ಬೆಂಗಳೂರು: 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ “ವೀರರಾಣಿ ಕಿತ್ತೂರು ಚನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ” ವಿಷಯಾಧಾರಿತ ಸ್ವಾತಂತ್ರ್ಯೋತ್ಸವ 218ನೇ ಫಲಪುಷ್ಪ ಪ್ರದರ್ಶನ-2025ನ್ನು ಆಗಸ್ಟ್ 07 ರಿಂದ 18 ರವರೆಗೆ 12 ದಿನಗಳ ಕಾಲ ಲಾಲ್ಬಾಗ್ ಗಾಜಿನಮನೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ.ಶಮ್ಲಾ ಇಕ್ಬಾಲ್ ಅವರು ತಿಳಿಸಿದರು.
ಲಾಲ್ಬಾಗ್ನ ತೋಟಗಾರಿಕೆ ಮಾಹಿತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆಗಸ್ಟ್ 07 ರಂದು ಬೆಳಿಗ್ಗೆ 10 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೀರರಾಣಿ ಕಿತ್ತೂರು ಚೆÀನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಿಷಯಾಧಾರಿತ ಸ್ವಾತಂತ್ರ್ಯೋತ್ಸವ 218ನೇ ಫಲಪುಷ್ಪ ಪ್ರದರ್ಶನದ ಉದ್ಘಾಟನೆ ನೆರವೇರಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಉದಯ್ ಬಿ ಗರುಡಾಚಾರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ಫಲಪುಷ್ಪ ಪ್ರದರ್ಶನದಲ್ಲಿ 1.75 ಲಕ್ಷಕ್ಕೂ ಹೆಚ್ಚಿನ ವಿಶೇಷ ಹೂ ಮತ್ತು ಎಲೆ ಜಾತಿಯ ಗಿಡಗಳ ಪ್ರದರ್ಶನ:
ಈ ಸಾಲಿನ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನವನ್ನು ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಇವರ ಮಾರ್ಗದರ್ಶನದಲ್ಲಿ “ವೀರರಾಣಿ ಕಿತ್ತೂರು ಚನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ” ಪರಿಕಲ್ಪನೆಯಡಿ ಹಮ್ಮಿಕೊಳ್ಳಲಾಗಿದೆ. ಈ ಬಾರಿ ಫಲಪುಷ್ಪ ಪ್ರದರ್ಶನದಲ್ಲಿ ಇಂಡೋ – ಅಮೇರಿಕನ್ ಹೈಬ್ರಿಡ್ ಸೀಡ್ಸ್ ಕಂಪನಿಯ ಆಕರ್ಷಕ ಹೂ ಜೋಡಣೆ ಹಲವು ವಿನೂತನ ಪರಿಕಲ್ಪನೆಯಡಿ ಹೂಗಿಡಗಳನ್ನು ಪ್ರದರ್ಶಿಸಲಿದೆ. 1.75 ಲಕ್ಷಕ್ಕೂ ಹೆಚ್ಚಿನ ವಿಶೇಷ ಹೂ ಮತ್ತು ಎಲೆ ಜಾತಿಯ ಗಿಡಗಳನ್ನು ಪ್ರದರ್ಶಿಸಲಿದ್ದಾರೆ ಎಂದು ತಿಳಿಸಿದರು.
ಗಾಜಿನ ಮನೆಯ ಪ್ರವೇಶ ದ್ವಾರದಲ್ಲಿ ಹೂಕುಂಡಗಳ ಆಕರ್ಷಕ ಜೋಡಣೆಯ ನಡುವೆ ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಅವರ ಎದೆಮಟ್ಟದ ಉತ್ಥಳಿಗಳನ್ನು ಪ್ರದರ್ಶಿಸಲಾಗುವುದು. ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ಕಿತ್ತೂರು ಸಂಸ್ಥಾನದ ಕೋಟೆಯ ಪ್ರಾತಿನಿಧಿಕ ಪುಷ್ಪ ಮಾದರಿ, ಕೋಟೆಯ ಪುಷ್ಪ ಮಾದರಿಯ ಮುಂದೆ ರಾಣಿ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯನ್ನು ಪ್ರದರ್ಶನಗೊಳಿಸಲಾಗುವುದು ಎಂದರು.
