ತುಮಕೂರು, ಮಧುಗಿರಿ: ಸಚಿವ ರಾಜಣ್ಣ ಅವರೇ ನೀವೂ ಹಿರಿಯರು ಗೌರವವಿದೆ, ನಿಮ್ಮ ಹಿರಿತನಕ್ಕೆ ನಾನು ಬೆಲೆ ಕೊಡುತ್ತೇನೆ. ಆದರೆ ಹಿಟ್ಲರ್ ಕಾಲದ ರಾಜಕಾರಣ ಮಾಡಬೇಡಿ, ಇಲ್ಲಿ ಯಾರು ಕೂಡಾ ನಿಮ್ಮ ದರ್ಪಕ್ಕೆ, ಧಮ್ಕಿಗೆ, ಟಾರ್ಗೆಟ್ ರಾಜಕಾರಣಕ್ಕೆ ಕೈ ಕಟ್ಟಿಕೊಂಡು ಕೂರಲ್ಲ ರಾಜಣ್ಣ ವಿರುದ್ಧ ಅವರು ವಾಗ್ದಾಳಿ ನಡೆಸಿದರು.
ತುಮಕೂರಿನ ಮಧುಗಿರಿಯಲ್ಲಿ ಆಯೋಜಿಸಲಾಗಿದ್ದ ಮೂರನೇ ದಿನದ ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಸಭೆಯನ್ನ ಉದ್ದೇಶಿಸಿ ಮಾತನಾಡಿದರು.
ತಾಲ್ಲೂಕಿನಲ್ಲಿ ಟಾರ್ಗೆಟ್ ರಾಜಕಾರಣ ಮಾಡುತ್ತಿದ್ದಾರೆ. ಕೃಷಿ ಇಲಾಖೆಯಲ್ಲಿ ಡಿ ಗ್ರೂಪ್ ನೌಕರ ನರಸಿಂಹಮೂರ್ತಿ ಜೆಡಿಎಸ್ ಪಕ್ಷದ ಅಭಿಮಾನಿಯಾಗಿದ್ದು ತಪ್ಪಾ.? ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡ ಅನ್ನೋ ಕಾರಣಕ್ಕೆ ಅಮಾಯಕ ನನ್ನ ಟಾರ್ಗೆಟ್ ಮಾಡಿ ಬಲಿಪಶು ಮಾಡಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆ ಅಭಿಮಾನಿ ಪಕ್ಷದ ಮೇಲೆ ಅಭಿಮಾನ ಇಡುವುದು ತಪ್ಪಾ.? ಅಂತಹ ಮುಗ್ಧ ವ್ಯಕ್ತಿಯ ಮೇಲೆ ಟಾರ್ಗೆಟ್ ಮಾಡಿ ಕಿತ್ತು ಬಿಸಾಕಿದ್ದಾರೆ. ಇಲ್ಲಿರುವ ಶಾಸಕರು ಹಿರಿಯರಿದ್ದಾರೆ. ಅವರು ಹಿರಿಯ ತನಕ್ಕೆ ನಾನು ಬೆಲೆ ಕೊಡುತ್ತೇನೆ. ಈ ರೀತಿ ದಬ್ಬಾಳಿಕೆ ದೌರ್ಜನ್ಯ, ಅಹಂಕಾರ ಎಷ್ಟು ದಿನ ಮಾಡ್ತೀರಿ ಎಂದು ಕಿಡಿಕಾರಿದರು.
ಪ್ರಜಾಪ್ರಭುತ್ವದ ಚುನಾವಣೆಯಲ್ಲಿ ಎಂತ ಬಲಿಷ್ಠ ನಾಯಕರನ್ನು ಸೋಲಿಸುವ ಹಾಗೂ ಉಲ್ಟಾ ಸೀದಾ ಮಾಡುವ ಶಕ್ತಿ, ಸಾಮರ್ಥ್ಯ ತಾಲ್ಲೂಕಿನ ಜನತೆಗೆ ಇದೆ. ಅಧಿಕಾರ ಶಾಶ್ವತ ಅಲ್ಲ ಕಾಲ ಚಕ್ರ ಬದಲಾಗುತ್ತೆ ಎಂದು ಹೀಗೆ ಇರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
2008ರಲ್ಲಿ ಅನಿತಾ ಕುಮಾರಸ್ವಾಮಿ ಅವರು ಮಧುಗಿರಿ ಶಾಸಕರಾಗಿದ್ದಾಗ ಕ್ಷೇತ್ರದಲ್ಲಿ ಯಾವುದೇ ಸಂಘರ್ಷಕ್ಕೆ ಎಡೆ ಮಾಡಿಕೊಳ್ಳದೆ ಆರೋಗ್ಯಕರವಾಗಿ ಅಧಿಕಾರ ನಡೆಸಿದರು. ಆದರೆ ಮಧುಗಿರಿಗೆ ಕ್ಷೇತ್ರದಲ್ಲಿ ಈಗ ಪರಿಸ್ಥಿತಿ ಏನಾಗಿದೆ ಎಂದರು.
