ಬೆಂಗಳೂರು: ಬನ್ನೇರುಘಟ್ಟ ಮುಖ್ಯ ರಸ್ತೆ ಮೆಟ್ರೋ ಮಾರ್ಗದಲ್ಲಿ ಬರುವ ಪಾದಚಾರಿ ಮಾರ್ಗವನ್ನು ಮಾದರಿ ಪಾದಚಾರಿ ಮಾರ್ಗವನ್ನಾಗಿ ನಿರ್ಮಿಸಲು ಕ್ರಮ ಕೈಗೊಳ್ಳಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಬನ್ನೇರುಘಟ್ಟ ಮುಖ್ಯ ರಸ್ತೆಯ ಡೈರಿ ವೃತ್ತದಿಂದ ಪಾದಚಾರಿ ಮಾರ್ಗ, ರಸ್ತೆ ಗುಂಡಿಗಳು, ಸ್ವಚ್ಛತೆ ಸೇರಿದಂತೆ ಇನ್ನಿತರೆ ವಿಷಯಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ನಡಿಗೆ ಮೂಲಕ ಪರಿಶೀಲನೆ ನಡೆಸಿದ ವೇಳೆ ಅವರು ಮಾತನಾಡಿದರು.
ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ಗುಲಾಬಿ(ಪಿಂಕ್) ಬಣ್ಣದ ಮೆಟ್ರೋ ಮಾರ್ಗ ಬರುತ್ತಿದ್ದು, ಈ ಮಾರ್ಗದಲ್ಲಿ ಪಾದಚಾರಿ ಮಾರ್ಗಗಳನ್ನು ಒಂದೇ ಮಾದರಿಯಲ್ಲಿ ನಿರ್ಮಿಸಿ ಮಾದರಿ ಪಾದಚಾರಿ ಮಾರ್ಗಗನ್ನಾಗಿ ಮಾಡಬೇಕು. ಈ ಸಂಬಂಧ ಸ್ಲ್ಯಾಬ್ಗಳು, ಕರ್ಬ್ ಸ್ಟೋನ್ಗಳು ಹಾಳಾಗಿರುವ ಕಡೆ ದುರಸ್ತಿ ಪಡಿಸಬೇಕು. ಪಾದಚಾರಿ ಮಾರ್ಗಗಳು ಎತ್ತರವಿರುವ ಕಡೆ ಕಡಿಮೆ ಮಾಡಿ ಒಂದೇ ರೀತಿಯಲ್ಲಿರುವಂತೆ ಮಾಡಲು ಸೂಚಿಸಿದರು.
*ಕೊನೆಯ ಹಂತದ ಸಂಪರ್ಕಕ್ಕೆ ಕ್ರಮ:*
ಪಾದಚಾರಿ ಮಾರ್ಗಗಳನ್ನು ಸುವ್ಯವಸ್ಥಿತವಾಗಿ ನಿರ್ಮಿಸಿದರೆ ಸಾರ್ವಜನಿಕ ಸಾರಿಗೆ ಸಂಪರ್ಕ ಕಲ್ಪಿಸುವ ಮೆಟ್ರೋ ಅಥವಾ ಬಸ್ ನಿಲ್ದಾಣದಿಂದ ನಾಗರಿಕರಿಗೆ ಕೊನೆಯ ಹಂತದ ಸಂಪರ್ಕ(ಲಾಸ್ಟ್ ಮೈಲ್ ಕನೆಕ್ಟಿವಿಟಿ)ವನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಪಾದಚಾರಿ ಮಾರ್ಗಗಳನ್ನು ಸರಿಯಾಗಿ ನಿರ್ಮಿಸಿದರೆ ಸಾರ್ವಜನಿಕ ಸಾರಿಗೆಗಳನ್ನು ಬಳಸುವವರ ಸಂಖ್ಯೆ ಹೆಚ್ಚಾಗಲಿದೆ. ಆದ್ದರಿಂದ ಪಾದಚಾರಿ ಮಾರ್ಗದಲ್ಲಿ ಯಾವುದೇ ತೊಡಕುಗಳಿರದಂತೆ, ಪಾದಚಾರಿ ಮಾರ್ಗಗಳ ಒತ್ತುವರಿಗಳನ್ನು ತೆರವುಗೊಳಿಸಿ ನಾಗರಿಕರಿಗೆ ಸುಗಮ ಪಾದಚಾರಿಗಳನ್ನು ನಿರ್ಮಿಸಲು ಸೂಚಿಸಿದರು.
