. ಇಲ್ಲಿ ನಿಮಗೊಂದು ಸಲಹೆ – ಈ ವಿದ್ಯಾರ್ಥಿ ವೇತನವನ್ನು ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಅಗತ್ಯವಾದ ಕಲಿಕೆಗೆ ಬಳಸಿಕೊಳ್ಳುವುದು ಜಾಣತನ.
ನಮ್ಮ ಸಮಾಜವು ಜಾತಿ ಪ್ರಧಾನದಂತೆ ಪುರುಷ ಪ್ರಧಾನ ಸಮಾಜವೂ ಆಗಿದೆ. ದಮನಿತ ಜಾತಿಗಳ ತಲೆಯು ಮೇಲೇಳದಂತೆ ತುಳಿದಿಟ್ಟ ಸಮಾಜವೇ ಹೆಣ್ಣಿನ ಚೈತನ್ಯವನ್ನು ತುಳಿದಿಟ್ಟಿದೆ. ಮನುವಾದವು ‘ನಃ ಸ್ತ್ರೀ ಸ್ವಾತಂತ್ರ್ಯಮರ್ಹತಿ’ [ಹೆಣ್ಣು ಸ್ವಾತಂತ್ರ್ಯಕ್ಕೆ ಅರ್ಹಳಲ್ಲ] ಎನ್ನುತ್ತದೆ. ಇಲ್ಲಿಂದಲೆ ಹೆಣ್ಣಿನ ಅವನತಿ ಪ್ರಾರಂಭವಾಗಿದ್ದು, ಒಂದರ್ಥದಲ್ಲಿ ಭಾರತದ ಸಮಸ್ಯೆಗಳು ಪ್ರಾರಂಭವಾಗಿದ್ದೂ ಕೂಡ ಇಲ್ಲಿಂದಲೆ ಅನ್ನಿಸುತ್ತದೆ.
ನಮ್ಮ ಸರ್ಕಾರವು ಹೆಣ್ಣುಮಕ್ಕಳ ನೆರವಿಗೆ ಇನ್ನಿಲ್ಲದಷ್ಟು ವೇಗವಾಗಿ ಧಾವಿಸುತ್ತಿದೆ. ಆದರೆ ನಮ್ಮ ಸಮಾಜದಲ್ಲಿ ಬಾಲ್ಯ ವಿವಾಹ, ಬಾಲ ಗರ್ಭಿಣಿಯರ ಸಮಸ್ಯೆ, ಪೋಕ್ಸೋ ಸಮಸ್ಯೆಗಳು, ಬಾಲ ಕಾರ್ಮಿಕ ಪದ್ಧತಿಗಳು ಇನ್ನೂ ಜೀವಂತವಾಗಿವೆ. ಅವುಗಳನ್ನು ಸಂಪೂರ್ಣವಾಗಿ ತೊಡೆದುಹಾಕಬೇಕಾಗಿದೆ. ತೊಡೆದು ಹಾಕದಿದ್ದರೆ ಸಮಾಜದ ಪ್ರಗತಿ ಸಾಧ್ಯವಿಲ್ಲ.
