ಬೆಂಗಳೂರು: ನಗರದ ಪೂರ್ವ ವಲಯ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅಳವಡಿಸಿರುವ ಓಎಫ್ಸಿ ಕೇಬಲ್ ಗಳನ್ನು ತೆರವುಗೊಳಿಸಲು ಮುಖ್ಯ ಆಯುಕ್ತರಾದ ಎಂ. ಮಹೇಶ್ವರ್ ರಾವ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಿಬಿಎಂಪಿಯ ಪೂರ್ವ ವಲಯ ವ್ಯಾಪ್ತಿಯಲ್ಲಿ ಗುಟ್ಟಹಳ್ಳಿ ಮೇಲ್ಸೆತುವೆ ಬಳಿಯಿಂದ ಇಂದು ಪರಿಶೀಲನೆ ಪ್ರಾರಂಭಿಸಿದ ವೇಳೆ ಮಾತನಾಡಿದ ಅವರು, ಪಾದಚಾರಿ ಮಾರ್ಗದಲ್ಲಿ ಅನಧಿಕೃತ ಓಎಫ್ಸಿ ಕೇಬಲ್ಗಳು ನೇತಾಡುತ್ತಿರುವುದನ್ನು ಕಂಡು ಅದನ್ನು ಕೂಡಲೆ ತೆರವುಗೊಳಿಸಲು ಸೂಚನೆ ನೀಡಿದರು.
ನಗರದಲ್ಲಿ ಟೆಂಡರ್ ಶ್ಯೂರ್, ವೈಟ್ ಟಾಪಿಂಗ್ ಮಾಡಿರುವ ರಸ್ತೆಗಳಲ್ಲಿ ಕೇಬಲ್ ಗಳನ್ನು ನೆಲದಡಿ ಅಳವಡಿಸಲು ಡಕ್ಟ್ ಗಳ ವ್ಯವಸ್ಥೆ ಮಾಡಲಾಗಿದೆ. ಆಗಿದ್ದರೂ ಕೂಡಾ ಕೆಲ ಸಂಸ್ಥೆಗಳು ರಸ್ತೆ ಬದಿ, ಪಾದಚಾರಿ ಮಾರ್ಗ, ವಿದ್ಯುತ್ ಕಂಬಗಳು ಹಾಗೂ ಮರಗಳಲ್ಲಿ ನೇತಾಡುವ ರೀತಿಯಲ್ಲಿದ್ದು, ಅದರಿಂದ ನಾಗರಿಕರಿಗೆ ಸಮಸ್ಯೆಯಾಗಲಿದೆ. ಆದ್ದರಿಂದ ಡಕ್ಟ್ ಗಳನ್ನು ಅಳವಡಿಸಿರುವ ಕಡೆ ಯಾವುದೇ ರೀತಿಯ ಅನಧಿಕೃತ ಓಎಫ್ಸಿ ಕೇಬಲ್ ಗಳನ್ನು ಅಳವಡಿಸಿದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದರು.
*ಖಾಲಿ ಜಾಗವನ್ನು ಸಾರ್ವಜನಿಕ ಉಪಯೋಗಕ್ಕೆ ನೀಡಿ:*
ಪಾಲಿಕೆಯ ಒಡೆತನದ ಖಾಲಿ ಜಾಗಗಳು ಸಾಕಷ್ಟು ಕಡೆ ಬಳಕೆ ಮಾಡದೆ ಸ್ವಚ್ಛತೆ ಇಲ್ಲದಂತಾಗಿರುತ್ತದೆ. ಆದ್ದರಿಂದ, ಅಂತಹ ಸ್ಥಳಗಳನ್ನು ಗುರುತಿಸಿ ಸಾರ್ವಜನಿಕರ ಬಳಕೆಗೆ ಅನುವು ಮಾಡಿಕೊಡಬೇಕು. ಸದ್ಯ ನಗರದಲ್ಲಿ ಬೀದಿ ಬದಿ ವ್ಯಾಪಾರಿಗಳಿಗಾಗಿ ವ್ಯಾಪಾರ ವಲಯಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದ್ದು, ಪಾಲಿಕೆ ಒಡೆತನದ ವಿಶಾಲ ಜಾಗಗಳನ್ನು ಗುರುತಿಸಲು ಸೂಚಿಸಿದರು.