ಮಾಜಿ ಶಾಸಕ ವೀರಭದ್ರಯ್ಯ ಅವರು ಮೂರು ಬಾರೀ ಚುನಾವಣೆಯಲ್ಲಿ ಒಂದು ಬಾರೀ ಗೆದ್ದಿದ್ದಾರೆ. ಆದರೆ ರಾಜಕೀಯ ಷಡ್ಯಂತರದಲ್ಲಿ ನನ್ನ ಬಲಿಪಶು ಮಾಡಿದ್ದಾರೆ. ನಾನು ಸೋತಿದೀನಿ ಅನ್ನೋ ಕಾರಣಕ್ಕೆ ಮನೆಯಲ್ಲಿ ಕೂತ್ತಿಲ್ಲ, ಪಕ್ಷ ಸಂಘಟನೆ ಮಾಡ್ಬೇಕು ಅಂತ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ ಎಂದರು.
ದಯವಿಟ್ಟು ಛಲ ಕಳೆದುಕೊಳ್ಳಬೇಡಿ, ಈ ಪಕ್ಷವನ್ನ ಕಟ್ಟಿ ಬೆಳೆಸಿದಂತಹ ನಿಷ್ಠಾವಂತ ಕಾರ್ಯಕರ್ತರ ಪ್ರಶ್ನೆ ಇದು. ಅವರಿಗೆ ನಾವು ರಕ್ಷಣೆ ಕೊಡಬೇಕು. ಅವರ ಬೆನ್ನೆಲುಬಾಗಿ ನಿಲ್ಲಬೇಕು. ಏನು ತಪ್ಪೇ ಮಾಡದಿರುವ ಅಮಾಯಕರ ಮೇಲೆ ಈ ರೀತಿ ದೌರ್ಜನ್ಯ ಆದಂತ ಸಂದರ್ಭದಲ್ಲಿ ನಾವು ನಿಮ್ಮ ಜೊತೆಗೆ ಇದ್ದೇವೆ ಎಂದು ಧೈರ್ಯ ತುಂಬಿದರು.
ಯಾವುದೇ ಕಾರಣಕ್ಕೂ ಕಾರ್ಯಕರ್ತರನ್ನ ಬಿಟ್ಟುಕೊಡುವ ಪ್ರಶ್ನೆ ಇಲ್ಲ. ನೀವು ಯಾರು ಕೂಡ ಆತಂಕಕ್ಕೆ ಒಳಗಾಗಬೇಡಿ ನಾನಿದ್ದೇನೆ, ಪಕ್ಷ ಇದೆ ನಾನು ರಾಜ್ಯ ಪ್ರವಾಸ ಮಾಡುತ್ತಿರುವ ಉದ್ದೇಶವೇ ನಿಮ್ಮ ಜೊತೆ ನಾನಿದ್ದೇನೆ ಎಂದು ತಿಳಿಸುವುದಕ್ಕೆ ನಿಮ್ಮ ಸಂಬಂಧ ಪ್ರೀತಿ ಸಹಕಾರ ನನ್ನ ಮೇಲೆ ಇರಲಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ, ಮಾಜಿ ಶಾಸಕ ವೀರಭದ್ರಪ್ಪ, ತಿಮ್ಮರಾಯಪ್ಪ , ಜಿಲ್ಲಾಧ್ಯಕ್ಷರಾದ ಆರ್.ಸಿ ಆಂಜಿನಪ್ಪ, ತಾಲ್ಲೂಕು ಅಧ್ಯಕ್ಷರಾದ ಬಸವರಾಜ್ , ಮುಖಂಡರಾದ ಗೋವಿಂದರಾಜ್ , ಕೊಂಡವಾಡಿ ಚಂದ್ರಶೇಖರ್ ಸೇರಿದಂತೆ ಪ್ರಮುಖ ಮುಖಂಡರು ಹಾಗೂ ಪಧಾದಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.