ಈ ಅನಿಷ್ಟ ಸಮಸ್ಯೆಗಳನ್ನು ತೊಡೆದು ಹಾಕಬೇಕಾದರೆ ಹೆಣ್ಣು ಮಕ್ಕಳು ಕನಿಷ್ಟ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನಾದರೂ ಪಡೆಯಬೇಕು. ಹಾಗಾಗಿ ಬಡ ಮತ್ತು ಮಧ್ಯಮ ವರ್ಗದ ಮಕ್ಕಳ ಓದಿನ ದೃಷ್ಟಿಯಲ್ಲಿ ಹಣಕಾಸಿನ ಅನುಕೂಲವು ಬಹಳ ಮುಖ್ಯ. ದುಡಿಮೆ ಕಡಿಮೆಯೆಂದು ಗಂಡು ಮಕ್ಕಳಿಗೆ ಆದ್ಯತೆ ನೀಡಿ ಹೆಣ್ಣು ಮಕ್ಕಳ ಉನ್ನತ ಶಿಕ್ಷಣವನ್ನು ನಿರಾಕರಿಸಿಬಿಡುತ್ತಾರೆ. ನಮ್ಮ ಸರ್ಕಾರ ಉಚಿತ ಬಸ್ ಪ್ರಯಾಣ, ವಿದ್ಯಾರ್ಥಿ ವೇತನ, ಉಚಿತ ಶಿಕ್ಷಣ, ಅನ್ನಭಾಗ್ಯ ಯೋಜನೆಯ ಮೂಲಕ ಉಚಿತ ಆಹಾರ ಧಾನ್ಯ ಇತ್ಯಾದಿ ಸೌಲಭ್ಯ ಕೊಡುತ್ತಿದೆ. ಆದರೂ ಉನ್ನತ ಶಿಕ್ಷಣಕ್ಕೆ ಇನ್ನಷ್ಟು ಹೆಣ್ಣು ಮಕ್ಕಳು ಬರಬೇಕಾಗಿದೆ. ಉನ್ನತ ಶಿಕ್ಷಣವನ್ನು ಪೂರೈಸಬೇಕಾಗಿದೆ.
ಈ ನಿಟ್ಟಿನಲ್ಲಿ ಅಜೀಂ ಪ್ರೇಮ್ ಜಿ ಯವರ ದೂರದೃಷ್ಟಿ ಕೆಲಸ ಮಾಡಿದೆ. ಹಾಗಾಗಿ ಪ್ರೇಮ್ ಜಿಯವರಿಗೆ ಹಾಗೂ ಅವರ ಪ್ರತಿಷ್ಠಾನಕ್ಕೆ ಧನ್ಯವಾದಗಳನ್ನು ತಿಳಿಸಬಯಸುತ್ತೇನೆ.
ಈ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳುವುದಕ್ಕೆ ಇರಬೇಕಾದ ಅರ್ಹತೆ ಏನು? ಇದಕ್ಕೆ ನಿಮ್ಮನ್ನು ಕೇಳುತ್ತಿರುವುದು ಒಂದೇ ಒಂದು ಅರ್ಹತೆ – ನೀವು ಹತ್ತನೇ ತರಗತಿಯನ್ನು ಮತ್ತು 12ನೇ ತರಗತಿಯನ್ನು ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಪೂರ್ಣಗೊಳಿಸಿರಬೇಕು.
ನೀವು State Syllabus, ICSE, CBSE, ISC ಈ ಯಾವುದೇ ಬೋರ್ಡ್ನಿಂದ 12 ನೇ ತರಗತಿ ಅಥವಾ ಪಿ.ಯು.ಸಿ.ಯನ್ನು ಪೂರ್ಣಗೊಳಿಸಿರಬಹುದು. ಜೊತೆಗೆ, ಈ ವರ್ಷ ಎಂದರೆ, 2025-26ನೇ ಶೈಕ್ಷಣಿಕ ವರ್ಷದಲ್ಲಿ ನೀವು ಸಾಮಾನ್ಯ ಪದವಿ ಅಥವಾ ವೃತ್ತಿ ಶಿಕ್ಷಣ ಪದವಿ ಅಥವಾ ಇನ್ನಾವುದೇ ಪದವಿ ತರಗತಿಗೆ ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶಾತಿ ಪಡೆದಿರಬೇಕು. ಇಷ್ಟು ಅರ್ಹತೆ ಇದ್ದರೆ ನೀವು ಈ ‘ದೀಪಿಕಾ’ ವಿದ್ಯಾರ್ಥಿವೇತನ ಪಡೆಯಲು ಅರ್ಹರಾಗುತ್ತೀರಿ.
ದೀಪಿಕಾ ವಿದ್ಯಾರ್ಥಿ ವೇತನದಡಿ ನಿಮಗೆ ದೊರೆಯುವ ಪ್ರಯೋಜನ ಏನು? ನೀವು ಪದವಿ ಕೋರ್ಸ್ ಪೂರ್ಣಗೊಳಿಸುವವರೆಗೆ ನಿಮಗೆ ಪ್ರತಿವರ್ಷ ರೂ.30,000/- ಗಳನ್ನು ವಿದ್ಯಾರ್ಥಿ ವೇತನವಾಗಿ ನೀಡಲಾಗುತ್ತದೆ. ಇದನ್ನು ನೀವು ಮುಖ್ಯವಾಗಿ ಶೈಕ್ಷಣಿಕ ಉದ್ದೇಶಗಳಿಗೆ ಮತ್ತು ಉಳಿದಂತೆ ನಿಮಗೆ ಸೂಕ್ತ ಎನಿಸುವ ಕಾರಣಗಳಿಗಾಗಿ ಉಪಯೋಗಿಸಬಹುದು.
