ಬೆಂಗಳೂರು: ಸನಾತನ ಧರ್ಮ ಸಂಸ್ಕøತಿಯ ಪ್ರಚಾರ ಏಳಿಗೆಗೆ ಕಾರಣೀಕೃತರಾದವರು-ಜಗದ್ಗುರು ಶಂಕರಾಚಾರ್ಯರು. ದೇಶದುದ್ದಗಲಕ್ಕೂ ಇವರು ಸಂಚರಿಸಿ ಶೃಂಗೇರಿ ಪೀಠವನ್ನು ಸ್ಥಾಪಿಸಿದರು ಎಂದು ಭಾರತದ ಉಪರಾಷ್ಟ್ರಪತಿಗಳಾದ ಜಗದೀಪ್ ಧನಕರ್ ಅವರು ತಿಳಿಸಿದರು.
ಇಂದು ಸುವರ್ಣ ಭಾರತೀ ಶೃಂಗೇರಿ, ವೇದಾಂತಭಾರತೀ ಹಾಗೂ ಮಿಥಿಕ್ ಸೊಸೈಟಿ ವತಿಯಿಂದ ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾಪೀಠಾಧೀಶ್ವರರಾದ ಜಗದ್ಗುರು ಶಂಕರಾಚಾರ್ಯ ಪರಮಪೂಜ್ಯ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರ ಸಂನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವ ನಿಮಿತ್ತ ಅರಮನೆ ಮೈದಾನದಲ್ಲಿ ಇಂದು ಹಮ್ಮಿಕೊಳ್ಳಲಾದ ಸುವರ್ಣ ಭಾರತೀ ನಮ: ಶಿವಾಯ ಸ್ತೋತ್ರಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಮ: ಶಿವಾಯ ಸ್ತೋತ್ರಮಹಾಸಮರ್ಪಣೆ ಕಾರ್ಯಕ್ರಮಕ್ಕೆ ಸಹಸ್ರಾರು ಮಂದಿ ಆಗಮಿಸಿ ಸ್ತೋತ್ರ ಪಾರಾಯಣ ಮಾಡಿದ್ದಾರೆ. ನಾನು ವೈಯಕ್ತಿಕವಾಗಿ ಈ ಮಂತ್ರ ಪಾರಾಯಣ ಕೇಳಿ ಮಂತ್ರಮುಗ್ಧನಾಗಿರುತ್ತೇನೆ. ಮಂತ್ರಪಾರಾಯಣದ ಲಯ, ಸಂಯೋಜನೆ, ಆಲಿಸಿದ ನನ್ನ ಮನಸ್ಸು ಸಂತೃಷ್ಟಗೊಂಡಿತು. ಇದು ನಮ್ಮ ಭಾರತೀಯ ಸಂಸ್ಕೃತಿಯ ಕೊಂಡಿಯನ್ನು ಬಲಪಡಿಸುವ ಕೆಲಸವಾಗಿದೆ. ಸನಾತ ಧರ್ಮವು ತಾಳ್ಮೆ, ಅನುಕಂಪ, ಇತರರ ಕಲ್ಯಾಣಕ್ಕೆ ಹೆಸರಾಗಿದೆ. ನಾವು ನಮ್ಮ ಬಗ್ಗೆ ಅಲ್ಲದೇ ಇತರರ ಒಳಿತಿನ ಬಗ್ಗೆ ಚಿಂತಿಸಬೇಕಾಗಿದೆ ಎಂದರು.
