ಬೆಂಗಳೂರು: ಏಕಕಾಲದಲ್ಲೇ ರೊಬೋಟ್ ಸಹಾಯದಿಂದ ದಾನಿಗಳಿಂದ ಕಿಡ್ನಿ ಪಡೆದು, ರೋಗಿಗೆ ಕಿಡ್ನಿ ಕಸಿ ಮಾಡುವ TREAT (ಟೋಟಲ್ ರೋಬೋಟ್ ಎನೇಬಲ್ಡ್ ಅಂಡ್ ಅಸ್ಸಿಸ್ಟಡ್ ಟ್ರಾನ್ಸ್ಪ್ಲಾಂಟ್) ಎಂಬ ಅಪರೂಪದ ಟೆಕ್ನಾಲಜಿಯನ್ನು ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆ ಪರಿಚಯಿಸಿದ್ದು, ದೇಶದಲ್ಲೇ ಮೊದಲ ಪ್ರಯತ್ನ ಇದಾಗಿದೆ.
ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಫೋರ್ಟಿಸ್ ಆಸ್ಪತ್ರೆ ಮೂತ್ರಪಿಂಡ ವಿಜ್ಞಾನದ ಪ್ರಧಾನ ನಿರ್ದೇಶಕ ಡಾ. ಮೋಹನ್ ಕೇಶವಮೂರ್ತಿ ಮಾತನಾಡಿ, ಟ್ರೀಟ್ ಎಂಬ ನೂತನ ಟೆಕ್ನಾಲಜಿ ಕಿಡ್ನಿ ಕಸಿಯನ್ನು ಅತ್ಯಂತ ಸುಲಭಗೊಳಿಸಿದೆ. ರೋಬೋಟ್-ಸಂಯೋಜಿತ ಮೂತ್ರಪಿಂಡದ ಕಸಿ ನಡೆಸುವ ಈ ಅತ್ಯಾಧುನಿಕ ಉಪಕ್ರಮವು ಏಕಕಾಲದಲ್ಲೇ ದಾನಿ ಮತ್ತು ಸ್ವೀಕರಿಸುವವರಿಗೆ ಎರಡು ರೋಬಾಟ್ ನೆರವಿನಿಂದ ಕಿಡ್ನಿ ತೆಗೆದು, ಕಿಡ್ನಿ ಕಸಿ ಮಾಡುವ ಶಸ್ತ್ರಚಿಕಿತ್ಸೆಯನ್ನು ನಿಖರವಾಗಿ ನಡೆಸಲಿದ್ದು, ಸಂಪೂರ್ಣ ಯಶಸ್ಸು ನೀಡಲಿದೆ.ಈ ವಿನೂತನ ಪ್ರಯತ್ನದಿಂದ ಚೇತರಿಕೆಯ ಸಮಯವೂ ಕಡಿಮೆ ಆಗಲಿದ್ದು, ಶಸ್ತ್ರಚಿಕಿತ್ಸೆ ಸುಲಭವಾಗಲಿದೆ ಎಂದು ಹೇಳಿದರು.
ಕಿಡ್ನಿ ದಾನ ಮಾಡುವವರು ಬೇಗ ಚೇತರಿಸಿಕೊಳ್ಳುತ್ತಾರೆ
ಈ ಟೆಕ್ನಾಲಜಿಯು ದಾನಿಗಳು ಕೂಡ ಶೀಘ್ರವೇ ಚೇತರಿಸಿಕೊಳ್ಳುವಂತೆ ಸಹಾಯಕಾರಿಯಾಗಲಿದೆ. ನಮ್ಮ ದೇಶದಲ್ಲಿ ಮಹಿಳೆಯರೇ ಅಂಗಾಂಗ ದಾನದಲ್ಲಿ ಮುಂದಿದ್ದಾರೆ. ಬಹುತೇಕರಿಗೆ ತಮ್ಮ ಅಂಗ ದಾನ ಮಾಡಿದ ಬಳಿಕ ಚೇತರಿಕೆಗೆ ಸಾಕಷ್ಟು ಸಮಯ ಬೇಕಾಗಬಹುದು ಅಥವಾ ಅಂಗಾಂಗ ದಾನದ ಸಂದರ್ಭದಲ್ಲಿ ಹೆಚ್ಚು ಕಡಿಮೆ ಆಗಬಹುದು ಎಂಬ ಆತಂಕದಿಂದ ದಾನ ಮಾಡಲು ಮುಂದಾಗುವವರ ಸಂಖ್ಯೆಯೂ ಕಡಿಮೆ. ಅದಕ್ಕಾಗಿಯೇ ಈ ರೊಬೋಟ್ ಆಧಾರಿತ ಟ್ರೀಟ್ ಟೆಕ್ನಾಲಜಿಯು ಶೇ.100ರಷ್ಟು ನಿಖರವಾಗಿ ಅಂಗವನ್ನು ತೆಗೆದು ಕಸಿ ಮಾಡಲಿದೆ, ಇದು ದಾನಿಗಳು ಹಾಗೂ ರೋಗಿಗೆ ಯಾವುದೇ ಹಾನಿಯಾಗಲು ಬಿಡುವುದಿಲ್ಲ. ಅದರಲ್ಲೂ ಬೊಜ್ಜು ಹೊಂದಿರುವವರಿಗೆ ಕಸಿ ಮಾಡಲು ಈ ಟೆಕ್ನಾಲಜಿ ಸೂಕ್ತವಾಗಿದೆ ಎಂದರು.
