ಬೆಂಗಳೂರು, : ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 2025 ರ ಜೂನ್ 4 ರಂದು ಆರ್.ಸಿ.ಬಿ ಕ್ರಿಕೆಟ್ ತಂಡದ ವಿಜಯೋತ್ಸವದ ಅಭಿನಂದನಾ ಸಮಾರಂಭದ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆಯಲ್ಲಿ ಬೆಂಗಳೂರು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉಂಟಾದ ಕಾಲ್ತುಳಿತದಿಂದ 11 ಮಂದಿ ಮೃತಪಟ್ಟಿದ್ದು, 47 ಮಂದಿ ಗಾಯಗೊಂಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ.
ಅಭಿನಂದನಾ ಸಮಾರಂಭದ ದಿನದಂದು ನಡೆದ ಅಹಿತಕರ ಘಟನೆಗಳು ಹಾಗೂ ಸಾವು – ನೋವುಗಳ ಬಗ್ಗೆ ಉಂಟಾಗಿರುವ ಲೋಪಗಳ ಕುರಿತು ಸಮಗ್ರವಾಗಿ ವಿಚಾರಣೆ ನಡೆಸಲು ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಗದೀಶ ಜಿ. ಅವರನ್ನು ಸರ್ಕಾರವು ನೇಮಿಸಿದೆ.
ಈ ಸಂಬಂಧ 2025 ರ ಜೂನ್ 13 ರಂದು ಪೂರ್ವಾಹ್ನ 11.00 ಗಂಟೆಯಿಂದ ಅಪರಾಹ್ನ 1.30 ಗಂಟೆಯವರೆಗೆ ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣ, ಜಿಲ್ಲಾಧಿಕಾರಿಗಳ ಕಛೇರಿ, ಬೆಂಗಳೂರು ನಗರ ಜಿಲ್ಲೆ, ಕೆ.ಜಿ ರಸ್ತೆ, ಬೆಂಗಳೂರು -560009 ಇಲ್ಲಿ ವಿಚಾರಣೆ ನಡೆಸಲಾಗುತ್ತಿದ್ದು, ಅಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿರುವ ಅಹಿತಕರ ಘಟನೆಗಳಿಗೆ ಸಂಬಂಧಿಸಿದ ಮಾಹಿತಿಯುಳ್ಳ ಅಥವಾ ಈ ಘಟನೆಯನ್ನು ಪ್ರತ್ಯಕ್ಷವಾಗಿ ನೋಡಿದ ಯಾರೇ ಆಗಲಿ ನನ್ನ ಸಮಕ್ಷಮ ಹಾಜರಾಗಿ ಸಾಕ್ಷ್ಯ ಅಥವಾ ಹೇಳಿಕೆಯನ್ನು ನೀಡಬಹುದಾಗಿದೆ ಎಂದು ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಗದೀಶ ಜಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.