*ಬಸ್ ಬೇ ನಿರ್ಮಾಣ ಮಾಡಿ:*
ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ಬಸ್ ನಿಲ್ಲಿಸುವ ಜಾಗಗಳಲ್ಲಿ ನಾಗರಿಕರಿಗೆ ಬಸ್ ತಂಗುದಾಣಗಳು ಇಲ್ಲದಿರುವುದನ್ನು ಗಮನಿಸಿ, ರಸ್ತೆ ಅಗಲವಿರುವ ಕಡೆ ಬಸ್ ನಿಲ್ಲಲು ವ್ಯವಸ್ಥೆ ಮಾಡುವುದರ ಜೊತೆಗೆ ಬಸ್ ತಂಗುದಾಣಗಳನ್ನು ಕೂಡಾ ನಿರ್ಮಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
*ಬ್ಲಾಕ್ ಸ್ಪಾಟ್ ಗಳನ್ನು ನಿಯಂತ್ರಿಸಿ:*
ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ಕಸ ಬಿಸಾಡುವ ಸ್ಥಳ(ಬ್ಲಾಕ್ ಸ್ಪಾಟ್)ಗಳನ್ನು ಗಮನಿಸಿ, ರಸ್ತೆಗಳ ಬದಿ ಕಸ ಬಿಸಾಡದಂತೆ ಕ್ರಮ ಕೈಗೊಳ್ಳಬೇಕು. ಕಸ ಬಿಸಾಡುವವರಿಗೆ ದಂಡ ವಿಧಿಸುವ ಕೆಲಸ ಮಾಡಬೇಕು. ಮಳೆ ನೀರು ಸರಾಗವಾಗಿ ಹರಿದು ಹೋಗಲು ರಸ್ತೆ ಬದಿಯ ಗ್ರೇಟಿಂಗ್ ಗಳ ಬಳಿ ಸ್ವಚ್ಛತೆ ಕಾಪಾಡಲು ಸೂಚಿಸಿದರು.
*5.5 ಕಿ.ಮೀ ನಡಿಗೆ ಮೂಲಕ ಪರಿಶೀಲನೆ:*
ಬನ್ನೇರಘಟ್ಟ ಮುಖ್ಯ ರಸ್ತೆಯಲ್ಲಿ ಡೈರಿ ವೃತ್ತದಿಂದ ತಾವರೆಕೆರೆ, ಜಯದೇವ ಆಸ್ಪತ್ರೆ, ಜೆ.ಪಿ ನಗರ 4ನೇ ಹಂತ ಹಾಗೂ ಐಐಎಂಬಿ ವರೆಗೂ 5.5 ಕಿ.ಮೀ ಮೂಲಕ ಅಧಿಕಾರಿಗಳೊಂದಿಗೆ ನಡಿಗೆ ಮೂಲಕ ಪರಿಶೀಲನೆ ನಡೆಸಿ, ಇರುವ ಸಮಸ್ಯೆಗಳನ್ನು ಸರಿಪಡಿಸಲು ಸೂಚಿಸಿದರು.
*ಮಳೆ ನೀರುಗಾಲುವೆ ಮೇಲೆ ಗ್ರೇಟಿಂಗ್ ಅಳವಡಿಸಿ:*
ಇಂಡಿಯನ್ ಇನ್ಸ್ಟಿಟ್ಯೂಟ್ ಮ್ಯಾನೇಜ್ ಮೆಂಟ್-ಬೆಂಗಳೂರು(ಐಐಎಂಬಿ) ಮುಂಭಾಗ ಮಳೆ ನೀರುಗಾಲುವೆ ಬರಲಿದ್ದು, ಅದರ ಮೇಲೆ ಪಾದಚಾರಿಗಳು ಓಡಾಡಲು ಅನುಕೂಲವಾಗುವಂತೆ ಗ್ರೇಟಿಂಗ್ ಅಳವಡಿಸಬೇಕು. ಅದಕ್ಕಾಗಿ ಕೂಡಲೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು.
ಈ ವೇಳೆ ವಲಯ ಆಯುಕ್ತರಾದ ದಿಗ್ವಿಜಯ್ ಬೋಡ್ಕೆ, ಮುಖ್ಯ ಅಭಿಯಂತರರಾದ ಬಸವರಾಜ್ ಕಬಾಡೆ, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.