ಬೆಂಗಳೂರು: ಭೂಮಾಪನ ಇಲಾಖೆಯಲ್ಲಿ ಭೂಮಾಪನ ಕಾರ್ಯವನ್ನು ಹೆಚ್ಚು ನಿಖರವಾಗಿ, ವೇಗವಾಗಿ ಮತ್ತು ದಕ್ಷತೆಯಿಂದ ನಿರ್ವಹಿಸಲು ಹಾಗೂ ಸಿಬ್ಬಂದಿಗಳಿಗೆ ಒತ್ತಡ ಕಡಿಮೆ ಮಾಡುವ ದೃಷ್ಟಿಯಿಂದ ಆಧುನಿಕ ತಂತ್ರಜ್ಞಾನ ಆಧಾರಿತ “ರೋವರ್” ಉಪಕರಣಗಳು ಭೂಮಾಪಕರಿಗೆ ಸಹಕಾರಿಯಾಗಲಿವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಭೂಮಾಪನ ಇಲಾಖೆ ಆಯುಕ್ತರ ಕಛೇರಿಯ ಆವರಣದಲ್ಲಿ ಭೂಮಾಪನ ಇಲಾಖೆಯಲ್ಲಿ ಹೊಸದಾಗಿ ಖರೀದಿಸಿರುವ ಆಧುನಿಕ ಅಳತೆ ಉಪಕರಣವಾದ 465 “ರೋವರ್” ಉಪಕರಣಗಳನ್ನು ಇಲಾಖೆಯ ಭೂಮಾಪಕರುಗಳಿಗೆ ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಾಂಕೇತಿಕವಾಗಿ ರೋವರ್ ಉಪಕರಣಗಳನ್ನು ವಿತರಣೆ ಮಾಡಿ ನಂತರ ಮಾತನಾಡಿದ ಸಚಿವರು, ಭೂಮಾಪನ ಇಲಾಖೆಯು ಸರ್ಕಾರದ ಬೆನ್ನೆಲುಬು. ಇಲಾಖೆಯಲ್ಲಿ ಮಾಡುವ ಕೆಲಸವು ವಿವಿಧ ಇಲಾಖೆ ಹಾಗೂ ಜನರ ಜೀವನದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಭೂಮಾಪನ ಕಾರ್ಯವನ್ನು ಇಲಾಖೆಯಲ್ಲಿ ಸಾಂಪ್ರದಾಯಿಕ ಸರ್ವೆ ಉಪಕರಣಗಳಾದ ಚೈನ್ ಮತ್ತು ದ್ರಾಸಸ್ ಸಟಾಫ್, ಪ್ಲೇನ್ ಟೇಬಲ್ ಇತರೆ ಉಪಕರಣಗಳನ್ನು ಬಳಸಲಾಗುತ್ತಿತ್ತು. ಇದರಿಂದ ಭೂಮಾಪನ ಕಾರ್ಯಕ್ಕೆ ಹೆಚ್ಚಿನ ಸಮಯ ಹಾಗೂ ಹೆಚ್ಚಿನ ಮಾನವ ಸಂಪನ್ಮೂಲದ ಅಗತ್ಯವಿದ್ದು, ಇದಕ್ಕೆ ಪರಿಹಾರೋಪಾಯವಾಗಿ ಹಾಗೂ ಇಂದಿನ ಆಧುನಿಕ ತಂತ್ರಜ್ಞಾನ ಯುಗಕ್ಕೆ ಸಮನಾಗಿ ಆಧುನಿಕ ಉಪಕರಣಗಳ ಮುಖಾಂತರ ಕಡಿಮೆ ಅವಧಿಯಲ್ಲಿ ಭೂಮಾಪನ ಕಾರ್ಯಗಳನ್ನು ಕೈಗೊಂಡು ನಿಖರವಾದ ಡಿಜಿಟಲ್ ದಾಖಲೆಗಳನ್ನು ಸಿದ್ದಪಡಿಸಿ ಸಾರ್ವಜನಿಕರಿಗೆ ತಲುಪಿಸುವ ಉದ್ದೇಶದಿಂದ ಭೂಮಾಪಕರುಗಳಿಗೆ ಆಧುನಿಕ ತಂತ್ರಜ್ಞಾನದ ರೋವರ್ ಉಪಕರಣಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಮುಂಬರುವ ದಿನಗಳಲ್ಲಿ ಪ್ರತಿಯೊಬ್ಬ ಭೂಮಾಪಕರಿಗೂ ಒಂದು ರೋವರ್ ಯಂತ್ರ ಒದಗಿಸಲು ಇಲಾಖೆಯಲ್ಲಿ ಸುಮಾರು 5000 ರೋವರ್ಗಳನ್ನು ಹಂತ ಹಂತವಾಗಿ ಖರೀದಿಸಿ ನೀಡವ ಉದ್ದೇಶವಿದೆ. ರೋವರ್ ಉಪಕರಣವು ಭೂಮಾಪನ ಕಾರ್ಯದಲ್ಲಿ ನಿಖರವಾದ ದತ್ತಾಂಶ ಸಂಗ್ರಹಣೆಗಾಗಿ ರೋವರ್ಗಳನ್ನು ಬಳಸಲಾಗುತ್ತದೆ. ನಂತರ ಈ ದತ್ತಾಂಶವನ್ನು ಜಿಐಎಸ್ ಮಾಧ್ಯಮದಲ್ಲಿ ಸುಲಭವಾಗಿ ಸಂಸ್ಕರಿಸಬಹುದಾಗಿರುತ್ತದೆ. ಡಿಜಿಟಲ್ ಮಾಧ್ಯಮದಲ್ಲಿ ನಕ್ಷೆಯನ್ನು ಸಿದ್ದಪಡಿಸಬಹುದಾಗಿರುತ್ತದೆ. ರೋವರ್ಗಳನ್ನು ಬಳಸಿ ಭೂಮಾಪನ ಕಾರ್ಯವನ್ನು ಹೆಚ್ಚು ನಿಖರವಾಗಿ, ವೇಗವಾಗಿ ಮತ್ತು ದಕ್ಷತೆಯಿಂದ ನಿರ್ವಹಿಸಬಹುದಾಗಿರುತ್ತದೆ. ರೋವರ್ಗಳಿಂದ ಕೆರೆಗಳ ಅಳತೆ, ಅರಣ್ಯ ಪ್ರದೇಶ, ರಕ್ಷಣಾ ಇಲಾಖೆ ಜಮೀನಿನ ಅಳತೆ ಹೀಗೆ ವಿವಿಧ ಅಳತೆ ಕಾರ್ಯಗಳನ್ನು ತ್ವರಿತವಾಗಿ ನಿರ್ವಹಿಸಲು ಹಾಗೂ ಭೂ ನಿರ್ವಹಣಾ ಕಾರ್ಯಗಳಿಗೆ ಸಹಕಾರಿಯಾಗಿರುತ್ತದೆ ಎಂದು ತಿಳಿಸಿದರು.
ಇಲಾಖೆ ಕಾಲಕ್ಕೆ ತಕ್ಕಂತೆ ಬದಲಾಗಬೇಕು
ಇಲಾಖೆಯು ಕಾಲಕ್ಕೆ ತಕ್ಕಂತೆ ಬದಲಾವಣೆ ಆಗಬೇಕು. ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಬೇಕು. ಸಿಬ್ಬಂದಿಗಳಿಗೆ ಹೊರೆ ಕಡಿಮೆ ಮಾಡಿ ಸಾಮಾಜಿಕ ನ್ಯಾಯ ಸಿಗುವ ಹಾಗೆ ಮಾಡಬೇಕು. ಮಾಜಿ ಪ್ರಧಾನ ಮಂತ್ರಿ ದಿ. ರಾಜೀವ್ ಗಾಂಧಿ ಅವರು ಭಾರತ ದೇಶಕ್ಕೆ ಕಂಪ್ಯೂಟರ್ಗಳನ್ನು ಬ್ಯಾಂಕ್ನಲ್ಲಿ ಅಳವಡಿಸಿದರು. ಈಗ ಕಂಪ್ಯೂಟರ್ಗಿಂತ ಮೊಬೈಲ್ ಪೋನ್ಗಳು ತಂತ್ರಜ್ಞಾನದಲ್ಲಿ ಮುಂದಿದೆ. ಈಗ ನಮ್ಮ ಮುಂದೆ ಆಧುನಿಕ ತಂತ್ರಜ್ಞಾನವಿರುವಾಗ ಸಿಬ್ಬಂದಿಗಳನ್ನು ಅನವಶ್ಯಕವಾಗಿ ಜಮೀನಿನಲ್ಲಿ ದುಡಿಸುವುದು ನ್ಯಾಯಸಮ್ಮತವಲ್ಲವೆಂದು ಅಭಿಪ್ರಾಯಪಟ್ಟರು.