ಏಕಕಾಲದಲ್ಲೇ 2 ರೊಬೋಟ್ ನೆರವಿನಿಂದ ದಾನಿಯಿಂದ ಕಿಡ್ನಿ ಪಡೆದು ರೋಗಿಗೆ ಕಿಡ್ನಿ ಕಸಿ ಮಾಡುವ ಶಸ್ತ್ರಚಿಕಿತ್ಸೆ
ಟಾಂಜಾನಿ ಮೂಲದ 47 ವರ್ಷದ ಜೊವಾಕಿಮ್ ಎಂಬ ರೋಗಿಯು ಮಧುಮೇಹದಿಂದಾಗಿ ಮೂತ್ರಪಿಂಡ ವೈಫಲ್ಯಕ್ಕೆ ಒಳಗಾಗಿದ್ದರು. ಅವರ ಕಿರಿಯ ಸಹೋದರ ತಕ್ಷಣವೇ ತನ್ನ ಮೂತ್ರಪಿಂಡವನ್ನು ದಾನ ಮಾಡಲು ಮುಂದಾದರು. ಜೋಕಿಮ್ ಹೃದಯ ಕಾಯಿಲೆ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರಿಂದ ಇತರೆ ಆಸ್ಪತ್ರೆಗಳು ಕಸಿ ಮಾಡುವ ಕೆಲಸ ತೆಗೆದುಕೊಳ್ಳಲು ನಿರಾಕರಿಸಿದವು. ಆದರೆ ಫೋರ್ಟಿಸ್ ಆಸ್ಪತ್ರೆಯಲ್ಲಿ, ರೋಬೋಟ್ ನೆರವಿನ ಕಸಿಗೆ ಒಳಗಾದರು, ಕೇವಲ 24 ಗಂಟೆಗಳ ಒಳಗೆ ಅವರು ಚಲನಶೀಲತೆ ಮರಳಿ ಪಡೆದರು, ದಾನ ನೀಡಿದವರೂ ಸಹ ಚೇತರಿಸಿಕೊಂಡಿದ್ದಾರೆ. ಇದಕ್ಕೆ ಈ ಟೆಕ್ನಾಲಜಿಯೇ ಕಾರಣ ಎಂದರು.
ಮತ್ತೊಂದು ಪ್ರಕರಣದಲ್ಲಿ, ಬಿಜಾಪುರದ 35 ವರ್ಷದ ಸನಾ ಕೊನೆ ಹಂತದ ಮೂತ್ರಪಿಂಡ ವೈಫಲ್ಯಕ್ಕೆ ಒಳಗಾಗಿದ್ದರು. ರೋಗಿಯ ಸಹೋದರ ಚಂದ್ ಆತಂಕದಿಂದ ಕಿಡ್ನಿ ದಾನ ಮಾಡಲು ಹಿಂಜರಿಕೆ ಹೊಂದಿದ್ದರು.ಆದರೆ, ಫೋರ್ಟಿಸ್ ಆಸ್ಪತ್ರೆಯಲ್ಲಿ ಟ್ರೀಟ್ ಟೆಕ್ನಾಲಜಿ ವಿವರಿಸಿದ ಬಳಿಕ ದಾನ ಮಾಡಲು ಮುಂದಾದರು, ಇವರಿಗೆ ಏಕಕಾಲದಲ್ಲೇ ಎರಡು ರೊಬೋಟ್ ಬಳಕೆಯಿಂದ ಕಸಿ ನೆರವೇರಿಸಲಾಯಿತು. ಒಂದು ವಾರದಲ್ಲಿಯೇ ಇಬ್ಬರೂ ಚೇತರಿಕೆ ಕಂಡರು ಎಂದರು.
ಕಿಡ್ನಿ ವೈಪಲ್ಯ ಆಗಿರುವವರಿಗೆ ದಾನಿಗಳು ಸಹ ಯಾವುದೇ ಭಯವಿಲ್ಲದೇ ದಾನ ಮಾಡಲು ಮುಂದಾಗುವಂತೆ ಈ ಟೆಕ್ನಾಲಜಿ ಆತ್ಮಸ್ಥೈರ್ಯವನ್ನು ಹೆಚ್ಚಿಸಲಿದೆ. ಅಷ್ಟೆ ಅಲ್ಲದೆ, ಚೇತರಿಕೆಯ ಸಮಯವೂ ಕಡಿಮೆ ಇರಲಿದೆ ಎಂದು ಅಭಯಹಸ್ತ ನೀಡಿದರು.
ಪತ್ರಿಗಾಗೋಷ್ಠಿಯಲ್ಲಿ ಫೋರ್ಟಿಸ್ನ ಗ್ರೋಥ್ ಆಂಡ್ ಇನೋವೇಷನ್ ಆಫೀಸರ್ ಡಾ. ರಿತು ಗಾರ್ಗ್ , ಆಸ್ಪತ್ರೆಯ ನುರಿತ ವೈದ್ಯರು, ಶಸ್ತ್ರ ಚಿಕಿತ್ಸೆಗರು ಮತ್ತಿತರರು ಉಪಸ್ಥಿತರಿದ್ದರು.