ರಾಮನಗರ: ಚುನಾವಣೆಗೆ ನಿಲ್ಲುವ ಸಮಯ ಬಂದರೆ ರಾಮನಗರದಲ್ಲಿಯೇ ನನ್ನ ಮುಂದಿನ ಚುನಾವಣೆ. ಯಾವುದೇ ಕಾರಣಕ್ಕೂ ನಾನು ಜಿಲ್ಲೆಯಿಂದ ಪಲಾಯನ ಮಾಡುವುದಿಲ್ಲ ಎಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ದೃಢ ಸಂಕಲ್ಪವನ್ನು ವ್ಯಕ್ತಪಡಿಸಿದರು.
ಇದು ನಮ್ಮ ಸ್ವ ಕ್ಷೇತ್ರ, ನೀವು ಬೆಳೆಸಿದ ಮನೆ ಮಕ್ಕಳು ನಾವು. ನಮ್ಮನ್ನ ಪ್ರೀತಿಯಿಂದ ಅರಸಿದ್ದೀರಿ, ಬೆಳೆಸಿದ್ದೀರಿ. ಯಾವುದೇ ಕಾರಣಕ್ಕೂ ಜಿಲ್ಲೆಯಿಂದ ಪಲಾಯನ ಮಾಡುವುದಿಲ್ಲ. ಸೋಲು ಗೆಲುವು ಸರ್ವೇ ಸಾಮಾನ್ಯ ನನ್ನ ಮೂರು ಸೋಲುಗಳು ನನಗೆ ರಾಜಕೀಯವಾಗಿ ಪರಿಪಕ್ವತೆಯನ್ನು ಕಲಿಸಿವೆ. ಈ ಸೋಲುಗಳಿಂದ ಕುಗ್ಗದೆ ಮತ್ತೆ ಅವಕಾಶ ಸಿಕ್ಕರೆ ರಾಮನಗರದಿಂದಲೇ ಸ್ವರ್ಧೆ ಮಾಡುವುದಾಗಿ ತಿಳಿಸಿದರು.
ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಆರನೇ ದಿನದ ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಸಭೆಯನ್ನ ಉದ್ದೇಶಿಸಿ ಅವರು ಮಾತನಾಡಿದರು.
ಕುಮಾರಸ್ವಾಮಿ ಅವರಿಗೆ ದೆಹಲಿಯಲ್ಲಿ ಕೆಲಸವಿಲ್ಲ ರಾಜ್ಯಕ್ಕೆ ಬರ್ತಾರೆಂಬ ಡಿ.ಕೆ.ಸುರೇಶ್ ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು; ಹೌದಪ್ಪ.. ಮಾವು ಬೆಳೆಗಾರರಿಗೆ ಬೆಂಬಲ ಬೆಲೆ ಕೊಡಿಸಿದ್ದು ಡಿ.ಕೆ ಸುರೇಶ್ ಅವರ ಇಲ್ಲ ಶಿವಕುಮಾರ್ ಕೊಡಿಸಿದ್ರಾ.? ಎಂದು ಡಿ.ಕೆ ಬ್ರದರ್ಸ್ ಗೆ ಟಾಂಗ್ ನೀಡಿದರು.
ಮಾವಿನ ಹಣ್ಣಿನ ಬೆಲೆ ಕುಸಿತದಿಂದ ಸಂಕಷ್ಟದಲ್ಲಿದ್ದ ರೈತರಿಗೆ ಕುಮಾರಣ್ಣ ನೆರವಿಗೆ ಬಂದಿದ್ದಾರೆ..ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದ ಕುಮಾರಣ್ಣನ ಮನವಿಗೆ ಸ್ಪಂದಿಸಿ ಕೇಂದ್ರ ಸರ್ಕಾರ ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆಯಡಿ ಬೆಂಬಲ ಬೆಲೆ ಘೋಷಿಸಿದೆ ಎಂದರು.
ಹೆಸರು ಬದಲಾವಣೆ ಮಾಡಿದ್ರೆ ಅಭಿವೃದ್ಧಿ ಆಗಲ್ಲ, ಕ್ಷೇತ್ರವನ್ನ ಅಭಿವೃದ್ಧಿ ಮಾಡಬೇಕು
ರಾಮನಗರ ಜಿಲ್ಲೆ ಹೆಸರು ಬದಲಾವಣೆ ವಿಚಾರ ; ಹೆಸರು ಬದಲಾವಣೆ ಮಾಡುವುದರಿಂದ ಅಭಿವೃದ್ಧಿ ಆಗಲ್ಲ. ಕೆಂಗಲ್ ಹನುಮಂತಯ್ಯ ಅವರ ಕಟ್ಟಿದ ರಾಮನಗರ ಹೆಸರನ್ನು ಕಾಂಗ್ರೆಸ್ ಅಳಿಸಿದೆ. ಆದರೆ ರಾಮನಗರ ಜನರ
ಹೃದಯದಲ್ಲಿ ರಾಮನಗರ ಶಾಶ್ವತವಾಗಿ ಉಳಿದಿದೆ ಮಿಸ್ಟರ್ ಡಿ.ಕೆ ಶಿವಕುಮಾರ್ ಎಂದು ಟಾಂಗ್ ನೀಡಿದರು.
