ಬಳ್ಳಾರಿ: ಎಸ್ಸಿಎಸ್ಪಿ/ಟಿಎಸ್ಪಿ ಕ್ರಿಯಾ ಯೋಜನೆಯಲ್ಲಿ ಎಸ್ ಸಿ, ಎಸ್ ಟಿ ಸಮುದಾಯದ ವೃತ್ತಿನಿರತ ವಕೀಲರಿಗೆ ಕಾನೂನು ಪುಸ್ತಕ ಮತ್ತು ಲ್ಯಾಪ್ ಟ್ಯಾಪ್ ನೀಡುವಂತೆ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ (ದೌರ್ಜನ್ಯ ನಿಯಂತ್ರಣ) ಬಳ್ಳಾರಿ ಜಿಲ್ಲಾ ಜಾಗೃತಿ ಮತ್ತು ಮೇಲುಸ್ತುವಾರಿ ಸಮಿತಿ ಮಾಜಿ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರು ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಮನವಿ ಪತ್ರದಲ್ಲಿ “ಶಿಕ್ಷಣ ಪ್ರತಿಯೊಬ್ಬನ ಜನ್ಮಸಿದ್ದ ಹಕ್ಕು ಮಾತ್ರವಲ್ಲ ಅದು ಸಮಾಜ ಬದಲಾವಣೆಯ ಅಸ್ತ್ರ ಎಂದು ನಂಬಿದ್ದ ಇತಿಹಾಸ ಕಂಡ ಬಹುದೊಡ್ಡ ದಾರ್ಶನಿಕ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ರವರ ಬಹುದೊಡ್ಡ ಘೋಷಣೆ. ಶಿಕ್ಷಣವೇ ಸಮಾಜದ ಎಲ್ಲಾ ಖಾಯಿಲೆಗಳಿಗೆ ಶ್ರೇಷ್ಠ ಔಷಧಿ, ಶಿಕ್ಷಣ ಹೊರತಾಗಿ ಇನ್ನೆನನ್ನು ಭಾರತದ ದಮನಿತ ವರ್ಗಗಳ ಸಮಸ್ಯೆಗಳಿಗೆ ಪರಿಹಾರವಲ್ಲ ಎಂಬುವ ಅವರ ದೃಢ ನಿರ್ಧಾರದಿಂದ ಪ್ರಭಾವಿತರಾದ ಯುವ ಜನತೆ ಶಿಕ್ಷಣದ ಕಡೆ ಒಲವು ತೋರಿ ದಲಿತ ಸಮುದಾಯದ ಯುವಕರು ಕಾನೂನು ಶಿಕ್ಷಣ ಪಡೆದು ಹೆಚ್ಚಿನ ಸಂಖ್ಯೆಯಲ್ಲಿ ವಕೀಲ ವೃತ್ತಿ ಬರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.
ಆದರೆ ನೂತನವಾಗಿ ವಕೀಲ ವೃತ್ತಿ ಪ್ರಾರಂಭಿಸಿರುವ ಮತ್ತು ವೃತ್ತಿ ನಿರತ ವಕೀಲರಿಗೆ ಬದಲಾದ ಕಾನೂನುಗಳು, ನ್ಯಾಯಾಂಗದ ಕಲಿಕೆಯಲ್ಲಿ ಆಧುನೀಕರಣ ಮತ್ತು ತಾಂತ್ರಿಕ ಕ್ರಮಗಳನ್ನು ಅನುಸರಿಸುತ್ತಿದ್ದು ನ್ಯಾಯಾಲಯದ ದಾಖಲೆಗಳನ್ನು ಡಿಜಿಟಲೀಕರಣ, ಆನ್ ಲೈನ್ ನಲ್ಲಿ ಪ್ರಕರಣಗಳನ್ನು ಸಲ್ಲಿಸುವುದು ಮತ್ತು ಇ-ಕೋರ್ಟ್ ಸೇವೆ ಸೇರಿದಂತೆ ಹಲವಾರು ಬದಲಾವಣೆಗಳಾಗಿದ್ದು, ವಕೀಲ ಸಮೂಹಕ್ಕೆ ಆರ್ಥಿಕ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಎದುರಾಗಿದ್ದು ಕೆಲವರು ಕಾನೂನು ಕಲಿಕೆಯಿಂದ ಹಿಂದೆ ಸರಿಯುತ್ತಿರುವುದು ಬೇಸರದ ಸಂಗತಿಯಾಗಿದೆ.
