ಬೆಂಗಳೂರು: ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಜೀವನ ಸಾಧನೆಗಳು ಪುಸ್ತಕ ರೂಪದಲ್ಲಿ ಬರಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ನಗರದ ಕುವೆಂಪು ಕಲಾಕ್ಷೇತ್ರದಲ್ಲಿ ಭಾನುವಾರ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠ ಹಮ್ಮಿಕೊಂಡಿದ್ದ ಎಸ್.ಆರ್.ಉಮಾಶಂಕರ್ ಅಭಿನಂದನೆ ಹಾಗೂ ಗೌರವ ಗ್ರಂಥ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಕುರಿತು ಪುಸ್ತಕಗಳು ಬಂದರೆ ಮುಂದಿನ ಪೀಳಿಗೆಗೆ ಪ್ರೇರಣೆ ನೀಡಲಿದೆ. ಇಂತಹ ಸಾಧಕರ ವತ್ರಕ ಗ್ರಂಥಾಲಯದಲ್ಲಿ ಇರಬೇಕು ಎಂದು ತಿಳಿಸಿದರು.
ಉತ್ತಮ ಆಡಳಿತ ನಡೆಸಿದ ಅಧಿಕಾರಿಗಳನ್ನು ಜನನು ಸದಾ ನೆನಪಿನಲ್ಲಿ ಇಟ್ಟುಕೊಂಡಿರುತ್ತಾರೆ. ಯಾವಾಗಲೂ ನೆನೆಯುತ್ತಾರೆ. ಅಂತಹ ಸಾಲಿನಲ್ಲಿ ಉಮಾಶಂಕರ್ ಸೇರುತ್ತಾರೆ. ಸಾರಿಗೆ ಇಲಾಖೆಯಲ್ಲಿ ಅಧಿಕಾರಿಯಾಗಿ ಉತ್ತಮ ಕೆಲಸ ಮಾಡಿದ್ದಾರೆ. ದಕ್ಷತೆಗೆ ಪ್ರಾಮಾಣಿಕತೆ ಹೆಸರುವಾಸಿ ಆಗಿದ್ದಾರೆ ಎಂದು ಹೇಳಿದರು.
ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಮಾತ ನಾಡಿ, ಅಧಿಕಾರದಲ್ಲಿರುವವರು ಈ ಪೀಡೆ ಹೋಗಲಿ ಎಂಬ ಮರುಕ ಜನರಲ್ಲಿ ಇರಬಾರದು. ಅಯ್ಯೋ ಆಡಳಿತದಿಂದ ಹೋದರಲ್ಲಪ್ಪ ಅನ್ನುವಂತಿರಬೇಕು. ಅಂತ ಪ್ರೀತಿಗೆ ಉಮಾ ಶಂಕರ್ ಭಾಜನರಾಗಿದ್ದಾರೆ ಎಂದರು. ಸಂಸದ ಡಾ.ಸಿ.ಎನ್.ಮಂಜುನಾಥ್ ಮಾತನಾಡಿ, ಸನ್ಮಾನಗಳು ಮೌನವಾಗಿರಬೇಕು. ಸಾಧನೆ ಸದ್ದು ಮಾಡಬೇಕು. ಸಾಧನೆ ಮಾಡಿದ ವ್ಯಕ್ತಿಯನ್ನು ಶೋಧನೆ ಮಾಡದೆ ಅಭಿನಂದನೆ ಮಾಡಬೇಕು ಎಂದು ತಿಳಿಸಿದರು.
ಉಮಾಶಂಕರ್ ಅವರ ಐಎಎಸ್ ಬ್ಯಾಚ್ ಮೆಂಟ್ ಕೂಡ ಆಗಿರುವ ಬಿಬಿಎಂಪಿ ಆಡಳಿತಾಧಿ ಕಾರಿ ತುಷಾರ್ ಗಿರಿನಾಥ್ ಮಾತನಾಡಿ, ಐಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾದ ಕರ್ನಾಟಕದ ಮೊದಲ ಒಕ್ಕಲಿಗ ಐಎಎಸ್ ಅಧಿಕಾರಿಯಾಗಿದ್ದಾರೆ. ನಾನು ಅವರು ಒಂದೆ ಬ್ಯಾಚ್ ಮೆಂಟ್ ಎಂದು ಹೇಳಲು ಹೆಮ್ಮೆ ಆಗುತ್ತದೆ. ಹಲವು ಆಯಾ ಕಟ್ಟಿನ ಸ್ಥಳಗಳಲ್ಲಿ ಕೆಲಸ ಮಾಡುವ ಅವಕಾಶ ಸಿಗಬೇಕಾ ಗಿತ್ತು. ಅಂತಹ ಅವಕಾಶ ಕೈತಪ್ಪಿ ಹೋದಾಗಲೂ ಬೇಸರ ಮಾಡಿಕೊಳ್ಳದೆ ದಕ್ಷತೆಯಿಂದ ಕೆಲಸ ಮಾಡಿ ಹೆಸರುವಾಸಿ ಆಗಿದ್ದಾರೆ ಎಂದರು.
ಆದಿಚುಂಚನಗಿರಿ ಮಠದ ನಿರ್ಮಲಾನಂದ ನಾಥ ಸ್ವಾಮೀಜಿ ಮಾತನಾಡಿ, ಆಡಳಿತ ಅವಧಿಯಲ್ಲಿ ಉಮಾಶಂಕರ್ ಮಾಡಿದ ಜನಸೇವೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಸಕ ದರ್ಶನ್ ಪುಟ್ಟಣ್ಣಯ್ಯ, ಹಿರಿಯ ಪೊಲೀಸ್ ಅಧಿಕಾರಿ ಸಲೀಂ, ಜಯರಾಂ ರಾಯಪುರ, ಕೆ.ಎ.ದಯಾನಂದ, ನಿಶ್ಚಲಾನಂದ ನಾಥ ಸ್ವಾಮೀಜಿ, ಆಯೋಜಕರಾದ ನೀಲಕಂಠೇಗೌಡ, ಇರದಂತೆ ಸಮಿತಿಯ ಅನೇಕ ಪದಾಧಿಕಾರಿಗಳು ಸಮಾಜದ ಬಾಂಧವರು ಉಪಸ್ಥಿತರಿದ್ದರು.