ವಿಶಾಖಪಟ್ಟಣ: ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ಇಲ್ಲಿನ ಪ್ರತಿಷ್ಠಿತ ವೈಜಾಗ್ ಸ್ಟೀಲ್ ಕಾರ್ಖಾನೆಗೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿದರು.
ಬುಧವಾರ ಸಂಜೆಯೇ ವಿಶಾಖಪಟ್ಟಣಕ್ಕೆ ಆಗಮಿಸಿದ್ಧ ಕೇಂದ್ರ ಸಚಿವರು; ಗುರುವಾರ ಬೆಳಗ್ಗೆ ಕಾರ್ಖಾನೆಯ ಎಲ್ಲಾ ವಿಭಾಗಗಳಿಗೆ ಭೇಟಿ ನೀಡಿ ವಸ್ತುಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸಿದರು.
ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ರಾಜ್ಯ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮ, ವಿಶಾಖಪಟ್ಟಣದ ಸಂಸದ ಶ್ರೀಭರತ್, ಶಾಸಕರಾದ ಪಲ್ಲ ಶ್ರೀನಿವಾಸರಾವ್, ವಿಷ್ಣು ಕುಮಾರ್ ರಾಜು, ಉಕ್ಕು ಸಚಿವಾಲಯದ ಜಂಟಿ ಕಾರ್ಯದರ್ಶಿ ಸಂಜಯ್ ರಾಯ್, ವೈಜಾಗ್ ಸ್ಟೀಲ್ ಅಧ್ಯಕ್ಷ ವ್ಯವಸ್ಥಾಪಕ ನಿರ್ದೇಶಕ ಅತುಲ್ ಭಟ್, ಭಾರತೀಯ ಉಕ್ಕು ಪ್ರಾಧಿಕಾರದ ನಿರ್ದೇಶಕ ಕಾಶಿ ವಿಶ್ವನಾಥ ರಾಜು ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಸಚಿವ ಕುಮಾರಸ್ವಾಮಿ ಅವರು ಕಾರ್ಖಾನೆಗೆ ಭೇಟಿ ನೀಡಿದರು.
ಸಚಿವರ ಭೇಟಿಯ ಪ್ರಮುಖ ಅಂಶಗಳು:
•ಕಾರ್ಖಾನೆಯ ಕಾರ್ಯ ಚಟುವಟಿಕೆ, ವಿಸ್ತಾರ, ವಿಭಾಗವಾರು ಮಾಹಿತಿಯನ್ನು ಕಂಪನಿಯ ಅಧ್ಯಕ್ಷ ಅತುಲ್ ಭಟ್ ಅವರು ಸಚಿವರಿಗೆ ನೀಡಿದರು. ಎಲ್ಲಾ ವಿಭಾಗಗಳ ಕ್ಷಮತೆ, ಸಿಬ್ಬಂದಿ ವಿವರ, ನಿರ್ವಹಣೆ ಹಾಗೂ ಫಲಿತಾಂಶದ ಬಗ್ಗೆ ಸಚಿವರು ಮಾಹಿತಿ ಪಡೆದುಕೊಂಡರು.
•ಬಳಿಕ ಕಬ್ಬಿಣ ಅದಿರು ಸಂಸ್ಕರಣೆ ಹಾಗೂ ಉಕ್ಕು ತಯಾರಿಕಾ ವಿಭಾಗಗಳಿಗೆ ಭೇಟಿ ನೀಡಿದ ಅವರು ತಾಂತ್ರಿಕ ವಿಭಾಗದ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು.
•ಎಲ್ಲಾ ವಿಭಾಗದಲ್ಲಿಯೂ ಕಾರ್ಮಿಕರ ಜತೆ ಸಂವಾದ ನಡೆಸಿದ ಕೇಂದ್ರ ಸಚಿವರು, ಅವರ ಸಮಸ್ಯೆಗಳನ್ನು ಕೇಳಿ ತಿಳಿದುಕೊಂಡರು.
•ಆ ನಂತರ ಕೇಂದ್ರ ಸಚಿವರು ಕಾರ್ಖಾನೆಯ ಆಡಳಿತ ಕಚೇರಿಯಲ್ಲಿ ಕಾರ್ಖಾನೆಯ ಆಗುಹೋಗು, ವಹಿವಾಟು, ಲಾಭ ನಷ್ಟ, ಉತ್ಪಾದನೆ, ಕಾರ್ಯನಿರ್ವಹಣೆಯ ಕ್ಷಮತೆ, ಅದಿರು ಪೂರೈಕೆ, ಕಾರ್ಮಿಕರ ಕುರಿತಾದ ಅಂಶಗಳ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿದರು.
•ಈ ಸಭೆಯಲ್ಲಿ ಭಾಗಿಯಾದ ಲೋಕಸಭೆ ಸದಸ್ಯ ಶ್ರಿಭರತ್, ಮತ್ತಿತರೆ ಜನಪ್ರತಿನಿಧಿಗಳು ವೈಜಾಗ್ ಸ್ಟೀಲ್ ಕಂಪನಿಯನ್ನು ಉಳಿಸಲೇಬೇಕು. ಕೇಂದ್ರ ಸರ್ಕಾರವೇ ನಿರ್ವಹಣಾ ಬಂಡವಾಳ ನೀಡಲಿ ಅಥವಾ ಭಾರತೀಯ ಉಕ್ಕು ಪ್ರಾಧಿಕಾರದಲ್ಲಿ ವಿಲೀನ ಮಾಡಲಿ ಎಂದು ಸಚಿವರ ಮುಂದೆ ವಾದ ಮಂಡಿಸಿದರು.