ಇಕೆಬಾನ, ತರಕಾರಿ ಕೆತ್ತನೆ, ಪುಷ್ಪಭಾರತಿ, ಬೋನ್ಸಾಯ್, ಡಚ್ ಹೂವಿನ ಜೋಡಣೆ, ಥಾಯ್ ಆರ್ಟ್, ಜಾನೂರು ಜೋಡಣೆಯ ಕಲೆಗಳ ಸ್ಫರ್ಧೆಗಳನ್ನು ಲಾಲ್ಬಾಗ್ನ ತೋಟಗಾರಿಕೆ ಮಾಹಿತಿ ಕೇಂದ್ರದಲ್ಲಿ ಆಗಸ್ಟ್ 9 ರಂದು ಮಧ್ಯಾಹ್ನ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷರಾದ ಶ್ರೀಮತಿ ಆರತಿಕೃಷ್ಣ ಈ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ವಿವಿಧ ಸ್ಫರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಆಗಸ್ಟ್ 16 ರಂದು ಮಧ್ಯಾಹ್ನ 2:30 ಗಂಟೆಗೆ ಲಾಲ್ಬಾಗ್ನ ಡಾ.ಎಂ.ಹೆಚ್ ಮರಿಗೌಡ ಸ್ಮಾರಕ ಭವನದಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಬಾರಿ ಫಲಪುಷ್ಪ ಪ್ರದರ್ಶನಕ್ಕೆ ಸುಮಾರು 9 ಲಕ್ಷದಿಂದ 10 ಲಕ್ಷಕ್ಕೂ ಹೆಚ್ಚು ವೀಕ್ಷಕರು ಆಗಮಿಸುವ ನಿರೀಕ್ಷೆಯಿದೆ ಎಂದರು.
ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧ:
ತೋಟಗಾರಿಕೆ ಇಲಾಖೆಯ ನಿರ್ದೇಶಕರಾದ ಡಿ.ಎಸ್. ರಮೇಶ್ ಮಾತನಾಡಿ, ಫಲ-ಪುಷ್ಟ ಪ್ರದರ್ಶನದ ರಕ್ಷಣೆ ಹಾಗೂ ಸುಧಾರಣೆಗೆ ಕೆಲವೊಂದು ಕ್ರಮಗಳನ್ನು ಕೈಗೊಂಡಿರುವುದರಿಂದ ಲಾಲ್ಬಾಗ್ ಒಳಾಂಗಣದಲ್ಲಿ ತುರ್ತುಸೇವಾ ವಾಹನಗಳನ್ನು ಹೊರತುಪಡಿಸಿ ಇತರೆ ವಾಹನಗಳ ಓಡಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಲಾಲ್ಬಾಗ್ ಪ್ರವೇಶ ದ್ವಾರಗಳಲ್ಲಿ ಕ್ಲೋಕ್ ರೂಂಗಳ ವ್ಯವಸ್ಥೆ ಕಲ್ಪಿಸಲಾಗುವುದು. ಪ್ರವಾಸಿಗರು ಕ್ಯಾಮರಾಗಳನ್ನು ಗಾಜಿನ ಮನೆ ಒಳಗೊಂಡಂತೆ ಲಾಲ್ಬಾಗ್ನ ಎಲ್ಲಾ ಆಯ್ದ ಪ್ರದೇಶಗಳಲ್ಲಿ ಬಳಸಬಹುದಾಗಿದೆ. ಲಾಲ್ಬಾಗ್ನ ಯಾವುದೇ ಮಳಿಗೆದಾರರು ಹಾಗೂ ಸಾರ್ವಜನಿಕರು ಪ್ಲಾಸ್ಟಿಕ್ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. 