ಬೆಂಗಳೂರು: ನಗರದಲ್ಲಿ ಗೌರಿ-ಗಣೇಶೋತ್ಸವ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪಾಲಿಕೆಯ 75 ಉಪ ವಿಭಾಗ ಕಛೇರಿಗಳಲ್ಲಿ ಏಕಗವಾಕ್ಷಿ ಪದ್ದತಿಯಲ್ಲಿ ಒಂದೇ ಸೂರಿನಡಿ ಅನುಮತಿ ಪತ್ರವನ್ನು ಪಡೆಯಲು ವ್ಯವಸ್ಥೆ ಮಾಡಲಾಗುವುದೆಂದು *ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್* ರವರು ತಿಳಿಸಿದರು.
ಗೌರಿ ಗಣೇಶೋತ್ಸವದ ವೇಳೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಬಿಬಿಎಂಪಿ ಮತ್ತು ಬೆಂಗಳೂರು ನಗರ ಪೊಲೀಸ್ ಇಲಾಖೆಯ ಜಂಟಿ ಸಹಯೋಗದಲ್ಲಿ ಇಂದು ಪುಟ್ಟಣ್ಣ ಚೆಟ್ಟಿ ಪುರಭವನ (ಟೌನ್ ಹಾಲ್) ದಲ್ಲಿ ನಡೆದ “*ಶಾಂತಿ ಸೌಹಾರ್ದತೆ*” ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ ಅನುವಾಗುವಂತೆ ಪಾಲಿಕೆಯ 75 ಉಪ ವಿಭಾಗ ಕಛೇರಿಗಳಲ್ಲಿ ಬಿಬಿಎಂಪಿ, ಪೊಲೀಸ್, ಬೆಸ್ಕಾಂ ಮತ್ತು ಅಗ್ನಿಶಾಮಕ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಿ ಏಕಗವಾಕ್ಷಿ ಕೇಂದ್ರಗಳನ್ನು ತೆರೆಯಲಾಗುಗುವುದು. 75 ಏಕಗವಾಕ್ಷಿ ಕೇಂದ್ರಗಳ ವಿಳಾಸ ಹಾಗೂ ಏಕಗವಾಕ್ಷಿ ಕೇಂದ್ರಗಳಲ್ಲಿ ಇರಲಿರುವ ನೋಡಲ್ ಅಧಿಕಾರಿಗಳ ವಿವರವಾದ ಮಾಹಿತಿಯನ್ನು ಶೀಘ್ರವೇ ವೆಬ್ಸೈಟ್ ಮೂಲಕ ಬಿಡುಗಡೆ ಮಾಡಲಾಗುವುದು. ಅದರನುಸಾರ ಗಣೇಶ ಮೂರ್ತಿಗಳನ್ನಿಡುವವರು ಏಕಗವಾಕ್ಷಿ ಸ್ಥಳಕ್ಕೆ ಭೇಟಿ ನೀಡಿ ಒಂದೇ ಸ್ಥಳದಲ್ಲಿ ಅನುಮತಿ ಪಡೆಯಬಹುದೆಂದು ಹೇಳಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿ ವರ್ಷದಂತೆ ಬಿಬಿಎಂಪಿ ವತಿಯಿಂದ ಗಣೇಶ ವಿಸರ್ಜನೆಗೆ ಪ್ರಮುಖ ಕೆರೆಗಳ ಕಲ್ಯಾಣಿಗಳಲ್ಲಿ ಸೂಕ್ತ ವ್ಯವಸ್ಥೆ ಮಾಡಿಕೊಂಡು ಸರಿಯಾಗಿ ವಿಸರ್ಜನೆ ಮಾಡಲು ಅವಕಾಶ ಮಾಡಿಕೊಡಲಾಗುವುದು. ಪ್ರಮುಖ ಸ್ಥಳ/ಜಂಕ್ಷನ್ ಮತ್ತು ಅವಶ್ಯಕತೆ ಇರುವ ಕಡೆ ವಾರ್ಡ್ ವಾರು ತಾತ್ಕಾಲಿಕವಾಗಿ ಸಂಚಾರಿ ವಿಸರ್ಜನಾ ಘಟಕ (ಮೊಬೈಲ್ ಟ್ಯಾಂಕ್) ಗಳನ್ನು ಪ್ರತಿ ವರ್ಷದಂತೆ ವ್ಯವಸ್ಥೆ ಮಾಡಲಾಗುವುದೆಂದು ಹೇಳಿದರು.
