ಬೆಂಗಳೂರು: ಮಹದೇವಪುರ ವಲಯ ವ್ಯಾಪ್ತಿಯಲ್ಲಿ ತಳಮಹಡಿ (ಬೆಸ್ಮೆಂಟ್) ಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಮಳಿಗೆಗಳಿಗೆ ನೋಟೀಸ್ ನೀಡಿ ಕಾನೂನು ಕ್ರಮ ಕೈಗೊಳ್ಳಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಹದೇವಪುರ ವಲಯ ವ್ಯಾಪ್ತಿಯಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಇಂದು ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾರ್ಕಿಂಗ್ ಗಾಗಿಯೇ ಸೀಮಿತಿರುವಂತಹ ತಳಮಹಡಿಗಳಲ್ಲಿ ಯಾರೂ ಮಳಿಗೆಗಳನ್ನು ನಿರ್ಮಿಸುವಂತಿಲ್ಲ. ಒಂದು ವೇಳೆ ನಿರ್ಮಿಸಿದ್ದಲ್ಲಿ ಅಂತಹವರಿಗೆ ನೋಟಿಸ್ ನೀಡಿ ಕಾನೂನು ಕ್ರಮ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
*ಪ್ರತಿ ಕೆರೆಗೆ ಸಮಗ್ರ ಯೋಜನೆ ರೂಪಿಸಿ:*
ಮಹದೇವಪುರ ವಲಯದಲ್ಲಿ 52 ಕೆರೆಗಳು ಬರಲಿದ್ದು, ಕೆರೆಯಲ್ಲಿ ಯಾವೆಲ್ಲಾ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು, ಒತ್ತುವರಿಗಳನ್ನು ಗುರುತಿಸುವುದು, ನೀರುಗಾಲುವೆಗಳು ಹಾಗೂ ಜೌಗು ಪ್ರದೇಶಗಳ ಅಭಿವೃದ್ಧಿ ಸೇರಿದಂತೆ ಪ್ರತಿ ಕೆರೆಗೂ ಪ್ರತ್ಯೇಕವಾಗಿ ಸಮಗ್ರ ಯೋಜನೆ ರೂಪಿಸಲು ಅಧಿಕಾರಿಗಳಿಗೆ ಸೂಚಿಸಿದರು.
*ಕಾಮಗಾರಿಗಳ ನಿರ್ವಹಣೆಗೆ ಸಮಿತಿ ರಚಿಸಿ:*
ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಕಾಮಗಾರಿಗಳ ನಿರ್ವಹಣೆಗಾಗಿ ಜಂಟಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚನೆ ಮಾಡಬೇಕು. ಆ ಸಮಿತಿಯ ಮೂಲಕ ಕಾಮಗಾರಿಗಳ ಮಾಹಿತಿಗಾಗಿ ಒಬ್ಬ ಅಧಿಕಾರಿಯನ್ನು ಸಂಪರ್ಕಿಸಿದರೆ ಕೂಡಲೆ ಆ ಮಾಹಿತಿ ಸಿಗುವ ವ್ಯವಸ್ಥೆ ಕಲ್ಪಿಸಲು ವಲಯ ಆಯುಕ್ತರಿಗೆ ಸೂಚಿಸಿದರು.
*ಟಿ.ಡಿ.ಆರ್ ವಿಚಾರ ಇತ್ಯರ್ಥಪಡಿಸಿ:*
ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಹೂಡಿ ಜಂಕ್ಷನ್ ನಲ್ಲಿ ಕೆಳಸೇತುವೆ ಕಾಮಗಾರಿ, ಪಣತ್ತೂರು ಎಸ್-ಕ್ರಾಸ್ ಬಳಿ ರಸ್ತೆ ಅಗಲೀಕರಣ ಕಾಮಗಾರಿ ಸೇರಿದಂತೆ ಇನ್ನಿತರೆ ಕಾಮಗಾರಿಗಳಿಗೆ ಭೂಸ್ವಾಧಿನ ಪ್ರಕ್ರಿಯೆ ಬಾಕಿಯಿರುವ ಕಡೆ, ಆಸ್ತಿ ಮಾಲಿಕರ ಜೊತೆ ಮಾತನಾಡಿ ಟಿ.ಡಿ.ಆರ್ ವಿಚಾರ ಇತ್ಯರ್ಥಪಡಿಸಿ ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
*ಹೂಳೆತ್ತಿ ಸ್ವಚ್ಛವಾಗಿರಿಸಿ:*
ಮಳೆಗಾಲ ಪ್ರಾರಂಭವಾಗುತ್ತಿದ್ದು, ಬೃಹತ್ ನೀರು ಗಾಲುವೆ ಹಾಗೂ ಸೈಡ್ ಗಳಲ್ಲಿ ಹೂಳೆತ್ತಿ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ರಸ್ತೆ ಮೇಲೆ ಬೀಳುವ ಮಳೆ ನೀರು ಸರಾಗವಾಗಿ ಕಾಲುವೆಗಳಿಗೆ ಹರಿದು ಹೂಗುವಂತೆ ಮಾಡಬೇಕು. ಶಿಲ್ಟ್ ಅಂಡ್ ಟ್ರ್ಯಾಕ್ಟರ್ ಗಳನ್ನು ಬಳಸಿಕೊಂಡು ರಸ್ತೆ ಬದಿ, ಗ್ರೇಟಿಂಗ್ ಬಳಿ ಬಿದ್ದಿರುವ ತ್ಯಾಜ್ಯ/ಮಣ್ಣು ಸ್ವಚ್ಛವಾಗಿಡಲು ಅಧಿಕಾರಿಗಳಿಗೆ ಸೂಚಿಸಿದರು.
