ಬೆಂಗಳೂರು:ಲೋಕಸಭಾ ಚುನಾವಣೆಯ ಮತದಾನ ದಿನವು ಏಪ್ರಿಲ್ 26 ರಂದು ಶುಕ್ರವಾರ ನಿಗಧಿಯಾಗಿದ್ದು, ವಾರಾಂತ್ಯವಾಗಿರುವ ಕಾರಣ ಬಹುತೇಕ ಮಂದಿ ಮತದಾನ ಮಾಡದೆ ಪ್ರವಾಸಕ್ಕೆ ತೆರಳಲು ಸಿದ್ದತೆಗಳನ್ನು ಮಾಡಿಕೊಳ್ಳುತ್ತಾರೆ. ಈ ಸಂಬಂಧ ಎಲ್ಲರೂ ತಪ್ಪದೆ ಮತಚಲಾಯಿಸಲು ಮತದಾರರಿಗೆ ಪ್ರೋತ್ಸಾಹಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಸಂಬಂಧ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಗುಡ್ ಶೇರ್ಪಡ್ ಅಡಿಟೋರಿಯಂನಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಹಾಗೂ ಮೇಲ್ವಿಚಾರಕರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಳೆದಬಾರಿ ಸರಾಸರಿ ಮತದಾನಕ್ಕಿಂತ ಶೇಕಡಾ 5 ರಷ್ಟು ಕಡಿಮೆ ಮತದಾನವಾಗಿರುವ ಸುಮಾರು 353 ಮತಗಟ್ಟೆಗಳಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಬೇಕು. ಈ ಸಂಬಂಧ ಆಯಾ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮನೆ-ಮನೆಗೆ ಬೂತ್ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ತಪ್ಪದೆ ಮತದಾನ ಮಾಡಲು ಮತದಾರರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದರು.
ಬೂತ್ ಮಟ್ಟದ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡುವ ವೇಳೆ ಮೊದಲು ಮತದಾನ ಮಾಡುವ ಯುವ ಮತದಾರರಿಗೆ ತಪ್ಪದೆ ಮತ ಚಲಾಯಿಸುವ ಜೊತೆಗೆ ಇತರರಿಗೂ ಮತದಾನ ಮಾಡಲು ಪ್ರೇರೇಪಿಸಲು ತಿಳಿಸಿಬೇಕು. ವಿಶೇಷ ಚೇತನ ಮತದಾರರು ಹಾಗೂ 85 ವರ್ಷ ಮೇಲ್ಪಟ್ಟ ವಯಸ್ಸಿನವರ ಮತದಾರರಿಗೆ ಅಂಚೆ ಮತದಾನದ ವ್ಯವಸ್ಥೆಯಿದ್ದು, 12ಡಿ ನಮೂನೆ ಮೂಲಕ ಭರ್ತಿಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಮತದಾರರ ಚೀಟಿ ಮನೆಗೆ ತಲುಪಿಸುವ ವ್ಯವಸ್ಥೆ:
ಮತದಾರರ ಚೀಟಿಯನ್ನು ಮತದಾನದ ದಿನಾಂಕಕ್ಕಿಂತ 10 ದಿನ ಮುಂಚಿತವಾಗಿ ಪ್ರತಿ ಮನೆಗೆ ತಲುಪಿಸುವ ಕಾರ್ಯ ತಪ್ಪದೆ ಮಾಡಬೇಕು. ಪ್ರಸ್ತುತ ಸಾಲಿನಲ್ಲಿ ಮತದಾರರ ಚೀಟಿಯಲ್ಲಿ ಮತಗಟ್ಟೆ ಲೊಕೇಶನ್ ತಿಳಿಸುವ ಬಾರ್ ಕೊಡ್ ಇರಲಿದ್ದು, ಇದರ ಬಗ್ಗೆ ಮತದಾರರಿಗೆ ತಿಳಿಸಬೇಕು. ಜೊತೆಗೆ ಚುನಾವಣಾ ದಿನಾಂಕ ಮುದ್ರಿಸಿರುವ ಚೀಟಿಯನ್ನು ಪ್ರತಿ ಮನೆ ಮನೆ ತಲುಪಿಸಿ ಮತದಾನ ಮಾಡಲು ಪ್ರೇರೇಪಿಸಬೇಕೆಂದು ತಿಳಿಸಿದರು.
ಈ ವೇಳೆ ಸ್ವೀಪ್ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷರಾದ ಕಾಂತರಾಜು, ಬೆಂಗಳೂರು ನಗರ ಜಿಲ್ಲೆಯ ಸ್ವೀಪ್ ನೋಡಲ್ ಅಧಿಕಾರಿಯಾದ ಪ್ರತಿಭಾ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸ್ವೀಪ್ ನೋಡಲ್ ಅಧಿಕಾರಿಯಾದ ವಿಶ್ವನಾಥ್ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.