ಬೆಂಗಳೂರು: ಎಂ.ಎಸ್. ಸತ್ಯು ಅವರನ್ನು 15ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಜೀವಮಾನದ ಸಾಧನೆ ಪ್ರಶಸ್ತಿಗೆ ಪರಿಗಣಿಸಿರುವ ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳು.
ನಾನು ಎಂ.ಎಸ್.ಸತ್ಯು ಅವರನ್ನು ಅಭಿನಂದಿಸುವ ಜೊತೆಗೆ ಹೆಮ್ಮೆ ಪಡುವೆ. ಕಾರಣ ನಮ್ಮ ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಕನ್ನೇಶ್ವರದ ರಾಮನ ಕುರಿತು ಅವರು ಕನ್ನೇಶ್ವರ ರಾಮ ಸಿನಿಮಾ ನಿರ್ದೇಶಿಸಿದ್ದರು. ಅನಂತನಾಗ್, ಬಿ.ವಿ. ಕಾರಂತ ಮತ್ತು ಶಬನಾ ಆಜ್ಮಿ ತಾರಾ ಬಳಗದಲ್ಲಿ ಅದ್ಭುತವಾಗಿ ಮೂಡಿ ಬಂದಿತ್ತು.
ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಈ ಸಿನಿಮಾ ನನ್ನ ಕ್ರಿಯಾಶೀಲತೆಗೆ ಮತ್ತಷ್ಟು ಇಂಬು ನೀಡಿತು.ಕನ್ನೇಶ್ವರ ರಾಮ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಬಾರಿಗೆ ಪ್ರದರ್ಶನಗೊಂಡಿತ್ತು. 30 ಮಾರ್ಚ್ 1989ರಂದು ಥಿಯೇಟರ್ಗಳಲ್ಲಿ ಬಿಡುಗಡೆಯಾಗಿ ವಿಮರ್ಶಾತ್ಮಕ ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಗಳಿಸಿತ್ತು. ಜೊತೆಗೆ ಚಿತ್ರಮಂದಿರಗಳಲ್ಲಿ 100 ದಿನಗಳನ್ನು ಪೂರ್ಣಗೊಳಿಸಿತ್ತು.
2017ರಲ್ಲಿ ಬೆಂಗಳೂರಿನಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ಹಲವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿಸಲ್ಪಟ್ಟಿತ್ತು.
ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯಕ್ಕೆ ನಮ್ಮ AISF ಕಾಮ್ರೇಡ್ ಜಗನ್ನಾಥ್ ಅವರು ಪಿಎಚ್ಡಿ ಮಹಾಪ್ರಬಂಧ ಮಂಡಿಸಿದಾಗ ಕನ್ನಡ ಚಿತ್ರರಂಗದ ಮೇರು ನಿರ್ದೇಶಕ ಎಂ.ಎಸ್.ಸತ್ಯು ಅವರ ಸಿನಿಮಾಗಳಲ್ಲಿನ ಸಂವೇದನೆ ಬಗ್ಗೆ ಮತ್ತಷ್ಟು ತಿಳಿಯಿತು.
ಸಮ್ಮದ್ ಸಾಹೇಬರ ಲಾವಣಿ ಸೊಗಡಿನ ಮತ್ತು ಸ್ವಾತಂತ್ರ್ಯ ಪೂರ್ವದ ನಮ್ಮ ಭಾರತದ ಸಾಮಾಜಿಕ, ರಾಜಕೀಯ ಅಧ್ಯಯನದ ಪೂರಕ ಮಾಹಿತಿಗೆ ಈ ಸಿನಿಮಾ ನೋಡಬಹುದು.ನಮ್ಮ ನೆಲದ ಕಥೆಯನ್ನು ಇಡೀ ನಾಡಿಗೆ ಕೊಂಡೊಯ್ದ ಸತ್ಯು ಅವರಿಗೆ ಮತ್ತೊಮ್ಮೆ ಅಭಿನಂದನೆಗಳು.