ಬೆಂಗಳೂರು: ಶಿಕ್ಷಣ ಸ್ತ್ರೀ ಸಬಲೀಕರಣದ ಗುರಿ ಸಾಧನೆಗೆ ಪೂರಕವಾಗಬಲ್ಲದೆಂದು ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಲಿಂಗರಾಜ ಗಾಂಧಿ ಪ್ರತಿಪಾದಿಸಿದ್ದಾರೆ.
ಸೆಂಟ್ರಲ್ ಕಾಲೇಜ್ ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ತ್ರೀ ಶಿಕ್ಷಣದ ರೂವಾರಿಯಾದ ಸಾವಿತ್ರಿಬಾಯಿ ಪುಲೆಯವರ ಮಹತ್ವದ ಕೊಡುಗೆಯನ್ನು ಸ್ಮರಿಸಿದರು.
ಬೆಂಗಳೂರು ನಗರ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಪೈಕಿ ಹೆಣ್ಣುಮಕ್ಕಳೇ ಅಧಿಕವಾಗಿದ್ದು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯಲ್ಲೂ ಮಹಿಳೆಯರೇ ಮೇಲುಗೈ ಹೊಂದಿದ್ದಾರೆ. ಗ್ರಾಮೀಣ ಮತ್ತು ಬಡ ಕುಟುಂಬ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕದಲ್ಲಿ ಉತ್ತಮ ಗುಣಮಟ್ಟದ ಉನ್ನತ ಶಿಕ್ಷಣ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್.ಲತಾಕುಮಾರಿ ಮಾತನಾಡಿ, ಮಹಿಳೆಯರಲ್ಲಿ ಉನ್ನತ ಶಿಕ್ಷಣ ಪ್ರಮಾಣ ಕಡಿಮೆಯಿದ್ದು ಬೆಂಗಳೂರು ನಗರ ವಿಶ್ವವಿದ್ಯಾನಿಲಯದಲ್ಲಿ ಹೆಚ್ಚಿನ ಉತ್ತೇಜನ ದೊರೆಯುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಹಿಳೆಯರು ಕೇವಲ ಕೌಟುಂಬಿಕ ಹೊಣೆಗಾರಿಕೆಗೆ ಸೀಮಿತವಾಗದೆ ತಮ್ಮ ವಿದ್ಯೆ, ಪ್ರತಿಭೆ ಮತ್ತು ಸಾಮಥ್ರ್ಯಗಳನ್ನು ಸಮಾಜ ಮತ್ತು ದೇಶದ ಪ್ರಗತಿಗೆ ವಿನಿಯೋಗಿಸಬೇಕು. ಪಂಚಾಯತ್ ರಾಜ್ ಸಂಸ್ಥೆಗಳಂತೆ ಸಂಸತ್ತು ಮತ್ತು ವಿಧಾನಸಭೆಗಳಲ್ಲೂ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ಒದಗಿಸಬೇಕು. ವಿಶ್ವವಿದ್ಯಾಲಯಗಳ ಕುಲಪತಿ ಮತ್ತು ಕುಲಸಚಿವ ಹುದ್ದೆಗಳಲ್ಲೂ ಅವಕಾಶ ಕಲ್ಪಿಸಬೇಕೆಂದು ಅವರು ತಿಳಿಸಿದರು.
ಖ್ಯಾತ ಲೈಂಗಿಕ ಶಿಕ್ಷಣ ತಜ್ಞರಾದ ಡಾ. ಪದ್ಮಿನಿ ಪ್ರಸಾದ್ ಮಾತನಾಡಿ, ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ದೈಹಿಕ ಮತ್ತು ಮಾನಸಿಕ ದೌರ್ಜನ್ಯದ ಸವಾಲುಗಳನ್ನು ಮೆಟ್ಟಿ ನಿಂತು ಆತ್ಮರಕ್ಷಣೆ ಮಾಡಿಕೊಳ್ಳಬೇಕು. ಹೆಣ್ಣು ಭ್ರೂಣ ಹತ್ಯೆಯ ಕ್ರೌರ್ಯವನ್ನು ಖಂಡಿಸಿದ ಅವರು ಹುಟ್ಟುವ ಮೊದಲೇ ಮಹಿಳೆಗೆ ಮರಣ ದಂಡನೆ ವಿಧಿಸುವ ಅಮಾನವೀಯ ಪ್ರವೃತ್ತಿಗೆ ಸಂಪೂರ್ಣ ವಿರಾಮ ಹಾಕಬೇಕು. ಬಾಲ್ಯ, ಹದಿಹರೆಯ, ವಿವಾಹಪೂರ್ವ ಮತ್ತು ದಾಂಪತ್ಯ ಜೀವನದ ಹಂತಗಳಲ್ಲಿ ಹೆಣ್ಣುಮಕ್ಕಳಿಗೆ ಲೈಂಗಿಕ ಶಿಕ್ಷಣ ಹಾಗೂ ಆರೋಗ್ಯ ಸಂರಕ್ಷಣೆಯ ಕುರಿತ ಜಾಗೃತಿ ಮೂಡಿಸಬೇಕಾದ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಬೆಂಗಳೂರು ವಕೀಲರ ಸಂಘದ ಖಜಾಂಚಿ ಶ್ವೇತಾ ರವಿಶಂಕರ್ ಮಾತನಾಡಿ, ವಿದ್ಯಾರ್ಥಿನಿಯರು ಸಾಮಾಜಿಕ ಜೀವನದಲ್ಲೂ ಸಕ್ರಿಯ ಪಾತ್ರ ವಹಿಸಲು ಮುಂದಾಗಬೇಕೆಂದು ಉತ್ತೇಜಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕುಲಸಚಿವರಾದ ಟಿ.ಜವರೇಗೌಡರು ಹನ್ನೆರಡನೇ ಶತಮಾನದಲ್ಲೇ ಕರ್ನಾಟಕದಲ್ಲಿ ಬಸವಾದಿ ಶರಣರು ಲಿಂಗ ಸಮಾನತೆಯ ಆಶಯಗಳನ್ನು ಎತ್ತಿಹಿಡಿದು ಇಡೀ ವಿಶ್ವಕ್ಚೇ ನವಸಂದೇಶ ಸಾರಿದರೆಂದು ವಿಶ್ಲೇಷಿಸಿದರು.
ಕುಲಸಚಿವ (ಮೌಲ್ಯಮಾಪನ) ಪ್ರೊ.ಬಿ.ರಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೂವರೂ ಅತಿಥಿಗಳು ಹಾಗೂ ಬಿಸಿಯು ಅಧೀಕ್ಷಕರಾದ ಪದ್ಮಮ್ಮನವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಹಿಳಾ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಡಾ. ಮಾಲಿನಿ. ಡಾ. ಪ್ರಿಯಾಂಕ, ಡಾ.ಸುಜಾತ ಉಪಸ್ಥಿತಿ.