ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಂದಾಯ ವಿಭಾಗದಲ್ಲಿ ಆಸ್ತಿ ತೆರಿಗೆ ತಂತ್ರಾಂಶ ಹಾಗೂ ಪಾಲಿಕೆ ಸ್ವತ್ತುಗಳ ಡಿಜಿಟಲೀಕರಣದ ಕುರಿತಂತೆ ಅಧ್ಯಯನ ನಡೆಸಲು ಬಂದಿದ್ದ ಕೊಲ್ಹಾಪುರ ಮುನಿಸಿಪಲ್ ಕಾರ್ಪೊರೇಷನ್ ನಿಯೋಗವು ಕಂದಾಯ ಅಧಿಕಾರಿಗಳ ಜೊತೆ ಕೂಲಂಕುಶವಾಗಿ ಚರ್ಚಿಸಿ ಮಾಹಿತಿ ಪಡೆದುಕೊಂಡರು.
ಕೊಲ್ಹಾಪುರ ಮುನಿಸಿಪಲ್ ಕಾರ್ಪೊರೇಷನ್ ನ ಆಡಳಿತಗಾರರು ಮತ್ತು ಆಯುಕ್ತರಾದ ಮಂಜೂಲೆಕ್ಷ್ಮಿರವರ ನಿಯೋಗವು ಪಾಲಿಕೆ ಕೇಂದ್ರ ಕಛೇರಿಗೆ ಭೇಟಿ ನೀಡಿದರು. ಈ ವೇಳೆ ಕಂದಾಯ ವಿಭಾಗದ ಜಂಟಿ ಆಯುಕ್ತರಾದ ಲಕ್ಷ್ಮಿದೇವಿ ರವರು ಪಾಲಿಕೆ ಕೇಂದ್ರ ಕಛೇರಿ ಆವರಣದಲ್ಲಿ ಸ್ವಾಗತಿಸಿ, ಕಂದಾಯ ವಿಭಾಗಕ್ಕೆ ಕರೆದೊಯ್ದು, ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಕುರಿತಂತೆ ಎಲ್ಲಾ ಮಾಹಿತಿಯನ್ನು ಒದಗಿಸಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ತಂತ್ರಾಂಶವು ಯಾವ ರೀತಿ ಕಾರ್ಯನಿರ್ವಹಿಸಲಿದೆ, ನಾಗರೀಕರು ಅದನ್ನು ಸುಲಭ ರೀತಿ ಬಳಸುವ ರೀತಿಯಲ್ಲಿ ವಿನ್ಯಾಸ ಮಾಡಿರುವ ಬಗ್ಗೆ ಮಾಹಿತಿ ನೀಡಿದರು. ಜೊತೆಗೆ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆಸ್ತಿಗಳನ್ನು ಡಿಜಿಟಲೀಕರಣ ಮಾಡುತ್ತಿದ್ದು, ಅದರ ಕಾರ್ಯವೈಖರಿಯ ಕುರಿತು ವಿವರವಾಗಿ ಮಾಹಿತಿ ನೀಡಲಾಯಿತು.
ನಗರದಲ್ಲಿ ಎಷ್ಟು ಆಸ್ತಿಗಳಿವೆ, ಎಷ್ಟು ತೆರಿಗೆಯನ್ನು ನಿಗದಿಪಡಿಸಲಾಗಿದೆ ಎಂಬುದು ಸೇರಿದಂತೆ ಆಸ್ತಿ ತೆರಿಗೆಯ ಸಂಪೂರ್ಣ ವ್ಯವಸ್ಥೆ ಯಾವ ರೀತಿ ಇದೆ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡರು.
ಡಿಜಿಟಲೀಕರಣದ ಕುರಿತ ಕಾರ್ಯವೈಖರಿಯ ವೀಕ್ಷಣೆ:
ಕೊಲ್ಹಾಪುರ ಮುನಿಸಿಪಲ್ ಕಾರ್ಪೊರೇಷನ್ನ ನಿಯೋಗವು ಬಿಬಿಎಂಪಿ ಪೂರ್ವ ವಲಯ ವ್ಯಾಪ್ತಿಯಲ್ಲಿ ಡಿಜಿಟಲೀಕರಣ ಪ್ರಕ್ರಿಯೆ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಕೊಲ್ಹಾಪುರ ಮುನಿಸಿಪಲ್ ಕಾರ್ಪೊರೇಷನ್ನ ಸಿಸ್ಟಮ್ ಮ್ಯಾನೇಜರ್ ಯಶಪಾಲ್ ರಜಪೂತ್, ತೆರಿಗೆ ಮೌಲ್ಯಮಾಪಕರಾದ ಸುಧಾಕರ ಚಲ್ಲವಾಡ, ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.