ಬಳ್ಳಾರಿ ಜಿಲ್ಲೆ ವ್ಯಾಪ್ತಿಗೊಳಪಡುವ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಎಸ್ಸ್ಸಿ.ಎಸ್ಟಿ ಸಮುದಾಯಕ್ಕೆ ಸೇರಿದ ವೃತ್ತಿನಿರತ ವಕೀಲರಿಗೆ ನೆರವಾಗಲು ಎಸ್ಸಿ, ಎಸ್ಟಿ ಸಮುದಾಯಗಳ ಅಭಿವೃದ್ಧಿಗಾಗಿ ಮೀಸಲಿರುವ ನಗರಾಭಿವೃದ್ಧಿ ಇಲಾಖೆಯ ಸುತ್ತೋಲೆಯಲ್ಲಿ ಕ್ರಿಯಾ ಯೋಜನೆಯ ಪರಿಷ್ಕೃತ ಮಾರ್ಗಸೂಚಿಗಳನ್ನು ನೀಡಿದ್ದು ಮಾರ್ಗಸೂಚಿಯಲ್ಲಿ ಹಲವಾರು ಅಂಶಗಳನ್ನು ವಿವರಿಸಿದ್ದು ಸದರಿ ಮಾರ್ಗಸೂಚಿಯಲ್ಲಿ ನಿಗಡಿಪಡಿಸದೇ ಇರುವ ಇನ್ಯಾವುದೇ ಚಟುವಟಿಕೆಯು ಅತೀ ಅವಶ್ಯಕವೆನಿಸಿದಲ್ಲಿ ಅವುಗಳನ್ನು ಕ್ರಿಯಾ ಯೋಜನೆಯಲ್ಲಿ ಸೂಕ್ತ ವಿವರಣೆಗಳೊಂದಿಗೆ ಸೇರ್ಪಡೆ ಮಾಡಿ ಕೌನ್ಸಿಲ್ ಅನುಮೋದನೆಯೊಂದಿಗೆ ಸಂಬಂದಿತ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗುವ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಮಟ್ಟದ ಸಭೆಯಲ್ಲಿ ಮಂಡಿಸಿ ವಿಶೇಷ ಅನುಮೋದನೆ ಪಡೆದು ಕಾರ್ಯಗತಗೊಳಿಸುವುದು” ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಸದರಿ ಸುತ್ತೋಲೆಯಲ್ಲಿ ಹಲವಾರು ವೃತ್ತಿನಿರತರಿಗೆ ಹಾಗೂ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದು ಈ ಸುತ್ತೋಲೆ ಮತ್ತು ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿ, ಪರೀಶೀಲಿಸಿ ಎಸ್ಸಿಎಸ್ಪಿ/ಟಿಎಸ್ಪಿಯ ಕ್ರಿಯಾ ಯೋಜನೆಯಡಿಯಲ್ಲಿ ಪ್ರತಿ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಆಯವ್ಯಯದಲ್ಲಿ ತಲಾ ಒಬ್ಬ ವಕೀಲರಿಗೆ ತಲಾ ಒಂದು ಲಕ್ಷ ರೂಪಾಯಿಯ ವೆಚ್ಚದಲ್ಲಿ ಕಾನೂನು ಪುಸ್ತಕಗಳನ್ನೂ ಮತ್ತು ಲ್ಯಾಪ್ ಟ್ಯಾಪ್ಗಳನ್ನು ನೀಡಿ ವೃತ್ತಿಯನ್ನು ಪ್ರೋತ್ಸಾಯಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮೋಹನ್ ಕುಮಾರ್ ದಾನಪ್ಪನವರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.