ಬೆಂಗಳೂರು: ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಮಾನ್ಯ ಬಿಬಿಎಂಪಿ ಆಡಳಿತಗಾರರಾದ ಎಸ್.ಆರ್ ಉಮಾಶಂಕರ್ ರವರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ಹಾಗೂ ವಿವಿಧ ಇಲಾಖೆಗಳ ಕಾಮಗಾರಿಗಳ ಸಮನ್ವಯಕ್ಕೆ ಸಂಬಂಧಿಸಿದಂತೆ ಮಾನ್ಯ ಆಡಳಿತಗಾರರಾದ ಶ್ರೀ ಎಸ್.ಆರ್ ಉಮಾಶಂಕರ್ ರವರು ಇಂದು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹೆಬ್ಬಾಳ ಜಂಕ್ಷನ ನಲ್ಲಿ ಕಾಂಪ್ರಹೆನ್ಸೀವ್ ಇಂಟರ್ ಮೋಡಲ್ ಕನೆಕ್ಟಿವಿಟಿ ಅಭಿವೃದ್ಧಿ ಪಡಿಸಲು ಯೋಜನೆ
ನಗರದ ಹೆಬ್ಬಾಳ ಜಂಕ್ಷನ್ ನಲ್ಲಿ ಕಾಂಪ್ರಹೆನ್ಸೀವ್ ಇಂಟರ್ ಮೋಡಲ್ ಕನೆಕ್ಟಿವಿಟಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲು ಆಡಳಿತಗಾರರಾದ ಎಸ್.ಆರ್ ಉಮಾಶಂಕರ್ ರವರು ಅಧಿಕಾರಿಗಳಿಗಳಿಗೆ ಸೂಚನೆ ನೀಡಿದರು.
ಹೆಬ್ಬಾಳ ಜಂಕ್ಷನ್ ನಲ್ಲಿ ಬಿಡಿಎಯಿಂದ ಮೊದಲನೇ ಹಂತದ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದೆ. ಅದಲ್ಲದೆ ಪ್ರಸ್ತಾಪಿತ ಮೇಲ್ಸೇತುವೆ ಹಾಗೂ ಕೆಳಸೇತುವೆ ಕಾಮಗಾರಿ, ಮೆಟ್ರೋ ಕಾಮಗಾರಿ, ಕೆ.ರೈಡ್ ನಿಂದ ಸಬ್ ಅರ್ಬನ್ ರೈಲ್ವೆ ಕಾಮಗಾರಿ, ಪಾಲಿಕೆಯಿಂದ ಟನಲ್ ರಸ್ತೆ ಸೇರಿದಂತೆ ಇನ್ನಿತರೆ ಕಾಮಗಾರಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಪ್ರಹೆನ್ಸೀವ್ ಇಂಟರ್ ಮೋಡಲ್ ಕನೆಕ್ಟಿವಿಟಿ ಅಭಿವೃದ್ಧಿ ಪಡಿಸಲು ಸೂಚನೆ ನೀಡಿದರು.
ಹೆಬ್ಬಾಳ ಜಂಕ್ಷನ್ ನಲ್ಲಿ ಸಂಚಾರಿ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ನಾವು ಈಗಲೇ ಉತ್ತಮ ರೀತಿಯಲ್ಲಿ ಮಾಸ್ಟರ್ ಪ್ಲಾನ್ ಸಿದ್ದಪಡಿಸಿ, ನಾಗರೀಕರ ಓಡಾಡಕ್ಕೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಬಿಡಿಎ ವತಿಯಿಂದ ಈಗಾಗಲೇ ಕೆ.ಆರ್ ಪುರಂ ಕಡೆಯಿಂದ ನಗರದೊಳಗೆ ಹೋಗುವ ಮೇಲ್ಸೇತುವೆ ಕಾಮಗಾರಿ ಪ್ರಗತಿಯಲ್ಲಿದ್ದು, ಸಂಚಾರಿ ಪೊಲೀಸ್ ವಿಭಾಗದಿಂದ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಸಂಪೂರ್ಣ ಸಹಕಾರ ನೀಡಲಾಗುವುದು. ಮಾರ್ಚ್ ಅಂತ್ಯದೊಳಗೆ ಮೇಲ್ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೆಬ್ಬಾಳ ಜಂಕ್ಷನ್ ನಲ್ಲಿ ರಸ್ತೆ ಮೇಲ್ಮೈ ಪದರ ಹಾಳಾಗಿದ್ದು, ರಸ್ತೆಯನ್ನು ಮಿಲ್ಲಿಂಗ್ ಮಾಡಿ ಕೂಡಲೆ ಡಾಂಬರೀಕರಣ ಮಾಡಬೇಕು. ಮೆಟ್ರೋ ಕಾಮಗಾರಿ ಪ್ರಗತಿಯಲ್ಲಿದ್ದು, ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಸಂಚಾರಿಯುಕ್ತ ಬೆಂಗಳೂರು ಅಡಿ ಹೆಬ್ಬಾಳದಿಂದ ಹೆಣ್ಣೂರು ವರೆಗೆ ರಾಜಕಾಲುವೆ ಪಕ್ಕದಲ್ಲಿ ರಸ್ತೆ ಮಾಡಲು ಎಲ್ಲಾ ರೀತಿಯ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದು, ಅದನ್ನು ತ್ವರಿತವಾಗಿ ಮಾಡಿದರೆ ಹೆಬ್ಬಾಳ ಜಂಕ್ಷನ್ ನಲ್ಲಾಗುವ ಸಂಚಾರ ದಟ್ಟಣೆ ಕಡಿಮೆ ಆಗಲಿದೆ ಎಂದು ಹೇಳಿದರು.