1ರಿಂದ 10ನೇ ತರಗತಿವರೆಗಿನ ಶಾಲಾ ಸಮವಸ್ತ್ರ ಧರಿಸಿ ಬರುವ ಶಾಲಾ ಮಕ್ಕಳಿಗೆ ರಜಾದಿನಗಳನ್ನು ಹೊರತುಪಡಿಸಿ ಪ್ರದರ್ಶನದ ಪೂರ್ಣ ಸಮಯದಲ್ಲಿ ಉಚಿತ ಪ್ರವೇಶವನ್ನು ಕಲ್ಪಿಸಲಾಗುವುದು. ಹಾಪ್ಕಾಮ್ಸ್ ವತಿಯಿಂದ ಫ್ರೂಟ್ಸ್ ಸಲಾಡ್, ಫ್ರೂಟ್ಸ್ಜ್ಯೂಸ್ ಮತ್ತು ಡ್ರೈ ಫ್ರೂಟ್ಸ್ ಮಾರಾಟ ವ್ಯವಸ್ಥೆ ಇರುತ್ತದೆ ಎಂದರು.
ಭದ್ರತಾ ದೃಷ್ಠಿಯಿಂದ 136 ಸಿಸಿಟಿವಿ ಕ್ಯಾಮರಾ ಅಳವಡಿಕೆ:
ಕೆಲವೊಂದು ಭದ್ರತಾ ಕ್ರಮ ಹಾಗೂ ವಿಶೇಷ ರಕ್ಷಣಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಲಾಲ್ಬಾಗ್ನ ಎಲ್ಲಾ ನಾಲ್ಕು ಪ್ರವೇಶ ದ್ವಾರಗಳಲ್ಲಿ ಡೋರ್ಫ್ರೇಮ್ ಮೆಟಲ್ ಡಿಟೆಕ್ಟರ್ಸ್ಗಳನ್ನು ಅಳವಡಿಸಲಾಗುವುದು. ಎಲ್ಲಾ ಪ್ರವೇಶ ದ್ವಾರಗಳು, ಗಾಜಿನ ಮನೆ ಮತ್ತು ಲಾಲ್ಬಾಗ್ನ ಎಲ್ಲಾ ಆಯ್ದ ಪ್ರದೇಶಗಳಲ್ಲಿ ಹ್ಯಾಂಡ್ಹೆಲ್ಡ್ ಮಿಷಿನ್ಗಳ ಮೂಲಕ ಆಗಮಿಸುವ ಎಲ್ಲಾ ವಿಕ್ಷಕರು ಮತ್ತು ಅನುಮಾನಾಸ್ಪದ ವ್ಯಕ್ತಿಗಳನ್ನು ತಪ್ಪಾಸಣೆಗೊಳಿಸಲಾವುದು. ಒಟ್ಟಾರೆ 136 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುವುದು. ಅವಶ್ಯಕತೆಗನುಗುಣವಾಗಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯ ನಿಯೋಜನೆ ಮಾಡಲಾಗುವುದು. ಹೆಚ್ಚುವರಿಯಾಗಿ ಆಂತರಿಕ ಭದ್ರತಾ ಸಿಬ್ಬಂದಿಗಳ ಸೇವೆ, ಹೋಂಗಾರ್ಡ್ ಸೇವೆ, ತೋಟಗಾರಿಕೆ ತರಬೇತಿ ವಿದ್ಯಾರ್ಥಿಗಳ ಸೇವೆ ಮತ್ತು ತೋಟಗಾರರ ಸೇವೆ ಪಡೆಯಲಾಗುವುದು ಎಂದರು.
