ಬೆಂಗಳೂರು : ಕನ್ನಡ ಹಬ್ಬವನ್ನು ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತಗೊಳಿಸದೆ, ಇಡೀ ವರ್ಷ ಆಚರಿಸುವಂತಾಗಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ಸಂಗಪ್ಪ ತಂಗಡಗಿ ತಿಳಿಸಿದ್ದಾರೆ.
ನಗರದ ಅರಮನೆ ರಸ್ತೆಯಲ್ಲಿರುವ ರಾಂನಾರಾಯಣ್ ಚೆಲ್ಲಾರಾಂ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಸುವರ್ಣ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಗರದಲ್ಲಿ ಕನ್ನಡ ಹಬ್ಬವನ್ನು ಆಚರಿಸುವುದು ಒಂದು ದೊಡ್ಡ ಮಟ್ಟದ ಸಂಭ್ರಮವಾಗಿದೆ. ಆರ್ಸಿ ಕಾಲೇಜಿನಲ್ಲಿ ಕುಂಭ ಹೊತ್ತು ಸ್ವಾಗತ ಮಾಡಿದರು ವಿಶೇಷವಾಗಿದೆ. ಬೇರೆ ಭಾಷೆಯನ್ನು ಪ್ರೀತಿಸಿ ಆದರೆ ಮೊದಲಿಗೆ ಕನ್ನಡದಲ್ಲಿ ಮಾತನಾಡಿ ಎಂದರು.
ಜನಪದ ಗಾಯಕ ಹಾಗೂ ಸಂಗೀತ ನಿರ್ದೇಶಕ ಪಿಚ್ಚಳ್ಳಿ ಶ್ರೀನಿವಾಸ್ ಮಾತನಾಡಿ, ಜನಪದ ಎನ್ನುವುದು ಹಳ್ಳಿಯಲ್ಲಿ ತಾನಾಗಿಯೇ ಹುಟ್ಟುತ್ತದೆ. ಆದರೆ ಪಟ್ಟಣ ಪ್ರದೇಶದಲ್ಲಿ ಅದನ್ನು ಪ್ರದರ್ಶನದ ಮೂಲಕ ತೋರಿಸಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಚಂದ್ರಶೇಖರ ಬಿ. ಮಾತನಾಡಿ, ನಮ್ಮ ಕಾಲೇಜು ಪ್ರತಿ ವರ್ಷವೂ ಅತ್ಯಂತ ಅದ್ದೂರಿಯಾಗಿ ಕನ್ನಡ ಹಬ್ಬವನ್ನು ಆಚರಿಸುತ್ತದೆ. ಈ ಜವಬ್ದಾರಿಯನ್ನು ಹೊತ್ತ ಕನ್ನಡ ವಿಭಾಗವು ತುಂಬಾ ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದೆ. ಈ ವರ್ಷ ದೇಸಿ ಆಹಾರ ಮೇಳ, ದೇಸಿ ಆಟಗಳು ಮುಂತಾದ ಕಲೆಗಳೊಂದಿಗೆ ಆಚರಿಸಿರುವುದು ಇನ್ನೂ ಮೆರುಗನ್ನು ನೀಡಿದೆ ಎಂದರು.
ವಿದ್ಯಾರ್ಥಿಗಳು ವೇದಿಕೆಯಲ್ಲಿ ಯಕ್ಷಗಾನ, ಕಂಸಾಳೆ, ಡೊಳ್ಳು ಕುಣಿತ, ಜನಪದ ಸಮೂಹ ಗಾಯನ, ಜನಪದ ನೃತ್ಯ, ಕೋಲಾಟವನ್ನು ಪ್ರದರ್ಶಿಸಿದರು. ಕಾಲೇಜಿನ ಆವರಣದಲ್ಲಿ ವಿದೇಶಿ ಆಹಾರ ಮೇಳ, ದೇಸಿ ಆಟಗಳು, ಕರ್ನಾಟಕ ಗತವೈಭವದ ಮಾದರಿಗಳು ಮತ್ತು ಜನಪದ ಕಲೆಗಳ ಹಬ್ಬವನ್ನು ಹಮ್ಮಿಕೊಳ್ಳಲಾಗಿತ್ತು.
ಇದೇ ವೇಳೆ ಹಾಸ್ಯ ಕಲಾವಿದ ಸಾಧುಕೋಕಿಲ, ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಪ್ರೇಮಾವತಿ ಎಸ್.ಕೆ., ಅಡ್ವೆಂಚರ್ ಕ್ಲಬ್ನ ಸಂಚಾಲಕ ಡಾ. ಹೆಚ್.ಕೆ. ಸತೀಶ, ಎನ್ಎಸ್ಎಸ್ ಸಂಚಾಲಕಿ ಡಾ. ಶೋಭಾ ಸಿ ಮತ್ತು ಪ್ರೊ. ಹೆಚ್.ಎನ್. ಸುರೇಶ್, ಪ್ರವಾಸೋದ್ಯಮ ವಿಭಾಗದ ಮುಖ್ಯಸ್ಥೆ ಡಾ. ಅನಿತಾ ಕೆ.ಪಿ. ಮುಂತಾದವರು ಉಪಸ್ಥಿತರಿದ್ದರು.