ಒಂದು ರಸ್ತೆಗೆ, ಸರ್ಕಾರಿ ಶಾಲೆ ದುರಸ್ತಿಗೆ ಹಣವಿಲ್ಲ ಈ ಸರ್ಕಾರದಲ್ಲಿ. ಆದರೆ ಮಧ್ಯವರ್ತಿಗಳ ಮೂಲಕ ಹೋದ್ರೆ ಎಲ್ಲವೂ ಸಿಗುತ್ತೆ. ಆ ಸ್ಥಿತಿ ಇದೇ ಕಾಂಗ್ರೆಸ್ ಪಕ್ಷದಲ್ಲಿ. ವಸತಿ ಇಲಾಖೆಯಲ್ಲಿ ಮನೆ ಪಡೆಯಬೇಕಾದ್ರೆ ಗುತ್ತಿಗೆದಾರರ ಮೂಲಕ ಹೋಗುವ ಪರಿಸ್ಥಿತಿ ನಿರ್ಮಾವಾಗಿದೆ ಎಂದು ಆರೋಪಿಸಿದರು.
ಕಾವೇರಿಗೆ ಆರತಿ ಸರ್ಕಾರ ಹಣ ಖರ್ಚು ಮಾಡ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು; ಕಾವೇರಿಗೆ ಆರತಿ ಮಾಡುತ್ತಿರುವುದು ಸ್ವಾಗತ ಮಾಡುತ್ತೇನೆ, ಅದು ನಮ್ಮ ಸಂಸ್ಕೃತಿ. ಆದರೆ ಅದಕ್ಕೆ ಕೋಟಿ, ಕೋಟಿ ಹಣ ಖರ್ಚು ಮಾಡುವುದರಿಂದ ಜನ ಸಾಮಾನ್ಯರಿಗೆ ಕಷ್ಟ. ಈ ಹಣವನ್ನ ಕಾಂಗ್ರೆಸ್ ಕೊಡುತ್ತಾ.? ಜನರ ಹಣದಿಂದ ಖರ್ಚು ಮಾಡ್ತಾರೆ ಎಂದು ಕಿಡಿಕಾರಿದರು.
ಪಕ್ಷ ನಿಮ್ಮನ್ನು ಗುರುತಿಸಲಿದೆ. ಕಾರ್ಯಕರ್ತರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಈ ರಾಜ್ಯ ಪ್ರವಾಸ ಹಮ್ಮಿಕೊಂಡಿರುವುದೇ ಜನರೊಂದಿಗೆ ಜನತಾದಳ ಎಂಬ ಅಭಿಯಾನದ ಭಾಗವಾಗಿ ಪ್ರತಿಯೊಬ್ಬ ಕಾರ್ಯಕರ್ತರನ್ನು ಭೇಟಿಯಾಗಿ ಪಕ್ಷವನ್ನು ಬಲಿಷ್ಠಗೊಳಿಸುವ ಗುರಿಯನ್ನು ಹೊತ್ತಿ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರು ಹಾಗೂ ಜಿಲ್ಲಾಧ್ಯಕ್ಷರಾದ ಎ. ಮಂಜುನಾಥ್ ಅವರು, ತಾಲ್ಲೂಕು ಅಧ್ಯಕ್ಷರಾದ ಸಬ್ಬಕೆರೆ ಶಿವಲಿಂಗಪ್ಪ ಅವರು, ನಗರಸಭಾ ಸದಸ್ಯರಾದ ಮಂಜುನಾಥ್ ಅವರು, ಮಾಜಿ ನಗರಸಭೆ ಸದಸ್ಯರಾದ ರವಿ, ಮುಖಂಡರುಗಳಾದ ಪ್ರಕಾಶ್, ಎಸ್ ಸಿ ರಾಜಣ್ಣ, ಲಕ್ಷ್ಮೀ ಗೂಳಿಗೌಡ, ಹಾರೋಹಳ್ಳಿ ರಾಮಣ್ಣ, ಕೆಂಪಣ್ಣ, ವಾಸು, ದೊರೆ, ಉಮೇಶ್ , ಅಪ್ಪಿ, ಶಿವಕುಮಾರ್, ಕೃಷ್ಣಮೂರ್ತಿ, ಬಿಡದಿ ಶೇಷಪ್ಪ, ಮಂಜುಳಾ ವೆಂಕಟೇಶ ಹಾಗೂ ಅಣ್ಣತಮ್ಮಂದಿರು, ತಾಯಂದಿರು, ಕಾರ್ಯಕರ್ತರು ಉಪಸ್ಥಿತರಿದ್ದರು.