ಗೌರಿ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಬೇಕು. ವಾಯುಮಾಲಿನ್ಯ, ನಿರು ಕಲುಷಿತ ಆಗುವಂತಹ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾನೆ ಮಾಡಬೇಡಿ. ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ವೇಳೆ ಶಾಂತಿ ಕಾಪಾಡಬೇಕು. ಹಬ್ಬಗಳ ಆಚರಣೆಯ ವೇಳೆ ಇರುವ ಸಮಸ್ಯೆಗಳ ಕುರಿತು ನಾಗರಿಕರು ತಿಳಿಸಿದ್ದು, ಆ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ಗಣೇಶ ಮೆರವಣಿಗೆಯ ರಸ್ತೆಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಈಗಾಗಲೇ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು. ಕೆಲ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದ್ದು, ಆ ರಸ್ತೆಗಳಲ್ಲಿ ಸಮಸ್ಯೆ ಇದ್ದರೆ ವಿಶೇಷವಾಗಿ ತಾತ್ಕಾಲಿಕ ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು.
*ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್* ರವರು ಮಾತನಾಡಿ, ಹಬ್ಬಗಳನ್ನು ಆಚರಿಸಲು ಉತ್ತಮ ಸಲಹೆಗಳನ್ನು ನೀಡಿದ್ದು, ಆ ಎಲ್ಲಾ ಸಲಹೆಗಳಿಗೆ ಅಗತ್ಯ ಕ್ರಮಗಳನ್ನು ಕೈಗೊಂಡು ಇರುವ ಸಮಸ್ಯೆಗಳನ್ನು ಬಗೆಹರಿಸಲಾಗುವುದೆಂದು ತಿಳಿಸಿದರು.
ಪ್ರತಿ ವರ್ಷದಂತೆ ಶಾಂತಿ ಸೌಹಾರ್ದತೆಯಿಂದ ಗಣೇಶ ಹಬ್ಬವನ್ನು ಆಚರಿಸಬೇಕು. ಈಗಾಗಲೇ ಎಲ್ಲಾ ಕಡೆ ಶಾಂತಿ ಸಭೆಗಳನ್ನು ನಡೆಸಲಾಗಿದೆ. ಈ ಬಾರಿ ಯಾವುದೇ ರೀತಿಯ ಅನಾನುಕೂಲವಾಗದಂತೆ ಎಲ್ಲಾ ರೀತಿಯ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಹೇಳಿದರು.
ಹಬ್ಬಗಳನ್ನು ಆಚರಿಸುವ ವೇಳೆ ಬಿಬಿಎಂಪಿ, ಪೊಲೀಸ್ ಇಲಾಖೆಯಿಂದ ಬರುವ ಸಲಹೆ, ಸೂಚನೆಗಳನ್ನು ಎಲ್ಲರೂ ತಪ್ಪದೆ ಪಾಲಿಸಬೇಕು. ಮೆರವಣಿಗೆ, ಮೆರವಣಿಗೆಯ ಮಾರ್ಗಕ್ಕೆ ಎಲ್ಲರೂ ಸಹಕಾರ ನೀಡಬೇಕು. ಎಲ್ಲಿಯೂ ಸಂಚಾರ ದಟ್ಟಣೆಯಾಗದಂತೆ ಸಂಚಾರಿ ಪೊಲೀಸ್ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ರಸ್ತೆಗಳ ನಡುವೆ ಗಣೇಶ ಮೂರ್ತಿಗಳನ್ನು ಇಡುವುದನ್ನು ನಿಯಂತ್ರಿಸಿ ಸೂಕ್ತವಾದ ಜಾಗವನ್ನು ಗುರುತಿಸಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ, ಇದರಿಂದ ನಾಗರೀಕರಿಗೆ ಅನುಕೂಲವಾಗಲಿದೆ. ಕಾನೂನು ವ್ಯವಸ್ಥೆಯಲ್ಲಿ ಯಾವುದೇ ರೀತಿಯ ದಕ್ಕೆಯಾಗದಂತೆ ಸಂಭ್ರಮದಿಂದ, ಶಾಂತಿ ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸೋಣ ಎಂದು ಹೇಳಿದರು.
