ಬೆಂಗಳೂರು: ಬೆಂಗಳೂರು ನಗರಕ್ಕೆ ನಿರಂತರವಾಗಿ ನೀರು ಸರಬರಾಜು ಮಾಡಲು ಹಾಗೂ ನಗರದ ಸ್ವಾಸ್ಥ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಜಲಮಂಡಳಿಯ ವಾಟರ್ಮ್ಯಾನ್, ಸ್ಯಾನಿಟರಿ ವರ್ಕರ್, ಜೆಟ್ಟಿ ಡ್ರೈವರ್ ಸೇರಿದಂತೆ ಎಲ್ಲಾ ಸಿಬ್ಬಂದಿಗಳಿಗೂ ಮಂಡಳಿ ವತಿಯಿಂದ ಮೇ ತಿಂಗಳಲ್ಲಿ ಉಚಿತವಾಗಿ ಆರೋಗ್ಯ ತಪಾಸಣೆ ನಡೆಸಲಾಗುವುದು ಎಂದು ಜಲಮಂಡಳಿ ಅಧ್ಯಕ್ಷರಾದ ಡಾ. ವಿ ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ಇಂದು ನಗರದ ಹೆಚ್ ಬಿ ಆರ್ ಜಲಮಂಡಳಿ ಕಚೇರಿಯಲ್ಲಿ ಕಾರ್ಮಿಕ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಆಲ್ಟಿಯಸ್ ಮತ್ತು ಲಕ್ಷ್ಮಿ ಗ್ರೂಪ್ ಆಸ್ಪತ್ರೆ ಅವರ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬೆಂಗಳೂರು ನಗರದ ಸ್ವಚ್ಚತೆಯನ್ನು ಕಾಪಾಡುವಲ್ಲಿ ಜಲಮಂಡಳಿಯ ವಾಟರ್ಮ್ಯಾನ್, ಸ್ಯಾನಿಟರಿ ವರ್ಕರ್, ಜೆಟ್ಟಿ ಡ್ರೈವರ್ಗಳ ಪಾತ್ರ ಬಹಳ ಮುಖ್ಯ. ಅವರುಗಳು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾರ್ಮಿಕರು ಹಾಗೂ ಸಿಬ್ಬಂದಿಗಳೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ಹೊಂದಬೇಕು. ದುಶ್ಚಟಗಳಿಂದ ದೂರವಿದ್ದು ಉತ್ತಮ ಆರೋಗ್ಯದ ಕಡೆಗೆ ಗಮನ ನೀಡಬೇಕು ಎಂದು ಕರೆ ನೀಡಿದರು.
ಕಾರ್ಮಿಕರು ಹಾಗೂ ಸಿಬ್ಬಂದಿಗಳ ಆರೋಗ್ಯದ ಬಗ್ಗೆ ಮಂಡಳಿ ವಿಶೇಷ ಕಾಳಜಿಯನ್ನು ಹೊಂದಿದೆ. ಮಂಡಳಿಯ ಕಾರ್ಮಿಕರ ಆರೋಗ್ಯವನ್ನು ಸುಸ್ಥಿಯಲ್ಲಿಡುವ ದೃಷ್ಟಿಯಿಂದ ಪ್ರತಿವರ್ಷ ಮೇ ತಿಂಗಳಲ್ಲಿ ಉಚಿತ ಆರೋಗ್ಯ ತಪಾಸಣೆಯನ್ನು ನಡೆಸಲಾಗುವುದು ಎಂದು ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ಈ ಸಂದರ್ಭದಲ್ಲಿ ನಿರ್ವಹಣಾ ವಿಭಾಗದ ಮುಖ್ಯ ಅಭಿಯಂತರರಾದ ಕುಮಾರ್ ನಾಯ್ಕ್, ಎಸ್ ಈ ದಲಾಯತ್, ಕಾರ್ಯನಿರ್ವಾಹಕ ಇಂಜಿನಿಯರ್ ಚನ್ನಬಸವರಾಜು ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
300 ಕ್ಕೂ ಹೆಚ್ಚು ಸಿಬ್ಬಂದಿ ಗಳು ಹಾಗೂ ಅವರ ಕುಟುಂಬದ ಸದಸ್ಯರು ಆರೋಗ್ಯ ಶಿಬಿರದ ಲಾಭ ಪಡೆದುಕೊಂಡರು.