ಬೆಂಗಳೂರು: 2019 ರಿಂದ ಕಳೆದ 6 ವರ್ಷಗಳ ಅವಧಿಯಲ್ಲಿ ಒಂದೂ ಚುನಾವಣೆಯಲ್ಲಿ ಸ್ಪರ್ಧಿಸದ ಹಾಗೂ ಸದರಿ ರಾಜಕೀಯ ಪಕ್ಷಗಳ ಕಛೇರಿಯನ್ನು ಪತ್ತೆ ಹಚ್ಚಲು ಸಾಧ್ಯವಾಗದ ಬೆಂಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ಬರುವ 10 ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳ ನೋಂದಣಿಯನ್ನು ರದ್ದುಪಡಿಸುವ ಪ್ರಕ್ರಿಯೆಯನ್ನು ಭಾರತ ಚುನಾವಣಾ ಆಯೋಗವು ಜ್ಞಾನೇಶ್ ಕುಮಾರ್, ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇತರೆ ಚುನಾವಣಾ ಆಯುಕ್ತರಾದ ಡಾ. ಸುಕುಬೀರ್ ಸಿಂಗ್ ಸಂಧು ಹಾಗೂ ಡಾ. ವಿವೇಕ್ ಜೋಷಿ ಇವರ ನೇತೃತ್ವದಲ್ಲಿ ಆರಂಭ ಮಾಡಿರುತ್ತದೆ.
ದೇಶದಲ್ಲಿ ರಾಜಕೀಯ ಪಕ್ಷಗಳು (ರಾಷ್ಟ್ರೀಯ / ರಾಜ್ಯ / ನೋಂದಾಯಿತ ಮಾನ್ಯತೆ ಪಡೆಯದ) ಪ್ರಜಾ ಪ್ರಾತಿನಿದ್ಯ ಕಾಯ್ದೆ 1951 ಸೆಕ್ಷನ್ 21ರ ನಿಯಮಗಳಡಿ ಚುನಾವಣಾ ಆಯೋಗದಲ್ಲಿ ತಮ್ಮ ಪಕ್ಷಗಳ ನೋಂದಣಿಯನ್ನು ಮಾಡಿಕೊಳ್ಳುತ್ತವೆ. ಈ ನಿಯಮಗಳಡಿ ಯಾವುದೇ ಸಂಘ, ಒಂದು ರಾಜಕೀಯ ಪಕ್ಷವಾಗಿ ನೋಂದಣಿಯಾದಲ್ಲಿ, ಕೆಲವು ನಿರ್ದಿಷ್ಟ ರಿಯಾಯಿತಿ ಮತ್ತು ಸೌಲತ್ತುಗಳನ್ನು ಪಡೆಯುತ್ತವೆ. ಅಂತಹ ನಿರ್ದಿಷ್ಟ ರಿಯಾಯಿತಿ ಮತ್ತು ಸೌಲತ್ತುಗಳಲ್ಲಿ ತೆರಿಗೆ ವಿನಾಯಿತಿಯು ಒಂದಾಗಿರುತ್ತದೆ.
ಕಳೆದ ಅವಧಿಯಲ್ಲಿ ಬಹುಸಂಖ್ಯಾತ ರಾಜಕೀಯ ಪಕ್ಷಗಳು ಚುನಾವಣಾ ಆಯೋಗದಲ್ಲಿ ತಮ್ಮ ಪಕ್ಷಗಳನ್ನು ನೋಂದಣಿ ಮಾಡಿಕೊಂಡಿರುತ್ತವೆ. ಆದಾಗ್ಯೂ, ಹಲವು ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳು 2019 ರಿಂದ ಕಳೆದ 6 ವರ್ಷಗಳ ಅವಧಿಯಲ್ಲಿ ಒಂದೇ ಒಂದೂ ಚುನಾವಣೆಯಲ್ಲಿ ಸ್ಪರ್ಧಿಸಿರುವುದಿಲ್ಲ ಮತ್ತು ಇವುಗಳಲ್ಲಿ ಅನೇಕವು ತಮ್ಮ ಅಸ್ಥಿತ್ವವನ್ನು ಕಳೆದುಕೊಂಡಿರುತ್ತವೆ ಎಂಬ ವಿಷಯವು ಚುನಾವಣಾ ಆಯೋಗದ ಗಮನಕ್ಕೆ ಬಂದಿರುತ್ತದೆ.
ಬೆಂಗಳೂರು ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಇಂತಹ ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳ ಪ್ರಾಥಮಿಕ ಪಟ್ಟಿಯು ಈ ಕೆಳಕಂಡಂತಿರುತ್ತದೆ.
