ಶಿರಾ,ದೊಡ್ಬಹುಲಿಕುಂಟೆ: ಗ್ರಾಮೀಣ ಮಟ್ಟದಲ್ಲಿ ನಡೆಯುವಂತಹ ಕಾರ್ಯಕ್ರಮಗಳಿಗೆ ಗ್ರಾಮ ಪಂಚಾಯಿತಿಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ದೊಡ್ಡ ಹುಲಿಕುಂಟೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಪ್ಪೇಸ್ವಾಮಿ ಹೇಳಿದರು.
ಶಿರಾ ತಾಲೂಕಿನ ದೊಡ್ಡ ಹುಲಿಕುಂಟೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು,ಗ್ರಾಮೀಣ ಪ್ರತಿಭೆಗಳನ್ನು ಬೆಳಕಿಗೆ ತರುವಂತ ಕಾರ್ಯಕ್ರಮಗಳಾಗಬೇಕಿದೆ ಎಂದು ಹೇಳಿದರು. ಗ್ರಾಮೀಣ ಭಾಗದಲ್ಲಿ ಸುಪ್ತ ಪ್ರತಿಭೆಗಳು ಇದ್ದು ಗುರುತಿಸುವ ಕೆಲಸ ಮಾಡಬೇಕಾಗಿದೆ. ಪ್ರತಿಭಾವಂತ ಮಕ್ಕಳಿಗೆ ಎಲ್ಲಾ ವಿಚಾರದಲ್ಲಿಯೂ ಪ್ರೋತ್ಸಾಹದ ಕೊರತೆ ಎದ್ದು ಕಾಣುತ್ತಿದೆ, ಅದನ್ನು ಶಿಕ್ಷಕರು ತುಂಬುವ ಕೆಲಸವನ್ನು ಮಾಡಬೇಕು ಎಂದರು.
ಸಿಆರ್ಪಿ ರಮೇಶ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರಹೊಮ್ಮಿಸುವ ಇಂತಹ ಕಾರ್ಯಕ್ರಮಗಳು ನಮ್ಮ ಇಲಾಖೆಯಲ್ಲಿ ಆಯೋಜನೆಗೊಂಡಿರುವುದು ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಕೆಲಸವಾಗಿದೆ. ವಿದ್ಯಾರ್ಥಿಗಳು ಉತ್ತಮ ಅಂಶಗಳನ್ನು ಅಧ್ಯಯನ ಮಾಡುವ ಮೂಲಕ ಜ್ಞಾನವಂತರಾಗ ಬೇಕಿದೆ, ಸರ್ಕಾರಿ ಶಾಲೆಯಲ್ಲಿ ಖಾಸಗಿ ಶಾಲೆಗಳಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ, ಆಟ ,ಪಾಠ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿದ್ದಾರೆ.
ಇಲಾಖೆ ಮೂಲಕ ರಾಜ್ಯ ಮಟ್ಟದ ವರೆಗೆ ನಡೆಸುವ ಪ್ರತಿಭಾ ಕಾರಂಜಿ ಕಾರ್ಯಕ್ರಮ ಪ್ರತಿಯೊಬ್ಬ ಪ್ರತಿಭೆಗಳ ಪಾರದರ್ಶಕವಾಗಿದೆ, ಪ್ರತಿಯೊಬ್ಬರು ಸಹಕಾರ ಮನೋಭಾವದಿಂದ ಕೆಲಸ ಮಾಡುತ್ತಿದ್ದಾರೆ ಎಂದರು.
