ಬೆಂಗಳೂರು: ಪಕ್ಷದ ಎಲ್ಲ ವಿಭಾಗಗಳನ್ನು ಸಂಘಟನಾತ್ಮಕವಾಗಿ ಬಲಪಡಿಸಬೇಕು. ಅದರಲ್ಲಿಯೂ ಪರಿಶಿಷ್ಟ ಜಾತಿ ವಿಭಾಗಕ್ಕೆ ಹೆಚ್ಚು ಶಕ್ತಿ ತುಂಬಬೇಕು ಎಂದು ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಹೆಚ್.ಎಂ. ರಮೇಶ್ ಗೌಡ ಹೇಳಿದರು.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಕರೆಯಲಾಗಿದ್ದ ಬೆಂಗಳೂರು ನಗರ ಪರಿಶಿಷ್ಟ ಜಾತಿ ವಿಭಾಗದ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು; ಸಾಮಾಜಿಕ ನ್ಯಾಯ ಹಾಗೂ ಸರ್ವ ಜನರ ಕಲ್ಯಾಣವೇ ಪಕ್ಷದ ಧ್ಯೇಯೋದ್ದೇಶವಾಗಿದ್ದು, ಆ ಸದುದ್ದೇಶದಿಂದಲೇ ಹೆಚ್.ಡಿ. ದೇವೇಗೌಡರು ಪಕ್ಷವನ್ನು ಕಟ್ಟಿದ್ದಾರೆ ಎಂದರು.
ಪಕ್ಷವನ್ನು ತಳಮಟ್ಟದಿಂದ ಕಟ್ಟುವುದು ಎಷ್ಟು ಮುಖ್ಯವೋ ತಳ ಸಮುದಾಯಗಳನ್ನು ಮೇಲಕ್ಕೆ ತರುವುದು ಅಷ್ಟೇ ಮುಖ್ಯ ಎಂದು ಪ್ರತಿಪಾದಿಸಿದ ಅವರು, ಒಮ್ಮತ ಮತ್ತು ಒಗ್ಗಟ್ಟಿನಿಂದ ಪಕ್ಷ ಕಟ್ಟಲು ಅಗತ್ಯವಾದ ಎಲ್ಲಾ ಪ್ರಯತ್ನಗಳನ್ನು ಮುಖಂಡರು ಮಾಡಬೇಕು ಎಂದು ಸಲಹೆ ಮಾಡಿದರು.
ಈ ಸಭೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಶಾಸಕ ಹಾಗೂ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷ ಡಾ.ಕೆ ಅನ್ನದಾನಿ ಅವರು ಮಾತನಾಡಿದರು.
ಬೆಂಗಳೂರು ನಗರ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ವೇಲು, ಮಾಜಿ ಶಾಸಕ ಕೆ.ಎ.ತಿಪ್ಪೇಸ್ವಾಮಿ, ಬೆಂಗಳೂರು ನಗರದ ಉಸ್ತುವಾರಿ ಜಗದೀಶ್ ನಾಗರಾಜಯ್ಯ, ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮಹಿಳಾ ವಿಭಾಗದ ಅಧ್ಯಕ್ಷೆ ಶೈಲಾ ಸಂತೋಜಿ ರಾವ್, ಗ್ರಾಮ ಪಂಚಾಯಿತಿ ಸದಸ್ಯೆ ತಾರಾ ಲೋಕೇಶ್, ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಅಧ್ಯಕ್ಷ ಟಿ.ಆರ್.ತುಳಸೀ ರಾಮ್ ಸೇರಿ ಅನೇಕ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.