ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅಪಾಯ ಸ್ಥಿತಿಯಲ್ಲಿರುವ ಮರ, ಒಣಗಿದ ಮರ ಹಾಗೂ ಮರದ ರೆಂಬೆ, ಕೊಂಬೆಗಳ ತೆರವು ಕಾರ್ಯಾಚರಣೆ ಅಭಿಯಾನವನ್ನು ಪ್ರಾರಂಭಿಸಲಾಗುತ್ತಿದೆ ಎಂದು ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ತಿಳಿಸಿದರು.
ನಗರದಾದ್ಯಂತ ಅಪಾಯ ಸ್ಥಿತಿಯಲ್ಲಿರುವ ಮರ, ಒಣಗಿದ ಮರ ಹಾಗೂ ಬಾಗಿದ ಮರದ ರೆಂಬೆ, ಕೊಂಬೆಗಳ ತೆರವು ಕಾರ್ಯಾಚರಣೆ ಅಭಿಯಾನಕ್ಕೆ ದಕ್ಷಿಣ ವಲಯದ ಜಯನಗರ 2ನೇ ಬ್ಲಾಕ್ ಕಮ್ಯುನಿಟಿ ಕಾಲೇಜು ಬಳಿ ಚಾಲನೆ ನಿಡಿದ ಬಳಿಕ ಅವರು ಮಾತನಾಡಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಅರಣ್ಯ ವಿಭಾಗದಿಂದ ನಿರಂತರವಾಗಿ ಮರ ಕಟಾವು ಮಾಡಲಾಗುತ್ತಿದೆ. ಮಳೆಗಾಲದ ವೇಳೆ ಜೋರು ಗಾಳಿ ಬರುವ ಸಮಯದಲ್ಲಿ ಮರಗಳು ಬೀಳುವ ಹಿನ್ನೆಲೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಹೆಚ್ಚುವರಿಯಾಗಿ ಮರ ತೆರವು ಕಾರ್ಯಾಚರಣೆಯ ತಂಡಗಳನ್ನು ನಿಯೋಜನೆ ಮಾಡಿಕೊಳ್ಳಲಾಗುತ್ತದೆ. ಸಾರ್ವಜನಿಕರ ಓಡಾಟ ಹಾಗೂ ವಾಹನ ದಟ್ಟಣೆ ಹೆಚ್ಚಿರುವಂತಹ ರಸ್ತೆಗಳಲ್ಲಿ ಮರದ ರೆಂಬೆ, ಕೊಂಬೆಗಳನ್ನು ರಾತ್ರಿ ವೇಳೆ ಕಟಾವು ಮಾಡಿ, ಕೂಡಲೆ ಡಂಪಿಂಗ್ ಯಾರ್ಡ್ ಗೆ ವಿಲೇವಾರಿ ಮಾಡಲಾಗುವುದೆಂದು ಹೇಳಿದರು.
ಬಿಬಿಎಂಪಿ, ಬೆಸ್ಕಾಂ ಸಹಯೋಗದೊಂದಿಗೆ ತೆರವು:
ನಗರದಲ್ಲಿ ಮರ, ಮರದ ರೆಂಬೆ, ಕೊಂಬೆಗಳ ತೆರವು ಕಾರ್ಯಾಚರಣೆಯನ್ನು ನಿರಂತರವಾಗಿ ಮಾಡಲಾಗುತ್ತಿದ್ದು, ಪಾಲಿಕೆ ಹಾಗೂ ಬೆಸ್ಕಾಂ ಸೇರಿ ವಿದ್ಯುತ್ ತಂತಿಗಳಿಗೆ ತಗಲುವ ರೆಂಬೆಗಳು ಹಾಗೂ ಅಪಾಯ ಸ್ಥಿತಿಯಲ್ಲಿರುವ ಮರ, ಮರದ ರೆಂಬೆ, ಕೊಂಬೆಗಳನ್ನು ಇಂದಿನಿಂದ 10 ದಿನಗಳ ಕಾಲ ತೆರವು ಕಾರ್ಯಾಚರಣೆಯ ಅಭಿಯನಾವನ್ನು ನಡೆಸಲಾಗುವುದು ಎಂದು ಹೇಳಿದರು.