ನಿವೃತ್ತ ಮುಖ್ಯ ಶಿಕ್ಷಕಿ ಯೋಗ ನಂದಮ್ಮ ಮಾತನಾಡಿ, ಪ್ರತಿಭಾ ಕಾರಂಜಿಯಲ್ಲಿ ಉತ್ತಮ ಪ್ರತಿಭೆಗಳಿಗೆ ತಕ್ಕ ತೀರ್ಮಾನ ವನ್ನು ಹಂಸಕ್ಷೀರದಷ್ಟೇ ನ್ಯಾಯ ದಂತೆ ತೀರ್ಪುಗಾರರು ಫಲಿತಾಂಶ ದೊರೆಯಲಿದೆ, ಶೈಕ್ಷಣಿಕವಾಗಿ ಮಾನಸಿಕವಾಗಿ ಬೌದ್ಧಿಕವಾಗಿ ಮಕ್ಕಳಲ್ಲಿರುವ ಕೌಶಲ್ಯವನ್ನು ಅವರ ಹೊಮ್ಮಿಸುವ ಕೆಲಸವಾಗಬೇಕಿದೆ ಎಂದರು.
ಶಿಕ್ಷಕಿ ಚೈತ್ರ ಮಾತನಾಡಿ, ನಮ್ಮ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ನಗರಕ್ಕಿಂತ ಗ್ರಾಮೀಣ ಪ್ರದೇಶದ ಪ್ರತಿಭೆಗಳು ಹೆಚ್ಚಾಗಿ ಸಾಮರ್ಥ್ಯ ಹೊಂದಿದ್ದಾರೆ ಮುಗ್ದತೆ, ಶ್ರಮ, ಪರಿಶ್ರಮದಿಂದ ಪಾಲಿಸುವಂತಹ ಗುಣ ಗಳಿಗೆ ಅನುಗುಣವಾಗಿವೆ, ಸರ್ಕಾರಿ ಶಾಲೆಯ ಮಕ್ಕಳು ಯಾವ ಖಾಸಗಿ ಶಾಲೆಯ ಮಕ್ಕಳಿಗಿಂತ ಕಡಿಮೆ ಇಲ್ಲ, ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವುದು ನಮಗೆ ಹೆಮ್ಮೆಯ ಸಂಗತಿ, ಸರ್ಕಾರದ ವತಿಯಿಂದ ಇಂತಹ ಕಾರ್ಯಕ್ರಮಗಳು ನಡೆದಾಗ ಮಾತ್ರ ಮಕ್ಕಳಿಗೆ ಕಲಿಯುವ ಆಸಕ್ತಿ ಹೆಚ್ಚುತ್ತದೆ ಎಂದರು.
ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹೆಚ್,ಎಲ್. ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು.ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತರಾಜು, ಇಸಿಓ ಗೋವಿಂದಪ್ಪ, ಮುಖ್ಯ ಶಿಕ್ಷಕ ದ್ವಾರನ ಕುಂಟೆ ಲಕ್ಷ್ಮಣ್, ಗ್ರಾಮ ಪಂಚಾಯಿತಿ ಸದಸ್ಯ ರವಿ ಕುಮಾರ್, ಶಿಕ್ಷಕರಾದ ಜಯಣ್ಣ, ಚೈತ್ರ, ಕಾಂತರಾಜು, ಯಶೋದಮ್ಮ, ಮಾಳಮ್ಮ ,ಓದೋ ಮಾರಪ್ಪ, ರವಿಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ಹಲವಾರು ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು, ಅತಿಥಿ ಶಿಕ್ಷಕರು, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು, ಹಳೆಯವಿದ್ಯಾರ್ಥಿಗಳು ,ಪೋಷಕರು ಉಪಸ್ಥಿತರಿದ್ದರು.
ಇದೇ ವೇಳೆ ಕ್ಲಸ್ಟರ್ ಮಟ್ಟದ ಶಾಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳು ವಿವಿಧ ಬಗೆಯ ವೇಷ ಭೂಷಣದಲ್ಲಿ ಕಂಗೊಳಿಸಿ ತಮ್ಮ ಪ್ರತಿಭೆಗಳನ್ನು ವೇದಿಕೆ ಮೇಲೆ ಅನಾವರಣಗೊಳಿಸಿದರು. ಮಕ್ಕಳ ಸಾಂಸ್ಕತಿಕ ಕಾರ್ಯಕ್ರಮ ನೆರೆದಿದ್ದವರಿಗೆ ಮನೋರಂಜನೆ ನೀಡಿದರು.