ಲಾಲ್ಬಾಗ್ನ ಎಲ್ಲಾ 4 ದ್ವಾರಗಳಿಗೆ ಇದೇ ಪ್ರಥಮ ಬಾರಿಗೆ ಸಂಪರ್ಕ:
ಆಯ್ದ ಸ್ಥಳಗಳಲ್ಲಿ ಪ್ರತ್ಯೇಕ ಔಟ್ಪೋಸ್ಟನ್ನು ತೆರೆಯುವುದರ ಜೋತೆಗೆ ಎತ್ತರದ ಟವರ್ ವೇದಿಕೆಯಿಂದ ಪೊಲೀಸ್ ಕಣ್ಗಾವಲು ಕೈಗೊಳ್ಳಲಾಗುವುದು. ಮುಂಜಾಗ್ರತಾ ಕ್ರಮವಾಗಿ ಒಂದು ಸುಸಜ್ಜಿತ ಅಗ್ನಿಶಾಮಕ ದಳದ ವಾಹನವನ್ನು ಲಾಲ್ಬಾಗ್ನ ಗಾಜಿನ ಮನೆಯ ಬಳಿ ನಿಲುಗಡೆ ಮಾಡಲಾಗುವುದು. ಈಗಾಗಲೇ ಸಸ್ಯ ತೋಟದಲ್ಲಿ 38 ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ಅಳವಡಿಸಲಾಗಿದೆ. 5 ಪ್ಯಾರಾ ಮೆಡಿಕಲ್ ತಂಡವುಳ್ಳ ಮಿನಿ ಆಸ್ಪತ್ರೆಯನ್ನು ತೆರೆದು ಹಾವು, ಜೇನುಹುಳು, ನಾಯಿಗಳ ಕಚ್ಚುವಿಕೆಗೆ ಸಂಬಂಧಿಸಿದ ಚುಚ್ಚು ಮದ್ದುಗಳನ್ನು ಸಹ ಮುನ್ನೆಚ್ಚರಿಯಾಗಿ ಇರಿಸಲಾಗುವುದು. 4 ಪ್ರವೇಶ ದ್ವಾರಗಳಲ್ಲಿ ಆಂಬ್ಯುಲೆನ್ಸ್ಗಳ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಗಾಜಿನ ಮನೆ ಬಳಿ ತೆರೆಯಲಾಗುವ ಔಟ್ಪೋಸ್ಟ್ ನಿಂದ ಲಾಲ್ಬಾಗ್ನ ಎಲ್ಲಾ 4 ದ್ವಾರಗಳಿಗೆ ಇದೇ ಪ್ರಥಮ ಬಾರಿಗೆ ಸಂಪರ್ಕ ಕಲ್ಪಿಸಲಾಗುವುದು ಎಂದರು.
ಆನ್ಲೈನ್ನಲ್ಲಿ ಟಿಕೆಟ್ ಖರೀದಿಸಲು ಅವಕಾಶ:
ವೀಕ್ಷಣೆಗೆ ಬರುವ ಎಲ್ಲಾ ಪ್ರವಾಸಿಗರು ಯಾವುದೇ ಕೈಚೀಲಗಳನ್ನು ತಿನ್ನುವ ಪದಾರ್ಥಗಳನ್ನು ಕಡ್ಡಾಯವಾಗಿ ನಿಷೇಧಿಸಿದೆ. ಲಾಲ್ಬಾಗ್ನ ಎಲ್ಲಾ ದ್ವಾರಗಳಲ್ಲಿ ಎಲೆಕ್ಟ್ರಾನಿಕ್ ಟಿಕೆಟಿಂಗ್ ಮಿಷಿನ್ಗಳ ಮೂಲಕ ಟಿಕೆಟ್ ವಿತರಿಸಲಾಗುವುದು. ಸಾಮಾನ್ಯ ದಿನಗಳಲ್ಲಿ ವಯಸ್ಕರರಿಗೆ
ಟಿಕೆಟ್ ದರ 80 ರೂ. ಗಳಾಗಿದ್ದು ರಜಾ ದಿನಗಳಲ್ಲಿ ಟಿಕೆಟ್ ದರ 100 ರೂ.ಗಳಾಗಿದ್ದು, 12 ವರ್ಷದೊಳಗಿನ ಮಕ್ಕಳಿಗೆ ಪ್ರದರ್ಶನದ ಎಲ್ಲಾ ದಿನಗಳು ಟಿಕೆಟ್ಗೆ 30 ರೂ.ಗಳಾಗಿವೆ.