*ಟ್ರಾನ್ಸಫಾರ್ಮರ್ಸ್ ಬಳಿ ಸ್ವಚ್ಛತೆ ಕಾಪಾಡಿ:*
ರಸ್ತೆ ಬದಿ ಪಾದಚಾರಿ ಮಾರ್ಗಗಳಲ್ಲಿರುವ ಟ್ರಾನ್ಸಫಾರ್ಮರ್ ಗಳ ಬಳಿ ಸ್ವಚ್ಛತೆ ಇಲ್ಲದೆ ಓಡಾಡದಂತಹ ಸ್ಥಿತಿ ನಿರ್ಮಾಣ ಆಗಿರುತ್ತದೆ. ಈ ನಿಟ್ಟಿನಲ್ಲಿ ಟ್ರಾನ್ಸಫಾರ್ಮರ್ಸ್ ಇರುವ ಕಡೆ ಫೆನ್ಸಿಂಗ್ ಅಳವಡಿಸಿ ಫೆನ್ಸಿಂಗ್ ಮಾಡಬೇಕು. ಜೊತೆಗೆ ಅಲ್ಲಿ ಸದಾ ಸ್ವಚ್ಛತೆಯನ್ನು ಕಾಪಾಡಲು ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
*ಹೊಸದಾಗಿ ಪಾದಚಾರಿ ಮಾರ್ಗ ನಿರ್ಮಿಸಿ:*
ಅರಮನೆ ರಸ್ತೆ, ವಸಂತನಗರದ 12ನೇ ಮುಖ್ಯ ರಸ್ತೆ ಹಾಗೂ ಕಂಟೋನ್ಮೆಂಟ್ ರೈಲ್ವೇ ಹಳಿ ಬಳಿ ಪಾದಚಾರಿ ಮಾರ್ಗ ನಿರ್ಮಾಣ ಮಾಡದಿರುವುದನ್ನು ಗಮನಿಸಿ, ಕೂಡಲೆ ಪರಿಶೀಲಿಸಿ ಎಲ್ಲೆಲ್ಲಿ ಪಾದಚಾರಿ ಮಾರ್ಗ ನಿರ್ಮಾಣ ಮಾಡಬೇಕಿದೆ ಹಾಗೂ ವಿಸ್ತರಿಸಬೇಕಿದೆ ಎಂಬುದನ್ನು ಗುರುತಿಸಿ ಹೊಸದಾಗಿ ಪಾದಚಾರಿ ಮಾರ್ಗ ನಿರ್ಮಾಣ ಮಾಡಲು ಸೂಚಿಸಿದರು.
*ಬಿತ್ತಿ ಪತ್ರಗಳ ತೆರವುಗಳಿಸಿ:*
ಅರಮನೆ ರಸ್ತೆ ಹಾಗೂ ಇನ್ನಿತರೆ ಕಡೆ ಗೋಡೆ, ಬ್ಯಾರಿಕೇಡ್ ಗಳಿಗೆ ಬಿತ್ತಿ ಪತ್ರಗನ್ನು ಅಂಟಿಸಿಸ್ದು, ಅದರಿಂದ ನಗರ ಸೌಂದರ್ಯಕ್ಕೆ ಧಕ್ಕೆ ಉಂಟಾಗಲಿದೆ. ಈ ಸಂಬಂಧ ಎಲ್ಲೆಲ್ಲಿ ಬಿತ್ತಿಪತ್ರಗಳನ್ನು ಅಂಟಿಸಲಾಗಿದೆ ಎಂಬುದನ್ನು ಗುರುತಿಸಿ ಅದನ್ನು ತೆರವುಗೊಳಿಸಲು ಸೂಚಿಸಿದರು. ಅದಲ್ಲದೆ ರಸ್ತೆ ಬದಿ ಖಾಸಗಿ ಸಂಸ್ಥೆ, ಶಾಲಾ-ಕಾಲೇಜುಗಳ ಜಾಹೀರಾತು ಫಲಕಗಳನ್ನು ತೆರವುಗೊಳಿಸಿ ಅಂತಹವರಿಗೆ ದಂಡ ವಿಧಿಸಲು ಸೂಚಿಸಿದರು.
