ಬೆಂಗಳೂರು: ನಗರದಲ್ಲಿ ಜಂಕ್ಷನ್ ಗಳ ಸಮಗ್ರ ಅಭಿವೃದ್ಧಿಗಾಗಿ ಸುರಕ್ಷ ಯೋಜನೆ ಅಡಿ ಈಗಾಗಲೇ 75 ಜಂಕ್ಷನ್ ಗಳ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು, ಹೊಸದಾಗಿ 75 ಜಂಕ್ಷನ್ ಗಳಿಗೆ ಕ್ರಿಯಾ ಯೋಜನೆ ರೂಪಿಸಲು *ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್* ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಶ್ಚಿಮ ವಲಯ ಮಾಗಡಿ ಮುಖ್ಯ ರಸ್ತೆಯ ಕಾಮಾಕ್ಷಿ ಪಾಳ್ಯದಿಂದ ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರದ ವೆರೆಗೆ ಇಂದು ನಡಿಗೆಯ ಮೂಲಕ ಪರಿಶೀಲನೆ ನಡೆಸುವ ವೇಳೆ ಮಾತನಾಡಿದ ಅವರು, ಸುಮ್ಮನಹಳ್ಳಿ ಜಂಕ್ಷನ್ ಅನ್ನು ಸುರಕ್ಷ ಯೋಜನೆಯಡಿ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು, ಅದನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸುಮ್ಮನಹಳ್ಳಿ ಜಂಕ್ಷನ್ ನಲ್ಲಿ ಪಾದಚಾರಿಗಳ ಸುಗಮ ಸಂಚಾರ ಮಾಡಲು ಕ್ರಾಸಿಂಗ್ ಗಳ ನಿರ್ಮಾಣ, ಐಲ್ಯಾಂಡ್ ಗಳ ನಿರ್ಮಾಣ, ಬಸ್ ಬೇ ಸೇರಿದಂತೆ ಇನ್ನಿತರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದು, ಅದನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಂಕ್ಷನಲ್ಲಿರುವ ಪಾದಚಾರಿ ಮಾರ್ಗದಲ್ಲಿ ಗ್ರಿಲ್ ಅಳವಡಿಸಿರುವುದರಿಂದ, ನಾಗರಿಕರು ಪಾದಚಾರಿ ಮಾರ್ಗವನ್ನು ಬಳಸದೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಗಮನಿಸಿ, ಪಾದಚಾರಿಗಳ ಸುಗಮ ಸಂಚಾರಕ್ಕೆ ಸಮಸ್ಯೆ ಆಗದಂತೆ ಗ್ರಿಲ್ ಗಳನ್ನು ತೆರವುಗೊಳಿಸಿ ಬೇರೆಡೆ ಆ ಗ್ರಿಲ್ ಗಳನ್ನು ಅಳವಡಿಸಲು ಸೂಚಿಸಿದರು.
*‘ಸುರಕ್ಷ 75’ ಗೆ ಕ್ರಿಯಾ ಯೋಜನೆ ರೂಪಿಸಿ:*
ನಗರದ ಜಂಕ್ಷನ್ ಗಳಲ್ಲಿ ಪಾದಚಾರಿಗಳಿಗೆ ರಸ್ತೆ ದಾಟಲು ಮತ್ತು ಸಂಚರಿಸಲು ಸುರಕ್ಷಿತ ವಾತಾವರಣವನ್ನು ಸೃಷ್ಟಿಸುವುದು, ಜಂಕ್ಷನ್ಗಳನ್ನು ಮರುವಿನ್ಯಾಸಗೊಳಿಸುವ ಮೂಲಕ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದು ‘ಸುರಕ್ಷ 75’ ಯೋಜನೆಯ ಉದ್ದೇಶವಾಗಿದೆ. ಈ ಸಂಬಂಧ ಈಗಾಗಲೇ ಎಲ್ಲಾ 75 ಜಂಕ್ಷನ್ ಗಳಲ್ಲಿ ಟ್ರಾಫಿಕ್ ಇಂಜಿನಿಯರಿಂಗ್ ಸೆಲ್ ವಿಭಾಗದಿಂದ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಅದರ ಜೊತೆಗೆ ಹೊಸದಾಗಿ 75 ಜಂಕ್ಷನ್ ಗಳಿಗೆ ಕ್ರಿಯಾ ಯೋಜನೆ ರೂಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
*ನಾಗರಿಕರ ಸ್ನೇಹಿ ತಾಣ ನಿರ್ಮಾಣ:*
ಸುಮ್ಮನಹಳ್ಳಿ ಜಂಕ್ಷನ್ ಮೇಲ್ಸೇತುವೆ ಕೆಳಭಾಗದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿರುವುದನ್ನು ಗಮನಿಸಿ, ಆ ಸ್ಥಳದಲ್ಲಿ ನಾಗರಿಕ ಸ್ನೇಹಿ ತಾಣವನ್ನು ನಿರ್ಮಿಸಬೇಕು. ಈ ಸಂಬಂಧ ಯಾವ ಮಾದರಿಯಲ್ಲಿ ನಿರ್ಮಿಸಬೇಕೆಂಬುದನ್ನು ವಿನ್ಯಾಸ ರೂಪಿಸಲು ಅಧಿಕಾರಿಗಳಿಗೆ ಸೂಚಿಸಿದರು.