ದೀಪಿಕಾ ವಿದ್ಯಾರ್ಥಿವೇತನದಡಿ ಎರಡು ಭಾಗಗಳಿವೆ. ಮೊದಲನೆಯದಾಗಿ, ಈ ವರ್ಷ ಅಜೀಂ ಪ್ರೇಂಜಿ ಫೌಂಡೇಶನ್ ನಿಂದ ಒಟ್ಟು 37,000 ವಿದ್ಯಾರ್ಥಿನಿಯರಿಗೆ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ. 2ನೇಯದಾಗಿ, ಅರ್ಹ ವಿದ್ಯಾರ್ಥಿನಿಯರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿದರೆ, ಅವರಿಗೆ ಕರ್ನಾಟಕ ಸರ್ಕಾರ ಇದೇ ಮೊತ್ತದ ವಿದ್ಯಾರ್ಥಿವೇತನವನ್ನು ನೀಡಲಿದೆ.
ದೀಪಿಕಾ ವಿದ್ಯಾರ್ಥಿವೇತನ ನಿಮಗೆ ಪದವಿ ಹಂತದ ಶಿಕ್ಷಣ ಪಡೆಯಲು ನೆರವಾಗುತ್ತದೆ. ನೀವು ಪದವೀಧರೆಯರಾದ ನಂತರ?, ನಿಮ್ಮಲ್ಲಿ ಅತ್ಯಂತ ಸಮರ್ಥರಾದ, ಸಾಮಾಜಿಕ ಕಾಳಜಿ ಇರುವ 5 ಜನ ಪದವೀಧರೆಯರಿಗೆ ಬ್ರಿಟನ್ನಿನ ಯಾವುದಾದರೂ ವಿಶ್ವವಿದ್ಯಾಲಯದಲ್ಲಿ ಒಂದು ವರ್ಷದ ಸ್ನಾತಕೋತ್ತರ ಶಿಕ್ಷಣ ಪಡೆಯಲು ನಾವು “ಚಿವೆನಿಂಗ್-ಕರ್ನಾಟಕ ಸ್ನಾತಕೋತ್ತರ ವಿದ್ಯಾರ್ಥಿ ವೇತನ” ವನ್ನು ಸ್ಥಾಪಿಸಿದ್ದೇವೆ. ರಾಜ್ಯದ ವಿದ್ಯಾರ್ಥಿನಿಯರಿಗೆ ಅಂತಾರಾಷ್ಟ್ರೀಯ ಶಿಕ್ಷಣಕ್ಕಾಗಿ ಸರ್ಕಾರದ ವತಿಯಿಂದ ಸ್ಥಾಪನೆಗೊಂಡಿರುವ ಪ್ರಪ್ರಥಮ ವಿದ್ಯಾರ್ಥಿವೇತನ. ಇದಕ್ಕಾಗಿ ಕರ್ನಾಟಕ ಸರ್ಕಾರ ರೂ. 3 ಕೋಟಿ ಅನುದಾನ ನೀಡುತ್ತಿದೆ. ಈ ವರ್ಷ ಬ್ರಿಟನ್ನಲ್ಲಿ ಚಿವೆನಿಂಗ್-ಕರ್ನಾಟಕ ವಿದ್ಯಾರ್ಥಿ ವೇತನದಡಿ ಬ್ರಿಟನ್ಗೆ ತೆರಳಲಿರುವ ವಿದ್ಯಾರ್ಥಿನಿಯರ ಆಯ್ಕೆ ಮತ್ತು ಅಧಿಕೃತ ಘೋಷಣೆಗಳು ಪೂರ್ಣಗೊಂಡಿವೆ.