ಇಲಾಖೆಯಲ್ಲಿ ಬಹು ಮಾಲೀಕತ್ವವುಳ್ಳ ಪಹಣಿಗಳನ್ನು ಅಳತೆಗೆ ಒಳಪಡಿಸುವ ಮೂಲಕ ಪ್ರತಿ ಹಿಡುವಳಿದಾರರಿಗೆ ಪೋಡಿ ಮಾಡಿ ಪ್ರತ್ಯೇಕ ಆರ್.ಟಿ.ಸಿ.ಯನ್ನು ವಿತರಿಸಲಾಗುತ್ತಿದೆ. ಈಗಾಗಲೇ 16,630 ಗ್ರಾಮಗಳ ಅಳತೆ ಕಾರ್ಯ ಪೂರ್ಣಗೊಂಡಿರುತ್ತದೆ. ಪೋಡಿ ಮುಕ್ತ ಗ್ರಾಮ ಅಭಿಯಾನ 2.0 ಅಡಿಯಲ್ಲಿ ಬಹುಮಾಲೀಕತ್ವ ಪಹಣಿಗಳಲ್ಲಿನ ಖಾಸಗಿ ಜಮೀನಿನ ಪೋಡಿ ದುರಸ್ತಿಯನ್ನು ಪ್ರಸ್ತುತ ಮೋಜಿಣಿ ತಂತ್ರಾಂಶದ ಮೂಲಕ 6,925 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಅಳತೆ ಕಾರ್ಯ ಪ್ರಾರಂಭಿಸಲಾಗಿದೆ. ಈವರೆಗೆ 1573 ಗ್ರಾಮಗಳಲ್ಲಿ ಪೋಡಿ ದುರಸ್ತಿ ಕೆಲಸ ಸಹ ಪೂರ್ಣಗೊಳಿಸಲಾಗಿದೆ ಎಂದರು.
ರಾಜ್ಯದಲ್ಲಿ ಡ್ರೋಣ್ ಮೂಲಕ ಸರ್ವೇ ಮಾಡುತ್ತಿದ್ದು 21 ಜಿಲ್ಲೆ ಹಾಗೂ 21,710 ಗ್ರಾಮಗಳು ಪೂರ್ಣಗೊಂಡಿವೆ. ಉಳಿದ ಜಿಲ್ಲೆಗಳಲ್ಲಿ ಶೀಘ್ರವಾಗಿ ಮುಗಿಸಲಾಗುತ್ತದೆ. ಸ್ವಮಿತ್ವ ಯೋಜನೆಯಲ್ಲಿ ಎಲ್ಲಾ ಗ್ರಾಮಠಾಣ ಆಸ್ತಿಗಳಿಗೆ ಸ್ವಮಿತ್ವ ಕಾರ್ಡ್ ವಿತರಿಸುವ ಗುರಿ ಇದೆ ಎಂದರು.