ಕೆಂಪಾಪುರ ಜಂಕ್ಷನ್ ಬಳಿ ಮೆಟ್ರೋ ಕಾಮಗಾರಿ ಪರಿಶೀಲನೆ
ಕೆಂಪಾಪುರ ಜಂಕ್ಷನ್ ಬಳಿ ಮೆಟ್ರೋ ನಿಲ್ದಾಣ ಕಾಮಗಾರಿಗಾಗಿ ಪ್ರಮುಖ ರಸ್ತೆಯಲ್ಲಿ ಎರಡೂ ಬದಿ ತಲಾ 3 ಪಥಗಳ ವ್ಯವಸ್ಥೆ ಮಾಡಿಕೊಂಡು, ಹೊರ ವರ್ತುಲ ರಸ್ತೆಯ ಎರಡೂ ಸರ್ವೀಸ್ ರಸ್ತೆಗಳಲ್ಲಿ ಸಂಚಾರವನ್ನು ನಿಲ್ಲಿಸಲಾಗುವುದು ಎಂದು ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದರು. ಈ ವೇಳೆ ಆಡಳಿತಗಾರರು ಪ್ರತಿಕ್ರಿಯಿಸಿ, ರಾತ್ರಿ ವೇಳೆ ಸಂಚಾರ ದಟ್ಟಣೆ ಕಡಿಮೆಯಿರಲಿದ್ದು, ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸಬೇಕು. ಅಲ್ಲದೇ ನಾಗರೀಕರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಬಸ್ ತಂಗುದಾಣದ ವ್ಯವಸ್ಥೆ ಮಾಡಬೇಕೆಂದು ಸೂಚನೆ ನೀಡಿದರು.
ಹೈಡೆನ್ಸಿಟಿ ಕಾರಿಡಾರ್ ಕಾಮಗಾರಿ ಪರಿಶೀಲನೆ:
ಗೊರಗುಂಟೆ ಪಾಳ್ಯದಿಂದ ಕೆ.ಆರ್ ಪುರಂ ವರೆಗೆ ಹೈಡೆನ್ಸಿಟಿ ಕಾರಿಡಾರ್ ನಿರ್ಮಾಣ ಮಾಡಲಾಗುತ್ತಿದೆ. ಈ ಸಂಬಂಧ ವೀರಣ್ಣ ಪಾಳ್ಯ ಜಂಕ್ಷನ್ ಬಳಿ ಕಾಮಗಾರಿ ಪ್ರಗತಿಯಲ್ಲಿದ್ದು, ಈ ಕಾಮಗಾರಿಯಲ್ಲಿ ಸೈಡ್ ಡ್ರೈನ್ ಗಳ ಅಭಿವೃದ್ಧಿ, ಸರ್ವೀಸ್ ರಸ್ತೆ ದುರಸ್ತಿ ಹಾಗೂ ಡಾಂಬರೀಕರಣ, ಪಾದಚಾರಿ ಮಾರ್ಗ ದುರಸ್ತಿ, ರಸ್ತೆಯಲ್ಲಿ ಬೀಳುವ ನೀರು ಸೈಡ್ ಡ್ರೈನ್ ಗಳಿಗೆ ಸರಾಗವಾಗಿ ಹರಿದು ಹೋಗುವ ಸಲುವಾಗಿ ವರ್ಟಿಕಲ್ ಗ್ರೇಟಿಂಗ್ಸ್ ಗಳು ಅಳವಡಿಕೆ ಕಾರ್ಯವನ್ನು ಪರಿಶೀಲಿಸಿ, ನಾಗರೀಕರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಕಾಮಗಾರಿಯನ್ನು ನಡೆಸಬೇಕೆಂದು ತಿಳಿಸಿದರು.
