ಬೆಂಗಳೂರು: ಏಕಸ್ ಇನ್ಫ್ರಾ ಕಂಪನಿಯು ಹುಬ್ಬಳ್ಳಿಯಲ್ಲಿ ನಿರ್ಮಿಸಿರುವ ಸಂಪೂರ್ಣ ಸುಸಜ್ಜಿತ”ಪ್ಲಗ್ ಅಂಡ್ ಪ್ಲೇ” ಮಾದರಿಯ ಎಫ್ಎಂಸಿಜಿ ಉತ್ಪನ್ನಗಳ ತಯಾರಿಕಾ ಪಾರ್ಕ್ ನ ಕಾರ್ಯಾಚರಣೆಗೆ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ ಮಂಗಳವಾರ ಚಾಲನೆ ನೀಡಿದರು.
ಇದರ ಅಂಗವಾಗಿ ಏಕಸ್ ಮತ್ತು ಎಫ್ ಕೆ ಸಿ ಸಿ ಐ ಇಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಎಫ್ ಎಂ ಸಿ ಜಿ (ತ್ವರಿತ ಬಿಕರಿ ಗ್ರಾಹಕ ಉತ್ಪನ್ನಗಳು) ತಯಾರಿಕೆಗೆ ಪೂರಕವಾದ ಉದ್ಯಮಗಳ ಸ್ಥಾಪನೆಗೆ ಇದು ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಿದೆ ಎಂದರು.
ಪ್ಲಗ್ ಅಂಡ್ ಪ್ಲೇ ಮಾದರಿಯ ಮೂಲ ಸೌಕರ್ಯ ಇರುವುದರಿಂದ ಪೂರಕ ಉದ್ದಿಮೆಗಳು ನೇರವಾಗಿ ಕಾರ್ಯಾಚರಣೆಯಲ್ಲಿ ತೊಡಗಬಹುದಾಗಿದೆ ಎಂದು ಸಚಿವರು ತಿಳಿಸಿದರು.
ಈ ನೂತನ ಉತ್ಪಾದನಾ ವ್ಯವಸ್ಥೆಯು ಎಫ್ಎಂಸಿಜಿ ಉತ್ಪಾದನಾ ಪ್ರಮಾಣ ಮತ್ತು ಉತ್ಪಾದನಾ ಘಟಕಗಳ ದಕ್ಷತೆಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ. ಈ ಮೂಲಕ ಉತ್ಪಾದನಾ ಘಟಕಗಳು ರಫ್ತು ಹೆಚ್ಚಳಕ್ಕೆ ಪೂರಕವಾಗ ಈ ಭಾಗದ ಅಭಿವೃದ್ಧಿಗೆ ಹೊಸ ಭಾಷ್ಯ ಬರೆಯಲಿದೆ. ಈ ಭಾಗದ ಸುಮಾರು 400 ಕಿಲೋಮೀಟರ್ ಸುತ್ತಳತೆಯಲ್ಲಿನ ಉತ್ಪಾದನಾ ಘಟಕಗಳು ದೇಶದ ಎಫ್ಎಂಸಿಜಿ ಸರಕುಗಳ ಪೈಕಿ 35% ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ಹೊಂದಿವೆ. ಈ ಹಿನ್ನೆಲೆಯಲ್ಲಿ ಇಕಾಸ್ ಇನ್ಫ್ರಾ ಸಂಸ್ಥೆ (ಎಇಕ್ಯೂಯುಎಸ್ ಇನ್ಫ್ರಾ) ಈ ನೂತನ ವ್ಯವಸ್ಥೆ ಈ ಭಾಗದಲ್ಲಿ ಈ ಕೈಗಾರಿಕೆಗಳ ಬಲವರ್ಧನೆ ನಿಟ್ಟಿನಲ್ಲಿ ದೊಡ್ಡ ಪಾತ್ರವಹಿಸಲಿದೆ ಎಂದು ಅಭಿಪ್ರಾಯಪಟ್ಟರು.
ಈ ಹೊಸ ಉಪಕ್ರಮವು, ಕೈಗಾರಿಕಾ ಮೂಲಸೌಕರ್ಯ ಸೃಷ್ಟಿಸುವ ಮೂಲಕ ಈ ಭಾಗದ ಸಾಮಾಜಿಕ ಪ್ರಗತಿಗೆ ಮತ್ತು ಸಾವಿರಾರು ಉದ್ಯೋಗಗಳ ಸೃಷ್ಟಿಗೆ ಕಾರಣವಾಗುತ್ತದೆ. ಉತ್ತರ ಕರ್ನಾಟಕದ ಭಾಗದ ಅಭಿವೃದ್ಧಿಗೆ ಇದು ಬಹುದೊಡ್ಡ ಕೊಡುಗೆಯಾಗಲಿದೆ ಎಂದರು.
ರಾಜ್ಯದ ಹೊಸ ಕೈಗಾರಿಕಾ ನೀತಿಯು ಎಫ್ಎಂಸಿಜಿ ವಲಯದ ಬೆಳವಣಿಗೆಗೆ ಉತ್ತೇಜನ ನೀಡುವಂತಿದೆ. ಈ ವಲಯವು ದೇಶದ ಆರ್ಥಿಕತೆ, ಜಿಡಿಪಿ ಮತ್ತು ಉದ್ಯೋಗ ಸೃಷ್ಟಿಗೆ ಮಹತ್ತರ ಕೊಡುಗೆ ನೀಡುತ್ತಿದೆ ಎಂದರು.
ಹುಬ್ಬಳ್ಳಿಯಲ್ಲಿನ ಈ ಸೌಲಭ್ಯವು ಬೃಹತ್, ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಸಹಾಯವಾಗಲಿದೆ. ಜತೆಗೆ ಇದರಿಂದ ಸುಸ್ಥಿರ ಬೆಳವಣಿಗೆಯ ಮಾದರಿ ಸೃಷ್ಟಿ ಆಗಲಿದೆ ಎಂದು ಅವರು ವಿವರಿಸಿದ್ದಾರೆ.
ರಾಜ್ಯದ ಕೈಗಾರಿಕಾ ನೀತಿಯಲ್ಲಿ ಮಧ್ಯಮ, ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಿಗೆ ಹಾಗೂ ನವೋದ್ಯಮಗಳಿಗೆ ಸಾಕಷ್ಟು ಬೆಂಬಲ ಕೊಡಲಾಗಿದೆ ಎಂದು ಅವರು ನುಡಿದರು.
ಕಾರ್ಯಕ್ರಮದಲ್ಲಿ ಶಾಸಕ ಅರವಿಂದ ಬೆಲ್ಲದ್, ಏಕಸ್ ಇನ್ಫ್ರಾ ಅಧ್ಯಕ್ಷ ಅರವಿಂದ ಮೆಳ್ಳಿಗೇರಿ, ಎಫ್ ಐಸಿಸಿಐ ಅಧ್ಯಕ್ಷ ಉಲ್ಲಾಸ್ ಕಾಮತ್, ಸಿಕ್ಸ್ತ್ ಸೆನ್ಸ್ ವೆಂಚರ್ಸ್ ಸಂಸ್ಥಾಪಕ ನಿಖಿಲ್ ವೋರಾ, ದಿ ವೆನಿನ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಸಮೀರ್ ಕೊಠಾರಿ, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಆಯುಕ್ತೆ ಗುಂಜನ್ ಕೃಷ್ಣ ಅವರು ಮಾತನಾಡಿದರು.