ಮೈಸೂರಿನಲ್ಲಿ ವಿದ್ಯಾರ್ಥಿನಿಯರಿಗೋಸ್ಕರ ಹೈಟೆಕ್ ಹಾಸ್ಟೆಲ್ ನಿರ್ಮಾಣ
ವಿದ್ಯಾರ್ಥಿವೇತನ ಮಾತ್ರವಲ್ಲದೆ, ನಮ್ಮ ರಾಜ್ಯದ ವಿದ್ಯಾರ್ಥಿನಿಯರಿಗಾಗಿ ಇರುವ ಕಾಲೇಜುಗಳಲ್ಲಿ ಉತ್ತಮ ಸೌಲಭ್ಯಗಳಿರಬೇಕು ಎನ್ನುವ ಉದ್ದೇಶದಿಂದ ನಮ್ಮ ಸರ್ಕಾರವು ರೂ.116 ಕೋಟಿ ವೆಚ್ಚದಲ್ಲಿ ಮೈಸೂರಿನ ಮಹಾರಾಣಿ ಕಲಾ ಮತ್ತು ವಿಜ್ಞಾನ ಕಾಲೇಜುಗಳ ಹೈ-ಟೆಕ್ ವಿದ್ಯಾರ್ಥಿನಿಲಯವನ್ನು ನಿರ್ಮಿಸುತ್ತಿದ್ದೇವೆ.
ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜಿನ ಕಟ್ಟಡವನ್ನು ನವೀಕರಿಸುತ್ತಿದ್ದೇವೆ. ಜೊತೆಗೆ 47 ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜುಗಳು ಮತ್ತು 09 ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ಗಳೂ ಸೇರಿದಂತೆ ಒಟ್ಟು 56 ಸರ್ಕಾರಿ ಮಹಿಳಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತಲಾ ರೂ. 1 ಕೋಟಿ ವೆಚ್ಚದಲ್ಲಿ ಮಹಿಳಾ ವಿಶ್ರಾಂತಿ ಗೃಹವನ್ನು ನಿರ್ಮಿಸಲು ಕ್ರಮವಹಿಸುತ್ತಿದ್ದೇವೆ.
ಕೇವಲ ವಿದ್ಯಾರ್ಥಿನಿಯರ ಕುರಿತು ಮಾತ್ರವಲ್ಲ, ಮಹಿಳಾ ಸಮಾನತೆ, ಪ್ರಗತಿ ಮತ್ತು ರಾಜ್ಯದ ಮುನ್ನಡೆಗೆ ಮಹಿಳೆಯರ ಕೊಡುಗೆಯ ಕುರಿತು ಒಟ್ಟಾರೆಯಾಗಿ ನಮ್ಮ ಸರ್ಕಾರ ಅತ್ಯಂತ ಕಳಕಳಿಯನ್ನು ಹೊಂದಿದೆ.
ಮಹಿಳೆಯರ ಅಭಿವೃದ್ಧಿಯನ್ನು ವಿವಿಧ ಅಂಶಗಳ ಆಧಾರದಲ್ಲಿ ಗುರುತಿಸಲಾಗುತ್ತದೆ. ಶಿಕ್ಷಣ, ಆರೋಗ್ಯ, ಆದಾಯ, ಸುರಕ್ಷತೆ, ಬದುಕುಳಿಯುವಿಕೆ, ಉದ್ಯೋಗ, ನಿರ್ಧಾರ ಕೈಗೊಳ್ಳುವ ಅವಕಾಶ ಮೊದಲಾದ ವಿಷಯಗಳು ಅತಿ ಮುಖ್ಯವೆನಿಸುತ್ತವೆ. ಅಂಬೇಡ್ಕರ್ ಅವರು “ಒಂದು ಸಮಾಜದ ಅಭಿವೃದ್ಧಿಯನ್ನು ಅದು ಮಹಿಳೆಯರನ್ನು ನಡೆಸಿಕೊಳ್ಳುವ ರೀತಿಯಿಂದ ಗುರುತಿಸಬಹುದಾಗಿದೆ” ಎಂದು ಹೇಳಿದ್ದಾರೆ.
