ಬೆಂಗಳೂರು: ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಬುಧವಾರ ದಿನವಿಡೀ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲರ ಉತ್ಸಾಹದ ಓಡಾಟ ಎದ್ದು ಕಾಣುತ್ತಿತ್ತು. ಬೆಳಿಗ್ಗೆಯೇ ಅರಮನೆ ಮೈದಾನಕ್ಕೆ ಬಂದ ಅವರು ಮೊದಲಿಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಜತೆಗೂಡಿ `ನಾವೀನ್ಯತಾ ಪ್ರದರ್ಶನ’ ಉದ್ಘಾಟಿಸಿದರು. ನಂತರ ಅಲ್ಲಿದ್ದ ಒಂದೊಂದು ಮಳಿಗೆಗೂ ಭೇಟಿ ನೀಡಿದ ಅವರು, ಹೊಸಹೊಸ ಸಂಶೋಧನೆಗಳು ಮತ್ತು ತಂತ್ರಜ್ಞಾನದ ಧಾರೆಗಳ ಬಗ್ಗೆ ಕುತೂಹಲದಿಂದ ವಿಚಾರಿಸಿ, ಅರಿವು ಸಂಪಾದಿಸಿದರು.
ನಂತರ ಅವರು ಕ್ವಿನ್ ಸಿಟಿಯಲ್ಲಿ ಹೂಡಿಕೆ ಕುರಿತು ಪ್ರತಿಷ್ಠಿತ ವೈದ್ಯಕೀಯ ಸಭೆಗಳೊಂದಿಗೆ ನಡೆದ ದುಂಡು ಮೇಜಿನ ಸಭೆಯಲ್ಲಿ ಪಾಲ್ಗೊಂಡರು. ಏತನ್ಮಧ್ಯೆ ಅವರು ವರ್ಲ್ಡ್ ಎಕನಾಮಿಕ್ ಫೋರಂ, ಸ್ವಿಸ್ ಇಂಡಿಯಾ ಚೇಂಬರ್ ಆಫ್ ಕಾರ್ಮಸ್ ಮುಂತಾದ ಸಂಸ್ಥೆಗಳ ಜೊತೆಗಿನ ಒಡಂಬಡಿಕೆಗಳನ್ನು ಆಖೈರುಗೊಳಿಸಿ, ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದರು. ಇವುಗಳ ನಡುವೆಯೇ ಅವರು ನಾನಾ ದೇಶಗಳ ರಾಯಭಾರಿ ಗಳು, ಉನ್ನತ ಮಟ್ಟದ ಪ್ರತಿನಿಧಿಗಳು, ಗಣ್ಯ ಉದ್ಯಮಿಗಳ ಜತೆ ಪರಸ್ಪರ ಮಾತುಕತೆ ನಡೆಸಿ, ರಾಜ್ಯದ ಕೈಗಾರಿಕಾ ನೀತಿ, ಇಲ್ಲಿರುವ ಪ್ರೋತ್ಸಾಹಗಳು, ಉದ್ಯಮಸ್ನೇಹಿ ಉಪಕ್ರಮಗಳನ್ನೆಲ್ಲ ಮನದಟ್ಟು ಮಾಡಿಕೊಟ್ಟರು. ಜತೆಗೆ ಬಹರೇನ್, ಜಪಾನ್ ನಿಯೋಗಗಳನ್ನು ಕೂಡ ಪಾಟೀಲರು ಮುಖತಃ ಭೇಟಿ ಮಾಡಿದರು. ಸ್ವಿಸ್ ಕೈಗಾರಿಕೋದ್ಯಮಿಗಳ ಒಕ್ಕೂಟದ ಪರವಾಗಿ ಅದರ ಅಧ್ಯಕ್ಷ ಸತೀಶ್ ರಾವ್ ಮತ್ತು ಅಲ್ಲಿನ ಸಂಸದ ನಿಕ್ ಗುಗ್ಗರ್ ಇದ್ದರು. ರಾಜ್ಯ ಸರಕಾರದ ಪರವಾಗಿ ಸಚಿವರೊಂದಿಗೆ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.
ಇವುಗಳ ಮಧ್ಯೆಯೇ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸಮಾವೇಶಕ್ಕೆ ಆಗಮಿಸಿ ಒಂದು ಸುತ್ತು ಹೊಡೆದು, ಪಾಟೀಲರಿಗೆ ಅಭಿನಂದನೆ ಸಲ್ಲಿಸಿದರು. ಇವೆಲ್ಲದರ ನಡುವೆಯೇ ಸಮಾವೇಶದ ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಬೇಕೆಂದು ಅವರು ಅಧಿಕಾರಿಗಳಿಗೆ ಸಲಹೆ-ಸೂಚನೆ ನೀಡುವುದನ್ನು ಮರೆಯಲಿಲ್ಲ.
ಸಚಿವರಾದ ಕೆ.ಜೆ.ಜಾರ್ಜ್, ದಿನೇಶ ಗುಂಡುರಾವ್, ಪ್ರಿಯಾಂಕ್ ಖರ್ಗೆ, ಡಾ.ಶರಣ ಪ್ರಕಾಶ ಪಾಟೀಲ, ಎನ್.ಎಸ್.ಬೋಸರಾಜ್ ಅವರು ಕೂಡ ಇಡೀ ದಿನ ಸಚಿವರಿಗೆ ಸಾಥ್ ನೀಡಿದರು.
*ಜಪಾನ್ ರಾಯಭಾರಿ ಕಾನ್ಸುಲ್ ಜನರಲ್ ಭೇಟಿ*
ಸಚಿವ ಪಾಟೀಲರು ಭಾರತದಲ್ಲಿನ ಜಪಾನ್ ರಾಯಭಾರಿ ಕೀಲ್ಚಿ ಓನೋ ಮತ್ತು ಕಾನ್ಸುಲ್ ಜನರಲ್ ಸುಟೋಮು ನಕಾನೆ ಅವರನ್ನು ಭೇಟಿ ಮಾಡಿದರು.
ಈ ಸಂದರ್ಭದಲ್ಲಿ ಕೈಗಾರಿಕಾ ಬೆಳವಣಿಗೆ, ತಂತ್ರಜ್ಞಾನ ವಿನಿಮಯ, ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ವಿಚಾರ ವಿನಿಮಯ ನಡೆಯಿತು. ಜತೆಗೆ ಜಪಾನಿನ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಂಘಟನೆ ಜತೆ ಒಡಂಬಡಿಕೆಗೆ ಸಹಿ ಹಾಕಲಾಯಿತು.
ಬುಧವಾರ ಸಿಂಗಪುರದ ಉನ್ನತ ಮಟ್ಟದ ನಿಯೋಗವು ಕೂಡ ಸಚಿವರ ಜತೆ ಮಾತುಕತೆ ನಡೆಸಿತು. ನಿಯೋಗದ ನೇತೃತ್ವವನ್ನು ಆ ದೇಶಧ ಕಾನ್ಸುಲ್ ಜನರಲ್ ಎಡ್ಗರ್ ಪಾಂಗ್ ವಹಿಸಿದ್ದರು.
ಮೂಲಸೌಕರ್ಯ, ಮರುಬಳಕೆ ಇಂಧನ, ಉತ್ಪಾದನೆ, ಕ್ವಿನ್ ಸಿಟಿ ಕುರಿತು ಸಿಂಗಪುರದ ಉದ್ಯಮಿಗಳು ಚರ್ಚಿಸಿದರು.