ಸಮೀಕ್ಷೆ ಮಾಡಿ ಮರ, ಮರದ ರೆಂಬೆ-ಕೊಂಬೆ ತೆರವು:
ಪ್ರಮುಖ ರಸ್ತೆಗಳಲ್ಲಿ ಸಮೀಕ್ಷೆ ಮಾಡಿ ತೆರವು ಕೆಲಸ ಮಾಡಲಾಗುತ್ತಿದೆ. ಒಣಗಿರುವ ಹಾಗೂ ಅಪಾಯ ಸ್ಥೀಯಲ್ಲಿರುವ ಮರ, ಮರದ ಟೊಂಗೆಗಳ ತೆರವು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ನಗರದಲ್ಲಿ ಜುಲೈ 2024 ರಿಂದ ಇದುವರೆಗೆ ಒಣಗಿದ/ಅಪಾಯ ಸ್ಥಿತಿಯಲ್ಲಿರುವ 477 ಮರ ಹಾಗೂ 592 ಕೊಂಬೆಗಳನ್ನು ತೆರವುಗೊಳಿಲಸಲಾಗಿದೆ. ಅಲ್ಲದೆ ನಾಗರೀಕರಿಂದ ಬಂದಿರುವ ದೂರುಗಳು, ಮಳೆ ಗಾಳಿಗೆ ಬಿದ್ದಂತಹ ಸುಮಾರು 1371 ಮರಗಳು ಹಾಗೂ 3700 ರೆಂಬೆ-ಕೊಂಬೆಗಳನ್ನು ತೆರವುಗೊಳಿಸಲಾಗಿದೆ.
ವಿದ್ಯುತ್ ದೀಪ ಮುಚ್ಚಿಕೊಂಡಿರುವ ಕೊಂಬೆಗಳ ತೆರವು:
ಪ್ರಮುಖ ರಸ್ತೆಗಳಲ್ಲಿ ಮರದ ರೆಂಬೆ, ಕೊಂಬೆಗಳನ್ನು ಸಾಕಷ್ಟು ಅಬ್ಬಿಕೊಂಡಿದ್ದು, ಅದರಿಂದ ವಿದ್ಯುತ್ ದೀಪಗಳ ಬೆಳಕು ಸರಿಯಾಗಿ ರಸ್ತೆಗೆ ಬೀಳದಂತೆ ಮುಚ್ಚಿಕೊಂಡಿರುತ್ತದೆ. ಅಂತಹ ಮರದ ರೆಂಬೆ-ಕೊಂಬೆಗಳನ್ನು ತೆರವುಗೊಳಿಸಿ ರಸ್ತೆಗೆ ಸರಿಯಾಗಿ ಬೆಳಕು ಬೀಳುವಂತೆ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
1533 ಗೆ ಕರೆ ಮಾಡಿ ದೂರು ನೀಡಿ:
ನಾಗರೀಕರು ತಮ್ಮ ಸುತ್ತಮುತ್ತ ಪ್ರದೇಶಗಳಲ್ಲಿ ಒಣಗಿರುವ, ಅಪಾಯ ಸ್ಥಿತಿಯಲ್ಲಿರುವ ಮರ ಹಾಗೂ ಮರದ ರೆಂಬೆ, ಕೊಂಬೆಗಳು ಕಂಡುಬಂದಲ್ಲಿ, ಗಾಳಿ/ಮಳೆಗೆ ಬಿದ್ದಿರುವ ಮರಗಳನ್ನು ತೆರವುಗೊಳಿಸುವ ಸಂಬಂಧ ಪಾಲಿಕೆ ಸಹಾಯವಾಣಿ ಸಂಖ್ಯೆ 1533 ಅಥವಾ 080-22221188 / 08022660000 ಗೆ ಕರೆ ಮಾಡಿ ದೂರು ನೀಡಬಹುದು.