*ಪ್ರಾಣಿಗಳ ವಿದ್ಯುತ್ ಚಿತಾಗಾರ ಪರಿಶೀಲನೆ:*
ಸುಮ್ಮನಹಳ್ಳಿ ಬಳಿಯಿರುವ ಪ್ರಾಣಿಗಳ ವಿದ್ಯುತ್ ಚಿತಾಗಾರದ ಕಾಮಗಾರಿ ಪ್ರಗತಿಯಲ್ಲಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರದಲ್ಲಿ ಒಂದೇ ಪ್ರಾಣಿ ವಿದ್ಯುತ್ ಚಿತಾಗಾರವಿದ್ದು, ಅದು ದುರಸ್ತಿಯಲ್ಲಿರುವುದರಿಂದ ಪ್ರಾಣಿಗಳು ಮೃತಪಟ್ಟರೆ ಅವುಗಳ ಅಂತ್ಯಕ್ರಿಯೆಗೆ ಸಾಕಷ್ಟು ಸಮಸ್ಯೆ ಆಗಲಿದೆ. ಈ ಸಂಬಂಧ ಕಾಮಗಾರಿಗೆ ವೇಗ ನೀಡಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ಸ್ಥಳದಲ್ಲಿ ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡುವ ಕೇಂದ್ರವಿದ್ದು, ಅದನ್ನು ಹೊಸದಾಗಿ ನಿರ್ಮಿಸಿದ್ದು, ಕೂಡಲೇ ಅದನ್ನು ಪ್ರಾರಂಭಿಸಲು ತಿಳಿಸಿದರು. ಅಲ್ಲದೆ ಮಿನಿ ಟ್ರಾನ್ಸ್ ಫರ್ ಸ್ಟೇಷನ್ ನಲ್ಲಿ ವಾಸನೆ ಬರದಂತೆ ಸ್ಪ್ರೇ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.
*ಸ್ವಚ್ಛತೆ ಕಾಪಾಡಲು ಸೂಚನೆ:*
ಮಾಗಡಿ ಮುಖ್ಯ ರಸ್ತೆ ವಿನಾಯಕ ನಗರ ವ್ಯಾಪ್ತಿಯಲ್ಲಿ ಆಟೋ ಟಿಪ್ಪರ್ ಗಳು ಹೋಗಲು ಸಾಧ್ಯವಾಗದ ರಸ್ತೆಗಳಲ್ಲಿ ಪೌರಕಾರ್ಮಿಕರು ಪುಷ್ ಕಾರ್ಟ್ ಗಳ ಮೂಲಕ ಕಸ ಸಂಗ್ರಹಿಸಿ ಆಟೋ ಟಿಪ್ಪರ್ ಗಳಿಗೆ ನೀಡಲಿದ್ದಾರೆ. ಮನೆಗಳಿಂದ ಕಸ ಸಂಗ್ರಹಿಸುವ ಕಾರ್ಯ ಹಾಗೂ ರಸ್ತೆ ಬದಿಗಳಲ್ಲಿ ಕಸ ಗುಡಿಸುವ ಕಾರ್ಯವನ್ನು ಸರಿಯಾಗಿ ಮಾಡಲು ಸೂಚನೆ ನೀಡಿದರು.
*ವೃಷಭಾವತಿ ವ್ಯಾಲಿಯಲ್ಲಿ ಹೂಳೆತ್ತಿ:*
ಸುಮ್ಮನಹಳ್ಳಿ ಜಂಕ್ಷನ್ ಬಳಿಯ ವೃಷಭಾವತಿ ವ್ಯಾಲಿಯಲ್ಲಿ ಹೂಳಿರುವುದನ್ನು ಕಂಡು, ಅದನ್ನು ಸಂಪೂರ್ಣವಾಗಿ ತೆರವುಗೊಳಿಸಿ ಸ್ವಚ್ಚಗೊಳಿಸುವ ಕೆಲಸ ಮಾಡಬೇಕು. ಜೊತೆಗೆ ವ್ಯಾಲಿಗೆ ಒಳಚರಂಡಿ ನೀರು ನೇರವಾಗಿ ಬಿಟ್ಟಿದ್ದರೆ ಅದನ್ನು ತಡೆದು ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದರು.
ಈ ವೇಳೆ ವಲಯ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್, ವಲಯ ಜಂಟಿ ಆಯುಕ್ತರಾದ ಸಂಗಪ್ಪ, ಮುಖ್ಯ ಅಭಿಯಂತರರಾದ ಶಶಿಕುಮಾರ್, ಕಾರ್ಯಪಾಲಕ ಅಭಿಯಂತರರು ಸೇರಿದಂಗೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.