ನಾಗವಾರ ಜಂಕ್ಷನ್ ನಲ್ಲಿ ಮೆಟ್ರೋ ಕಾಮಗಾರಿ ಪರಿಶೀಲನೆ:
ನಾಗವಾರ ಜಂಕ್ಷನ್ ನಲ್ಲಿ ಮೆಟ್ರೋ ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಈ ಜಂಕ್ಷನ್ ನಲ್ಲಿ ಮಳೆಗಾಲದ ವೇಳೆ ಜಲಾವೃತವಾಗುತ್ತದೆ. ಈ ನಿಟ್ಟಿನಲ್ಲಿ ಜಲಾವೃತವಾಗದಂತೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಮೆಟ್ರೋ ಇಲಾಖೆ ವತಿಯಿಂದ ರಾಜಕಾಲುವೆ ಕಾಮಗಾರಿ ನಡೆಸಿ ಜಂಕ್ಷನ್ ನಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆರ್.ಜಿ ಯುನಿಕ್ ಸ್ಟ್ರಕ್ಚರ್ ಪ್ರೈ.ಲಿ ನಿಂದ ರಸ್ತೆ ಬದಿ ಸೈಡ್ ಡ್ರೈನ್ ಒತ್ತುವರಿ ಮಾಡಿಕೊಂಡಿದ್ದು, ಪೊಲೀಸ್ ಅಧಿಕಾರಿಗಳ ಸಹಯೋಗದೊಂದಿಗೆ ಸದರಿ ಒತ್ತುವರಿಯನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇನ್ನು ನಾಗವಾರ ಬಸ್ ನಿಲ್ದಾಣದ ಬಳಿ ರಾಜಕಾಲುವೆಗೆ ಸೀವೇಜ್ ನೀರು ಬರುತ್ತಿದ್ದು, ಅದನ್ನು ಕೂಡಲೆ ತಡೆಯಲು ಜಲಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ರಾಜಕಾಲುವೆ ಪರಿಶೀಲನೆ:
ಮಳೆಗಾಲದ ವೇಳೆ ಸಿಲ್ಕ್ ಬೋರ್ಡ್ ಜಂಕ್ಷನ್ ಜಲಾವೃತವಾಗಲಿದ್ದು, ಇಲ್ಲಿ ಮೆಟ್ರೋ ಇಲಾಖೆ ವತಿಯಿಂದ ಹೆಚ್ಚುವರಿಯಾಗಿ ರಾಜಕಾಲುವೆ ನಿರ್ಮಾಣ ಮಾಡಬೇಕಿದೆ. ಅಲ್ಲದೆ ರಾಜಕಾಲುವೆಯಲ್ಲಿ ತುಂಬಿರುವ ಹೂಳನ್ನು ತೆರವುಗೊಳಿಸಿ. ಅಲ್ಲದೆ ಪಾಲಿಕೆ ವತಿಯಿಂದ ರಾಜಕಾಲುವೆ ಅಗಲೀಕರಣ ಹಾಗೂ ತಡೆಗೋಡೆಗಳನ್ನು ಎತ್ತರಿಸಬೇಕಿದೆ. ಈ ನಿಟ್ಟಿನಲ್ಲಿ ಪಾಲಿಕೆ ಹಾಗೂ ಮೆಟ್ರೋ ಇಲಾಖೆ ವತಿಯಿಂದ ಕೂಡಲೆ ರಾಜಕಾಲುವೆ ಕಾಮಗಾರಿಯನ್ನು ಕೈಗೆತ್ತಿಕೊಂಡು ಇರುವ ಸಮಸ್ಯೆಯನ್ನು ಶಾಶ್ವತವಾಗಿ ಪರಿಹಸರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈಜೀಪುರ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ:
ಈಜೀಪುರ ಮೇಲ್ಸೇತುವೆ ಕಾಮಗಾರಿಯನ್ನು ಪರಿಶೀಲಿಸಿ, ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಈಜೀಪುರ ಕಾಮಗಾರಿ ಕುರಿತು ಯೋಜನಾ ವಿಭಾಗದ ಮುಖ್ಯ ಅಭಿಯಂತರರು ಪ್ರತಿಕ್ರಿಯಿಸಿ, ಈಜಿಪುರ ಮೇಲ್ಸೇತುವೆಯ ಬಾಕಿ ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸಲು ಮೆ|| ಬಿ.ಎಸ್.ಸಿ.ಪಿ.ಎಲ್ ಇನ್ಫ್ರಾಸ್ಟ್ರಕ್ಚರ್ ಲಿ. ಗುತ್ತಿಗೆದಾರರಿಗೆ ಕಾಮಗಾರಿ ನಡೆಸುತ್ತಿದ್ದಾರೆ. ಪ್ರಸ್ತುತ 27 ಪೈಲಿಂಗ್ಗಳು, 33 Pre-cast segment ನಿರ್ಮಾಣ, 11 Pre-cast segment ಗಳ ಲಾಂಚಿಂಗ್, ರ್ಯಾಂಪ್ ಗಳ ನಿರ್ಮಾಣ, ಮೇಲ್ಸೇತುವೆಯ ಕೆಳಗಿನ ರಸ್ತೆ, ಪಾದಚಾರಿ ಮಾರ್ಗ ಮತ್ತು ಮಳೆ ನೀರು ಚರಂಡಿ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ.
