ಬೆಂಗಳೂರು: ಪಶ್ಚಿಮ ವಲಯದ ಮಹಾಲಕ್ಷ್ಮೀಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಮಲಾನಗರದಲ್ಲಿ ತಳಪಾಯದ ಗೋಡೆ ಶೇ. 20 ರಷ್ಟು ಕುಸಿದಿದ್ದು, ನಾಳೆ ತೆರವು ಕಾರ್ಯವನ್ನು ಪ್ರಾರಂಭಿಸಲಾಗುವುದು.
ಕಮಲಾನಗರ 3ನೇ ಮುಖ್ಯರಸ್ತೆಯ ಬಳಿ ದ್ವೀತೀಯ ನೀರುಗಾಲುವೆಗೆ ಹೊಂದಿಕೊಂಡಂತಿರುವ 3 ಅಂತಸ್ತಿನ ಮನೆಯನ್ನು, ಸುಮಾರು 20-25 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ತಳಭಾಗದಲ್ಲಿ ದ್ವಿತೀಯ ನೀರು ಗಾಲುವೆಯ ಮೂಲಕ ಬರುವ ನೀರು ಮನೆಯ ತಳಪಾಯದಕ್ಕೆ ಹೊಗಿರುವ ಕಾರಣ, ತಳಪಾಯದ ನೀರಿನ ಸಂಪ್(ನೀರಿನ ಟ್ಯಾಂಕ್) ಹಾಗೂ ಶೇ. 20 ರಷ್ಟು ತಳಪಾಯದ ಗೋಡೆ ಕುಸಿದಿರುತ್ತದೆ. ಈ ಸಂಬಂಧ ಮನೆಯ ಬಳಿ ವಲಯ ಆಯುಕ್ತರಾದ ಅರ್ಚನಾ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ 3 ಅಂತಸ್ತಿನ ಕಟ್ಟಡದಲ್ಲಿ 5 ಮನೆಗಳಿದ್ದು, ಎಲ್ಲಾ ಮನೆಗಳನ್ನು ಬಾಡಿಗೆಗೆ ನೀಡಲಾಗಿರುತ್ತದೆ. ತಳಪಾಯದ ಗೋಡೆ ಕುಸಿದಿರುವ ಪರಿಣಾಮ ಮನೆಗಳಲ್ಲಿದ್ದ ಎಲ್ಲಾ ಕುಟುಂಬಸ್ತರನ್ನು ಸ್ಥಳಾಂತರಿಸಲಾಗಿದ್ದು, ಮನೆಯಲ್ಲಿದ್ದ ಎಲ್ಲಾ ಸಾಮಗ್ರಿಳನ್ನು ಹೊರ ತೆಗೆಯಲಾಗಿದೆ. 5 ಕುಟುಂಬಗಳ ಪೈಕಿ, 3 ಕುಟುಂಬಗಳು ಸಂಬಂಧಿಕರ ಮನೆಗೆ ತೆರಳಿದ್ದು, 1 ಕುಟುಂಬ ಅಂಬೇಡ್ಕರ್ ಭವನ, ಇನ್ನೊಂದು ಕುಟುಂದ ದೇವಸ್ಥಾನದಲ್ಲಿ ತಂಗಿದ್ದು, ಅವರಿಗೆ ಕುಡಿಯುವ ನೀರು ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ.
ಸುರಕ್ಷತೆಯ ದೃಷ್ಟಿಯಿಂದ ಎದುರು ಮನೆಯವರನ್ನು ಕೂಡಾ ಖಾಲಿ ಮಾಡಿಸಲಾಗಿದ್ದು, ಮನೆಗೆ ಸಂಪರ್ಕವಿದ್ದ ವಿದ್ಯುತ್ ಅನ್ನು ಕೂಡಾ ತೆಗೆಸಲಾಗಿದೆ. ಪಾಲಿಕೆ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದು, ಕಟ್ಟಡವು ವಾಸಕ್ಕೆ ಯೋಗ್ಯವಾಗಿಲ್ಲದ ಪರಿಣಾಮ ನಾಳೆ ಕಟ್ಟಡವನ್ನು ನೆಲಸಮ ಮಾಡಲಾಗುವುದು.