1. ಅಂಬೇಡ್ಕರ್ ಜನತಾ ಪಕ್ಷ
2. ಭಾರತೀಯ ಡಾ. ಬಿ.ಆರ್ ಅಂಬೇಡ್ಕರ್ ಜನತಾ ಪಕ್ಷ
3. ಭಾರತೀಯ ಪ್ರಜಾ ಪಕ್ಷ
4. ಕಲ್ಯಾಣ ಕ್ರಾಂತಿ ಪಕ್ಷ
5. ಕರ್ನಾಟಕ ಪ್ರಜಾ ವಿಕಾಸ ಪಕ್ಷ
6. ಮಹಿಳಾ ಪ್ರಧಾನ ಪಕ್ಷ
7. ನಮ್ಮ ಕಾಂಗ್ರೇಸ್
8. ಪ್ರಜಾ ರೈತ ರಾಜ್ಯ ಪಕ್ಷ
9. ರಕ್ಷಕ ಸೇನಾ
10. ಸಮಾಜವಾದಿ ಜನತಾ ಪಕ್ಷ (ಕರ್ನಾಟಕ)
ಈ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗದ ನಿರ್ದೇಶನದಂತೆ ಮುಖ್ಯ ಚುನಾವಣಾಧಿಕಾರಿಗಳು, ಕರ್ನಾಟಕ ಇವರು ಪಕ್ಷದ ಪ್ರಸ್ತುತ ಹಾಲಿ ವಿಳಾಸ ತಿಳಿದು ಬಂದಿರುವುರಿಲ್ಲ ಮತ್ತು ಸದರಿ ಪಕ್ಷಗಳು 2019 ರಿಂದ ಕಳೆದ 6 ವರ್ಷಗಳ ಅವಧಿಯಲ್ಲಿ ಒಂದೇ ಒಂದೂ ಲೋಕಸಭೆ / ರಾಜ್ಯಸಭೆ ಚುನಾವಣೆ ಅಥವಾ ರಾಜ್ಯದ ವಿಧಾನಸಭೆ ಅಥವಾ ವಿಧಾನಸಭೆ ಉಪ ಚುನಾವಣೆಗಳಲ್ಲಿ ಸ್ಪರ್ಧಿಸಿರುವುದಿಲ್ಲ ಎಂಬುದನ್ನು ಪ್ರಸ್ತಾಪಿಸುತ್ತಾ, ಸಂವಿಧಾನದ 324ರ ಅನುಚ್ಛೇದದ ಮೇರೆಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951 ಸೆಕ್ಷನ್ 29ಎ ರಡಿ ಏಕೆ ಇಂತಹ ಪಕ್ಷಗಳ ನೋಂದಣಿಯನ್ನು ರದ್ದು ಮಾಡಬಾರದು ಎಂದು ಕಾರಣ ಕೇಳಿ ನೋಟೀಸ್ ಅನ್ನು ಸದರಿ ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳಿಗೆ ಜಾರಿಗೊಳಿಸಿರುತ್ತಾರೆ. ಸದರಿ ನೋಟೀಸ್ಗಳನ್ನು ಸಂಬಂಧಪಟ್ಟ ಅಪರ ಜಿಲ್ಲಾ ಚುನಾವಣಾಧಿಕಾರಿಗಳು ಜಾರಿಗೊಳಿಸಿರುತ್ತಾರೆ.
ಈ ಕಾರಣ ಕೇಳಿ ನೋಟೀಸಿನ ಮುಖಾಂತರ ಸದರಿ ಪಕ್ಷಗಳಿಗೆ ತಮ್ಮ ಅಹವಾಲು ಹೇಳಿಕೊಳ್ಳಲು ಅವಕಾಶ ಕಲ್ಪಿಸಲಾಗಿರುತ್ತದೆ. ಮುಂದುವರೆದು, ಪಕ್ಷದ ಅಧ್ಯಕ್ಷ ಅಥವಾ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಅಗತ್ಯವಾದ ದಾಖಲಾತಿಗಳು ಹಾಗೂ ಅಫಿಡೆವಿಟ್ನೊಂದಿಗೆ ಲಿಖಿತ ಮನವಿ ಸಲ್ಲಿಸಬಹುದಾಗಿದೆ ಮತ್ತು ನಿಗದಿತ ದಿನಾಂಕದೊಳಗೆ ಲಿಖತ ಹೇಳಿಕೆ ಸಲ್ಲಿಸದಿದ್ದಲ್ಲಿ ಆಯೋಗವು ಸೂಕ್ತ ಆದೇಶ ಹೊರಡಿಸುತ್ತದೆ ಎಂದು ಈ ಮೇಲ್ಕಂಡ 10 ಪಕ್ಷಗಳಿಗೆ ನೀಡಿದ ಕಾರಣ ಕೇಳಿ ನೋಟೀಸ್ನಲ್ಲಿ ಪ್ರಸ್ತಾಪಿಸಲಾಗಿರುತ್ತದೆ.
ಇದರನ್ವಯ ವಿಚಾರಣಾ ದಿನಾಂಕದಂದು ಖುದ್ದು ಹಾಜರಾಗಿ ಲಿಖಿತ ಹೇಳಿಕೆಯನ್ನು ಸಲ್ಲಿಸಲು ಹಾಗೂ ಈ ಅವಕಾಶವನ್ನು ಉಪಯೋಗಿಸಿಕೊಳ್ಳಲು ನೋಂದಾಯಿತ ಮಾನ್ಯತೆ ಪಡೆಯದ ಪಕ್ಷಗಳಲ್ಲಿ *ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ಮಹೇಶ್ವರ್* ರವರು ಕೋರಿರುತ್ತಾರೆ.
*ಹೆಚ್ಚಿನ ಮಾಹಿತಿಗಾಗಿ ಪತ್ರಿಕಾ ಪ್ರಕಟಣೆಯ ಪ್ರತಿಯನ್ನು ಲಗತ್ತಿಸಲಾಗಿದೆ.*