*ಪ್ರವಾಹವಾಗದಂತೆ ಕ್ರಮವಹಿಸಿ:*
ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಬರುವ ಸಾಯಿ ಲೇಔಟ್ ನಲ್ಲಿ ಮಳೆಗಾಲದಲ್ಲಿ ಪ್ರವಾಹವಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಇನ್ನು ಸರ್ಜಾಪುರ ಮುಖ್ಯ ರಸ್ತೆ ಕೊಲಂಬಿಯಾ ಏಷ್ಯಾ ಬಳಿ ರಾಜಕಾಲುವೆ ಕೆಲಸ ಪ್ರಗತಿಯಲ್ಲಿದ್ದು, ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಿ ಯಾವುದೇ ರೀತಿಯ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಸೂಚಿಸಿದರು.
*ಇ-ಖಾತಾ ಮೇಳ ಆಯೋಜಿಸಿ:*
ನಗರದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ನಾಗರಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೃಹತ್ ಇ-ಖಾತಾ ಮೇಳಗಳನ್ನು ಆಯೋಜಿಸಲಾಗುತ್ತಿದೆ. ಈ ಸಂಬಂಧ ಮಹದೇವಪುರ ವಲಯ ವ್ಯಾಪ್ತಿಯಲ್ಲಿಯ ಎರಡೂ ವಿಧಾನ ಸಭಾ ಕ್ಷೇತ್ರಗಳಲ್ಲಿ ‘ಬೃಹತ್ ಇ-ಖಾತಾ ಮೇಳ’ ಆಯೋಜಿಸಲು ಅಧಿಕಾರಿಗಳಿಗೆ ಸೂಚಿಸಿದರು.
*ಮಹದೇವಪುರ ವಲಯ ಆಯುಕ್ತರಾದ ರಮೇಶ್* ರವರು ಮಾತನಾಡಿ, ಮಹದೇವಪುರ ವಲಯದಲ್ಲಿ 85 ಸಾವಿರ ವಿದ್ಯುತ್ ಬೀದಿ ದೀಪಗಳು ಬರಲಿದ್ದು, ಹೆಚ್ಚುವರಿಯಾಗಿ 10 ಸಾವಿರ ವಿದ್ಯುತ್ ಕಂಬಗಳನ್ನು ಗುರುತಿಸಲಾಗಿದೆ. ಈ ಪೈಕಿ ಹೊಸದಾಗಿ ವಿದ್ಯುತ್ ದೀಪಗಳು ಅಳವಡಿಸಬೇಕಿದ್ದು, ಅದಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗುವುದು. ಜೊತೆಗೆ ಎಲ್ಲಾ ವಿದ್ಯುತ್ ದೀಪಗಳನ್ನು ಸಮೀಕ್ಷೆ ನಡೆಸಿ ದುರಸ್ತಿಯಿರುವ ವಿದ್ಯುತ್ ದೀಪಗಳನ್ನು ಸರಿಪಡಿಸಲಾಗುವುದೆಂದು ಮಾಹಿತಿ ನೀಡಿದರು.
ಈ ವೇಳೆ ವಲಯ ಜಂಟಿ ಆಯುಕ್ತರಾದ ದಾಕ್ಷಾಯಿಣಿ, ಉಪ ಆಯುಕ್ತರಾದ ಗಾಯತ್ರಿ ನಾಯಕ್, ಮುಖ್ಯ ಅಭಿಯಂತರರಾದ ರಂಗನಾಥ್, ವಿವಿಧ ಇಲಾಖೆಯ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.