ಬೆಂಗಳೂರು: ಯಲಹಂಕ ವಲಯ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ನಿವಾರಣೆ ಮಾಡುವ ಉದ್ದೇಶದಿಂದ ಹೆಚ್ಚುವರಿಯಾಗಿ ವಾಹನಗಳ ವ್ಯವಸ್ಥೆ ಮಾಡಲಾಗುವುದೆಂದು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ತಿಳಿಸಿದರು.
ಯಲಹಂಕ ವಲಯ ವ್ಯಾಪ್ತಿಯಲ್ಲಿ “ಮುಖ್ಯ ಆಯುಕ್ತರ ನಡೆ ವಲಯದ ಕಡೆ” ಕಾರ್ಯಕ್ರಮದ ಭಾಗವಾಗಿ ಮಿನಿ ವಿಧಾನಸೌಧದ ಪಾಲಿಕೆ ಸಭಾಂಗಣದಲ್ಲಿ ಇಂದು ಸಾರ್ವಜನಿಕರೊಂದಿಗೆ ಅಹವಾಲುಗಳನ್ನು ಸ್ವೀಕರಿಸುವ ವೇಳೆ ಮಾತನಾಡಿದ ಅವರು, ಯಲಹಂಕ ವಲಯ ವ್ಯಾಪ್ತಿಯಲ್ಲಿ ಕಸ ಸಂಗ್ರಹಿಸಲು 50 ಆಟೋ ಟಿಪ್ಪರ್ಗಳು ಹಾಗೂ 7 ಕಾಂಪ್ಯಾಕ್ಟರ್ ಗಳನ್ನು ಹೆಚ್ಚುವರಿಯಾಗಿ ನೀಡಲಾಗುವುದೆಂದು ತಿಳಿಸಿದರು.
*ಪಶು ಚಿಕಿತ್ಸಾಲಯ ಪ್ರಾರಂಭಿಸಿ:*
ಯಲಹಂಕ ವಲಯ ವ್ಯಾಪ್ತಿಯಲ್ಲಿ ಪ್ರಾಣಿಗಳ ಚಿಕಿತ್ಸೆಗಾಗಿ ದೊಡ್ಡ ಬೆಟ್ಟಹಳ್ಳಿಯಲ್ಲಿ ಪಶು ಚಿಕಿತ್ಸಾಲಯಕ್ಕಾಗಿ ಜಾಗ ಮೀಸಲಿರಿಸಿದ್ದು, ಚಿಕಿತ್ಸಾಲಯಕ್ಕಾಗಿ ಅಗತ್ಯ ಕಾಮಗಾರಿ ಕೈಗೊಂಡು, ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಿ ಪಶು ಚಿಕಿತ್ಸಾಲಯವನ್ನು ಪ್ರಾರಂಭಿಸಲು ತಿಳಿಸಿದರು.
*ನಿವಾಸಿ ಸಂಘಗಳ ಜೊತೆ ತಿಂಗಳಿಗೊಮ್ಮೆ ಸಭೆ ನಡೆಸಿ:*
ಸ್ಥಳೀಯ ಸಮಸ್ಯೆಗಳನ್ನು ನಿವಾರಿಸುವ ಉದ್ದೇಶದಿಂದ ತಿಂಗಳಿಗೊಮ್ಮೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಜೊತೆ ಸಭೆ ನಡೆಸಿ, ಸ್ಥಳೀಯವಾಗಿ ಇರುವ ಸಮಸ್ಯೆಗಳನ್ನು ಶೀಘ್ರ ಇತ್ಯರ್ಥಪಡಿಸಿಕೊಳ್ಳಿ ಎಂದು ಕಾರ್ಯಪಾಲಕ ಅಭಿಯಂತರರಿಗೆ ಸೂಚನೆ ನೀಡಿದರು. ಜೊತೆಗೆ ಸ್ವಚ್ಛತಾ ಕಾರ್ಯವನ್ನು ನಿರಂತರವಾಗಿ ಮಾಡಲು ಇದೇ ವೇಳೆ ಸೂಚಿಸಿದರು.
*ಕೆಳಸೇತುವೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ:*
ಯಲಹಂಕ ರೈಲ್ವೇ ಸ್ಟೇಷನ್ ಬಳಿಯ ಕೆಳಸೇತುವೆ ಕಾಮಗಾರಿಯು ಭೂಸ್ವಾಧೀನ ಪ್ರಕ್ರಿಯೆಯ ಪರಿಣಾಮ ಪೂರ್ಣಗೊಂಡಿರುವುದಿಲ್ಲ. ಈ ಸಂಬಂಧ ಅಗತ್ಯ ಜಾಗವನ್ನು ಭೂಸ್ವಾಧೀನಪಡಿಸಿಕೊಂಡು ಕಾಲಮಿತಿಯೊಳಗಾಗಿ ರೈಲ್ವೆ ಕೆಳಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
*23 ನಾಗರಿಕರಿಂದ ಅಹವಾಲುಗಳ ಸ್ವೀಕಾರ:*
ಯಲಹಂಕ ವಲಯ ವ್ಯಾಪ್ತಿಯಲ್ಲಿ ಮುಖ್ಯ ಆಯುಕ್ತರ ನಡೆ ವಲಯದ ಕಡೆ ಕಾರ್ಯಕ್ರಮದಲ್ಲಿ 23 ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದ್ದು, ನಾಗರಿಕರಿಂದ ಬಂದಂತಹ ದೂರುಗಳಿಗೆ ಶೀಘ್ರವಾಗಿ ಸ್ಪಂದಿಸಿ ಇರುವ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
*ನಾಗರಿಕರಿಂದ ಸ್ವೀಕರಿಸಿದ ಪ್ರಮುಖ ಅಹವಾಲುಗಳು:*
• ಹೆಗ್ಡೆನಗರ ಮುಖ್ಯ ರಸ್ತೆಯಲ್ಲಿ ಬಸ್ ತಂಗುದಾಣಗನ್ನು ನಿರ್ಮಿಸಲು ಮನವಿ.
• ಕೋಗೀಲು ಬಳಿಯ ಶ್ರೀನಿವಾಸಪುರದಲ್ಲಿ ಯಾವುದೇ ರಸ್ತೆ, ಚರಂಡಿ ನಿರ್ಮಿಸಿಲ್ಲ. ಅದನ್ನು ಮಾಡಿಕೊಡಲು ಮನವಿ.
• ನರಸೀಪುರ ಕೆರೆ ಭಾಗದಲ್ಲಿ ಮನೆಗಳು ನಿರ್ಮಾಣ ಮಾಡಿದ್ದು, ಅದನ್ನು ತೆರವುಗೊಳಿಸಲು ಮನವಿ.
• ಥಣಿಸಂದ್ರ ಹಾಗೂ ಜಕ್ಕೂರು ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಮಾಡಲು ಮನವಿ.
• ಕ್ರಾಸ್ ರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ಸೀಮೆಂಟ್ ಹಂಪ್ಸ್ ಅಳವಡಿಸಿದ್ದು, ಅದನ್ನು ತೆರವುಗೊಳಿಸಲು ಮನವಿ.
• ಡಾಂಬರೀಕರಣ ಮಾಡಿರುವ ರಸ್ತೆ ಅಗೆದು ಹಾಳು ಮಾಡುತ್ತಿದ್ದಾರೆ, ಅದನ್ನು ತಡೆಯಲು ಮನವಿ.
• ಅಟ್ಟೂರು ಬಳಿ ಸ್ಲ್ಯಾಬ್ಗಳ ಹಾಳಾಗಿದ್ದು, ಅದನ್ನು ದುರಸ್ತಿಪಡಿಸಲು ಮನವಿ.
• ರಾಚೇನಹಳ್ಳಿ ಕೆರೆ ಬಳಿ ಒತ್ತುವರಿ ಮಾಡಿಕೊಂಡಿದ್ದು, ಅದನ್ನು ತಡೆಯಲು ಮನವಿ.
• ಫ್ಲೆಕ್ಸ್ ಬ್ಯಾನರ್ಗಳನ್ನು ನಿಯಂತ್ರಿಸಲು ಮನವಿ
• ನಿಯಮಬಾಹೀರವಾಗಿ ನಿರ್ಮಾಣ ಮಾಡುತ್ತಿರುವ ಕಟ್ಟಡಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಮನವಿ.
ಈ ವೇಳೆ ವಲಯ ಆಯುಕ್ತರಾದ ಕರೀಗೌಡ, ಜಂಟಿ ಆಯುಕ್ತರಾದ ಮೊಹ್ಮದ್ ನಯೀಮ್ ಮೊಮಿನ್, ಉಪ ಆಯುಕ್ತರಾದ ಮಮತಾ, ಮುಖ್ಯ ಅಭಿಯಂತರರಾದ ರಂಗನಾಥ್, ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.