ಬೆಂಗಳೂರು: ಜೀವನದಲ್ಲಿ ಬರುವ ಕಷ್ಟಗಳನ್ನು ಹಗುರವಾಗಿ ಪರಿಗಣಿಸಿ ಒಳ್ಳೆಯ ಕೆಲಸಗಳನ್ನು ಮಾಡಿದಾಗ ಯಶಸ್ಸು ಸಾಧಿಸಲು ಸಾಧ್ಯ ಎಂದು ಜಲ ಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ವಿ. ಅವರು ಹೇಳಿದ್ದಾರೆ.
ಬೆಂಗಳೂರು ಜಲಮಂಡಳಿ ಅಭಿಯಂತರರ ಸಂಘದ ವತಿಯಿಂದ ಮಂಡಳಿಯ ಕೇಂದ್ರ ಕಚೇರಿ ಕಾವೇರಿ ಭವನದಲ್ಲಿ ಹಮ್ಮಿಕೊಡಿದ್ದ ಸಂಘದ “2025ರ ತಾಂತ್ರಿಕ ದಿನಚರಿ ಬಿಡುಗಡೆ ಮತ್ತು 2024ರ ಅವಧಿಯಲ್ಲಿ ನಿವೃತ್ತರಾದ ಅಭಿಯಂತರರಿಗೆ ಸನ್ಮಾನ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಜಲ ಮಂಡಳಿಯ ವತಿಯಿಂದ ಒಳ್ಳೆಯ ಕಾರ್ಯಕ್ರಮದೊಂದಿಗೆ ಹೊಸ ವರ್ಷ ಆರಂಭವಾಗಿದ್ದು, ಇದು ವರ್ಷವಿಡೀ ಮುಂದುವರಿದು ಮಂಡಳಿಯು ಜನರಿಗೆ ಹತ್ತಿರವಾಗಬೇಕು”, ಎಂದು ಹೇಳಿದರು.
“ಬೆಂಗಳೂರು ಎಂಬ ಕಾಸ್ಮೋ ಪಾಲಿಟನ್ ಸಿಟಿಯಲ್ಲಿ ನೀರು ಪೂರೈಕೆ ಮತ್ತು ಒಳಚರಂಡಿ ನಿರ್ವಹಣೆಯನ್ನು ಜಲ ಮಂಡಳಿ ನೋಡಿಕೊಳ್ಳುತ್ತದೆ. ಇಲ್ಲಿ ಬೇರೆ ಬೇರೆ ರಾಜ್ಯ, ದೇಶಗಳಿಂದ ಬಂದವರಿದ್ದಾರೆ. ಸಾಮಾಜಿಕವಾಗಿ ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡಿ ಅವರಿಗೆ ಸೇವೆ ಒದಗಿಸುವಂತಹ ಕೆಲಸವನ್ನು ಮಂಡಳಿಯ ಅಭಿಯಂತರರು, ಅಧಿಕಾರಿಗಳು, ಸಿಬ್ಬಂದಿ ಮಾಡಬೇಕು”, ಎಂದರು.
“ವಿಷಯಗಳನ್ನು ಅರ್ಥ ಮಾಡಿಕೊಳ್ಳುವ ಸಂದರ್ಭದಲ್ಲಿ ಕೇವಲ ನಮ್ಮ ದೃಷ್ಟಿಯಿಂದ ಮಾತ್ರ ಅರ್ಥ ಮಾಡಿಕೊಳ್ಳದೆ ಬೇರೆಯವರ ಸಂಸ್ಕೃತಿ, ಭಾಷೆಯ ದೃಷ್ಟಿಯಿಂದ ಅರ್ಥ ಮಾಡಿಕೊಂಡರೆ ಸೇವೆ ಒದಗಿಸುವ ಸಂದರ್ಭದಲ್ಲಿ ಯಾವುದೇ ತೊಂದರೆಗಳು ಬರುವುದಿಲ್ಲ ಎಂದು ಹೇಳಿದ ಅವರು, ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿತು ನಡೆದುಕೊಳ್ಳಬೇಕು”, ಎಂದು ಸಲಹೆ ಮಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಾಸ್ಯ ಸಾಹಿತಿ, ಕಲಾವಿದ ಗಂಗಾವತಿ ಪ್ರಾಣೇಶ್ ಮಾತನಾಡಿ, “ಸರ್ಕಾರಿ ನೌಕರರು ನಿವೃತ್ತರಾಗುವ ಸಂದರ್ಭದಲ್ಲಿ ಸಣ್ಣ ನೋವು ಇರುತ್ತದೆ. ಆದರೆ, ನಿವೃತ್ತಿ ಬಳಿಕ ಏನು ಮಾಡಬೇಕು ಎಂದು ಯೋಜನೆ ರೂಪಿಸಿ ಅದರಂತೆ ಮುಂದುವರಿದರೆ ನಿವೃತ್ತಿಯ ಜೀವನ ಸುಖಕರವಾಗಿ ನಡೆಯುತ್ತದೆ”, ಎಂದು ಹೇಳಿದರು.
“ಸರ್ಕಾರಿ ಕಾರ್ಯಕ್ರಮ ಇಷ್ಟು ಅಚ್ಚು ಕಟ್ಟಾಗಿ ನೋಡಿದ್ದೇ ಇವತ್ತು. ಇಲ್ಲಿ ರಾಜಕಾರಣಿಗಳನ್ನು ಕರೆದಿಲ್ಲ ಎಂದು ಹೇಳಿದ ಗಂಗಾವತಿ ಪ್ರಾಣೇಶ್, ಈ ಕಾರ್ಯಕ್ರಮಕ್ಕೆ ಹಾಸ್ಯ ಕಲಾವಿದನಾದ ನನ್ನನ್ನು ಆಹ್ವಾನಿಸಿರುವುದು ಹಾಸ್ಯದ ವಿಶೇಷತೆ ಮತ್ತು ಹಾಸ್ಯ ಸಾಹಿತ್ಯಕ್ಕೆ ಸಂದ ಗೌರವ”, ಎಂದು ಅಭಿಪ್ರಾಯಪಟ್ಟರು. ಅಲ್ಲದೆ, ತಮ್ಮ ಹಾಸ್ಯ ಚಟಾಕಿಗಳ ಮೂಲಕ ನೆರೆದಿದ್ದವರನ್ನು ರಂಜಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಜಲಮಂಡಳಿ ಅಭಿಯಂತರರ ಸಂಘದ ಅಧ್ಯಕ್ಷ ಬಿ.ಸಿ.ಗಂಗಾಧರ್, ಉಪಾಧ್ಯಕ್ಷ ಬಿ.ಸುರೇಶ್, ಕಾರ್ಯದರ್ಶಿ ಎಂ.ರಾಜಶೇಖರ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು, ಜಲಮಂಡಳಿ ಅಧಿಕಾರಿಗಳು,ಸಿಬ್ಬಂದಿ ಪಾಲ್ಗೊಂಡಿದ್ದರು.