ಪ್ರಗತಿಪರ ಸಮಾಜದಲ್ಲಿ ಮಹಿಳೆಯರ ಸ್ಥಾನಮಾನವೂ ಗೌರವಯುತವಾಗಿರುತ್ತದೆ. ಇಂತಹ ಗೌರವಯುತ ಸ್ಥಾನವನ್ನು ನಮ್ಮ ರಾಜ್ಯದ ಮಹಿಳೆಯರೂ ಪಡೆಯುವಂತಾಗಬೇಕು. ಅವರ ಬದುಕಿನ ಮಟ್ಟದಲ್ಲಿ ಹೆಚ್ಚಿನ ಸುಧಾರಣೆಯಾಗಬೇಕು ಎಂಬ ಆಶಯದೊಂದಿಗೆ ಮಹಿಳೆಯರಿಗೇ ಹೆಚ್ಚಿನ ಅನುಕೂಲವಾಗುವ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ.
ಮಹಿಳೆಯರ ಅಂತಃಶಕ್ತಿಯಲ್ಲಿ ಬಹಳ ವಿಶ್ವಾಸ ಹೊಂದಿದೆ. ಆದ್ದರಿಂದಲೇ ನಾವು ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಿರುವುದು. ಸುಮಾರು 1.25 ಕೋಟಿ ಕುಟುಂಬಗಳ ಯಜಮಾನಿಯರು ಈ ಯೋಜನೆಯ ಲಾಭವನ್ನು ಪಡೆದುಕೊಂಡಿದ್ದಾರೆ. ಮಹಿಳೆಯರಿಗೆ ಆರ್ಥಿಕ ನೆರವು ನೀಡುವುದರ ಹಿಂದೆ ಸಮಾಜದ ಒಟ್ಟಾರೆ ಆರ್ಥಿಕ ಬೆಳವಣಿಗೆಯ ಆಶಯವಿದೆ.
ಎರಡು ವರ್ಷಗಳಲ್ಲಿಯೇ ನಮ್ಮ ಸರ್ಕಾರವು 1 ಲಕ್ಷ ಕೋಟಿ ರೂ.ಗಳಷ್ಟು ಬೃಹತ್ ಪ್ರಮಾಣದ ಹಣವನ್ನು ಗ್ಯಾರಂಟಿ ಯೋಜನೆಗಳಿಗಾಗಿ ಖರ್ಚು ಮಾಡಿದ್ದೇವೆ. ನಮ್ಮ ಗ್ಯಾರಂಟಿ ಯೋಜನೆಗಳು ಮಹಿಳೆಯರನ್ನು ಕೇಂದ್ರವಾಗಿರಿಸಿಕೊಂಡೇ ರೂಪಿಸಿದ್ದೇವೆ. ನಮ್ಮ ಗ್ಯಾರಂಟಿ ಯೋಜನೆಗಳಿಂದ ಆಗಿರುವ ದೊಡ್ಡ ಅನುಕೂಲವೆಂದರೆ ದುಡಿಯುವ ಶಕ್ತಿಯಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಪ್ರಮಾಣವು ದೊಡ್ಡ ಮಟ್ಟದಲ್ಲಿ ಹೆಚ್ಚಾಗಿದೆ. ಫಿಸ್ಕಲ್ ಪಾಲಿಸಿ ಸಂಸ್ಥೆ ಸೇರಿದಂತೆ ಹಲವು ಖಾಸಗಿ ಸಂಸ್ಥೆಗಳು ನಡೆಸಿರುವ ಅಧ್ಯಯನಗಳ ಪ್ರಕಾರ ಬೆಂಗಳೂರಿನಲ್ಲಿ ಶೇ.23 ರಷ್ಟು ಮತ್ತು ಹುಬ್ಬಳ್ಳಿಯಲ್ಲಿ ಶೇ.21 ರಷ್ಟು ಹೆಚ್ಚಾಗಿದೆ. ನಮ್ಮ ಸರ್ಕಾರವು 2013cm ರಿಂದಲೂ ಅನೇಕ ಮಹಿಳಾ ಪರವಾದ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಈಗ ಇನ್ನಷ್ಟು ಹೆಚ್ಚಿಸಿದ್ದೇವೆ.