ಟಿಕೆಟ್ಗಳನ್ನು https://hasiru.karnataka.gov.
ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಂಡುವ ನಿಟ್ಟಿನಲ್ಲಿ ಪ್ರವೇಶ ಟಿಕೆಟ್ಗಳನ್ನು ಗಾಜಿನ ಮನೆಯ ಬಳಿ ಬೆಳಿಗ್ಗೆ 6 ಗಂಟೆ ಯಿಂದ 9 ಗಂಟೆವರೆಗೆ ಹಾಗೂ ಲಾಲ್ಬಾಗ್ನ ಎಲ್ಲಾ ಪ್ರವೇಶ ದ್ವಾರಗಳಲ್ಲಿ ಬೆಳಿಗ್ಗೆ 9 ಗಂಟೆ ಯಿಂದ ಸಂಜೆ 6:30 ಗಂಟೆವರೆಗೆ ವಿತರಿಸಲಾಗುವುದು. ಗಾಜಿನ ಮನೆಯ ಪ್ರವೇಶವು ರಾತ್ರಿ 7 ಗಂಟೆವರೆಗೆ ಇರುತ್ತದೆ. ಟ್ರಾಪಿಕ್ ಸಮಸ್ಯೆಯನ್ನು ತಪ್ಪಿಸುವ ಸಲುವಾಗಿ ಸಾರ್ವಜನಿಕರು ಆದಷ್ಟು ಮೆಟ್ರೋ ರೈಲು ಸೇವೆಯನ್ನು ಬಳಸಲು ಕೋರಲಾಗಿದೆ ಎಂದು ಹೇಳಿದರು.
ಫಲ-ಪುಷ್ಪ ಪ್ರದರ್ಶನಕ್ಕೆ ವಾಹನದಲ್ಲಿ ಆಗಮಿಸುವ ವಿಕ್ಷಕರು ಜೋಡಿ ರಸ್ತೆಯ ಶಾಂತಿನಗರ ಬಸ್ ನಿಲ್ದಾಣದ ಬಳಿಯಿರುವ ಬಹುಮಹಡಿ ವಾಹನ ನಿಲುಗಡೆ (ಮಲ್ಟಿಸ್ಟೋರಿ ಪಾರ್ಕಿಂಗ್), ಜೋಡಿ ರಸ್ತೆ ಬಳಿಯ ಹಾಫ್ಸ್ ಕಾಮ್ಸ್ ಆವರಣ ಹಾಗೂ ಜೆ.ಜಿ ರಸ್ತೆಯಲ್ಲಿನ ಬಿಬಿಎಂಪಿ ಬಹುಮಹಡಿ ವಾಹನ ನಿಲುಗಡೆ ಪ್ರದೇಶದಲ್ಲಿ ವಾಹನಗಳನ್ನು ನಿಲುಗಡೆ ಮಾಡಬೇಕು. ದ್ವಿಚಕ್ರ ವಾಹನದಲ್ಲಿ ಬರುವವರು ಲಾಲ್ಬಾಗ್ ಮುಖ್ಯ ದ್ವಾರದ ಬಳಿಯಿರುವ ಅಲ್ಅಮೀನ್ ಕಾಲೇಜ್ ಆವರಣಗಳಲ್ಲಿ ವಾಹನಗಳನ್ನು ನಿಲ್ಲುಸಲು ಮನವಿ ಮಾಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ಎಂ ಜಗದೀಶ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಬಾಲಕೃಷ್ಣ, ಕೆ. ಪರಶಿವಮೂರ್ತಿ, ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.