ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಗೆ ಬರುವ ಕಟ್ಟಡಗಳಲ್ಲಿ ಬಾಡಿಗೆ ಪಡೆದಿದ್ದು ಮಳಿಗೆಯವರು ಸರಿಯಾದ ಸಮಯಕ್ಕೆ ಬಾಡಿಗೆ ಕಟ್ಟದ ಹಾಗು ಭಾಕಿ ಉಳಿಸಿಕೊಂಡಿರುವ ಹಿನ್ನೆಲೆ ಪಾಲಿಕೆ ಅಧಿಕಾರಿಗಳು ಮಳಿಗೆಗಳಿಗೆ ಭೇಟಿ ನೀಡಿ ಬೀಗ ಜಡೆದಿರುವ ಘಟನೆ ನಡೆದು ಹಲವು ಅಂಗಡಿ ಮುಗ್ಗಟ್ಟುಗಳಿಗೆ ಹೀಗಾಗಿ ಬಿಸಿ ಮುಟ್ಟಿಸಿದ್ದಾರೆ.
ಪೂರ್ವ ವಲಯದಲ್ಲಿ ಅಂಚೆ ಕಛೇರಿಗಳಿಗೆ ಬೀಗಮುದ್ರೆ
ಪಾಲಿಕೆಯ ಒಡೆತನದ ಸೆಂಟ್ ಜಾನ್ಸ್ ರಸ್ತೆಯಲ್ಲಿರುವ ಮಳಿಗೆ ಸಂಖ್ಯೆ: 01 ಹಾಗೂ ವಸಂತನಗರ ಮಾರುಕಟ್ಟೆಯ ನೆಲ ಅಂತಸ್ತಿನಲ್ಲಿ ಅಂಚೆ ಕಛೇರಿ ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದು, ಸದರಿ ಮಳಿಗೆಗಳಿಗೆ ಪಾಲಿಕೆಯ ನಿರ್ಣಯದ ವಿಷಯದ ಸಂಖ್ಯೆ: 18/13-14 ದಿನಾಂಕ:26/02/2014ರ ನಿರ್ಣಯದಂತೆ ಬಾಡಿಗೆಯನ್ನು ಪರಿಷ್ಕರಿಸಲಾಗಿರುತ್ತದೆ.
• ಸೆಂಟ್ ಜಾನ್ಸ್ ರಸ್ತೆಯಲ್ಲಿರುವ ಅಂಚೆ ಕಛೇರಿಯು 1665 ಚದರಡಿಗಳಿದ್ದು, ಸದರಿ ಇಲಾಖೆರವರು ಏಪ್ರಿಲ್-2014ರಿಂದ ಹಳೆಯ ಬಾಡಿಗೆಯನ್ನು ಪಾವತಿಸುತ್ತಿದ್ದು, ಪರಿಷ್ಕೃತ ಬಾಡಿಗೆಯನ್ನು ಪಾವತಿಸುತ್ತಿರುವುದಿಲ್ಲ. ಈ ಸಂಬಂಧ, ಹಲವಾರು ಬಾರಿ ನೋಟೀಸ್ ಜಾರಿ ಮಾಡಿದ್ದರೂ ಪರಿಷ್ಕರಣೆಯ ಬಾಡಿಗೆ/ಗುತ್ತಿಗೆ ಮೊತ್ತವನ್ನು ಪಾವತಿಸದೇ ಇದ್ದ ಕಾರಣ ಮಾನ್ಯ ವಲಯ ಆಯುಕ್ತರು (ಪೂರ್ವ)ರವರ ಆದೇಶದಂತೆ ದಿನಾಂಕ:26/08/2024 ಬೆಳಗ್ಗೆ 6.00ರ ಸಮಯದಲ್ಲಿ ಸದರಿ ಮಳಿಗೆಗೆ ಬೀಗಮುದ್ರೆ ಹಾಕಲಾಗಿರುತ್ತದೆ.
ಸದರಿ ಮಳಿಗೆಗೆ ಬರಬೇಕಾದ ಬಾಕಿ ಬಾಡಿಗೆ ಮೊತ್ತ ಒಟ್ಟು ರೂ. 88,91,695/–
• ವಸಂತನಗರ ಮಾರುಕಟ್ಟೆಯ ನೆಲ ಅಂತಸ್ತಿನಲ್ಲಿರುವ ಅಂಚೆ ಕಛೇರಿಯು 214 ಚದರಡಿಗಳಿದ್ದು, ಸದರಿ ಇಲಾಖೆಯವರು ಜನವರಿ-2016ರಿಂದ ಜುಲೈ-2024ರವರೆಗೆ ಪರಿಷ್ಕರಣೆಯ ಬಾಡಿಗೆ/ಗುತ್ತಿಗೆ ಮೊತ್ತದ ಬಾಕಿ ಇರುವ ವ್ಯತ್ಯಾಸದ ಮೊತ್ತವನ್ನು ಪಾವತಿಸುತ್ತಿರುವುದಿಲ್ಲ. ಈ ಬಗ್ಗೆ ಹಲವಾರು ಬಾರಿ ನೋಟೀಸ್ ಜಾರಿ ಮಾಡಿ ಪರಿಷ್ಕೃತ ಬಾಡಿಗೆಯನ್ನು ಪಾವತಿಸುವಂತೆ ಸೂಚಿಸಲಾಗಿದ್ದರೂ ಬಾಡಿಗೆಯನ್ನು ಪಾವತಿಸದೇ ಇದ್ದ ಕಾರಣ ಮಾನ್ಯ ವಲಯ ಆಯುಕ್ತರು (ಪೂರ್ವ)ರವರ ಆದೇಶದಂತೆ ದಿನಾಂಕ:26/08/2024ರಂದು ಬೆಳಗ್ಗೆ 6.40ರ ಸಮಯದಲ್ಲಿ ಸದರಿ ಮಳಿಗೆಗೆ ಬೀಗಮುದ್ರೆ ಹಾಕಲಾಗಿರುತ್ತದೆ.
ಸದರಿ ಮಳಿಗೆಗೆ ಬರಬೇಕಾದ ಬಾಕಿ ಬಾಡಿಗೆ ಮೊತ್ತ ಒಟ್ಟು ರೂ.10,80,368/-
ಮೇಲ್ಕಂಡ ಮಳಿಗೆಗಳನ್ನು ಮಹಾನಗರ ಪಾಲಿಕೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಹಾಗೂ ಪೋಲೀಸ್ ಸಿಬ್ಬಂದಿ ಬಂದೋಬಸ್ತ್ ನೊಂದಿಗೆ ಬೀಗಮುದ್ರೆ ಹಾಕಲಾಯಿತೆಂದು ಸಹಾಯಕ ಕಂದಾಯ ಅಧಿಕಾರಿಯರವರು ತಿಳಿಸಿರುತ್ತಾರೆ.