ನಮ್ಮ ಸರ್ಕಾರ ಮಹಿಳೆಯರ ಶಿಕ್ಷಣಕ್ಕಾಗಿ ನೆರವನ್ನು ನೀಡಲು ಸದಾ ಸಿದ್ಧವಾಗಿದೆ. ಮಹಿಳಾ ಸಬಲೀಕರಣ ನಮ್ಮ ಸರ್ಕಾರದ ಒಂದು ಪ್ರಧಾನ ಧ್ಯೇಯವಾಗಿದೆ. ಸರ್ಕಾರದ ಮಹಿಳಾಪರ ಯೋಜನೆಗಳ ನೆರವನ್ನು ಪಡೆದುಕೊಂಡು ದಿಟ್ಟತನದಿಂದ ಸಾಧನೆ ಮಾಡಲು ಸಂಕಲ್ಪ ಮಾಡಬೇಕು.
ಇನ್ನು ಈ ‘ದೀಪಿಕಾ’ ವಿದ್ಯಾರ್ಥಿವೇತನ ಸರ್ಕಾರಕ್ಕೆ ನಿಮ್ಮಲ್ಲಿರುವ ಭರವಸೆಯ ಪ್ರತೀಕ ಎನ್ನಬಹುದು. ಇಂಗ್ಲಿಷ್ನಲ್ಲಿ ಒಂದು ಮಾತಿದೆ – “A scholarship is a vote of confidence in your abilities and future success” ಅಂತ.
ಈ ವಿದ್ಯಾರ್ಥಿ ವೇತನದ ಅನುಕೂಲ ಪಡೆದ ವಿದ್ಯಾರ್ಥಿನಿಯರು ಮುಂದೆ ಸ್ವಾವಲಂಬಿಗಳಾಗಿ, ಸಂಕಷ್ಟದಲ್ಲಿರುವ ಇನ್ನಷ್ಟು ಜನರಿಗೆ ನೆರವಾಗುವಂತಾಗಬೇಕು. “ಕೆರೆಯ ನೀರನ್ನು ಕೆರೆಗೆ ಚೆಲ್ಲಿ” ಎಂದು ಪುರಂದರ ದಾಸರು ಹೇಳಿದಂತೆ, ಸಮಾಜದಿಂದ ನಾವು ಪಡೆದುಕೊಂಡಿದ್ದನ್ನು ಹಿಂದಿರುಗಿಸುವಂತಾಗಬೇಕು. ಆಗ ಈ ಯೋಜನೆ ಸಾರ್ಥಕವಾಗುವುದು. ಸಮಾಜದ ಒಟ್ಟಾರೆ ಬೆಳವಣಿಗೆಯಾಗುವುದು.
ಬದುಕಿನಲ್ಲಿ ಲಾಭ ನಷ್ಟ ಮಾತ್ರವಲ್ಲ, ಪಾಪ-ಪುಣ್ಯದ ಲೆಕ್ಕಾಚಾರವೂ ಇರಬೇಕು. ಆಗ ಜೀವನ ಸಾರ್ಥಕವಾಗುವುದು. ನೀವೆಲ್ಲರೂ ಚೆನ್ನಾಗಿ ಓದಿ, ಸಮಾಜದಲ್ಲಿ ಉನ್ನತ ಸ್ಥಾನ ಪಡೆಯುವ ಜೊತೆಗೆ ಬೇರೆಯವರ ಉನ್ನತಿಗಾಗಿಯೂ ಶ್ರಮಿಸುವಂತಾಗಲಿ.
‘ದೀಪಿಕಾ’ ವಿದ್ಯಾರ್ಥಿ ವೇತನದ ಕಾರ್ಯಕ್ರಮವನ್ನು ನೀವು ಸಾರ್ಥಕಗೊಳಿಸುತ್ತೀರಿ ಎಂದು ನಾನು ನಂಬಿದ್ದೇನೆ. ನಿಮಗೆಲ್ಲರಿಗೂ ಶುಭ ಹಾರೈಸಿ ನನ್ನ ಮಾತುಗಳನ್ನು ಮುಗಿಸುತ್ತೇನೆ.