ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ವಿವಿಧ ರಾಜ್ಯಗಳ ಸರ್ಕಾರಿ ಸಾರಿಗೆ ಹಾಗು GIZ ಅಧಿಕಾರಿಗಳು ಬೇಟಿ ನೀಡಿ ಸಾರಿಗೆಯ ವಿಚಾರಗಳ ಕುರಿತು ವಿವಿಧ ಮಾದರಿಯ ಬಸ್ಸುಗಳ ವ್ಯವಸ್ಥಿತ ಕಾರ್ಯಾಚರಣೆ ಕುರಿತು ಅಧ್ಯಯನ ಮಾಡಿದರು.
ಜು. 29,30 ರಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಭುವನೇಶ್ವರ ನಗರ ಸಾರಿಗೆ, ರಾಜ್ಕೋಟ್ ರಾಜ್ಪಥ್ ಲಿಮಿಟೆಡ್ (RRL), ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC), ಕೊಚ್ಚಿ ಮೆಟ್ರೋ ರೈಲು ಲಿಮಿಟೆಡ್ (KMRL), ಸೂರತ್ ಸಿಟಿಲಿಂಕ್ ಲಿಮಿಟೆಡ್ನಂತಹ ವಿವಿಧ ಸಾರಿಗೆ ಸಂಸ್ಥೆಗಳ ಅಧಿಕಾರಿಗಳನ್ನು ಒಳಗೊಂಡ 25 ಜನರ ನಿಯೋಗ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಭೇಟಿ ನೀಡಿತ್ತು.
ವಿವಿಧ ಸಾರಿಗೆ ಸಂಸ್ಥೆಗಳ ಅಧಿಕಾರಿಗಳು (Deutsche Gesellschaft für InternationaleZusammenarbeit(GIZ) GmbH) ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವಿವಿಧ ಮಾದರಿಯ ಬಸ್ಸುಗಳ ವ್ಯವಸ್ಥಿತ ಕಾರ್ಯಾಚರಣೆ ಕುರಿತು ಅಧ್ಯಯನ ಮಾಡಿದರು. ಸಂಸ್ಥೆಯ ಸಮಗ್ರ ಕಾರ್ಯ ಚಟುವಟಿಕೆಯನ್ನು ಪ್ರಾತ್ಯಕ್ಷತೆಯ ಮೂಲಕ ಮುಖ್ಯ ಸಂಚಾರ ವ್ಯವಸ್ಥಾಪಕರಾದ ಪ್ರಭಾಕರ್ ರೆಡ್ಡಿ ಹಾಗೂ ಹಿರಿಯ ಇಲಾಖಾ ಮುಖ್ಯಸ್ಥರು ವಿವರಿಸಿದರು.
ಭಾರತ ಸರ್ಕಾರ ಮತ್ತು GIZ ಜಂಟಿಯಾಗಿ ಕಾರ್ಯಗತಗೊಳಿಸಿದ್ದ ಈ ಕಾರ್ಯಕ್ರಮಕ್ಕೆ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿಗಾಗಿ ಜರ್ಮನ್ ಫೆಡರಲ್ ಸಚಿವಾಲಯ (BMZ) ನಿಯೋಜಿಸಿದೆ. ರಾಷ್ಟ್ರೀಯ, ರಾಜ್ಯ ಮತ್ತು ನಗರ ಮಟ್ಟದಲ್ಲಿ ಹವಾಮಾನ ಮತ್ತು ಪರಿಸರ ಸ್ನೇಹಿ, ಕಡಿಮೆ-ಹೊರಸೂಸುವಿಕೆ ಮತ್ತು ಸಾಮಾಜಿಕವಾಗಿ ಸಮತೋಲಿತ ನಗರಗಳ ಚಲನಶೀಲತೆ ವ್ಯವಸ್ಥೆಗಳನ್ನು ಉತ್ತೇಜಿಸುವುದು ಯೋಜನೆಯ ಉದ್ದೇಶವಾಗಿದೆ.
ಬೆಂ.ಮ.ಸಾ.ಸಂಸ್ಥೆಯು ಅಳವಡಿಸಿಕೊಂಡಿರುವ ಇಂಟೆಲಿಜೆಂಟ್ ಟ್ರಾನ್ಸಿಟ್ ಮ್ಯಾನೇಜ್ಮೆಂಟ್ ಸಿಸ್ಟಮ್ಸ್ (ಐಟಿಎಂಎಸ್) ಅಳವಡಿಕೆ, ಸಾರ್ವಜನಿಕರಿಗೆ ನೈಜ ಸಮಯದ ಮಾಹಿತಿಯನ್ನು ಒದಗಿಸುವುದಲ್ಲದೆ ಮಹಿಳೆಯರು ಮತ್ತು ಇತರ ದುರ್ಬಲ ಬಳಕೆದಾರರ ಸುರಕ್ಷತೆಯನ್ನು ಸುಧಾರಿಸಲು (ಎಸ್.ಓ.ಎಸ್) ಹೇಗೆ ಸಹಕಾರಿಯಾಗುತ್ತದೆ ಎಂಬುದರ ಕುರಿತು ಗಣಕ ವ್ಯವಸ್ಥಾಪಕರಾದ ಪ್ರಿಯಾಂಕ್ ರವರು ವಿವರಿಸಿದರು.
ಸಾರ್ವಜನಿಕ ಸಂಪರ್ಕ ಅಧಿಕಾರಿ, ಸುನಿತಾ ಜೆ ಅವರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ನಮ್ಮ ಬಸ್ ಬಳಸುವ ಪ್ರಯಾಣಿಕರು ಹಾಗೂ ಸಂಸ್ಥೆಯ ಮಧ್ಯೆ ಸಾರ್ವಜನಿಕ ಸಂಪರ್ಕ ಇಲಾಖೆ ಹೇಗೆ ಕಾರ್ಯ ನಿರ್ವಹಿಸುತ್ತದೆ ಹಾಗೂ ಬಸ್ಸುಗಳ ಬ್ರ್ಯಾಂಡಿಂಗ್ ತಂತ್ರದ ವಿವರಗಳನ್ನು ಒದಗಿಸಿ, ಸವಿಸ್ತಾರವಾಗಿ ವಿವರಿಸಿದರು. ಅನಂತರ ಈ ಅಧ್ಯಯನಶೀಲ ತಂಡವು ಬಿಎಂಟಿಸಿಯ ವಿವಿಧ ಡಿಪೋಗಳಿಗೂ ಭೇಟಿ ನೀಡಿ, ತಾಂತ್ರಿಕ ಅಂಶಗಳನ್ನು ಅದ್ಯಯನ ಮಾಡಿತು.