•ಈ ಸಭೆಯ ನಂತರ ಕೇಂದ್ರ ಸಚಿವರು ವೈಜಾಗ್ ಸ್ಟೀಲ್ ಕಂಪನಿಯ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರ ಜತೆ ಪ್ರತ್ಯಕ ಸಭೆ ನಡೆಸಿದರು. ಸಭೆಯಲ್ಲಿ ಎಲ್ಲಾ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು. ಸಭೆಯಲ್ಲಿ ತಮ್ಮ ವಾದ ಮಂಡಿಸಿದ ಕಾರ್ಮಿಕ ಮುಖಂಡರು; ಯಾವುದೇ ಕಾರಣಕ್ಕೂ ಕಂಪನಿಯನ್ನು ಖಾಸಗಿಯವರಿಗೆ ಕೊಡಬಾರದು, ಸರಕಾರವೇ ನಡೆಸಬೇಕು ಎಂದು ಒತ್ತಾಯ ಮಾಡಿದರು.
•ಕಾರ್ಖಾನೆಗೆ ಅತ್ಯಗತ್ಯ ಇರುವ ಕಬ್ಬಿಣ ಅದಿರು ಗಣಿಗಳನ್ನು ಹಂಚಿಕೆ ಮಾಡಿ ಎಂದು ಕಾರ್ಮಿಕ ಮುಖಂಡರು ಸಚಿವರನ್ನು ಕೋರಿದರು. ಮುಖಂಡರ ಎಲ್ಲಾ ಬೇಡಿಕೆಗಳನ್ನು ಸಚಿವರು ಆಲಿಸಿದರು.
ಕೇಂದ್ರ ಸಚಿವರು ಹೇಳಿದ್ದು:
ಕಾರ್ಖಾನೆಗೆ ತಮ್ಮ ಭೇಟಿ, ವಿವಿಧ ಸಭೆಗಳ ನಂತರ ಅಂತಿಮವಾಗಿ ಕಾರ್ಮಿಕ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಸಚಿವರು; ಉಕ್ಕು ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ವೈಜಾಗ್ ಸ್ಟೀಲ್ ಕಂಪನಿ ಬಗ್ಗೆ ಸರಣಿ ಸಭೆಗಳನ್ನು ನಡೆಸಿದ್ದೇನೆ. ಉನ್ನತ ಅಧಿಕಾರಿಗಳು, ಸಾಲ ನೀಡಿರುವ ಬ್ಯಾಂಕರುಗಳ ಜತೆ ಮಾತುಕತೆ ನಡೆಸಿದ್ದೇನೆ. ಸಚಿವನಾಗಿ ಅಧಿಕಾರ ವಹಿಸಿಕೊಂಡ ಕೇವಲ ಒಂದು ತಿಂಗಳ ಒಳಗಾಗಿ ಕಾರ್ಖಾನೆಗೆ ಭೇಟಿ ನೀಡಿದ್ದೇನೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಕಾರ್ಯವೈಖರಿ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಪ್ರಧಾನಿಗಳ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳಾದ ಆತ್ಮನಿರ್ಭರ್ ಭಾರತ್, ಮೆಕ್ ಇನ್ ಇಂಡಿಯಾ ಮೂಲಕ ವೈಜಾಗ್ ಸ್ಟೀಲ್ ಕಂಪನಿಯನ್ನು ಪುನಶ್ಚೇತನ ಮಾಡುವ ಬಗ್ಗೆ ಪ್ರಯತ್ನ ಮಾಡಲಾಗುವುದು. ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದಿಸುವ ಗುರಿಯನ್ನು ಪ್ರಧಾನಿಗಳು ನೀಡಿದ್ದಾರೆ. ಆ ಗುರಿ ಮುಟ್ಟುವ ಹಾದಿಯಲ್ಲಿ ವೈಜಾಗ್ ಸ್ಟೀಲ್ಸ್ ನಿರ್ಣಾಯಕ ಪಾತ್ರ ವಹಿಸುತ್ತದೆ ಎನ್ನುವ ವಿಶ್ವಾಸವಿದೆ ಎಂದು ಸಚಿವರು ಹೇಳಿದರು.
ನಾನು ಈಗಷ್ಟೇ ಅಧಿಕಾರ ವಹಿಸಿಕೊಂಡಿದ್ದೇನೆ. ಸ್ವಲ್ಪ ಕಾಲಾವಕಾಶ ಕೊಡಿ. ಕಳೆದ 20 ದಿನಗಳಲ್ಲಿ 16 ದಿನ ವೈಜಾಗ್ ಸ್ಟೀಲ್ಸ್ ಗೇ ಸಮಯ ಕೊಟ್ಟು ಕೆಲಸ ಮಾಡಿದ್ದೇನೆ. ಪ್ರಧಾನಿಗಳ ಮಾರ್ಗದರ್ಶನದಲ್ಲಿ ಈ ಕಾರ್ಖಾನೆಗೆ ಕಾಯಕಲ್ಪ ನೀಡುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.