*ಇಂದಿರಾ ಕ್ಯಾಂಟೀನ್ ಉಪಹಾರ ಸೇವನೆ:*
ಮಿಲ್ಲರ್ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಬೆಳಗಿನ ಉಪಹಾರಕ್ಕೆ ಸಿದ್ದಪಡಿಸಿದ್ದ ಇಡ್ಲಿ ಹಾಗೂ ವೆಜಿಟೆಬಲ್ ಪಲಾವ್ ಅನ್ನು ಸೇವಿಸುವ ಮೂಲಕ ಆಹಾರದ ಗುಣಮಟ್ಟವನ್ನು ಪರಿಶೀಲಿಸಿದರು. ಉಪಹಾರದ ರುಚಿ ಚೆನ್ನಾಗಿದ್ದು, ಆಹಾರದ ಗುಣಮಟ್ಟ ಕಾಯ್ದುಕೊಳ್ಳುವ ಜೊತೆಗೆ ಶುಚಿತ್ವ ಕಾಪಾಡಲು ಸಿಬ್ಬಂದಿಗೆ ಸೂಚನೆ ನೀಡಿದರು.
*ಮೋರಿಯಲ್ಲಿ ಹೂಳೆತ್ತಿ ಸ್ವಚ್ಛಗೊಳಿಸಿ:*
ಕಂಟೋನ್ಮೆಂಟ್ ರೈಲ್ವೆ ಹಳಿ ಬಳಿಯಿರುವ ಮೋರಿಯಲ್ಲಿ ಹೂಳು ತುಂಬಿದ್ದು, ಅದರಿಂದ ನೀರಿನ ಹರಿವು ನಿಧಾನಗತಿಯಲ್ಲಿದೆ. ಆದ್ದರಿಂದ ಮೋರಿಯಲ್ಲಿ ತುಂಬಿರುವ ಹೂಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲು ಸೂಚಿಸಿದರು.
*2.5 ಕಿ.ಮೀ ರಸ್ತೆ ಪರಿಶೀಲನೆ:*
ಪೂರ್ವ ವಲಯ ವ್ಯಾಪ್ತಿಯಲ್ಲಿ ಗುಟ್ಟಹಳ್ಳಿ ಮೇಲ್ಸೆತುವೆ ಬಳಿಯಿಂದ ಪರಿಶೀಲನೆ ಪ್ರಾರಂಭಿಸಿ, ಅರಮನೆ ರಸ್ತೆ, ಮೌಂಟ್ ಕಾರ್ಮೆಲ್ ಕಾಲೇಜು ಮುಂಭಾಗದ ರಸ್ತೆ, ಕನ್ನಿಂಗ್ಯಾಮ್ ರಸ್ತೆ, ಮಿಲ್ಲರ್ ರಸ್ತೆಯ ಮೂಲಕ ಕಂಟೋನ್ಮೆಂಟ್ ರೈಲ್ವೆ ಹಳಿಯವರೆಗೆ 2.5 ಕಿ.ಮೀ ರಸ್ತೆ ಪರಿಶೀಲನೆ ನಡೆಸಿದರು.
ಈ ವೇಳೆ ವಲಯ ಆಯುಕ್ತರಾದ ಸ್ನೇಹಲ್, ಯೋಜನಾ ವಿಭಾಗದ ವಿಶೇಷ ಆಯುಕ್ತರಾದ ಅವಿನಾಶ್ ಮೆನನ್ ರಾಜೇಂದ್ರನ್, ವಲಯ ಜಂಟಿ ಆಯುಕ್ತರಾದ ಸರೋಜಾ, ಮುಖ್ಯ ಅಭಿಯಂತರರಾದ ಸುಗುಣಾ, ಕಾರ್ಯಪಾಲಕ ಅಭಿಯಂತರರು, ಬೆಸ್ಕಾಂ ಅಧಿಕಾರಿಗಳು ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.