ಶೃಂಗೇರಿ ಶಾರದ ಪೀಠಾಧೀಶ್ವರರಾದ ಪರಮಪೂಜ್ಯ ಭಾರತಿ ತೀರ್ಥ ಸ್ವಾಮಿಗಳು ಕಳೆದ ಐದು ದಶಕಗಳಿಂದ ಜನಕಲ್ಯಾಣಕ್ಕಾಗಿ ಅದ್ಭುತ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಮಾರ್ಗದರ್ಶನದಿಂದ ನಾವು ಮುನ್ನೆಡೆಯುತ್ತಿರುವುದು ಅದೃಷ್ಟವೇ ಸರಿ. ಇವರ ಆಧ್ಯಾತ್ಮಿಕ ಚಿಂತನೆಗಳು ನಮ್ಮ ಮನಸ್ಸಿಗೆ ಹಾಗೂ ವಾತಾವರಣಕ್ಕೆ ಆಹ್ಲಾದಕರ ಭಾವನೆಯನ್ನು ಉಂಟುಮಾಡುತ್ತದೆ ಎಂದರು.
ಕರ್ನಾಟಕದ ಉಪ ಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್ ರವರು ಮಾತನಾಡಿ, ಭಾರತೀ ತೀರ್ಥರು ಧರ್ಮ ಉಳಿಸುವ ಕೆಲಸ ಮಾಡಿದ್ದಾರೆ. ನಾವೆಲ್ಲರೂ ಭಕ್ತಿ ಸಾಗರದಲ್ಲಿ ಭಾಗಿಯಾಗಿದ್ದೇವೆ. ನಮ್ಮ ಪ್ರಯತ್ನ ವಿಫಲವಾಗಬಹುದು. ಪ್ರಾರ್ಥನೆ ವಿಫಲವಾಗುವುದಿಲ್ಲ. ಶೃಂಗೇರಿ ಮಠ ಧರ್ಮ ಉಳಿಸುವ ಕೆಲಸ ಮಾಡುತ್ತಿದೆ. ಇಡೀ ಸರ್ಕಾರ ಮಠದ ಜೊತೆಗೆ ಇದೆ. ನನಗೂ ಮಠಕ್ಕೂ ಗುರುಭಕ್ತನ ಸಂಬಂಧ ಎಂದರು.
ಇದೇ ಸಂದರ್ಭದಲ್ಲಿ ಸಹಸ್ರಾರು ಜನರು ಶಿವ ಪಂಚಾಕ್ಷರ ನಕ್ಷತ್ರ ಮಾಲಾ ಸ್ತೋತ್ರವನ್ನು ಸಾಮೂಹಿಕವಾಗಿ ಪಠಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ವಿ.ಸೋಮಣ್ಣ, ಸದ್ಗುರು ಶಂಕರಾಚಾರ್ಯ ಪರಮಪೂಜ್ಯ ಶ್ರೀಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು, ಪೀಠಾಧೀಶರು, ದಕ್ಷಿಣಾಮ್ನಾಯ ಶ್ರೀ ಶಾರದಾಪೀಠ, ಕೃಷ್ಣರಾಜನಗರ ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠಾಧೀಶರಾದ ಪರಮಪೂಜ್ಯ ಶ್ರೀಶ್ರೀ ಶಂಕರಭಾರತೀ ಮಹಾಸ್ವಾಮಿಗಳವರು, ತತ್ಕರಕಮಲಸಂಜಾತರಾದ ಪರಮಪೂಜ್ಯ ಶ್ರೀಶ್ರೀ ಬ್ರಹ್ಮಾನಂದಭಾರತೀ ಸ್ವಾಮಿಗಳವರು, ಎಂ.ಎಸ್. ರಾಮಯ್ಯ ವಿಶ್ವವಿದ್ಯಾಲಯ ಕುಲಪತಿಗಳಾದ ಡಾ. ಎಂ.ಆರ್. ಜಯರಾಮ್, ಬಿ.ಸಿ. ಹಿರಿಯ ನ್ಯಾಯವಾದಿಗಳಾದ ಪ್ರಭಾಕರ್ ಹಾಗೂ ವೇದಾಂತಭಾರತಿಯ ಟ್ರಸ್ಟಿಗಳು ಮತ್ತು ಸಂಚಾಲನ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.