ಆಧುನಿಕ ತಂತರಜ್ಞಾನ, ಸ್ಪರ್ಶದಿಂದ ಭೂಮಾಪನ ಮಾಡಲಾಗುತ್ತಿದೆ
ಸರ್ಕಾರವು ಜನಪರವಾಗಿ ಕೆಲಸ ಮಾಡುವ ದೃಢಸಂಕಲ್ಪ ಹೊಂದಿದೆ. ಆಧುನಿಕ ತಂತರಜ್ಞಾನದ ಸ್ಪರ್ಶದಿಂದ ಭೂಮಾಪನ ಮಾಡಲಾಗುತ್ತಿದೆ. ಜಮೀನುಗಳಿಗೆ ಹದ್ದುಬಸ್ತು ಮಾಡಲು 120 ರಿಂದ 180 ದಿನವಾಗುತ್ತಿತ್ತು ಕೆಲವೊಮ್ಮೆ 2 ವರ್ಷ ತೆಗೆದುಕೊಳ್ಳಲಾಗುತ್ತಿತ್ತು. ಈಗ 45 ದಿನದಲ್ಲಿ ಹದ್ದುಬಸ್ತು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕಂದಾಯ ಇಲಾಖೆಯ ರಾಜೇಂದ್ರ ಕುಮಾರ್ ಕಟಾರಿಯಾ ಮಾತನಾಡಿ, ಎಲ್ಲಾ ಹಳ್ಳಿಗಳಿಗೂ ಕೂಡ ಮುಂದಿನ ದಿನದಲ್ಲಿ ರೋವರ್ಗಳನ್ನು ನೀಡಲಾಗುವುದು. ಇದರಿಂದ ರೈತರೂ ಸೇರಿದಂತೆ ಸಾಮಾನ್ಯ ಜನರ ಸಮಸ್ಯೆಗಳು ಕಡಿಮೆಯಾಗುತ್ತದೆ. ಮುಂದಿನ ದಿನಗಳಲ್ಲಿ ಗ್ರಾಮಠಾಣ ಆಸ್ತಿಗಳಿಗೆ ಸ್ವಮಿತ್ವ ಕಾರ್ಡ್ ವಿತರಿಸಲಾಗುತ್ತದೆ ಎಂದು ತಿಳಿಸಿದರು.
ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಆಯುಕ್ತ ಜೆ. ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಂದಾಯ ಇಲಾಖೆಯು ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಬ್ರಿಟಿಷರ ಕಾಲದಲ್ಲಿ ಕೊಡಗು ಜಿಲ್ಲೆಯ ಸರ್ವೆ 100 ವರ್ಷಗಳ ಕಾಲ ಅಳತೆ ಕಾರ್ಯ ನಡೆದಿದೆ. ಸಾಂಪ್ರಾದಾಯಿಕ ಪದ್ದತಿಯಲ್ಲಿ ಭೂಮಾಪನ ಮಾಡಲಾಗುತ್ತಿದ್ದು, ಈಗ ಆಧುನೀಕರಣ ಉಪಕರಣಗಳನ್ನು ಉಪಯೋಗಿಸಿ ಮಾಡಲಾಗುತ್ತಿದೆ. ಪ್ರತಿ ದಿನ ಸಾರ್ವಜನಿಕರಿಂದ ಸುಮಾರು 6000 ಅರ್ಜಿಗಳು ಬರುತ್ತವೆ. ರಾಜ್ಯದ 31 ಜಿಲ್ಲೆಗಳಲ್ಲಿ 21 ಜಿಲ್ಲೆಗಳಲ್ಲಿ ಡ್ರೋನ್ ಸರ್ವೆ ಕಾರ್ಯ ಮುಗಿದಿದ್ದು, ಉಳಿದ ಜಿಲ್ಲೆಗಳಲ್ಲಿ ಸರ್ವೇ ಕಾರ್ಯ ಮಾಡಲಾಗುತ್ತಿದೆ.
1,227 ಪರವಾನಗಿ ಭೂಮಾಪಕರನ್ನು ನೇಮಕಾತಿ ಮಾಡಿಕೊಂಡು ತರಬೇತಿ ನೀಡಿ, ಅಳತೆ ಕಾರ್ಯದಲ್ಲಿ ತೊಡಗಿಸಲಾಗಿದೆ. ಇದರಿಂದಾಗಿ ಪ್ರತಿ ಮಾಹೆ 30,000ಕ್ಕೂ ಹೆಚ್ಚು ಅಳತೆ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಸೇರಿದಂತೆ ಭೂಮಾಪನ ಇಲಾಖೆಯ ಹಿರಿಯ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.