ಪಾದಚಾರಿ ಮಾರ್ಗ ಒತ್ತುವರಿ ಪರಿಶೀಲನೆ:
ಮರ ತೆರವು ಕಾರ್ಯಾಚರಣೆ ಪರಿಶೀಲನೆಯ ಬಳಿಕ ಪಾದಚಾರಿ ಮಾರ್ಗದ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಪರಿಶೀನೆಯ ವೇಳೆ, ಅನಧಿಕೃತ ಕೇಬಲ್ ಗಳನ್ನು ತೆರವುಗೊಳುಸಲು ಸೂಚಿಸಿದರು. ಬಳಿಕ ಭಾರತ್ ಟಿವಿಎಸ್ ಸಂಸ್ಥೆ ಸಂಪೂರ್ಣ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡು ದ್ವಿಚಕ್ರ ವಾಹನಗಳನ್ನು ನಿಲ್ಲಿಸಿಕೊಂಡಿರುವುದನ್ನು ನೋಡಿ, ಸಂಬಂಧಪಟ್ಟವರಿಗೆ ದಂಡ ವಿಧಿಸುವುದರ ಜೊತೆಗೆ ಉದ್ದಿಮೆ ಪರವಾನಗಿಯನ್ನು ಅಮಾನತು ಮಾಡಲು ಸೂಚಿಸಿದರು.
ಪಾದಚಾರಿ ಮಾರ್ಗದಲ್ಲಿ ಕರ್ಬ್ಸ್ ಆಳಾಗಿದ್ದು, ಅದನ್ನು ಕೂಡಲೆ ಅಳವಡಿಸಲು ಸೂಚಿಸಿದರು. ಯಡಿಯೂರು ವಾರ್ಡ್ 16ನೇ ಕ್ರಸ್ ಯೆಸ್ ಬ್ಯಾಂಕ್ ಬಳಿ ಬೆಸ್ಕಾಂ ಅಳವಡಿಸಿರುವ ಟ್ರಾನ್ಸ್ಫಾರ್ಮ್ ಗೆ ಹೋಗಿರುವ ಕೇಬಲ್ ಗಳು ಚರಂಡಿಗೆ ಅಡ್ಡಲಾಗಿದ್ದು, ಮಣ್ಣಿನ ರಾಶಿ ರಸ್ತೆಯಲ್ಲೇ ಇರುವುದನ್ನು ಕೂಡಲೆ ಅದನ್ನು ತೆರವುಗೊಳಿಸಲು ತಿಳಿಸಿದರು.
ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್ ಪಕ್ಕದ ಕಟ್ಟಡವನ್ನು ಉಲ್ಲಘಂನೆ ಮಾಡಿ ಅನಧಿಕೃತವಾಗಿ ನಿರ್ಮಾಣ ಮಾಡುತ್ತಿರುವುದನ್ನು ಗಮನಿಸಿ, ಕೂಡಲೆ ಅದನ್ನು ನಿಲ್ಲಿಸಿ ಸಂಬಂಧಪಟ್ಟವರಿಗೆ ನೋಟೀಸ್ ನೀಡಿ ಅನಧಿಕೃತವಾಗಿ ನಿರ್ಮಿಸುತ್ತಿರುವುದು ಕಂಡುಬಂದರೆ ಕೂಡಲೆ ತೆರವು ಕಾರ್ಯಾಚರಣೆ ಮಾಡಲು ಸೂಚಿಸಲಾಯಿತು.
ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಬಳಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಾದಚಾರಿ ಮಾರ್ಗ ಒತ್ತುವರಿಯನ್ನು ಪರಿಶೀಲಿಸಿ ಎಲ್ಲಾ ಕಡೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಬೇಕು. ಮತ್ತೆ-ಮತ್ತೆ ಒತ್ತುವರಿಯಾಗದಂತೆ ಮೇಲ್ವಿಚಾರಣೆ ಮಾಡುವುದರ ಜೊತೆಗೆ ಪ್ರತಿನಿತ್ಯ ಪರಿಶೀನೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ವಲಯ ಆಯುಕ್ತರಾದ ವಿನೋತ್ ಪ್ರಿಯಾ, ಜಂಟಿ ಆಯುಕ್ತರಾದ ಶಿವಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿಯಾದ ಬಿ.ಎಲ್.ಜಿ ಸ್ವಾಮಿ, ವಲಯ ಅರಣ್ಯಾಧಿಕಾರಿ, ಉಪ ವಲಯ ಅರಣ್ಯಾಧಿಕಾರಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತದ್ದರು.