ರಕ್ಷಣಾ ಇಲಾಖೆಗೆ ಸಂಬಂಧಿಸಿದ ಜಾಗವನ್ನು ಹಸ್ತಾಂತರಿಸಿಕೊಂಡು ಕಾಮಗಾರಿಯನ್ನು ನಿರ್ವಹಿಸಲಾಗುತ್ತಿದೆ. ಸೆಂಟ್ ಜಾನ್ಸ್ ಸಂಸ್ಥೆಯವರೊಂದಿಗೆ ಸಭೆ ನಡೆಸಿ ಯೋಜನೆಗೆ ಪ್ರಮುಖವಾಗಿ ಅಗತ್ಯವಿರುವ ಜಾಗವನ್ನು ಹಸ್ತಾಂತರಿಸಲು ಮನವಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಬಿಡಿಎ ಕಾಂಫ್ಲೆಕ್ಸ್ ಪರಿಶೀಲನೆ:
ಜಯನಗರ ವ್ಯಾಪ್ತಿಯಲ್ಲಿ ಬರುವ ಬಿಡಿಎ ಕಾಂಪ್ಲೆಕ್ಸ್ ಗೆ ಭೇಟಿ ನೀಡಿ ಬ್ಲಾಕ್ 1 ಅನ್ನು ಪರಿಶೀಲಿಸಿದರು. ಅಲ್ಲದೆ ಶಿಥಿಲಾವಸ್ಥೆ ಕಟ್ಟಡದ ಭಾಗದಲ್ಲಿ ಬಿಡಿಎ ವತಿಯಿಂದ ಬ್ಲಾಕ್ 2, ಬ್ಲಾಕ್ 3 ಹಾಗೂ ಬ್ಲಾಕ್ 4 ವಾಣಿಜ್ಯ ಸಂಕೀರ್ಣ ಕಟ್ಟಡ ನಿರ್ಮಾಣ ಮಾಡಲು ನೀಲನಕ್ಷೆ ಸಿದ್ದಪಡಿಸಿದ್ದು, ಎಲ್ಲಾ ರೀತಿಯಲ್ಲಿ ಕೂಲಂಕುಷವಾಗಿ ಅವಲೋಕನ ಮಾಡಿ ವಿಸ್ತೃತವಾದ ಯೋಜನೆ ರೂಪಿಸಿಕೊಂಡು ಕಟ್ಟಡ ನಿರ್ಮಾಣ ಮಾಡಲು ಮುಂದಾಗಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಯೋಜನಾ ವಿಭಾಗದ ವಿಶೇಷ ಆಯುಕ್ತರಾದ ಅವಿನಾಶ್ ಮೆನನ್ ರಾಜೇಂದ್ರನ್, ಸಂಚಾರಿ ವಿಭಾಗದ ಪೊಲೀಸ್ ಜಂಟಿ ಪೊಲೀಸ್ ಆಯುಕ್ತರಾದ ಅನುಚೇತ್, ವಲಯ ಆಯುಕ್ತರಾದ ಕರೀಗೌಡ, ಸ್ನೇಹಲ್, ರಮ್ಯಾ, ವಿನೋತ್ ಪ್ರಿಯಾ, ಪ್ರಧಾನ ಅಭಿಯಂತರರಾದ ಪ್ರಹ್ಲಾದ್, ಪಾಲಿಕೆ, ಬಿಡಿಎ, ಮೆಟ್ರೋ, ಜಲಮಂಡಳಿ, ಸಂಚಾರಿ ವಿಭಾಗದ ಪೊಲೀಸ್ ಅಧಿಕಾರಿಗಳು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.