ನಾಗರಿಕರಿಂದ ಸಭೆಯಲ್ಲಿ ಬಂದಂತಹ ಪ್ರಮುಖ ಸಲಹೆಗಳು:
* ಹಬ್ಬಗಳ ವೇಳೆ ಡಿಜೆಗಳನ್ನು ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲು ಮನವಿ
* ಗಣೇಶ ಪ್ರತಿಷ್ಠಾಪನೆಯ ವೇಳೆ ಏನೆಲ್ಲಾ ನಿಯಮಗಳನ್ನು ಜಾರಿಗೊಳಿಸುತ್ತಿರಾ ಮುಂಚಿತವಾಗಿಯೇ ಮಾಹಿತಿ ನೀಡಿ ಮೆರವಣಿಗೆ ಹೋಗುವ ರಸ್ತೆಗಳನ್ನು ಸರಿಯಾಗಿ ದುರಸ್ತಿಪಡಿಸಿಕೊಡಲು ಮನವಿ
* ಗಣೇಶ ವಿಸರ್ಜನಾ ಮೆರವಣಿಗೆಯ ವೇಳೆ ಬೆಸ್ಕಾಂ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಂಡು ಯಾವುದೇ ವಿದ್ಯುತ್ ಅವಘಡ ನಡೆಯದಂತೆ ನೋಡಿಕೊಳ್ಳಲು ಮನವಿ
* ಗಣೇಶ ವಿಸರ್ಜನೆ ಮೆರವಣಿಗೆಯ ವೇಳೆ ಸಂಚಾರ ದಟ್ಟಣೆ ಆಗದಂತೆ ಕ್ರಮವಹಿಸಲು ಮನವಿ
* ಸೂಕ್ಷ್ಮ ಪ್ರದೇಶಗಳಲ್ಲಿ ಸರಿಯಾದ ಪೊಲೀಸ್ ಭದ್ರತೆ ನೀಡಲು ಮನವಿ
* ಧಾರ್ಮಿಕ ಆಚರಣೆಗಳು ನಡೆಸುವಾಗ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಮನವಿ
* ಒಂದು ಪ್ರದೇಶದಲ್ಲಿ ಹೆಚ್ಚು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಅವಕಾಶ ನೀಡದಿರಲು ಮನವಿ
* ಗಣೇಶ್ ಪ್ರತಿಷ್ಠಾಪನೆಯ ವೇಳೆ ಧ್ವನಿವರ್ಧಕಗಳನ್ನು ಅಳವಡಿಸುವ ಹಾಗೂ ಪಟಾಕಿಗಳನ್ನು ಹೊಡೆಯುವುದನ್ನು ತಡೆಯಲು ಮನವಿ
* ಏಕ ಗವಾಕ್ಷಿ ಪದ್ದತಿಯಲ್ಲಿ ಅನುಮತಿ ನೀಡುವುದನ್ನು ಸರಿಯಾಗಿ ಜಾರಿಗೊಳಿಸಲು ಮನವಿ
* ಗಣೇಶ ವಿಸರ್ಜನಾ ಸಮಯದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿಕೊಡಲು ಮನವಿ
* ಹೆಚ್ಚು ಜನಂಸಂಖ್ಯೆ ಸೇರುವ ಸ್ಥಳದಲ್ಲಿ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಲು ಆಯೋಜಕರಿಗೆ ಸೂಚನೆ ನೀಡಲು ಮನವಿ
* ಗಣೇಶ ವಿಸರ್ಜನೆಯ ವೇಳೆ ಮಧ್ಯಪಾನವನ್ನು ಕಡ್ಡಾಯವಾಗಿ ನಿಷೇಧಿಸಲು ಮನವಿ
* ಕೆರೆಗಳ ಬಳಿಯಿರುವ ಕಲ್ಯಾಣಿಗಳಲ್ಲಿ ವಿಸರ್ಜನೆ ಮಾಡುವ ವೇಳೆ ಸಾಕಷ್ಟು ಗಣೇಶ ಮೂರ್ತಿಗಳನ್ನು ರಸ್ತೆ ಬದಿಯೇ ಇಟ್ಟು ಹೋಗುತ್ತಾರೆ, ಅದನ್ನು ತಪ್ಪಿಸಲು ಹಾಗೂ ತ್ವರಿತವಾಗಿ ಸ್ವಚ್ಛತೆ ಮಾಡಿಸಲು ಮನವಿ.
* ನಗರದ ಎಲ್ಲಾ ವಾರ್ಡಗಳಲ್ಲಿ ಮೊಬೈಲ್ ಟ್ಯಾಂಕರ್ಗಳನ್ನು ಹೆಚ್ಚಾಗಿ ವ್ಯವಸ್ಥೆ ಮಾಡಲು ಮನವಿ
ಸಭೆಯಲ್ಲಿ ವಿಶೇಷ ಆಯುಕ್ತರಾದ ನವೀನ್ ಕುಮಾರ್ ರಾಜು, ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ಕಾರ್ತಿಕ್ ರೆಡ್ಡಿ, ಬಿಬಿಎಂಪಿ, ಬೆಸ್ಕಾಂ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಅಗ್ನಿಶಾಮಕ ಅಧಿಕಾರಿಗಳು, ಗಣೇಶ ಪ್ರತಿಷ್ಠಾನದ ಆಯೋಜಕರು, ವಿವಿಧ ಸಮುದಾಯದ ಮುಖಂಡರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.